×
Ad

‘‘ಕಾಶ್ಮೀರಿಗಳ ಬಲಿದಾನಗಳಿಗಾಗಿ’’ ಈದ್ ಅರ್ಪಿಸಿದ ಪಾಕ್ ಪ್ರಧಾನಿ

Update: 2016-09-13 23:55 IST

ಲಾಹೋರ್, ಸೆ. 13: ಭಾರತದ ವಿರುದ್ಧ ಮತ್ತೆ ವಿಷ ಉಗುಳಿರುವ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್, ಬಕ್ರೀದ್ ಅನ್ನು ಕಾಶ್ಮೀರಿಗಳ ‘‘ಅತ್ಯುನ್ನತ ಬಲಿದಾನ’’ಗಳಿಗಾಗಿ ಮಂಗಳವಾರ ಅರ್ಪಿಸಿದ್ದಾರೆ. ಕಾಶ್ಮೀರ ವಿವಾದ ಇತ್ಯರ್ಥಗೊಳ್ಳದೆ ಇರುವವರೆಗೂ ಪಾಕಿಸ್ತಾನ ಇದನ್ನೇ ಮಾಡುವುದು ಎಂದು ಹೇಳಿದ್ದಾರೆ.

 ‘‘ನಾವು ಕಾಶ್ಮೀರಿಗಳ ಬಲಿದಾನಗಳನ್ನು ನಿರ್ಲಕ್ಷಿಸುವಂತಿಲ್ಲ. ಅವರು ತಮ್ಮ ಬಲಿದಾನಗಳ ಮೂಲಕ ಯಶಸ್ಸು ಪಡೆಯುತ್ತಾರೆ. ನಾವು ಈ ಈದ್‌ಅನ್ನು ಕಾಶ್ಮೀರಿ ಜನರ ಅತ್ಯುನ್ನತ ಬಲಿದಾನಗಳಿಗಾಗಿ ಅರ್ಪಿಸುತ್ತೇವೆ ಹಾಗೂ ಕಾಶ್ಮೀರಿಗಳ ಇಚ್ಛೆಗೆ ಅನುಸಾರವಾಗಿ ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವವರೆಗೂ ಹೀಗೆ ಮಾಡುವುದನ್ನು ಮುಂದುವರಿಸುತ್ತೇವೆ’’ ಎಂದು ಬಕ್ರೀದ್ ಸಂದರ್ಭದಲ್ಲಿ ನೀಡಿದ ಹೇಳಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ಹೇಳಿದ್ದಾರೆ. ‘‘ಭಾರತದಿಂದ ಸ್ವಾತಂತ್ರ ಪಡೆಯುವ ತಮ್ಮ ಹೋರಾಟದಲ್ಲಿ ಕಾಶ್ಮೀರಿ ಜನತೆ ತನ್ನ ಮೂರನೆ ತಲೆಮಾರನ್ನು ಬಲಿಕೊಟ್ಟಿದೆ’’ ಎಂದರು. ‘‘ಅವರು ತಮ್ಮ ಸ್ವನಿರ್ಣಯದ ಹಕ್ಕಿಗಾಗಿ ಹೋರಾಡುತ್ತಿದ್ದಾರೆ ಹಾಗೂ ಭಾರತೀಯರ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಬಲಪ್ರಯೋಗದ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕಲಾಗದು’’ ಎಂದರು. ಅದೇ ವೇಳೆ, ತನ್ನ ಈದ್ ಸಂದೇಶದಲ್ಲಿ ಅಧ್ಯಕ್ಷ ಮಮ್ನೂನ್ ಹುಸೈನ್, ‘‘ಪಾಕಿಸ್ತಾನವು ಭಯೋತ್ಪಾದನೆಯಿಂದ ತತ್ತರಿಸಿದ ನಮ್ಮ ಕಾಶ್ಮೀರಿ ಸಹೋದರರು ಮತ್ತು ಸಹೋದರಿಯರನ್ನು ನೆನಪಿಸಬೇಕು’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News