ಫಿಲಿಪ್ಪೀನ್ಸ್‌ನಲ್ಲಿ ಸ್ಫೋಟ: 14 ಸಾವು

Update: 2016-09-03 18:19 GMT

ಡವಾವೊ, ಸೆ. 3: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟೆಯ ತವರು ನಗರ ಡವಾವೊದಲ್ಲಿನ ಮಾರುಕಟ್ಟೆಯೊಂದರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬಾಂಬ್‌ಸ್ಫೋಟವೊಂದರಲ್ಲಿ 14 ಮಂದಿ ಮೃತ ಪಟ್ಟಿದ್ದಾರೆ ಹಾಗೂ ಸುಮಾರು 70 ಮಂದಿ ಗಾಯಗೊಂಡಿದ್ದಾರೆ.

ಇದರ ಬೆನ್ನಿಗೇ ರಾಡ್ರಿಗೊ ಡುಟರ್ಟೆ ಶನಿವಾರ ದಕ್ಷಿಣ ಮಿಂಡನಾವೊ ವಲಯದಲ್ಲಿ ‘‘ಅರಾಜಕ ಪರಿಸ್ಥಿತಿ’’ಯನ್ನು ಘೋಷಿಸಿದ್ದಾರೆ. ಆದಾಗ್ಯೂ, ಈ ಘೋಷಣೆ ಸೇನಾಡಳಿತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರ ಕೇಂದ್ರಗಳಲ್ಲಿ ತಪಾಸಣಾ ಠಾಣೆಗಳನ್ನು ಸ್ಥಾಪಿಸಲು ಹಾಗೂ ಗಸ್ತನ್ನು ಹೆಚ್ಚಿಸಲು ಪೊಲೀಸರಿಗೆ ನೆರವಾಗುವುದಕ್ಕಾಗಿ ಸೈನಿಕರನ್ನು ನಿಯೋಜಿಸಲು ಈ ಘೋಷಣೆ ಅವಕಾಶ ನೀಡುತ್ತದೆ.

ಅಟೆಂಟೊ ಡಿ ಡೆವಾವೊ ವಿಶ್ವವಿದ್ಯಾನಿಲಯ ಮತ್ತು ಪಂಚತಾರಾ ಹೊಟೇಲೊಂದರ ಸಮೀಪ ನಡೆದ ಸ್ಫೋಟದ ಹೊಣೆಯನ್ನು ಅಬು ಸಯ್ಯಫ್ ಎಂಬ ಸಂಘಟನೆ ಹೊತ್ತುಕೊಂಡಿದೆ.

ಆದರೆ, ಮಾದಕ ವಸ್ತು ಜಾಲ ಸೇರಿದಂತೆ ಇತರ ಸಂಭಾವ್ಯ ಶಂಕಿತರತ್ತ ಪೊಲೀಸರು ಗಮನ ಹರಿಸಿದ್ದಾರೆ ಎಂದು ಡುಟರ್ಟೆ ಹೇಳಿದ್ದಾರೆ.

ಮಾದಕ ದ್ರವ್ಯ ಜಾಲವನ್ನು ಮಟ್ಟ ಹಾಕುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಡುಟರ್ಟೆ, ಅಧಿಕಾರಕ್ಕೆ ಬಂದ ಮೇಲೆ ಜಾಲದ ವಿರುದ್ಧ ಸಮರವನ್ನೇ ಸಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News