×
Ad

ಕೋಲ್ಗೇಟ್ ಟೂತ್‌ಪೇಸ್ಟ್‌ನಲ್ಲಿ ನಿಷೇಧಿತ ರಾಸಾಯನಿಕ!

Update: 2016-09-12 21:35 IST

ನ್ಯೂಯಾರ್ಕ್, ಸೆ.12: ಸೋಪುಗಳಲ್ಲಿ ನಿಷೇಧಿಸಲಾಗಿರುವ ಬ್ಯಾಕ್ಟೀರಿಯಾ ನಿರೋಧಕ ರಾಸಾಯನಿಕ ಟ್ರೈಕ್ಲೋಸಾನ್ ಟೂತ್‌ಪೇಸ್ಟ್‌ಗಳಲ್ಲಿ ಉಳಿದಿದೆ. ಅತ್ಯಧಿಕ ಮಾರಾಟದ ಬ್ರಾಂಡ್ ಆಗಿರುವ ಕೋಲ್ಗೇಟ್ ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ)ಗೆ ಟೂತ್‌ಪೇಸ್ಟ್‌ನಲ್ಲಿ ಈ ರಾಸಾಯನಿಕ ಹೊಂದಿರುವುದರಿಂದ ಯಾವ ಅಪಾಯವೂ ಇಲ್ಲ ಎಂದು ಮನವರಿಕೆ ಮಾಡಿರುವುದು ಇದಕ್ಕೆ ಕಾರಣ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಮೆರಿಕದಲ್ಲಿ ಬಳಕೆಯಲ್ಲಿರುವ ಟೂತ್‌ಪೇಸ್ಟ್‌ಗಳ ಪೈಕಿ ಕೋಲ್ಗೇಟ್ ಮಾತ್ರ ಟ್ರೈಕ್ಲೋಸಾನ್ ಒಳಗೊಂಡಿದೆ. ಎಫ್‌ಡಿಎ ಕಳೆದ ವಾರ ಸೋಪುಗಳಲ್ಲಿ ಟ್ರೈಕ್ಲೋಸಾನ್ ಬಳಕೆಯನ್ನು ನಿಷೇಧಿಸಿತ್ತು. ಆದರೆ ಟ್ರೈಕ್ಲೋಸಾನ್ ಒಳಗೊಂಡಿರುವ ಟೂತ್‌ಪೇಸ್ಟ್ ದಂತ ಸಂರಕ್ಷಣೆಯಲ್ಲಿ ಪರಿಣಾಮಕಾರಿ ಎನ್ನುವುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಗಿದೆ ಎಂದು ಎಫ್‌ಡಿಎ ವಕ್ತಾರ ಆಂಡ್ರ್ಯೂ ಫಿಶರ್ ಹೇಳಿದ್ದಾರೆ. 1997ರಲ್ಲಿ ಈ ಟೂತ್‌ಪೇಸ್ಟ್‌ಗೆ ಅನುಮತಿ ನೀಡುವ ಮುನ್ನ ಎಫ್‌ಡಿಎ, ವಿಷಕಾರಿ ಅಂಶದ ಬಗ್ಗೆ ಅಧ್ಯಯನ ನಡೆಸುವಂತೆ ಕಂಪನಿಗೆ ಸೂಚಿಸಿತ್ತು. ಅಂತಿಮವಾಗಿ ಎಫ್‌ಡಿಎ ಇದು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬ ನಿರ್ಧಾರಕ್ಕೆ ಬಂದಿತು.

"ವೈಜ್ಞಾನಿಕ ಪುರಾವೆಗಳ ಹಿನ್ನೆಲೆಯಲ್ಲಿ ಲಾಭ ಮತ್ತು ಅಪಾಯದ ಸಾಧ್ಯತೆಗಳನ್ನು ತುಲನೆ ಮಾಡಿದಾಗ, ಪ್ರಯೋಜನಕಾರಿ ಅಂಶಗಳು ಈ ಉತ್ಪನ್ನಕ್ಕೆ ಪೂರಕವಾಗಿವೆ" ಎಂದು ಫಿಶರ್ ಹೇಳಿದ್ದಾರೆ.

ಮೈಗೆ ಬಳಸುವ ಸೋಪಿನಿಂದ ಈ ಅಂಶವನ್ನು ನಿಷೇಧಿಸಿ, ಬಾಯಿ ಸ್ವಚ್ಛಗೊಳಿಸಲು ಬಳಸುವ ಉತ್ಪನ್ನದಲ್ಲಿ ಇದನ್ನು ಬಳಸಲು ಅನುಮತಿ ನೀಡಿರುವುದು ಟೀಕಾಕಾರರ ಆಕ್ಷೇಪಕ್ಕೆ ಕಾರಣವಾಗಿದೆ.

"ನಾವು ಕೈಗೆ ಸೋಪು ಹಚ್ಚಿದಾಗ ತೀರಾ ಅಲ್ಪ ಪ್ರಮಾಣ ಮಾತ್ರ ನಮ್ಮ ದೇಹಕ್ಕೆ ಸೇರುತ್ತದೆ. ಆದರೆ ವಸಡುಗಳ ಮೂಲಕ ರಾಸಾಯನಿಕಗಳು ಕ್ಷಿಪ್ರವಾಗಿ ನಮ್ಮ ರಕ್ತಪ್ರವಾಹಕ್ಕೆ ಎಳೆದುಕೊಳ್ಳುತ್ತವೆ" ಎನ್ನುವುದು ಅರಿಝೋನಾ ವಿವಿಯ ಜೈವಿಕ ವಿನ್ಯಾಸ ಸಂಸ್ಥೆಯ ಪರಿಸರ ಭದ್ರತಾ ವಿಭಾಗದ ನಿರ್ದೇಶಕ ರಾಲ್ಫ್ ಹಲ್ಡೇನ್ ಅವರ ಅಭಿಪ್ರಾಯ.

ಟ್ರೈಕ್ಲೋಸಾನ್ ಬಳಕೆ ಮಾಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೋಲ್ಗೇಟ್- ಪಾಮೋಲಿವ್ ಕಂಪೆನಿಯ ವಕ್ತಾರ ಥಾಮಸ್ ಡಿಪೆಯೆಝಾ "ನಮ್ಮ ಉತ್ಪನ್ನ ಇತರ ಟೂತ್‌ಪೇಸ್ಟ್‌ಗಳಿಗಿಂತ ತೀವ್ರ ಸುರಕ್ಷಾ ಪರಾಮರ್ಶೆಗೆ ಒಳಪಟ್ಟಿದೆ" ಎಂದು ಹೇಳಿಕೊಂಡಿದ್ದಾರೆ. ಕಂಪೆನಿ 1997ರಲ್ಲಿ ಇದರ ಬಳಕೆಯನ್ನು ಆರಂಭಿಸಿದಾಗಲೇ ಮಾನವ ಸುರಕ್ಷೆ ಬಗ್ಗೆ ಆಳವಾದ ಅಧ್ಯಯನ ಕೈಗೊಂಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News