‘ಪ್ರಶಸ್ತಿ ಫೇವರಿಟ್’ ಬ್ರಿಟನ್‌ನ ಆ್ಯಂಡಿ ಮರ್ರೆಗೆ ನಿಶಿಕೊರಿ ಶಾಕ್

Update: 2016-09-08 04:49 GMT

ನ್ಯೂಯಾರ್ಕ್, ಸೆ.8: ‘ಪ್ರಶಸ್ತಿ ಫೇವರಿಟ್’ ಬ್ರಿಟನ್‌ನ ಆ್ಯಂಡಿ ಮರ್ರೆಗೆ ಶಾಕ್ ನೀಡಿದ ಜಪಾನ್ ಆಟಗಾರ ಕೀ ನಿಶಿಕೊರಿ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗ್ರಾನ್‌ಸ್ಲಾಮ್‌ನ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಏಷ್ಯಾದ ಮೊದಲ ಟೆನಿಸ್ ಆಟಗಾರ ಎನಿಸಿಕೊಳ್ಳಲು ನಿಶಿಕೊರಿಗೆ ಇನ್ನು ಎರಡೇ ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ.

ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ನಿಶಿಕೊರಿ ಅವರು ವಿಂಬಲ್ಡನ್ ಹಾಗೂ ಒಲಿಂಪಿಕ್ಸ್ ವಿನ್ನರ್ ಮರ್ರೆ ಅವರನ್ನು 1-6, 6-4, 4-6, 6-1, 1-7 ಸೆಟ್‌ಗಳ ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದರು.

ಮೂರು ವಾರಗಳ ಹಿಂದೆಯಷ್ಟೇ ರಿಯೋ ಒಲಿಂಪಿಕ್ಸ್‌ನ ಸೆಮಿ ಫೈನಲ್‌ನಲ್ಲಿ ನಿಶಿಕೊರಿ ಅವರು ಮರ್ರೆಗೆ ಸೋತಿದ್ದರು. ಇದೀಗ ಆ ಒಲಿಂಪಿಕ್ಸ್‌ನ ಸೆಮಿಫೈನಲ್ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದ್ದಾರೆ.

ಈ ವರ್ಷ ವಿಂಬಲ್ಡನ್ ಟೂರ್ನಿ ಹಾಗೂ ಇತ್ತೀಚೆಗಷ್ಟೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ 2012ರ ಯುಎಸ್ ಓಪನ್ ಚಾಂಪಿಯನ್ ಮರ್ರೆ ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆದರೆ, ನಿಶಿಕೊರಿ ವಿರುದ್ಧದ ಸುಮಾರು 4 ಗಂಟೆಗಳ ಕಾಲ ನಡೆದ 5 ಸೆಟ್‌ಗಳ ಮ್ಯಾರಥಾನ್ ಪಂದ್ಯದಲ್ಲಿ ಎರಡು ಸೆಟ್‌ನಲ್ಲಿ ಮೇಲುಗೈ ಸಾಧಿಸಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News