ಹೇಗ್ ನ್ಯಾಯಮಂಡಳಿ ತೀರ್ಪು ಪಾಲನೆ ಕಡ್ಡಾಯ: ಒಬಾಮ
Update: 2016-09-08 23:48 IST
ವಿಯಂಟಿಯಾನ್, ಸೆ. 8: ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ಹೇಗ್‌ನ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ಜುಲೈ ತಿಂಗಳಲ್ಲಿ ನೀಡಿರುವ ತೀರ್ಪಿನ ಪಾಲನೆ ಕಡ್ಡಾಯವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗುರುವಾರ ಎಚ್ಚರಿಸಿದ್ದಾರೆ.
ಈ ತೀರ್ಪನ್ನು ಪಾಲಿಸಲು ಚೀನಾ ನಿರಾಕರಿಸಿರುವುದನ್ನು ಸ್ಮರಿಸಬಹುದಾಗಿದೆ. ‘‘ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ಜುಲೈ ತಿಂಗಳಲ್ಲಿ ನೀಡಿರುವ ಮಹತ್ವದ ತೀರ್ಪು ವಲಯದ ಸಾಗರ ಹಕ್ಕುಗಳ ಬಗ್ಗೆ ಸ್ಪಷ್ಟೀಕರಣ ನೀಡಿದೆ ಹಾಗೂ ತೀರ್ಪಿನ ಪಾಲನೆ ಕಡ್ಡಾಯವಾಗಿದೆ’’ ಎಂದು ಇಲ್ಲಿ ನಡೆದ ಏಶ್ಯನ್ ನಾಯಕರ ಶೃಂಗ ಸಮ್ಮೇಳನದಲ್ಲಿ ಒಬಾಮ ಹೇಳಿದರು.
ಕಾನೂನಿನ ಆಡಳಿತದ ತತ್ವವನ್ನು ಅನುಸರಿಸುವಂತೆ ಹಾಗೂ ಉದ್ವಿಗ್ನತೆಗೆ ಕಾರಣವಾಗಬಹುದಾದ ಏಕಪಕ್ಷೀಯ ಕ್ರಮಗಳನ್ನು ತೆಗೆದುಕೊಳ್ಳದಂತೆ ಒಬಾಮ ಚೀನಾವನ್ನು ಒತ್ತಾಯಿಸಿದ್ದಾರೆ.