×
Ad

ಆಫೀಸ್ ಬಾಯ್‌ಗೆ ರೂ. 50 ಲಕ್ಷ ಉಡುಗೊರೆ ನೀಡಿದ ಕಂಪೆನಿ!

Update: 2016-09-16 11:21 IST

ಭಾರತೀಯ ಹಣಕಾಸು ವಲಯದ ಅತೀ ದೊಡ್ಡ ವ್ಯವಹಾರವೆಂದೇ ಕರೆಯಲಾಗುತ್ತಿರುವ ಸ್ವಾದೀನದಲ್ಲಿ ಮುಂಬೈಯ ಪೇಯ್‌ಮೆಂಟ್ಸ್ ಕಂಪೆನಿ ಸಿಟ್ರಸ್ ಪೇಯನ್ನು ದೊಡ್ಡ ಪ್ರತಿಸ್ಪರ್ಧಿ ಪೇಯ ರೂ. 860 ಕೋಟಿಗೆ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ನಗದು ಉಡುಗೊರೆಗಳು ಸಿಗುತ್ತಿವೆ.

ಎಂಪ್ಲಾಯ್ ಸ್ಟಾಕ್ ಆಪ್ಷನ್ ಪ್ಲಾನ್‌ನಲ್ಲಿ (ESOP) ಲಾಭಾಂಶ ಎಂದು ವಿತರಿಸಲಾಗಿರುವ ರೂ. 43 ಕೋಟಿಯನ್ನು ಸುಮಾರು 50 ಉದ್ಯೋಗಿಗಳು ತಮ್ಮೊಳಗೆ ಹಂಚಿಕೊಳ್ಳಲಿದ್ದಾರೆ. ಸುಮಾರು 15 ಸಿಬ್ಬಂದಿಗಳಿಗೆ ರು. 1 ಕೋಟಿ ಸಿಗಲಿದೆ. ಕಂಪೆನಿಯ ಮೊದಲ ಉದ್ಯೋಗಿಯಾಗಿರುವ ಆಫೀಸ್ ಬಾಯ್ ಒಬ್ಬನಿಗೆ ಸುಮಾರು ರೂ. 50 ಲಕ್ಷ ಸಿಗಲಿದೆ.

ಒಟ್ಟು ಸ್ವಾಧೀನ ಒಡಂಬಡಿಕೆಯ ಶೇ.5ರಷ್ಟು ಎಂಪ್ಲಾಯ್ ಸ್ಟಾಕ್ ಆಪ್ಷನ್ ಪ್ಲಾನ್ ಭಾಗವಾಗಿದೆ. ವರ್ಷದೊಳಗೆ ಸಿಬ್ಬಂದಿಗಳಿಗೆ ಈ ಹಣ ಪಾವತಿಯಾಗಲಿದೆ ಎಂದು ಸಿಟ್ರಸ್ ಪೇ ಮ್ಯಾನೇಜಿಂಗ್ ಡೈರೆಕ್ಟರ್ ಅಮ್ರಿಶ್ ರೌ ಹೇಳಿದ್ದಾರೆ. 2016 ಅಂತ್ಯದೊಳಗೆ ಎಲ್ಲಾ ನಗದು ವ್ಯವಹಾರಗಳು ಮುಗಿಯಲಿವೆ. ಭಾರತೀಯ ಸ್ಟಾರ್ಟಪ್ ವಲಯದಲ್ಲಿ ಖರೀದಿ ಬಹುತೇಕ ಷೇರು ಆಧಾರಿತವಾಗಿರುವ ಕಾರಣ ಇಂತಹ ವ್ಯವಹಾರ ಅಪರೂಪ. ಎಂಪ್ಲಾಯ್ ಸ್ಟಾಕ್ ಆಪ್ಷನ್ ಪ್ಲಾನ್‌ನ ಮೇಲಿನ ನಂಬಿಕೆ ಹೆಚ್ಚಾಗುವ ಕಾರಣದಿಂದ ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಲಾಂಗ್‌ಹೌಸ್ ಕನ್ಸಲ್ಟಿಂಗ್‌ನ ಆಶೀಷ್ ಸಂಗನೇರಿಯ ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಷೇರು ವ್ಯವಹಾರ ನಡೆದಾಗ ಟಾಪ್ ಕಾರ್ಯಕಾರಿಗಳು ಕಾಗದದಲ್ಲಿ ಮಿಲಿಯನೇರ್ ಆಗುತ್ತಾರೆಯೇ ವಿನಾ ನಗದು ಕೈಗೆ ಬರುವುದಿಲ್ಲ. ಭಾರತೀಯ ಸ್ಟಾರ್ಟಪ್ ವಲಯದಲ್ಲಿ ಆಗಿರುವ ದೊಡ್ಡ ಸ್ವಾಧೀನಗಳಾಗಿರುವ, ಫ್ಲಿಪ್‌ಕಾರ್ಟ್ ಸಂಸ್ಥೆಯು ಫ್ಯಾಷನ್ ಪೋರ್ಟಲ್ ಮಿಂತ್ರವನ್ನು 2014ರಲ್ಲಿ 375 ಮಿಲಿಯ ಡಾಲರ್‌ಗಳಿಗೆ ಖರೀದಿಸಿರುವುದು ಮತ್ತು ಕ್ವಿಕರ್ ವೆಬ್‌ತಾಣವು ರಿಯಾಲಿಟಿ ಪೋರ್ಟಲ್ ಕಾಮನ್ ಫ್ಲೋರನ್ನು 110 ಮಿಲಿಯ ಡಾಲರಿಗೆ ಖರೀದಿಸಿದ್ದೆಲ್ಲವೂ ಷೇರು ವ್ಯವಹಾರವೇ ಆಗಿತ್ತು. ಕೆಲವು ವ್ಯವಹಾರಗಳಲ್ಲಿ ಉದ್ಯೋಗಿಗಳೂ ತಮ್ಮ ಪಾಲನ್ನು ಪಡೆದಿದ್ದಾರೆ. ಸ್ನಾಪ್‌ಡೀಲ್ ಸಂಸ್ಥೆಯು ಫ್ರೀಚಾರ್ಜ್‌ಅನ್ನು 450 ಮಿಲಿಯ ಡಾಲರಿಗೆ ಖರೀದಿಸಿದಾಗ ಮತ್ತು ಓಲಾ ಸಂಸ್ಥೆಯು ಟಾಕ್ಸಿಫಾರ್‌ಶುರ್ ಅನ್ನು 200 ಮಿಲಿಯ ಡಾಲರಿಗೆ ಖರೀದಿಸಿದಾಗ ನಗದು ಮತ್ತು ಷೇರು ಎರಡೂ ರೀತಿಯ ವ್ಯವಹಾರವಾಗಿತ್ತು. ಆದರೆ ಬಹುತೇಕ ಷೇರು ವ್ಯವಹಾರವೇ ಆಗಿತ್ತು. ಇಂಥ ವ್ಯವಹಾರಗಳು ಬೆಳೆಯುತ್ತಿದ್ದರೂ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ಹಣದ ದಾರಿಯಾಗುವುದು ಅತೀ ಕಡಿಮೆ. ಈ ಉದ್ಯಮಗಳು ಪ್ರಬುದ್ಧವಾಗದೆ ಇರುವುದು ಕೂಡ ಅದಕ್ಕೆ ಒಂದು ಕಾರಣವಾಗಿದೆ.

ಇದಕ್ಕೆ ವಿರುದ್ಧವಾಗಿ ಅಮೆರಿಕದಲ್ಲಿ ಸೆಕೆಂಡ್ಸ್ ಮಾರ್ಕೆಟ್ ಮತ್ತು ಷೇರ್ಸ್‌ಪೋಸ್ಟ್ ಮೊದಲಾದ ವೇದಿಕೆಗಳಲ್ಲಿ ಷೇರುಗಳ ಸೆಕೆಂಡರಿ ಮಾರಾಟಕ್ಕೆ ಆಯ್ಕೆಗಳು ಇವೆ. ಸಿಟ್ರಸ್ ಪೇನಲ್ಲಿ 10 ಮಿಲಿಯ ಡಾಲರ್ ಹೂಡಿರುವ ಸಿಕ್ವೋಯಾ ಕ್ಯಾಪಿಟಲ್ ಉದ್ಯಮದ ಶೇ. 32ರಷ್ಟು ಷೇರುಗಳನ್ನು ಹೊಂದಿದೆ. ಈಗ ಅವರು ನಾಲ್ಕುಪಟ್ಟು ಲಾಭ ಪಡೆಯುವ ಸಾಧ್ಯತೆಯಿದೆ. ಉಳಿದಂತೆ ಆಸ್ಕೆಂಟ್ ಕ್ಯಾಪಿಟಲ್, ಜಪಾಣಿನ ಬೀನೊಸ್ ಮತ್ತು ಇಕಂಟೆಕ್ಸ್ಟ್ ಏಷ್ಯಾ ಉತ್ತಮ ಲಾಭ ಪಡೆಯಲಿವೆ. ಇವರು ಕಂಪೆನಿಯ ಶೇ. 50ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಸಿಟ್ರಸ್ ಈಗ ಮುಂಬೈ, ಪುಣೆ, ಬೆಂಗಳೂರು ಮತ್ತು ಗುರುಗಾಂವ್‌ನಲ್ಲಿ 300 ಉದ್ಯೋಗಿಗಳನ್ನು ಹೊಂದಿದೆ. ಜಿತೇಂದ್ರ ಗುಪ್ತಾ ಮತ್ತು ಸತ್ಯೇನ್ ಕೊಠಾರಿ 2011ರಲ್ಲಿ ಕಂಪೆನಿ ಸ್ಥಾಪಿಸಿದ್ದರು.

ಕೃಪೆ: economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News