ಒಂದು ದೇಶದಿಂದ ವಿರೋಧ: ಭಾರತ
ಪೊರ್ಲಮಾರ್ (ವೆನೆಝುವೆಲ), ಸೆ. 18: ಭಯೋತ್ಪಾದನೆಯನ್ನು ಎದುರಿಸಲು ಅಲಿಪ್ತ ಚಳವಳಿಯೊಳಗೆ ಕ್ರಿಯಾ ಗುಂಪೊಂದನ್ನು ರಚಿಸುವ ಪ್ರಸ್ತಾಪವನ್ನು ತನ್ನ ನೆರೆಯಲ್ಲಿರುವ ‘ಒಂದು ದೇಶ’ ವಿರೋಧಿಸಿತು ಎಂದು ಪಾಕಿಸ್ತಾನದತ್ತ ಬೆಟ್ಟು ಮಾಡುತ್ತಾ ಭಾರತ ರವಿವಾರ ಹೇಳಿದೆ.
ಅದೇ ವೇಳೆ, ಇಲ್ಲಿ ನಡೆಯುತ್ತಿರುವ ಅಲಿಪ್ತ ಚಳವಳಿಯ 17ನೆ ಶೃಂಗ ಸಮ್ಮೇಳನದ ಅಂತಿಮ ಕರಡು ಘೋಷಣೆಯು ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದೆ ಹಾಗೂ ಈ ಪಿಡುಗಿನ ವಿರುದ್ಧ ಹೋರಾಡಲು ಪಣತೊಟ್ಟಿದೆ.
ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ತಡೆಯಲು ನಿರ್ಣಾಯಕ ಹಾಗೂ ಸಂಘಟಿತ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೂ ಅದು ಒತ್ತು ನೀಡಿದೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಗಂಭೀರ ಬೆದರಿಕೆಯಾಗಿದೆ ಎಂದು ಕರಡು ಘೋಷಣೆ ಒತ್ತಿ ಹೇಳಿದೆ.
ಹಾಗಾಗಿ, ಯಾವುದೇ ರೂಪದಲ್ಲಿರುವ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುವ ತಮ್ಮ ನಿರ್ಧಾರವನ್ನು 120 ಅಲಿಪ್ತ ದೇಶಗಳು ಪುನರುಚ್ಚರಿಸಿವೆ. ‘‘ಅಲಿಪ್ತ ಚಳವಳಿಯು ಒಮ್ಮತದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಎಲ್ಲ ದೇಶಗಳ ನಡುವೆ ಒಮ್ಮತ ಮೂಡಬೇಕು. ಆದಾಗ್ಯೂ, ನಾವು ಅಲಿಪ್ತ ಚಳವಳಿ ಸಮ್ಮೇಳನದ ಅಂತಿಮ ಘೋಷಣೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳನ್ನು ಸೇರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’’ ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಅವರು ಅಲಿಪ್ತ ಚಳವಳಿಯ ಶೃಂಗ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ವೆನೆಝುವೆಲ ಮಾರ್ಗರಿಟ ದ್ವೀಪದಲ್ಲಿದ್ದಾರೆ.
ಅಲಿಪ್ತ ಚಳವಳಿಯೊಳಗೆ ಭಯೋತ್ಪಾದನೆ ವಿರುದ್ಧ ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕೆನ್ನುವ ಭಾರತದ ಪ್ರಸ್ತಾಪ ಏನಾಯಿತು ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಮ್ಮ ನೆರೆಯಲ್ಲಿರುವ ದೇಶವೊಂದು ಈ ವಿಷಯದ ಬಗ್ಗೆ ಒಮ್ಮತಕ್ಕೆ ಬರಲು ಅವಕಾಶ ನೀಡಲಿಲ್ಲ’’ ಎಂದು ಪಾಕಿಸ್ತಾನವನ್ನು ಹೆಸರಿಸದೆ ನುಡಿದರು.
ಆದಾಗ್ಯೂ, ಈ ವಿಷಯವನ್ನು ಅಲಿಪ್ತ ಚಳವಳಿಯ ಅಧ್ಯಕ್ಷರೂ ಆಗಿರುವ ವೆನೆಝುವೆಲ ಅಧ್ಯಕ್ಷ ನಿಕೊಲಸ್ ಮಡುರೊ ಕಾರ್ಯಸೂಚಿಯಲ್ಲಿ ಸೇರಿಸಿದ್ದಾರೆ ಹಾಗೂ ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಇದನ್ನು ತನ್ನ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಅಕ್ಬರುದ್ದೀನ್ ಹೇಳಿದರು.