×
Ad

ಈ ದುರಂತಕ್ಕೆ ಯಾರು ಹೊಣೆ?

Update: 2016-09-08 11:44 IST

ಬ್ಬಗಳು ನಮ್ಮ ಬದುಕನ್ನು ಮರು ನವೀಕರಿಸಲೆಂದೇ ಬರುತ್ತವೆ. ನಾವು ಮಾಡಿದ ತಪ್ಪುಗಳು, ನಮ್ಮ ದುಃಖಗಳು, ನೋವುಗಳು, ಸಂಕಟಗಳನ್ನೆಲ್ಲ ಮರೆತು ಅಥವಾ ಅದಕ್ಕೆ ಪಶ್ಚಾತ್ತಾಪ ಪಟ್ಟು ಮತ್ತೆ ಹೊಸದಾಗಿ ಬದುಕು ಕಟ್ಟುವುದಕ್ಕೆ ಇದೊಂದು ಅವಕಾಶವಾಗಿದೆ. ಎಲ್ಲ ಧರ್ಮಗಳ ಹಬ್ಬಗಳ ಉದ್ದೇಶವೂ ಇದೇ ಆಗಿದೆ. ಆದರೆ ಇತ್ತೀಚೆಗೆ ಹಬ್ಬಗಳನ್ನು ನಾವು ಸ್ವೀಕರಿಸುತ್ತಿರುವ ರೀತಿ, ಒಟ್ಟು ಅದರ ಉದ್ದೇಶಕ್ಕೆ ಧಕ್ಕೆ ತರುವಂತಿದೆ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಈ ಕಾರಣಕ್ಕಾಗಿಯೇ ಹಬ್ಬ ಹತ್ತಿರ ಬರುತ್ತಿದ್ದಂತೆಯೇ ಪೊಲೀಸರಿಗೆ ತಲೆನೋವು ಶುರುವಾಗಿ ಬಿಡುತ್ತದೆ. ಇಂದು ಬೀದಿಗಳಲ್ಲಿ ಪೊಲೀಸ್ ವ್ಯಾನುಗಳು ಗಸ್ತು ಕಾಯುತ್ತಿವೆ ಎಂದರೆ ಅದರರ್ಥ ಯಾವುದೋ ಧರ್ಮವೊಂದರ ಹಬ್ಬವೊಂದು ಹತ್ತಿರ ಬರುತ್ತಿದೆ. ‘‘ಶಾಂತಿಯಿಂದ ಹಬ್ಬ ಆಚರಿಸಲು ಪೊಲೀಸ್ ಅಧಿಕಾರಿಯಿಂದ ಕರೆ’’ ಎನ್ನುವ ಹೇಳಿಕೆಯೇ ಹಬ್ಬದ ವೌಲ್ಯಗಳನ್ನು ಅಣಕಿಸುವಂತಿದೆ. ಇದಕ್ಕೆ ಕಾರಣ, ನಮ್ಮ ಹಬ್ಬಗಳ ಆಚರಣೆಗಳು ತನ್ನ ಮೂಲ ಉದ್ದೇಶವನ್ನು ಕಳೆದುಕೊಳ್ಳುತ್ತಿರುವುದು. ಒಂದು ವೇಳೆ ಆ ಧರ್ಮದ ಅನುಯಾಯಿಗಳು ಆ ಹಬ್ಬಗಳ ಉದ್ದೇಶಗಳನ್ನು ಅರಿತು ಆಚರಿಸುವಂತಿದ್ದರೆ ಇಂದು, ನಮ್ಮ ಸಮಾಜ ಆ ಹಬ್ಬಗಳಿಂದ ಬಹಳಷ್ಟನ್ನು ಪಡೆದು ಕೊಳ್ಳುತ್ತಿತ್ತು. ಆದರೆ ಸದ್ಯದ ಸ್ಥಿತಿಯಲ್ಲಿ, ಈ ಹಬ್ಬಗಳು ಯಾವಾಗ ಮುಗಿಯುತ್ತವೆಯೋ ಎಂದು ಶ್ರೀ ಸಾಮಾನ್ಯರು ಕಾಯುವಂತಾಗಿದೆ.

ಗಣೇಶೋತ್ಸವ ಹತ್ತಿರ ಬರುತ್ತಿರುವ ಹಾಗೆಯೇ ನಮ್ಮ ಪೊಲೀಸ್ ಇಲಾಖೆಗಳು, ಜಿಲ್ಲಾಡಳಿತಗಳು ಜನರಿಗೆ ಬೇರೆ ಬೇರೆ ರೀತಿಯಲ್ಲಿ ಎಚ್ಚರಿಕೆಗಳನ್ನು ನೀಡಿವೆ. ಹಬ್ಬಗಳನ್ನು ಪರಿಸರಕ್ಕೆ ಪೂರಕವಾಗಿ ಆಚರಿಸಿ ಎಂದು ಪರಿಸರ ಇಲಾಖೆಯೂ ಸೇರಿದಂತೆ ಸರಕಾರ ಜನರ ಜೊತೆಗೆ ಮನವಿ ಮಾಡಿದೆ. ಯಾಕೆಂದರೆ, ಗಣೇಶೋತ್ಸವ ಆಚರಣೆ ಮುಗಿದ ಬಳಿಕ ನಮ್ಮ ಕೆರೆ, ನದಿಗಳ ಸ್ಥಿತಿ ಅದೆಷ್ಟು ಭೀಕರವಾಗಿರುತ್ತದೆ ಯೆಂದರೆ, ಅದನ್ನು ಸರಿಪಡಿಸುವುದಕ್ಕಾಗಿ ಸರಕಾರ ಹಲವು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಪರಿಸರ ಮಾಲಿನ್ಯ, ಕೆರೆಗಳ ನಾಶ, ಕಾನೂನು ಉಲ್ಲಂಘನೆ ಇವೆಲ್ಲವುಗಳು ಪ್ರತಿ ಬಾರಿ ಗಣೇಶೋತ್ಸವ ನಮಗಾಗಿ ಬಿಟ್ಟು ಹೋಗುವ ವೌಲ್ಯಗಳು. ಅಂದರೆ ಗಣೇಶೋತ್ಸವ ಉದ್ದೇಶವನ್ನು ಅರ್ಥ ಮಾಡಿಕೊಳ್ಳದ ಕೆಲವರಿಂದಾಗಿ ಇಡೀ ಆಚರಣೆಗೇ ಕೆಟ್ಟ ಹೆಸರು ಬರುತ್ತಿದೆ. ಹಾಗೆಯೇ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಹಲವು ಮುಂಜಾಗರೂಕತೆಗಳ ಕುರಿತಂತೆ ಸರಕಾರ ಪದೇ ಪದೇ ಪ್ರಕಟಣೆ ನೀಡುತ್ತಿರುತ್ತದೆ. ವಿಷಾದನೀಯ ಸಂಗತಿಯೆಂದರೆ, ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಶಿವಮೊಗ್ಗದಲ್ಲಿ 10ಕ್ಕೂ ಅಧಿಕ ಜನರು ನೀರು ಪಾಲಾಗಿದ್ದಾರೆ. ಗಣೇಶ ವಿಸರ್ಜನೆ ಮಾಡಲು ದೋಣಿ ಯಲ್ಲಿ ತೆರಳಿದ್ದ 23ಕ್ಕೂ ಅಧಿಕ ಜನರು ದೋಣಿ ಮುಳುಗಿರುವುದರಿಂದ ನದಿಯಲ್ಲಿ ಕೊಚ್ಚಿ ಹೋದರು. ಅವರಲ್ಲಿ ಕೆಲವರು ಈಜಿ ದಡ ಸೇರಿದರಾದರು. ಹಬ್ಬ ನಮ್ಮ ಬದುಕಿನಲ್ಲಿ ಸಂತೋಷವನ್ನು ತರಬೇಕಾಗಿತ್ತು. ಆದರೆ ಮೂರ್ಖ ಜನರ ದೆಸೆಯಿಂದಾಗಿ ಗಣೇಶೋತ್ಸವಕ್ಕೆ ನಾವು ವಿಷಾದದ ವಿದಾಯ ಹೇಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ದುರಂತಕ್ಕೆ, ವಿಷಾದಕ್ಕೆ ನಾವು ಯಾರನ್ನು ಹೊಣೆ ಮಾಡಬೇಕು?

ಮೊತ್ತ ಮೊದಲಾಗಿ, ನದಿಗಳಲ್ಲಿ, ಕೆರೆಗಳಲ್ಲಿ ಗಣೇಶ ವಿಗ್ರಹಗಳನ್ನು ವಿಸರ್ಜಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಬೇಡಿ ಎಂದು ತಜ್ಞರು, ಅಧಿಕಾರಿಗಳು ಗೋಗರೆದಿದ್ದರು. ವಿಗ್ರಹಗಳಲ್ಲಿರುವ ರಾಸಾಯನಿಕಗಳಿಂದ ಮೀನುಗಳು ಸೇರಿದಂತೆ ಜಲಚರಗಳು ತೊಂದರೆಗಳನ್ನು ಅನುಭವಿಸುತ್ತವೆ ಎಂದು ಎಚ್ಚರಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಜೀವರಕ್ಷಣೆಯ ದೃಷ್ಟಿಯಿಂದಲೂ ಮುಂಜಾಗರೂಕತೆಯನ್ನು ವಹಿಸಲು ಅವರು ಸೂಚನೆಕೊಟ್ಟಿದ್ದರು. ಶಿವಮೊಗ್ಗದಲ್ಲಿ ನಡೆದ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಈ ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ಗಣೇಶ ವಿಸರ್ಜನೆಗೆ ಹೊರಟಿದ್ದರು. ಒಂದು ಪುಟ್ಟ ದೋಣಿಯಲ್ಲಿ ಅಷ್ಟೂ ಜನರು, ಗದ್ದಲ, ಕುಣಿತಗಳ ಜೊತೆಗೆ ನದಿಯ ಮಧ್ಯಕ್ಕೆ ವಿಗ್ರಹದ ಜೊತೆಗೆ ಹೋದರೆ ದುರಂತ ಸಂಭವಿಸದೇ ಇರುತ್ತದೆಯೇ? ಮೂರ್ಖತನ, ಅವಿವೇಕಗಳೇ ಈ ದುರಂತಕ್ಕೆ ಕಾರಣ. ಆದರೆ ಅದಕ್ಕೆ ಬೆಲೆ ತೆರಬೇಕಾದವರು ಮಾತ್ರ ಬೇರೆಯವರು. ನಾಡಿನ ವಿಘ್ನವನ್ನು ಕಳೆಯಬೇಕಾಗಿದ್ದ ಗಣೇಶ ಹಬ್ಬ, ವಿಘ್ನಗಳಿಗಾಗಿಯೇ ಇಂದು ಸುದ್ದಿಯಾಗಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಪ್ರತಿ ಗಣೇಶ ಹಬ್ಬದ ಸಂದರ್ಭದಲ್ಲೂ ಈ ದುರಂತ ನಮ್ಮನ್ನು ಚುಚ್ಚುತ್ತಲೇ ಇರುತ್ತದೆ. ನಮ್ಮ ಬೇಜವಾಬ್ದಾರಿಗೆ ನಾವು ತೆತ್ತ ಬೆಲೆ ಇದು. ಶಿವಮೊಗ್ಗ ಮಾತ್ರವಲ್ಲ, ಹಲವೆಡೆ ಸಣ್ಣ ಪುಟ್ಟ ದುರಂತಗಳು ವಿಸರ್ಜನೆಯ ಹೆಸರಿನಲ್ಲಿ ಸಂಭವಿಸಿವೆೆ. ಒಂದೆಡೆ ಗಣೇಶ ವಿಸರ್ಜನೆಯ ಕಾರಣದಿಂದ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಸತ್ತಿವೆ. ಮುಂಬೈಯಲ್ಲಿ ದುಷ್ಕರ್ಮಿಗಳು, ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಾನೂನು ಪಾಲನೆ ಮಾಡುತ್ತಿದ್ದ ಪೊಲೀಸನೊಬ್ಬನನ್ನು ಕೆರೆಯಲ್ಲಿ ಮುಳುಗಿಸಿ ಸಾಯಿಸಲು ಯತ್ನಿಸಿರುವು ವೀಡಿಯೊ ಮೂಲಕ ಬಹಿರಂಗವಾಗಿದೆ. ಅಷ್ಟೇ ಏಕೆ? ದಹಿ ಹಂಡಿ ಅಥವಾ ಮೊಸರು ಕುಡಿಕೆಯ ಸಂದರ್ಭದಲ್ಲಿ ಮಕ್ಕಳ ಜೀವದ ಬಗ್ಗೆ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದ್ದು, ಕಂಬ ಇಷ್ಟೇ ಎತ್ತರ ಇರಬೇಕು, ಮಕ್ಕಳಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದೂ ಆದೇಶ ನೀಡಿತ್ತು. ಈ ಆದೇಶದ ವಿರುದ್ಧವೇ ಮೂರ್ಖ ಜನರು ಪ್ರತಿಭಟಿಸಿದರು. ದುರಂತವೆಂದರೆ, ನಮ್ಮದೇ ಜಿಲ್ಲೆಯ ಬೆಳ್ತಂಗಡಿಯಲ್ಲಿ ಯುವಕನೊಬ್ಬ ಈ ಸಂದರ್ಭದಲ್ಲಿ ಕೆಳಗೆ ಬಿದ್ದು ಮೃತಪಟ್ಟ. ಬಡವರ ಮನೆಯ ಆಸರೆಯಾಗಿದ್ದ ಹುಡುಗನನ್ನು ಕಳೆದುಕೊಂಡ ಪಾಲಕರು ಜೀವನ ಪರ್ಯಂತ ಈ ದುಃಖವನ್ನು ನುಂಗಿಕೊಂಡು ಜೀವಿಸಬೇಕಾಗಿದೆ. ಪ್ರತಿ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ತನ್ನ ಮಗನನ್ನು ಕಳೆದುಕೊಂಡ ದುಃಖ ಅವರನ್ನು ಚುಚ್ಚುತ್ತಿರುತ್ತವೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಯಿಂದಾಗಿ ಪ್ರತಿ ವರ್ಷ ದೇಶದಲ್ಲಿ ನೂರಕ್ಕೂ ಅಧಿಕ ಮಕ್ಕಳು ಕಣ್ಣು ಕಳೆದುಕೊಳ್ಳುತ್ತಿದ್ದಾರೆ. ಆದರೂ ನಮ್ಮ ಒಳಗಣ್ಣು ತೆರೆಯುತ್ತಿಲ್ಲ. ಹಬ್ಬಗಳ ಸದುದ್ದೇಶವನ್ನು ಅರ್ಥ ಮಾಡಿಕೊಂಡು ಅದನ್ನು ಆಚರಿಸುವ ವಿವೇಕ ನಮ್ಮಲ್ಲಿ ಮೂಡುತ್ತಿಲ್ಲ.

ಶಿವಮೊಗ್ಗದಲ್ಲಿ ನಡೆದ ದುರಂತ ನಮಗೆಲ್ಲ ಪಾಠವಾಗಬೇಕಾಗಿದೆ. ಯಾವುದೇ ಧರ್ಮದ ಹಬ್ಬಗಳಿರಲಿ, ಸಾರ್ವಜನಿಕರಿಗೆ ತೊಂದರೆ ನೀಡುವಂತಿರಬಾರದು. ಇನ್ನೊಬ್ಬರಿಗೆ ಸಹಕಾರಿಯಾಗುವಂತೆ ಹಬ್ಬವನ್ನು ಆಚರಿಸಬೇಕು. ಈ ಬಾರಿಯ ಗಣೇಶೋತ್ಸವ, ಬಕ್ರೀದ್ ಹಬ್ಬಗಳು ಈ ನಾಡಿಗೆ ಒಳಿತನ್ನು ತರಲಿ. ನಮ್ಮೊಳಗಿನ ವಿವೇಕ, ಸದ್ಬುದ್ಧಿಯನ್ನು ಜಾಗೃತಗೊಳಿಸುವಂತಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News