×
Ad

ಖಾಸಗಿ ಕಂಪೆನಿಯ ಮಾಡೆಲ್ ಆಗಿ ಬದಲಾಗಿರುವ ಪ್ರಧಾನಿ

Update: 2016-09-02 23:26 IST

ಈ ದೇಶದ ಸಾರ್ವಜನಿಕ ಅಥವಾ ಸರಕಾರಿ ಉದ್ದಿಮೆಗಳನ್ನು ಉಳಿಸಿ ಬೆಳೆಸಬೇಕಾದ ಪ್ರಧಾನಿಯೇ ಒಂದು ನಿರ್ದಿಷ್ಟ ಖಾಸಗಿ ಕಂಪೆನಿಯ ಮಾಡೆಲ್ ಆಗಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದ ಮೇಲೆ, ಈ ದೇಶದ ಭವಿಷ್ಯದ ಬಗ್ಗೆ ನಾವು ಭರವಸೆಯನ್ನು ಹೊಂದುವುದಾದರೂ ಹೇಗೆ? ರಿಲಯನ್ಸ್ ಇಂಡಸ್ಟ್ರೀಸ್‌ನ ಹೊಸ ಯೋಜನೆ, ಜಿಯೋ ಸೌಲಭ್ಯದ ಜಾಹೀರಾತಿಗೆ ಈ ಕಂಪೆನಿ ಬಳಸಿಕೊಂಡದ್ದು, ಪ್ರಧಾನಿ ನರೇಂದ್ರ ಮೋದಿಯವರ ಫೋಟೊವನ್ನು. ಅಂಗೈಯಲ್ಲಿ ಅರಮನೆ ತೋರಿಸುವ ರಿಲಯನ್ಸ್‌ನ ಯೋಜನೆಗಳ ಇತಿಹಾಸ ಬಲ್ಲವರಿಗೆ, ಜಿಯೋ ಎಲ್ಲಿಯವರೆಗೆ ತನ್ನ ಭರವಸೆಗಳನ್ನು ಉಳಿಸಿಕೊಳ್ಳಬಹುದು ಎನ್ನುವ ಕುರಿತಂತೆ ಯಾವ ಭರವಸೆಯೂ ಇಲ್ಲ. ಹೀಗಿರುವಾಗ ರಿಲಯನ್ಸ್ ತನ್ನ ವಿಶ್ವಾಸಾರ್ಹತೆಗೆ ಪ್ರಧಾನಿ ಮೋದಿಯ ಚಿತ್ರವನ್ನು ದುರ್ಬಳಕೆ ಮಾಡಿಕೊಂಡಿರುವುದು ಎಷ್ಟು ಸರಿ ? ತನ್ನ ಖಾಸಗಿ ಯೋಜನೆಯೊಂದಕ್ಕೆ ಪ್ರಧಾನಿಯ ಭಾವಚಿತ್ರವನ್ನು ಮಾಡೆಲ್ ಆಗಿ ಬಳಸುವ ಧೈರ್ಯವನ್ನು ಈ ಕಂಪೆನಿ ತೋರಿಸಿದೆಯೆಂದಾದರೆ, ಇದರ ಮಾಲಕರ ದೃಷ್ಟಿಯಲ್ಲಿ ನಮ್ಮ ದೇಶದ ಪ್ರಧಾನಿಯ ದರ್ಜೆ ಎಷ್ಟು ಕೆಳಮಟ್ಟದಲ್ಲಿದೆ ಎನ್ನುವುದು ಬಹಿರಂಗವಾಗುತ್ತದೆ. ಈ ವರೆಗೆ ಪ್ರಧಾನಿ ಕಚೇರಿ, ರಿಲಯನ್ಸ್‌ನ ಉದ್ಧಟತನಕ್ಕೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಇಡೀ ವಿಶ್ವಕ್ಕೆ ಪ್ರಧಾನಿ ಮೋದಿಯವರು ಮಾಡೆಲ್ ಆಗುತ್ತಾರೆ ಎಂದು ಈವರೆಗೆ ಮಾಧ್ಯಮಗಳು ಜನರನ್ನು ನಂಬಿಸುತ್ತಾ ಬಂದಿವೆ. ಆದರೆ ಅಂತಿಮವಾಗಿ ಮೋದಿ ಒಂದು ಖಾಸಗಿ ಮೊಬೈಲ್ ಉದ್ಯಮದ ಯೋಜನೆಯೊಂದರ ಮಾಡೆಲ್ ಆಗಿ ಪರಿವರ್ತನೆಗೊಂಡಿರುವುದು ಜನರಲ್ಲಿ ಆಘಾತವನ್ನು ಸೃಷ್ಟಿಸಿದೆ. ಬಹುಶಃ ಈ ದೇಶದ ಪ್ರಧಾನಿಯಾಗಿ ಆಯ್ಕೆಯಾದ ಯಾವೊಬ್ಬ ನಾಯಕನನ್ನೂ ಯಾವುದೇ ಖಾಸಗಿ ಉದ್ಯಮಿಗಳು ತಮ್ಮ ಲಾಭಕ್ಕಾಗಿ ಬಹಿರಂಗವಾಗಿ ಇಷ್ಟರಮಟ್ಟಿಗೆ ಬಳಸಿಕೊಳ್ಳುವ ಧೈರ್ಯವನ್ನು ಮಾಡಿಲ್ಲ. ಇಂದು ನರೇಂದ್ರ ಮೋದಿ ರಿಲಯನ್ಸ್ ಕಂಪೆನಿಯ ಸರಕುಗಳ ಮಾರುಕಟ್ಟೆಯ ಮುಖ್ಯಸ್ಥರೋ ಎಂದು ಅನುಮಾನ ಪಡುವಂತೆ ಅದರ ಮುಖ್ಯಸ್ಥರು ಪ್ರಧಾನಿಯನ್ನು ಬಳಸಿಕೊಂಡಿದ್ದಾರೆ. ಇದು ಇಡೀ ದೇಶದ ಜನರ ಆತ್ಮಗೌರವಕ್ಕೆ ಧಕ್ಕೆ ತಂದಿದೆ.


ಭಾರತದ ಎಲ್ಲ ಸಾರ್ವಜನಿಕ ಉದ್ದಿಮೆಗಳೂ ನಿಧಾನಕ್ಕೆ ಖಾಸಗಿ ಸಂಸ್ಥೆಗಳ ವಶವಾಗುತ್ತಿವೆ. ಅಳಿದುಳಿದ ಉದ್ದಿಮೆಗಳೂ ನಷ್ಟದಲ್ಲಿವೆ. ಅಥವಾ ಅದನ್ನು ನಷ್ಟದಲ್ಲಿರುವಂತೆ ಸರಕಾರ ನೋಡಿಕೊಂಡಿದೆೆ. ಖಾಸಗಿ ಉದ್ಯಮಿಗಳನ್ನು ಬೆಳೆಸುವಲ್ಲಿ ಇರುವ ಆಸಕ್ತಿ ಸರಕಾರಕ್ಕೆ, ತನ್ನದೇ ಉದ್ದಿಮೆಗಳನ್ನು ಉಳಿಸಿ ಬೆಳೆಸುವಲ್ಲಿ ಇಲ್ಲ. ಲಾಭದಲ್ಲಿರುವ ಸಂಸ್ಥೆಯನ್ನೇ ಖಾಸಗಿ ತೆಕ್ಕೆಗೆ ಒಪ್ಪಿಸಿರುವ ಸರಕಾರ, ನಷ್ಟದಲ್ಲಿರುವ ಉದ್ದಿಮೆಗಳನ್ನು ಉಳಿಸಿ ಬೆಳೆಸುತ್ತದೆ ಎಂದು ಯೋಚಿಸುವುದೇ ತಪ್ಪಾಗಿ ಬಿಡುತ್ತದೆ. ಇಂದು ನರೇಂದ್ರ ಮೋದಿ ಪ್ರತಿನಿಧಿಯಾಗಬೇಕಾದುದು, ಬಿಎಸ್ಸೆನ್ನೆಲ್‌ನಂತಹ ಸಂಸ್ಥೆಗೇ ಹೊರತು, ರಿಲಯನ್ಸ್‌ನಂತಹ ಖಾಸಗಿ ಸಂಸ್ಥೆಗಳಿಗಲ್ಲ. ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಎಲ್ಲ ರೀತಿಯಲ್ಲೂ ನಷ್ಟಕ್ಕೀಡು ಮಾಡಲು ಹವಣಿಸುತ್ತಿರುವ ಖಾಸಗಿ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನರೇಂದ್ರ ಮೋದಿಯವರೇ ನಿಂತಿರುವಾಗ, ಅದರ ಉಳಿವಿನ ಕುರಿತಂತೆ ಜನರು ನಂಬಿಕೆಯನ್ನಿಡುವುದಾದರೂ ಹೇಗೆ? ಬಿಎಸ್ಸೆನ್ನೆಲ್ ಸಂಸ್ಥೆ ವರ್ಷದಿಂದ ವರ್ಷಕ್ಕೆ ನಷ್ಟವನ್ನೇ ಸಾಧನೆಯಾಗಿ ತೋರಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಒಂದು ಕೋಟಿಗೂ ಅಧಿಕ ಲ್ಯಾಂಡ್‌ಲೈನ್ ಗ್ರಾಹಕರನ್ನು ಈ ಸಂಸ್ಥೆ ಕಳೆದುಕೊಂಡಿದೆ. ಏಳು ಕೋಟಿಗೂ ಅಧಿಕ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ಕಳಪೆ ಗುಣಮಟ್ಟಕ್ಕಾಗಿ ಬಿಎಸ್ಸೆನ್ನೆಲ್ ಈಗಾಗಲೇ ಟ್ರಾಯ್‌ನಿಂದ ಟೀಕೆಗೊಳಗಾಗಿದೆ. ಕಾಲ್‌ಡ್ರಾಪ್ಸ್ ಕುರಿತಂತೆಯೂ ಬಿಎಸ್ಸೆನ್ನೆಲ್‌ನ ವಿರುದ್ಧ ದೂರುಗಳ ಮೇಲೆ ದೂರುಗಳು ಕೇಳಿ ಬರುತ್ತಿವೆ. ಇಷ್ಟಕ್ಕೂ, ಈ ಮಟ್ಟಕ್ಕೆ ಬಿಎಸ್ಸೆನ್ನೆಲ್ ಹೇಗೆ ತಲುಪಿತು? ಯಾವುದೇ ಖಾಸಗಿ ಕಂಪೆನಿಗಳು ಕಾಲಿಡದ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆ ಬಿಎಸ್ಸೆನ್ನೆಲ್ ತನ್ನ ಸೌಲಭ್ಯಗಳನ್ನು ವಿಸ್ತರಿಸಿತ್ತು. 2003-2004ರಲ್ಲಿ ಬಿಎಸ್‌ಎನ್‌ಎಲ್ 5,977 ಕೋಟಿ ರೂ. ಲಾಭವನ್ನು ತನ್ನದಾಗಿಸಿಕೊಂಡಿತ್ತು. 2009ರವರೆಗೂ ಬಿಎಸ್ಸೆನ್ನೆಲ್ ಲಾಭದಲ್ಲೇ ಇತ್ತು. ಆದರೆ 2013-14ರಲ್ಲಿ ಬಿಎಸ್ಸೆನ್ನೆಲ್ 7,019 ಕೋಟಿ ರೂ. ನಷ್ಟವನ್ನು ಅನುಭವಿಸಿತ್ತು. ಮುಂದೆ 2015ರಲ್ಲಿ ಈ ನಷ್ಟ ಇನ್ನಷ್ಟು ತೀವ್ರವಾಯಿತು. ಅದು 7,265 ಕೋಟಿ ರೂಪಾಯಿಯನ್ನು ತಲುಪಿತು. ಅಂದರೆ ವರ್ಷ ವರ್ಷಕ್ಕೂ ಬಿಎಸ್ಸೆನ್ನೆಲ್ ನಷ್ಟವನ್ನೇ ತೋರಿಸುತ್ತಿದೆ. ಇದಕ್ಕೆ ಸರಕಾರ ತನ್ನದೇ ಆದ ಕಾರಣವನ್ನು ನೀಡುತ್ತಿದೆ. ಖಾಸಗಿ ಸಂಸ್ಥೆಗಳ ಪ್ರವೇಶದಿಂದಾಗಿ ಮಾರುಕಟ್ಟೆ ಷೆೇರುಗಳು ಇಳಿಮುಖವಾಗಿರುವುದು ನಷ್ಟಕ್ಕೆ ಪ್ರಧಾನ ಕಾರಣ ಎನ್ನುವುದು ಮೊದಲ ಕಾರಣ. ಆದರೆ ದೇಶಾದ್ಯಂತ ವ್ಯಾಪಕ ಜಾಲವನ್ನು ಹೊಂದಿದ್ದ ಬಿಎಸ್ಸೆನ್ನೆಲ್‌ನ್ನು ಖಾಸಗಿ ಸಂಸ್ಥೆಗಳ ಮುಂದೆ ಮಂಡಿಯೂರುವಂತೆ ಮಾಡುವಲ್ಲಿ ನಮ್ಮ ರಾಜಕಾರಣಿಗಳ ಹಾಗೂ ಅಧಿಕಾರಿಗಳು ಪಾತ್ರ ಸಣ್ಣದೇನಲ್ಲ. ಒಂದು ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಮಂಗಳೂರಿನ ಕೇಂದ್ರದಲ್ಲಿರುವ ಅತ್ತಾವರದಂತಹ ಒಂದು ಪ್ರದೇಶಕ್ಕೆ ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕಕ್ಕಾಗಿ ಸಂಬಂಧಪಟ್ಟವರನ್ನು ಸಂಪರ್ಕಿಸಲಾಯಿತು. ಆದರೆ ಆ ಕಚೇರಿಯ ಸಿಬ್ಬಂದಿಯಿಂದ ಸಿಕ್ಕಿದ ಪ್ರತಿಕ್ರಿಯೆ ಅತ್ಯಂತ ನೀರಸ ಮತ್ತು ಆಘಾತಕಾರಿಯಾದುದು. ಎರಡು ಮೂರು ದಿನ ಕಳೆದರೂ ಸಿಬ್ಬಂದಿಯಿಂದ ಯಾವ ಉತ್ತರವೂ ಇರಲಿಲ್ಲ. ಗ್ರಾಹಕರು ಮತ್ತೆ ಅವರನ್ನು ಸಂಪರ್ಕಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಹೀಗಿತ್ತು ‘‘ನೋಡಿ, ನಿಮಗೆ ಸಂಪರ್ಕವನ್ನೇನೋ ಕೊಡುತ್ತೇವೆ. ಆದರೆ ಆಗಾಗ ಸಮಸ್ಯೆಗಳು ಎದುರಾಗಬಹುದು. ಅದಕ್ಕೆ ನಾವು ಹೊಣೆಗಾರರಲ್ಲ’’. ಮಂಗಳೂರಿನಂತಹ ನಗರ ಪ್ರದೇಶದೊಳಗೆ ಸಂಪರ್ಕ ನೀಡುವ ಸಂದರ್ಭದಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡುವ ಅಧಿಕಾರಿಗಳನ್ನು ಅಲ್ಲಿ ನೇಮಿಸಿದವರು ಯಾರು? ಇವರು ನಿಜಕ್ಕೂ ಕೆಲಸ ಮಾಡುತ್ತಿರುವುದು ಬಿಎಸ್ಸೆನ್ನೆಲ್ ಸಂಸ್ಥೆಗಾಗಿಯೋ ಅಥವಾ ಯಾವುದೋ ಖಾಸಗಿ ಮೊಬೈಲ್ ಸಂಸ್ಥೆಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆಯೋ? ಬಿಎಸ್ಸೆನ್ನೆಲ್ ಸಿಬ್ಬಂದಿಯಿಂದಲೇ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಹೊರ ಬಿದ್ದ ಬಳಿಕ ಯಾರಾದರೂ ಆ ಸಂಸ್ಥೆಯ ಗ್ರಾಹಕರಾಗಲು ಸಿದ್ಧರಿರುತ್ತಾರೆಯೇ? ಕಳೆದ ಒಂದು ದಶಕದಲ್ಲಿ ಬಿಎಸ್ಸೆನ್ನೆಲ್ ಒಳಗಿರುವವರೇ ಪರೋಕ್ಷವಾಗಿ ತಮ್ಮ ಗ್ರಾಹಕರು ಖಾಸಗಿ ಗ್ರಾಹಕರ ಕಡೆಗೆ ವಾಲುವಂತೆ ಕೆಲಸವನ್ನು ನಿರ್ವಹಿಸಿದ್ದಾರೆ. ‘ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ’ ಎಂಬ ಮಾತಿನಂತೆಯೇ ಇದರ ಸಿಬ್ಬಂದಿ ಸರಕಾರಿ ಸಂಬಳವನ್ನು ಪಡೆದುಕೊಂಡು ಖಾಸಗಿ ಸಂಸ್ಥೆಗಳಿಗೆ ಕೆಲಸ ಮಾಡತೊಡಗಿದ್ದಾರೆ. ಅವರ ಸಾಧನೆಯ ಫಲವಾಗಿಯೇ ಇಂದು, ಕೋಟಿಗಟ್ಟಲೆ ಗ್ರಾಹಕರು ಈ ಸಂಸ್ಥೆಯನ್ನು ತೊರೆದು ಖಾಸಗಿ ಸಂಸ್ಥೆಯನ್ನು ನೆಚ್ಚಿಕೊಳ್ಳುತ್ತಿದ್ದಾರೆ.
 ಈ ದೇಶದ ಪ್ರಧಾನಿ ಇಂದು ಬೆಂಬಲವಾಗಿ ನಿಲ್ಲಬೇಕಾದುದು ಬಿಎಸ್ಸೆನ್ನೆಲ್ ಪರವಾಗಿ. ಆದರೆ ಅವರೇ ರಿಲಯನ್ಸ್‌ನಂತಹ ಖಾಸಗಿ ಸಂಸ್ಥೆಯ ಕಡೆಗೆ ಸಾಗಲು ಗ್ರಾಹಕರಿಗೆ ಶಿಫಾರಸು ಮಾಡುತ್ತಿದ್ದಾರೆ. ಹೀಗಿರುವಾಗ ಉಳಿದ ಸಿಬ್ಬಂದಿಯನ್ನು ನಾವು ಟೀಕಿಸಿ ಫಲವೇನು? ತನ್ನ ಯೋಜನೆಯ ಅನುಷ್ಠಾನಕ್ಕೆ ಪ್ರಧಾನಿಯ ಫೋಟೊವನ್ನು ಬಳಸಿಕೊಂಡು, ಇದು ಅವರದೇ ಯೋಜನೆ ಎಂಬಂತೆ ಈ ಕಂಪೆನಿ ಜನರನ್ನು ಮರುಳುಗೊಳಿಸಿದೆ. ನಾಳೆ ಈ ಯೋಜನೆ ವಿಫಲವಾಗಿ, ಜನರನ್ನು ಪರೋಕ್ಷವಾಗಿ ದೋಚಲು ತೊಡಗಿದರೆ ಅದರ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿಕೊಳ್ಳಲು ಸಿದ್ಧರಿದ್ದಾರೆಯೇ? ಇಂದು ಬಿಎಸ್ಸೆನ್ನೆಲ್‌ನ್ನು ಸಮರ್ಪಕವಾಗಿ ನಿರ್ವಹಿಸಲು ಒಂದು ಖಾತೆಯಿದೆ. ಅದಕ್ಕೊಬ್ಬ ಸಚಿವರೂ ಇದ್ದಾರೆ. ಆದರೆ ಪ್ರಧಾನಿ ಮಾತ್ರ ಖಾಸಗಿ ಕಂಪೆನಿಯೊಂದರ ಮಾರುಕಟ್ಟೆ ಜಾಹೀರಾತುದಾರರಾಗಿ ಬಳಕೆಯಾಗುತ್ತಿದ್ದಾರೆ. ಈ ದ್ವಂದ್ವ, ಗೊಂದಲಗಳ ನಡುವೆ ಈ ದೇಶದ ಎಲ್ಲ ಸಾರ್ವಜನಿಕ ಉದ್ದಿಮೆಗಳೂ ಸರ್ವನಾಶವಾಗುತ್ತಿವೆ. ಅದನ್ನು ಮರೆಮಾಚಲು, ಸಾರ್ವಜನಿಕವಾಗಿ ಈ ನಾಯಕರು ತಿರಂಗಾ ಯಾತ್ರೆಯಂತಹ ಪ್ರಹಸನವನ್ನು ಮಾಡುತ್ತಿದ್ದಾರೆ. ಮೋದಿಯವರ ಫೋಟೊವನ್ನು ತನ್ನ ಜಾಹೀರಾತಿಗೆ ಬಳಸಿಕೊಂಡ ರಿಲಯನ್ಸ್ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ, ಯಾವ ತಿರಂಗ ಯಾತ್ರೆಯೂ ಈ ದೇಶದ ಘನತೆಯನ್ನು ಉಳಿಸಲಾರದು ಎನ್ನುವುದನ್ನು ಬಿಜೆಪಿಯ ಹಿರಿಯ ನಾಯಕರು ಮೋದಿ ಅವರಿಗೆ ತಿಳಿ ಹೇಳುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News