×
Ad

ಶೀಘ್ರವೇ ಪೆಟ್ರೋಲಿಯಂ ಆಮದು ರಹಿತ ದೇಶವಾಗಲಿದೆ ಭಾರತ: ಸಚಿವ ಗಡ್ಕರಿ

Update: 2016-09-06 23:53 IST

  ಹೊಸದಿಲ್ಲಿ, ಸೆ.6: ಪರ್ಯಾಯ ಇಂಧನ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕೇಂದ್ರ ಸರಕಾರವು ಹೆಚ್ಚಿನ ಗಮಹರಿಸುತ್ತಿದ್ದು, ಶೀಘ್ರದಲ್ಲೇ ಭಾರತವು ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ನಿಲ್ಲಿಸಲಿದೆಯೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.

  ‘‘ನಾವು ಭಾರತವನ್ನು ಪೆಟ್ರೋಲಿಯಂ ಆಮದು ಶೂನ್ಯವಾಗಿರುವ ದೇಶವಾಗಿ ಅಭಿವೃದ್ಧಿಪಡಿಸಲು ಹೊರಟಿದ್ದೇವೆ. ಎಥೆನಾಲ್, ಮೆಥನಾಲ್, ಬಯೋ- ಸಿಎನ್‌ಜಿಯಂತಹ ಪರ್ಯಾಯ ಇಂಧನಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲಿದ್ದೇವೆ. ಇದು ಗ್ರಾಮೀಣ ಪ್ರದೇಶಗಳ ಹಾಗೂ ಕೃಷಿ ಕೇಂದ್ರಿತ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಹಾಗೂ ಅಪಾರ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆಯೆಂದು ಗಡ್ಕರಿ ತಿಳಿಸಿದ್ದಾರೆ.
   ನೀತಿ ಆಯೋಗವು ಮಂಗಳವಾರ ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಮೆಥನಾಲ್ ಆರ್ಥಿಕತೆ ಕುರಿತ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಭಾರತವು ಕಚ್ಚಾ ತೈಲದ ಆಮದಿಗಾಗಿ 4.5 ಕೋಟಿ ರೂ. ವೆಚ್ಚ ಮಾಡುತ್ತಿದೆ. ಅದಕ್ಕೂ ಮುನ್ನ ಕಚ್ಚಾ ತೈಲದ ಆಮದು ವೆಚ್ಚವು 7.5 ಕೋಟಿ ರೂ.ಗಳಾಗಿತ್ತು ಎಂದು ತಿಳಿಸಿದರು.
ದೇಶದ ಗ್ರಾಮೀಣ ಸಾಮಾಜಿಕ- ಆರ್ಥಿಕ ಸನ್ನಿವೇಶ ಉತ್ತಮವಾಗಿಲ್ಲ. ಕೃಷಿಯು ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಪರ್ಯಾಯ ಇಂಧನ ಆರ್ಥಿಕತೆಯ ಮೂಲಕ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯ ಸಮಗ್ರ ಚಿತ್ರಣವನ್ನೇ ಬದಲಾಯಿಸಲಿದೆ. ಗಡ್ಕರಿ ತಿಳಿಸಿದರು.
   ತ್ಯಾಜ್ಯವಸ್ತುಗಳಿಂದ ಎಥೆನಾಲ್ ಹಾಗೂ ಬಯೋಗ್ಯಾಸ್ ತಯಾರಿಸುವುದರಿಂದ ವಾರ್ಷಿಕವಾಗಿ 5 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆಯೆಂದರು. ಒಂದು ಟನ್ ಭತ್ತದ ಹುಲ್ಲಿನಿಂದ 400 ಲೀಟರ್ ಎಥೆನಾಲ್ ಪಡೆಯಲು ಸಾಧ್ಯವಿದೆ. ಈಶಾನ್ಯ ಭಾರತದಲ್ಲಿ ಎಥೆನಾಲ್ ತಯಾರಿಸಲು ಬಿದಿರನ್ನು ಬಳಸಬಹುದಾಗಿದೆಯೆಂದರು.ನಗರ ತ್ಯಾಜ್ಯ ಹಾಗೂ ತರಕಾರಿ ಹಾಗೂ ಹಣ್ಣು ಹಂಪಲುಗಳ ತ್ಯಾಜ್ಯ ಗಳಿಂದಲೂ ಜೈವಿಕ ಇಂಧನವನ್ನು ಉತ್ಪಾದಿಸಲು ಸಾಧ್ಯವಿದೆಯೆಂದು ಹೇಳಿದರು.
  
ಅಧಿಕಾರಶಾಹಿಯ ನಿಧಾನ ಪ್ರವೃತ್ತಿಯ ಬಗ್ಗೆ ಕಟಕಿ ಯಾಡಿದ ಗಡ್ಕರಿ ಅವರು ಸಮಗ್ರ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸ ಬೇಕಾಗಿದೆಯೆಂದರು. ‘‘ಮನಸ್ಸಿದ್ದರೆ ಮಾರ್ಗವಿದೆ. ಒಂದು ವೇಳೆ ಮನಸ್ಸು ಮಾಡದೆ ಇದ್ದಲ್ಲಿ, ಯಾವುದೇ ಮಾರ್ಗವೂ ಸಿಗದು. ಕೇವಲ ಸಮಿತಿಗಳು, ಚರ್ಚೆಗಳು ಹಾಗೂ ಸಂಶೋಧನಾ ಗುಂಪುಗಳು ಮಾತ್ರವೇ ಸೃಷ್ಟಿಯಾಗುವವೇ ಹೊರತು ಯಾವುದೇ ಫಲಿತಾಂಶ ಲಭ್ಯವಾಗದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News