ವೈರಲ್ ಆದ ಬಿಗ್ ಬಿ ಪತ್ರ
ದೇಶದ ಅತ್ಯಂತ ದೊಡ್ಡ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ತಂದೆಯಾಗಿ, ಅಜ್ಜನಾಗಿ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಎಂದೇ ಪರಿಚಿತರು. ಅವರು ತಮ್ಮ ಮೊಮ್ಮಕ್ಕಳಾದ ನವ್ಯಾ ನವೇಲಿ ಹಾಗು ಆರಾಧ್ಯ ಅವರಿಗೆ ಒಂದು ಆತ್ಮೀಯ ಪತ್ರ ಬರೆದಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದಲ್ಲಿ ಪ್ರಸಕ್ತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಪಾತ್ರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಆ ಪತ್ರದ ಅನುವಾದ ಇಲ್ಲಿದೆ:
"ನೀವಿಬ್ಬರೂ ನಿಮ್ಮ ಎಳೆಯ ಹೆಗಲುಗಳ ಮೇಲೆ ದೊಡ್ಡ ಪರಂಪರೆಯನ್ನು ಹೊತ್ತಿದ್ದೀರಿ - ಆರಾಧ್ಯ, ನಿನ್ನ ಹಿಂದೆ ನಿನ್ನ ಮುತ್ತಜ್ಜ ಡಾ. ಹರಿವಂಶ ರಾಯ್ ಬಚ್ಚನ್ ಅವರ ಪರಂಪರೆಯಿದೆ... ಮತ್ತು ನವ್ಯಾ, ನಿನ್ನ ಹಿಂದೆ ನಿನ್ನ ಮುತ್ತಜ್ಜ ಶ್ರೀ ಎಚ್. ಪಿ. ನಂದಾ ಅವರ ಪರಂಪರೆಯಿದೆ...
ನಿಮ್ಮಿಬ್ಬರ ಮುತ್ತಜ್ಜರು ನಿಮ್ಮ ಹೆಸರಿಗೆ ಬಹುದೊಡ್ಡ ಕೀರ್ತಿ, ಗೌರವ ಹಾಗು ಮನ್ನಣೆ ಸಂಪಾದಿಸಿದ್ದಾರೆ. ನೀವಿಬ್ಬರೂ ನಂದಾ ಅಥವಾ ಬಚ್ಚನ್ ಆಗಿರಬಹುದು. ಆದರೆ ನೀವಿಬ್ಬರು ಹುಡುಗಿಯರೂ ಹೌದು.. ಮಹಿಳೆಯರು. ಮಹಿಳೆಯರಾದ್ದರಿಂದ ಜನರು ನಿಮ್ಮ ಮೇಲೆ ಅವರ ಯೋಚನೆ, ಅವರ ಮಿತಿಗಳನ್ನು ಹೇರುತ್ತಾರೆ. ನೀವು ಹೇಗೆ ಬಟ್ಟೆ ಧರಿಸಬೇಕು, ಹೇಗೆ ವರ್ತಿಸಬೇಕು, ಯಾರನ್ನು ಭೇಟಿಯಾಗಬಹುದು ಮತ್ತು ಎಲ್ಲಿಗೆ ಹೋಗಬಹುದು ಎಂದು ಅವರು ನಿಮಗೆ ಹೇಳುತ್ತಾರೆ.
ನೀವು ಜನರ ತೀರ್ಪುಗಳ ನೆರಳಲ್ಲಿ ಎಂದೂ ಬದುಕಬೇಡಿ. ನಿಮ್ಮ ವಿವೇಕದ ಬೆಳಕಲ್ಲಿ ನೀವೇ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಿ.
ನೀವು ಧರಿಸುವ ಸ್ಕರ್ಟ್ ನ ಉದ್ದ ನಿಮ್ಮ ಚಾರಿತ್ರ್ಯದ ಮಾನದಂಡ ಎಂದು ನಿಮ್ಮನ್ನು ನಂಬಿಸಲು ಯಾರಿಗೂ ಅವಕಾಶ ನೀಡಬೇಡಿ.
ನೀವು ಯಾರೊಂದಿಗೆ ಸ್ನೇಹ ಬೆಳೆಸಬೇಕು ಎಂಬ ಬಗ್ಗೆ ಬೇರೆಯವರ ಅಭಿಪ್ರಾಯ ನಿಮಗೆ ಬೇಡ, ಯಾರು ನಿಮ್ಮೊಂದಿಗೆ ಸ್ನೇಹಿತರಾಗಬೇಕು ಎಂಬುದಕ್ಕೂ ಯಾರದ್ದೇ ಅಪ್ಪಣೆಯ ಅಗತ್ಯವಿಲ್ಲ.
ಮದುವೆಯಾಗಬೇಕು ಎಂದು ನೀವೇ ತೀರ್ಮಾನಿಸದ ಹೊರತು ಬೇರೆ ಯಾವುದೇ ಕಾರಣಕ್ಕೂ ನೀವು ಮದುವೆಯಾಗಬೇಡಿ.
ಜನ ಮಾತನಾಡುತ್ತಾರೆ. ಅವರು ಕೆಲವು ಭಯಾನಕ ಮಾತುಗಳನ್ನು ಆಡುತ್ತಾರೆ. ಆದರೆ ಅದರರ್ಥ, ನೀವು ಎಲ್ಲರ ಮಾತು ಕೇಳಬೇಕು ಎಂದಲ್ಲ. "ಲೋಗ್ ಕ್ಯಾ ಕಹೇಂಗೇ ( ಜನ ಏನು ಹೇಳುತ್ತಾರೆ ) " - ಎಂಬ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳಬೇಡಿ.
ಕೊನೆಗೆ ನಿಮ್ಮ ನಿರ್ಧಾರಗಳ ಪರಿಣಾಮ ಅನುಭವಿಸುವವರು ನೀವು ಮಾತ್ರ. ಹಾಗಾಗಿ ಇತರರು ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಬೇಡಿ.
ನವ್ಯಾ - ನಿನ್ನ ದೊಡ್ಡ ಸರ್ ನೇಮ್ ನಿನಗೆ ನೀಡುವ ಸಮ್ಮಾನ ನೀನು ಮಹಿಳೆಯಾದ್ದರಿಂದ ಎದುರಿಸಬೇಕಾದ ಕಷ್ಟಗಳಿಂದ ನಿನ್ನನ್ನು ರಕ್ಷಿಸದು.
ಆರಾಧ್ಯ - ನೀನು ಇದನ್ನು ನೋಡಿ, ಅರ್ಥಮಾಡಿಕೊಳ್ಳುವಾಗ ನಾನು ಇಲ್ಲಿ ಇರದೇ ಇರಬಹುದು. ಆದರೆ ನಾನು ಈಗ ಹೇಳುತ್ತಿರುವುದು ಯಾವತ್ತಿಗೂ ಸಕಾಲಿಕವೇ ಆಗಿರುತ್ತದೆ ಎಂದು ನನ್ನ ಭಾವನೆ.
ಮಹಿಳೆಯಾಗಿರಲು ಇದು ಅತ್ಯಂತ ಕಠಿಣ ಜಗತ್ತು ಎಂದೆನಿಸುತ್ತದೆ. ಆದರೆ ನಿಮ್ಮಂತಹ ಮಹಿಳೆಯರು ಅದನ್ನು ಬದಲಾಯಿಸುತ್ತೀರಿ ಎಂದು ನಾನು ನಂಬಿದ್ದೇನೆ. ನೀವು ನಿಮ್ಮದೇ ಗುರಿ ನಿರ್ಧರಿಸುವುದು , ನಿಮ್ಮದೇ ಆಯ್ಕೆ ಮಾಡಿಕೊಳ್ಳುವುದು, ಜನರ ತೀರ್ಪುಗಳನ್ನು ಮೀರಿ ಹೋಗುವುದು - ಇದೆಲ್ಲ ಸುಲಭವಲ್ಲ. ಆದರೆ ನೀವು!... ಇತರ ಎಲ್ಲ ಮಹಿಳೆಯರಿಗೆ ಒಂದು ಮಾದರಿ ಆಗಬಹುದು.
ಅಷ್ಟು ಮಾಡಿದರೆ ನಾನು ಏನೆಲ್ಲಾ ಮಾಡಿದ್ದೇನೋ ಅದಕ್ಕಿಂತ ಹೆಚ್ಚು ಮಾಡಿದಿರಿ ಎಂದು ನಾನು ಅಂದುಕೊಳ್ಳುತ್ತೇನೆ. ಅಂದು ನಾನು ಅಮಿತಾಭ್ ಬಚ್ಚನ್ ಎಂದು ಗುರುತಿಸಿಕೊಳ್ಳುವುದಕ್ಕಿಂತ ನಿಮ್ಮಿಬ್ಬರ ಅಜ್ಜ ಎಂದು ಹೇಳಲು ಹೆಮ್ಮೆ ಪಡುತ್ತೇನೆ.