ಸಿಧು ಕನಸು

Update: 2016-09-03 18:30 GMT

ಸಿಧು ಕನಸು

ನವಜೋತ್ ಸಿಂಗ್ ಸಿಧು ಅವರನ್ನು ನಂಬಬಹುದಾದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಸಿಎಂ ಕುರ್ಚಿಯನ್ನು ಅವರ ಹೊರತಾಗಿ ಯಾರೂ ಪಡೆಯಲಾಗದು. ಚುನಾವಣೆ ಬಳಿಕ ತಾವು ಈ ಹಾಟ್ ಸೀಟ್ ಗೆಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಮಾಜಿ ಕ್ರಿಕೆಟಿಗ ವಿಮಾನದಲ್ಲಿ ಸಹ ಪ್ರಯಾಣಿಕರಾದ ಗಣ್ಯ ಉದ್ಯಮಿಯೊಬ್ಬರ ಬಳಿ ಹೇಳಿಕೊಂಡಿದ್ದಾರೆ. ರಾಜ್ಯಸಭಾ ಸದಸ್ಯತ್ವ ತೊರೆದ ನಿರ್ಧಾರವನ್ನೂ ಸಿಧು ಸಮರ್ಥಿಸಿ ಕೊಂಡಿದ್ದಾರೆ. ಸಹ ಪ್ರಯಾಣಿಕ ಉದ್ಯಮಿಗೆ ತಮ್ಮ ವಿಸಿಟಿಂಗ್ ಕಾರ್ಡ್ ನೀಡಿ, ಪಂಜಾಬ್ ಸಿಎಂ ಆದ ಆರು ತಿಂಗಳಲ್ಲಿ ಚಂಡಿಗಡದ ಅಭಿವೃದ್ಧಿಯ ಗತಿಯನ್ನೇ ಬದಲಾಯಿಸುವ ಭರವಸೆಯನ್ನೂ ನೀಡಿದ್ದಾರೆ.

ಹೈಕಮಾಂಡ್‌ಗಿಲ್ಲ ಡಿಮ್ಯಾಂಡ್!

ಉತ್ತರ ಪ್ರದೇಶ ಹಾಗೂ ಪಂಜಾಬ್ ವಿಧಾನಸಭಾ ಚುನಾವಣೆಯ ರಣಕಹಳೆ ಕಾಂಗ್ರೆಸ್ ಪ್ರಧಾನ ಕಚೇರಿಯಾದ ಅಕ್ಬರ್ ರಸ್ತೆಯ 24ರಲ್ಲಿ ಇನ್ನೂ ಮೊಳಗಿದಂತೆ ಕಾಣುತ್ತಿಲ್ಲ. ಚುನಾವಣೆ ಸಮೀಪಿಸುತ್ತಿದ್ದರೂ ಸಾಮಾನ್ಯವಾಗಿ ಕಂಡುಬರುವ ಟಿಕೆಟ್ ಆಕಾಂಕ್ಷಿಗಳ ದಂಡು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಣುತ್ತಿಲ್ಲ. ಉತ್ತರ ಪ್ರದೇಶ ಮೂಲದ ಎಐಸಿಸಿ ಪದಾಧಿಕಾರಿಗಳು ಮಾತ್ರ ಪಕ್ಷದ ಕಚೇರಿಯಲ್ಲಿ ಸುಳಿದಾಡುತ್ತಿದ್ದಾರೆ. ಚಹಾ ಹೀರುತ್ತಾ, ಚುನಾವಣೆ ಗಾಳಿ ಹೇಗೆ ಬೀಸಬಹುದು ಎಂಬ ಊಹೆಯ ಒಣ ಚರ್ಚೆಯಲ್ಲೇ ಕಳೆಯುತ್ತಿದ್ದಾರೆ. ಪಂಜಾಬ್ ಚುನಾವಣೆ ಹೊಣೆ ಹೊತ್ತಿರುವ ಆಶಾ ಕುಮಾರಿ ಅವರಿಗೆ ಒಂದು ಕೊಠಡಿ ನೀಡಲಾಗಿದ್ದು, ಇದು ಕೂಡಾ ಭಣಗುಡುತ್ತಿದೆ. ಈ ಎರಡು ರಾಜ್ಯಗಳಲ್ಲಿ ಸ್ಪರ್ಧಿಸುವ ಇರಾದೆ ಹೊಂದಿರುವವರು ಸಹಜವಾಗಿಯೇ, ಪಕ್ಷದ ಕೇಂದ್ರ ಕಚೇರಿಗೆ ಅಲೆಯುವುದು, ಕೇವಲ ಜನಾರ್ದನ ದ್ವಿವೇದಿ ಹಾಗೂ ಆಶಾ ಕುಮಾರಿಯವರನ್ನು ಕೇಳುವುದು ನಿರರ್ಥಕ ಎಂದು ಭಾವಿಸಿದಂತಿದೆ. ಇದರ ಬದಲಾಗಿ ಟಿಕೆಟ್ ಆಕಾಂಕ್ಷಿಗಳು, ನಿಜವಾದ ಶಕ್ತಿಕೇಂದ್ರ ಎನಿಸಿದ ಪ್ರಶಾಂತ್ ಕಿಶೋರ್ ಅವರ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಿಶೋರ್ ಭೇಟಿಗೆ ಹೈ ಡಿಮ್ಯಾಂಡ್. ರಾಹುಲ್ ಗಾಂಧಿಯವರವನ್ನು ಹೊರತುಪಡಿಸಿದರೆ ಅತಿಹೆಚ್ಚಿನ ಮಂದಿ ಬಯಸುವುದು ಕಿಶೋರ್ ಭೇಟಿಯನ್ನು.

ರಾಧಾಮೋಹನ ಸಮಸ್ಯೆ

ಕೃಷಿ ಸಚಿವ ರಾಧಾಮೋಹನ್ ಸಿಂಗ್ ಕಠಿಣ ಪರಿಶ್ರಮಿ ಎನ್ನಲಾಗುತ್ತಿದೆ. ಆದರೆ ಕಾರ್ಯಕ್ಷೇತ್ರದ ವಿಚಾರಕ್ಕೆ ಬಂದರೆ ಅದು ಕಾಣುತ್ತಿಲ್ಲ. ಹೆಚ್ಚುತ್ತಿರುವ ಬೇಳೆಕಾಳು ಬೆಲೆ ಬಗ್ಗೆ ಆರೆಸ್ಸೆಸ್-ಬಿಜೆಪಿ ಸಮನ್ವಯ ಸಮಿತಿಯಲ್ಲಿ ಪ್ರಶ್ನೆಗಳ ಸುರಿಮಳೆ ಎದುರಾದಾಗ, ಅದಕ್ಕೆ ಉತ್ತರಿಸುವ ಬದಲು ರಫ್ತು- ಆಮದು ನೀತಿಯ ನಿಯಂತ್ರಣ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆಯ ಕೈಯಲ್ಲಿದ್ದು, ಇದರ ಚರ್ಚೆಯಲ್ಲಿ ತಮ್ಮನ್ನು ಸೇರಿಸಿಕೊಳ್ಳುವುದು ಅಪರೂಪ ಎಂದು ಸಂಘ ಮುಖಂಡರ ಬಳಿ ದೂರಿದರು ಎಂದು ಹೇಳಲಾಗಿದೆ. ಇದರಿಂದ ಅಧೀರರಾದ ಸಂಘ ಧುರೀಣರು ಸಚಿವ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಇದು ಒಂದಷ್ಟು ಪರಿಣಾಮ ಬೀರಿದಂತಿದೆ. ಬಳಿಕ ಕೇಂದ್ರ ಸಚಿವ ಸಂಪುಟ, ಮಾಧ್ಯಮಕ್ಕೆ ಬಹಿರಂಗಪಡಿಸುವ ಮುನ್ನ ಅಥವಾ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ಸಚಿವಾಲಯಗಳು ಹೆಚ್ಚು ಸಮನ್ವಯದಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಸಂಪುಟ ಸಚಿವಾಲಯದ ಮೂಲಕ ಎಲ್ಲ ಸಚಿವಾಲಯಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಇದು ಸಮನ್ವಯ ಹೆಚ್ಚಿಸುತ್ತದೆಯೇ ಅಥವಾ ಭವಿಷ್ಯದಲ್ಲಿ ಸಿಂಗ್ ಅವರಿಗೆ ದೂರಲು ಮತ್ತೊಂದು ಕಾರಣವಾಗುತ್ತದೆಯೇ?

ನಾಯ್ಡು ‘ಸ್ವಚ್ಛ ಮಿಷನ್’

ನಾಗರಿಕರೇ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ನಗರದಲ್ಲಿ ಬಯಲು ಶೌಚ ಮಾಡುವ ಒಬ್ಬ ವ್ಯಕ್ತಿ ಪತ್ತೆಯಾದರೂ, ಸ್ವಚ್ಛಭಾರತ ಮಿಷನ್ ಯೋಜನೆಯಡಿ ನಿಮ್ಮ ನಗರಕ್ಕೆ ಪ್ರಮಾಣಪತ್ರ ಸಿಗುವುದಿಲ್ಲ. ಇದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರ ಖಡಕ್ ಸಂದೇಶ. ರಾಜ್ಯ ಸರಕಾರಗಳು ಈ ಬಗ್ಗೆ ನೀಡುವ ಹೇಳಿಕೆಗಳನ್ನಷ್ಟೇ ನಂಬಿ ನಗರಗಳಿಗೆ ಪ್ರಮಾಣಪತ್ರ ನೀಡುವುದಿಲ್ಲ. ಸ್ವತಂತ್ರವಾಗಿ ಮೌಲ್ಯಮಾಪನ ಮಾಡಿದ ವರದಿಯ ಅಂಶಗಳನ್ನು ಪರಿಗಣಿಸಿದ ಬಳಿಕವಷ್ಟೇ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ, ಬಯಲು ಶೌಚದ ಯಾವ ಪ್ರಕರಣವನ್ನೂ ತಾವು ಕಂಡಿಲ್ಲ ಎಂದು ಇವರು ವರದಿ ನೀಡಿದ ಬಳಿಕವಷ್ಟೇ ಸಚಿವಾಲಯ ಇದನ್ನು ನಂಬುತ್ತದೆ. ಸ್ವತಂತ್ರ ಮೌಲ್ಯಮಾಪಕರ ತಂಡಕ್ಕೆ ಒಂದು ಬಯಲು ಶೌಚ ಪ್ರಕರಣ ಕಂಡುಬಂದರೂ, ಆ ನಗರಕ್ಕೆ ಪ್ರಮಾಣಪತ್ರ ಸಿಗುವುದಿಲ್ಲ. ನಾಯ್ಡು ಅಷ್ಟೇಕೆ ಗಂಭೀರವಾಗಿ ಇದನ್ನು ಪರಿಗಣಿಸಿದ್ದಾರೆ? ಇತ್ತೀಚೆಗೆ ನಡೆದ ಪುನಾರಚನೆ ವೇಳೆ ಮೋದಿ ಕೃಪಾಕಟಾಕ್ಷ ಸಿಕ್ಕದ ಹಿನ್ನೆಲೆಯಲ್ಲಿ ಪ್ರಧಾನಿಯನ್ನು ಮೆಚ್ಚಿಸಲು ಈ ತಂತ್ರವೇ? ಬಹುಶಃ ಅವರು ಈ ವರದಿಗಳನ್ನು ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲೂ ಬಹಿರಂಗಪಡಿಸುವ ಸಾಧ್ಯತೆ ಇದೆ.

ಪಿಎಂ ಕಚೇರಿಯ ಫೇಸ್‌ಬುಕ್ ಪುಶ್

ಪ್ರಧಾನಿ ಮೋದಿಗೆ ಸಾಮಾಜಿಕ ಜಾಲತಾಣ ಅಚ್ಚುಮೆಚ್ಚು. ಆದರೆ ಹಲವು ಸಚಿವಾಲಯಗಳು ಇನ್ನೂ ಫೇಸ್‌ಬುಕ್‌ಗೆ ಲಗ್ಗೆ ಇಟ್ಟಿಲ್ಲ ಎನ್ನುವುದನ್ನು ಪ್ರಧಾನಿ ಕಚೇರಿ ಕಂಡುಕೊಂಡಿದೆ. ಟ್ವಿಟರ್ ಖಾತೆ ಹೊಂದಿದ್ದರೂ, ನಿಯತವಾಗಿ ಟ್ವೀಟ್ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಸಕ್ರಿಯರಾಗಿ; ಇಲ್ಲವೇ ಪರಿಣಾಮ ಎದುರಿಸಿ ಎಂಬ ಕಟ್ಟುನಿಟ್ಟಿನ ಮೌಖಿಕ ಸೂಚನೆ ಎಲ್ಲ ಸಚಿವಾಲಯಗಳಿಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಹಗಲು-ರಾತ್ರಿ ಸಾಮಾಜಿಕ ಜಾಲತಾಣ ನಿರ್ವಹಿಸಬಲ್ಲ ವಿಶ್ವಾಸಾರ್ಹ ಹಾಗೂ ಸೈದ್ಧಾಂತಿಕವಾಗಿ ಅರ್ಹ ತಂತ್ರಜ್ಞಾನ ಸ್ನೇಹಿ ಜನರಿಗಾಗಿ ಹುಡುಕಾಟ ವ್ಯಾಪಕವಾಗಿದೆ. ಸರಕಾರ ಕೋಟ್ಯಂತರ ಉದ್ಯೋಗ ಸೃಷ್ಟಿ ಭರವಸೆಯನ್ನು ಈಡೇರಿಸಿಲ್ಲ; ಬದಲಾಗಿ ನೂರಾರು ಮಂದಿಗೆ ಫೇಸ್‌ಬುಕ್ ನಿರ್ವಹಿಸುವ ಉದ್ಯೋಗ ಸೃಷ್ಟಿಸಿದೆ ಎಂಬ ಅಣಕ ಹಿರಿಯ ಅಧಿಕಾರಿಯೊಬ್ಬರ ಕಿವಿಗೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News