ಮಾಲಿನ್ಯ ನಿಯಂತ್ರಣ ಒಪ್ಪಂದಕ್ಕೆ ಅಮೆರಿಕ, ಚೀನಾ ಅನುಮೋದನೆ
ಹಂಗ್‌ಝೂ (ಚೀನಾ), ಸೆ. 3: ಪ್ಯಾರಿಸ್‌ನಲ್ಲಿ ಕಳೆದ ವರ್ಷ ರೂಪಿಸಲಾಗಿರುವ ಮಾಲಿನ್ಯ ನಿಯಂತ್ರಣ ಒಪ್ಪಂದವನ್ನು ಅಮೆರಿಕ ಮತ್ತು ಚೀನಾಗಳು ಶನಿವಾರ ಅಂಗೀಕರಿಸಿವೆ.
ತಮ್ಮ ನಡುವಿನ ಸೈಬರ್ ಮತ್ತು ಸಾಗರ ಗಡಿ ವಿವಾದಗಳನ್ನು ಬದಿಗಿರಿಸಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಒಪ್ಪಂದ ಅನುಮೋದನೆಗೆ ಸಂಬಂಧಿಸಿದ ಸರಣಿ ದಾಖಲೆ ಪತ್ರಗಳನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್‌ರಿಗೆ ಹಸ್ತಾಂತರಿಸಿದರು.
ತಮ್ಮ ನಡುವಿನ ಹವಾಮಾನ ಸಹಕಾರವು ಗ್ರಹವನ್ನು ಉಳಿಸುವತ್ತ ಇಟ್ಟ ಒಂದು ದಿಟ್ಟ ಹೆಜ್ಜೆ ಎಂಬುದಾಗಿ ಉಭಯ ನಾಯಕರು ಬಣ್ಣಿಸಿದರು.
ಇಲ್ಲಿ ರವಿವಾರ ಆರಂಭಗೊಳ್ಳಲಿರುವ ಜಾಗತಿಕ ಆರ್ಥಿಕ ಶೃಂಗಸಮ್ಮೇಳನದ ನೇಪಥ್ಯದಲ್ಲಿ ಶನಿವಾರ ನಡೆದ ಸಮಾರಂಭವೊಂದರಲ್ಲಿ ಉಭಯ ನಾಯಕರು ಪರಿಸರ ಒಪ್ಪಂದವನ್ನು ಅನುಮೋದಿಸಿದರು.
ಈ ಎರಡು ದೇಶಗಳು ಅತಿ ದೊಡ್ಡ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ದೇಶಗಳಾಗಿದ್ದು, ಈ ವರ್ಷದ ಕೊನೆಯ ವೇಳೆಗೆ ಒಪ್ಪಂದವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳಿಗೆ ಸಿಕ್ಕಿದ ದೊಡ್ಡ ಯಶಸ್ಸಾಗಿದೆ.
ಈ ಎರಡು ದೇಶಗಳು ಜಗತ್ತಿನ ಮಾನವ ಪ್ರೇರಿತ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣದ 38 ಶೇಕಡದಷ್ಟನ್ನು ಹೊರಸೂಸುತ್ತವೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣದ 55 ಶೇಕಡವನ್ನು ಉತ್ಪಾದಿಸುವ ಕನಿಷ್ಠ 55 ದೇಶಗಳು ಒಪ್ಪಂದವನ್ನು ಅನುಮೋದಿಸಿದರೆ, ಒಪ್ಪಂದವು ಜಾರಿಗೆ ಬರುತ್ತದೆ.