ದಲಾಯಿ ಭೇಟಿಗೆ ಅವಕಾಶ ನೀಡಬೇಡಿ

Update: 2016-09-14 18:26 GMT

ಬೀಜಿಂಗ್, ಸೆ. 14: ಟಿಬೆಟ್‌ನ ದೇಶಭ್ರಷ್ಟ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರಿಗೆ ತೈವಾನ್‌ಗೆ ಭೇಟಿ ನೀಡಲು ಅವಕಾಶ ನೀಡಬಾರದು ಎಂದು ಚೀನಾ ಬುಧವಾರ ತೈವಾನ್‌ಗೆ ಎಚ್ಚರಿಸಿದೆ.

ತೈವಾನ್ ಸ್ವ-ಆಡಳಿತದ ದ್ವೀಪವಾಗಿದ್ದು, ಅದು ತನ್ನದೆಂದು ಚೀನಾ ಹೇಳಿಕೊಳ್ಳುತ್ತಿದೆ.

ತೈವಾನ್‌ನ ಪ್ರಭಾವಿ ಸಂಸದರೊಬ್ಬರು ದಲಾಯಿ ಲಾಮಾರನ್ನು ಇತ್ತೀಚೆಗೆ ಭೇಟಿ ನೀಡುವಂತೆ ಆಮಂತ್ರಿಸಿದ ಬಳಿಕ ವಿವಾದ ಹುಟ್ಟಿಕೊಂಡಿದೆ.

80 ವರ್ಷ ಪ್ರಾಯದ ದಲಾಯಿ ಲಾಮಾ ಪ್ರತ್ಯೇಕತಾವಾದಿ ಎಂಬುದಾಗಿ ಚೀನಾ ಪರಿಗಣಿಸುತ್ತಿದೆ. ಇದಕ್ಕೂ ಮೊದಲು ದಲಾಯಿ ಲಾಮಾ 2009ರಲ್ಲಿ ತೈವಾನ್‌ಗೆ ಕೊನೆಯ ಬಾರಿ ಭೇಟಿ ನೀಡಿದ್ದರು. ಬಳಿಕ, ತೈವಾನ್‌ನ ಮಾಜಿ ಅಧ್ಯಕ್ಷ ಮಾ ಯಿಂಗ್-ಜೊ ಚೀನಾದೊಂದಿಗೆ ಉತ್ತಮ ಹಣಕಾಸು ಬಾಂಧವ್ಯವನ್ನು ಹೊಂದಲು ಬಯಸಿದ ಹಿನ್ನೆಲೆಯಲ್ಲಿ ದಲಾಯಿ ಲಾಮಾರ ಭೇಟಿ ಕೋರಿಕೆಯನ್ನು ಹಲವು ಬಾರಿ ತಿರಸ್ಕರಿಸಿದ್ದರು.

2009ರಲ್ಲಿ ದಲಾಯಿ ಲಾಮಾರ ತೈವಾನ್ ಭೇಟಿಗೆ ಮಾ ಅವಕಾಶ ನೀಡಿದರಾದರೂ, ಅವರನ್ನು ಭೇಟಿಯಾಗಿರಲಿಲ್ಲ. ಈ ವರ್ಷದ ಜನವರಿಯಲ್ಲಿ ಅಧಿಕಾರಕ್ಕೆ ಬಂದ ತೈವಾನ್‌ನ ನೂತನ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್, ದಲಾಯಿ ಲಾಮಾರ ಪ್ರವಾಸಕ್ಕೆ ಸರಕಾರ ಅವಕಾಶ ನೀಡುವುದೇ ಎಂದು ಹೇಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News