ರಿಯೋ ಚಾಂಪಿಯನ್ ದೀಪಾ ಬಗ್ಗೆ ಅತ್ಯಂತ ಕುತೂಹಲಕಾರಿ ಮಾಹಿತಿಗಳು

Update: 2016-09-13 07:26 GMT

ಹೊಸದಿಲ್ಲಿ,ಸೆ.13: ಬೆನ್ನುಹುರಿಯ ಟ್ಯೂಮರ್, ದೀಪಾ ಬದುಕು ಬೆಳಗದಂತೆ ತಡೆಯಾಗಿತ್ತು. ಹದಿನೇಳು ವರ್ಷ ಕಾಲ ನಡೆದಾಡಲೂ ಆಗದ ಸ್ಥಿತಿ. ಆದರೆ 2016ರ ಸೆಪ್ಟಂಬರ್ 12ರಂದು ದೀಪಾ ಇಡೀ ವಿಶ್ವವೇ ಬೆರಗುಗೊಳ್ಳುವಂಥ ಸಾಧನೆ ಮಾಡಿದರು. 4.61 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದು ಎಫ್-53 ಶಾಟ್‌ಪುಟ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದು ಇತಿಹಾಸ ಸೃಷ್ಟಿಸಿದರು. 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟರು.

ದೀಪಾ ಸಾಧನೆಯ ಹಾದಿ ಅದ್ಭುತ ಹಾಗೂ ಸ್ಫೂರ್ತಿದಾಯಕ. ಸಾಧನೆಯ ಹಾದಿಯ ಕುತೂಹಲಕಾರಿ ಅಂಶಗಳು ಇಲ್ಲಿವೆ.

1. ಆರನೇ ವಯಸ್ಸಿನಲ್ಲೇ ಬೆನ್ನುಹುರಿಯಲ್ಲಿ ಟ್ಯೂಮರ್ ಕಾಣಿಸಿಕೊಂಡಿತು. ಚೇತರಿಸಿಕೊಳ್ಳಲು ಮೂರು ವರ್ಷ ಬೇಕಾಯಿತು.

2. ಸೇನಾ ಕುಟುಂಬದಲ್ಲಿ ಬೆಳೆದ ಈಕೆ ಒಮ್ಮೆ ಯುವ ಅಧಿಕಾರಿಯೊಬ್ಬರು ಅತ್ಯಾಧುನಿಕ ಜಪಾನಿ ಬೈಕ್‌ನಲ್ಲಿ ಹೋಗುತ್ತಿದ್ದುದು ಕಂಡಳು. ಈ ಬೈಕ್ ಬಗ್ಗೆ ಏನು ಗೊತ್ತು ಎಂದು ಅಧಿಕಾರಿ ಕೇಳಿದಾಗ, ಅದರ ಕೀಲಿಕೈ ಕೊಡಿ. ಏನು ಗೊತ್ತು ಎಂದು ತೋರಿಸುತ್ತೇನೆ ಎಂದಳು. ಆ ಅಧಿಕಾರಿ ಈಗ ಈಕೆಯ ಪತಿ. ಎರಡು ಹೆಣ್ಣುಮಕ್ಕಳ ತಂದೆ.

3. ದೀಪಾ ಪತಿ ಕಾರ್ಗಿಲ್ ಯುದ್ಧದಲ್ಲಿದ್ದಾಗ 1999ರಲ್ಲಿ ಮತ್ತೆ ಟ್ಯೂಮರ್ ಸಮಸ್ಯೆ ಕಾಣಿಸಿಕೊಂಡಿತು. ಶಸ್ತ್ರಚಿಕಿತ್ಸೆ ಬಳಿಕ 25 ದಿನ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದರು.

4. ಮೂರನೇ ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು, ಆಕೆಯ ಬದುಕಿನ ಉಳಿದ ಅವಧಿಯನ್ನು ವ್ಹೀಲ್‌ಚೇರ್‌ನಲ್ಲೇ ಕಳೆಯಬೇಕಾಗುತ್ತದೆ ಎಂದು ತಿಳಿಹೇಳಿದರು. ಶಸ್ತ್ರಚಿಕಿತ್ಸೆಗೆ ಮುನ್ನ ಮನಃಪೂರ್ತಿ ನಡೆದಾಡಲು ಏಳು ದಿನಗಳನ್ನು ಕೊಟ್ಟರು.

5. ಇನ್‌ವ್ಯಾಲಿಡ್ ರ್ಯಾಲಿ ವಾಹನ ಚಾಲನೆ ಲೈಸನ್ಸ್ ಪಡೆದ ಮೊದಲ ಮಹಿಳೆ ಈಕೆ. ಇದಕ್ಕೆ 19 ತಿಂಗಳ ಹೋರಾಟ ಮಾಡಿದ್ದರು.

6. ಅಧಿಕೃತ ರ್ಯಾಲಿ ಲೈಸನ್ಸ್ ಪಡೆದ ಮೊಟ್ಟಮೊದಲ ಅಂಗವಿಕಲ ಮಹಿಳೆ. ದೇಶದ ಅತ್ಯಂತ ಕಠಿಣ ರ್ಯಾಲಿಗಳಲ್ಲಿ ಚಾಲನೆ ಮಾಡಿದ ಹೆಗ್ಗಳಿಕೆ ಇವರದ್ದು.

7. ಇವರ ಹೆಸರಿನಲ್ಲಿ ನಾಲ್ಕು ಲಿಮ್ಕಾ ವಿಶ್ವದಾಖಲೆಗಳಿವೆ. ಯಮುನಾನದಿಯಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಒಂದು ಕಿಲೋಮೀಟರ್ ಈಜಿದ್ದು ಒಂದು.

8. ಇವರು ಕೇಟರಿಂಗ್ ಸೇವೆ ಆರಂಭಿಸುವ ಮೂಲಕ ಉದ್ಯಮಶೀಲತೆಯನ್ನೂ ಮೆರೆದವರು. ಇದು ಇಂದು ಅತ್ಯಂತ ಜನಪ್ರಿಯ ಗಾರ್ಡನ್ ರೆಸ್ಟೋರೆಂಟ್ ಆಗಿ ಪರಿವರ್ತನೆಯಾಗಿದ್ದು, 250 ಮಂದಿಗೆ ಊಟ ನೀಡುತ್ತಿದೆ.

9. 2012ರಲ್ಲಿ ಅರ್ಜುನ ಪ್ರಶಸ್ತಿಗೆ ಪಾತ್ರರಾದ ಇವರು ಈ ಕೀರ್ತಿ ಸಂಪಾದಿಸಿದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದರು.

10. ಭುಜದ ನಡುವೆ 200ಕ್ಕೂ ಹೆಚ್ಚು ಹೊಲಿಗೆಗಳನ್ನು ಹೊಂದಿರುವ ಇವರಿಗೆ ಎದೆಯ ಕೆಳಗೆ ಸ್ಪರ್ಶಜ್ಞಾನ ಇಲ್ಲ. ಆದರೂ ಇದು ಬೈಕ್ ರ್ಯಾಲಿಗಳಲ್ಲಿ ಭಾಗವಹಿಸುವ ಉತ್ಸಾಹವನ್ನು ಇದು ಕುಂದಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News