ದಕ್ಷಿಣ ಕೊರಿಯದ ಆಕಾಶದಲ್ಲಿ ಹಾರಿದ ಬಾಂಬರ್ ವಿಮಾನಗಳು

Update: 2016-09-13 18:26 GMT

ಒಸಾನ್ ವಾಯು ನೆಲೆ (ದಕ್ಷಿಣ ಕೊರಿಯ), ಸೆ. 13: ಉತ್ತರ ಕೊರಿಯ ಇತ್ತೀಚೆಗೆ ನಡೆಸಿದ ಪರಮಾಣು ಪರೀಕ್ಷೆಯ ಬಳಿಕ ದಕ್ಷಿಣ ಕೊರಿಯದ ಜನರಲ್ಲಿ ಉಂಟಾಗಿರುವ ಅಭದ್ರತೆಯ ಭಾವನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಅಮೆರಿಕದ ಪರಮಾಣು ಸಮರ್ಥ ಸೂಪರ್‌ಸಾನಿಕ್ ಬಾಂಬರ್ ವಿಮಾನಗಳು ಮಂಗಳವಾರ ದಕ್ಷಿಣ ಕೊರಿಯದ ಆಗಸದಲ್ಲಿ ಹಾರಾಟ ನಡೆಸಿದವು.

ಅಮೆರಿಕ ಮತ್ತು ದಕ್ಷಿಣ ಕೊರಿಯದ ಯುದ್ಧ ವಿಮಾನಗಳಿಂದ ಸುತ್ತುವರಿಯಲ್ಪಟ್ಟ ಬಿ-1ಬಿ ಬಾಂಬರ್ ವಿಮಾನಗಳು ಉತ್ತರ ಕೊರಿಯದ ಗಡಿಯಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಒಸಾನ್ ವಾಯು ನೆಲೆಯ ಮೇಲಿನಿಂದ ಹಾರಾಡಿದವು.

ಬಳಿಕ ವಿಮಾನಗಳು ದಕ್ಷಿಣ ಕೊರಿಯದಲ್ಲಿ ಇಳಿಯದೆ ಗುವಾಮ್‌ನಲ್ಲಿರುವ ಆ್ಯಂಡರ್‌ಸನ್ ವಾಯುಪಡೆ ನೆಲೆಗೆ ಮರಳಿದವು.

ಕೊರಿಯ ಪರ್ಯಾಯ ದ್ವೀಪದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವೈರತ್ವ ನೆಲೆಸಿರುವ ಹಿನ್ನೆಲೆಯಲ್ಲಿ ಇಂಥ ಯುದ್ಧ ವಿಮಾನಗಳ ಹಾರಾಟವು ಸಾಮಾನ್ಯವಾಗಿದೆ. ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವೆ 1950-53ರ ನಡುವೆ ನಡೆದ ಕೊರಿಯ ಯುದ್ಧವು ಶಾಂತಿ ಒಪ್ಪಂದದೊಂದಿಗೆ ಮುಕ್ತಾಯಗೊಂಡಿರದ ಹಿನ್ನೆಲೆಯಲ್ಲಿ ತಾಂತ್ರಿಕವಾಗಿ ಈ ಎರಡೂ ದೇಶಗಳು ಯುದ್ಧ ಸ್ಥಿತಿಯಲ್ಲೇ ಇವೆ.

ದಕ್ಷಿಣ ಕೊರಿಯದ ಬಳಿ ಪರಮಾಣು ಆಯುಧಗಳು ಇಲ್ಲ. ಅದು ತನ್ನ ರಕ್ಷಣೆಗಾಗಿ ಅಮೆರಿಕವನ್ನು ಆಶ್ರಯಿಸಿದೆ.

ಅಮೆರಿಕವು ದಕ್ಷಿಣ ಕೊರಿಯದಲ್ಲಿ 28,000ಕ್ಕಿಂತಲೂ ಅಧಿಕ ಸೈನಿಕರನ್ನು ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News