ಬೆಂಕಿ ಹಚ್ಚಿದವರು ಯಾರು?

Update: 2016-09-24 18:33 GMT

ಕಾವೇರಿಗೆ ಬೆಂಕಿ ಬಿದ್ದಿದೆ. ಸಾಮಾನ್ಯ ಬೆಂಕಿಯಲ್ಲ. ಖಾಂಡವದಹನದಂಥ ಬೆಂಕಿ. ಅಗ್ನಿ ತಾಂಡವ. ಕನ್ನಡಿಗರ ಅಗ್ನಿಪರೀಕ್ಷೆಯೂ ಹೌದು. ಬೆಂಕಿಯ ತಾಂಡವದಲ್ಲಿ ಕನ್ನಡಿಗರ ಬದುಕು ಸುಟ್ಟುಹೋಗುತ್ತಿದೆ. ಹೀಗೇ ಬಿಟ್ಟರೆ ಬೆಂದು ಬೂದಿಯಾಗಬಹುದು. ಆದರೆ ಈ ಬೆಂಕಿಯನ್ನು ಆರಿಸುವ ಮನಸ್ಸು, ಇಚ್ಛಾಶಕ್ತಿಗಳು ಯಾರಿಗೂ ಇದ್ದಂತಿಲ್ಲ. ಎಲ್ಲ ರಾಜಕೀಯ ಪಕ್ಷಗಳದೂ ಬೆಂದ ಮನೆಯಲ್ಲಿ ಗಳ ಹಿರಿಯುವ ಪ್ರವೃತ್ತಿ, ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವ ಆತುರ.
      ದೊರೆಯತನಕ ದೂರು ಕೊಂಡೊಯ್ದಿದ್ದಾಯಿತು. ಕಣ್ಣುಪಟ್ಟಿ ಕಟ್ಟಿಕೊಂಡ ನ್ಯಾಯ ದೇವತೆಯೂ ಕನ್ನಡಿಗರಿಗೆ ನ್ಯಾಯ ದೊರಕಿಸಲಿಲ್ಲ. ಹರ ಕೊಲ್ಲಲ್ ಪರ ಕಾಯ್ವನೆ? ಜಲಾಶಯಗಳು ಬತ್ತಿಹೋಗುತ್ತಿವೆ ಎನ್ನುವ ಮೊರೆಗೂ ನ್ಯಾಯ ದೇವತೆ ಕಿವುಡಾಗಿರುವಂತಿದೆ. ಬಂದು ಪ್ರತ್ಯಕ್ಷ ಪರಾಂಬರಿಸುವ ವ್ಯವಧಾನವೂ ಯಾರಿಗೂ ಇದ್ದಂತಿಲ್ಲ. ಕಾವೇರಿ ಜಲ ವಿವಾದದಲ್ಲಿ ಆದಿಯಿಂದಲೂ ಅನ್ಯಾಯಕ್ಕೊಳಗಾಗಿರುವ ಕನ್ನಡಿಗರು ಈಗ ಕಂಗಾಲಾಗಿದ್ದಾರೆ. ಬ್ರಿಟಿಷರು ಮಾಡಿದ ಅನ್ಯಾಯವನ್ನು ಸ್ವಾತಂತ್ರ್ಯ ಬಂದ ನಂತರ ನಮ್ಮವರಾದರೂ ಸರಿಪಡಿಸಬಹುದಿತ್ತಲ್ಲವೆ? ಇದು ಶ್ರೀಸಾಮಾನ್ಯ ಕನ್ನಡಿಗರ ಪ್ರಶ್ನೆ. ಸಹಜವೇ. ಆದರೆ ಅದಕ್ಕೆ ಉತ್ತರ ಕೊಡುವಷ್ಟು ನ್ಯಾಯಬುದ್ಧಿ ಯಾರಿಗೂ ಇದ್ದಂತಿಲ್ಲ. ಕುಂಪಣಿ ಸರಕಾರ ಮತ್ತು ಮಹಾರಾಜರ ಸರಕಾರದ ನಡುವಣ ಕರಾರು ಮುಗಿದ ದಿನದಿಂದಲೂ ನ್ಯಾಯಾಲಯದಲ್ಲಿ ಕನ್ನಡಿಗರಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ. ಪ್ರತಿ ಹಂತದಲ್ಲೂ ಸೋಲು. ಹೀಗಾಗಿ ಕನ್ನಡಿಗರು ಇಂದು ಹತಾಶೆಯ ಪರಾಕಾಷ್ಠೆ ತಲುಪಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶಗಳು ಜನಸಾಮಾನ್ಯರಿರಲಿ, ಕಾನೂನು ತಜ್ಞರುಗಳು ಮತ್ತು ಮಾಜಿ ನ್ಯಾಯಾಧೀಶರುಗಳನ್ನೂ ದಂಗುಬಡಿಸಿದೆ.
 ‘‘ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವ ಆದೇಶ ನೀಡುವ ಮೂಲಕ ಸುಪ್ರೀಂ ಕೋರ್ಟ್ ತಾನೂ ಮುಗ್ಗರಿಸಿದ್ದಲ್ಲದೆ ಜನರನ್ನೂ ಸಂಕಟಕ್ಕೆ ದೂಡಿದೆ’’ ಎನ್ನುತ್ತಾರೆ ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯ ಮೂರ್ತಿ ಎ.ಜೆ.ಸದಾಶಿವ. ‘‘ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿ ಮೀರಿ ಆದೇಶ ನೀಡಿದೆ’’ ಎಂದು ಅಭಿಪ್ರಾಯಪಟ್ಟಿರುವ ಮತ್ತೊಬ್ಬ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯನವರು, ‘‘ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿಯೇ ಇರುವ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಿಂದ ಈ ರೀತಿ ಪದೇಪದೇ ಅನ್ಯಾಯವಾಗುತ್ತಿದೆ. ರಾಜ್ಯಕ್ಕೆ ಪ್ರತ್ಯೇಕ ಅಸ್ತಿತ್ವ ಕೇಳುವ ಕಾಲ ಸನ್ನಿಹಿತವಾಗುವ ಲಕ್ಷಣಗಳು ಕಾಣುತ್ತಿವೆ’’ ಎಂದು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಈ ಮಾತುಗಳು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಪರಮಾವಧಿಯನ್ನೂ ರೋಸಿಹೋಗಿರುವ ಕನ್ನಡಿಗರ ಹತಾಶೆಯನ್ನೂ ಪ್ರತಿಧ್ವನಿಸುತ್ತಿದೆ ಎಂದರೆ ತಪ್ಪಾಗಲಾರದು. ಈ ಮಾತುಗಳ ಹಿಂದಿರುವ ನೋವು, ಹತಾಶೆಗಳು ನ್ಯಾಯವಿವೇಚನೆಯುಳ್ಳವರ್ಯಾರಿಗಾದರೂ ಅರ್ಥವಾಗುವಂಥಾದ್ದೇ. ತೀರ್ಪು ಬರವಣಿಗೆಯಲ್ಲಿ ಮಾತ್ರವಲ್ಲ ನೋಡಲಿಕ್ಕೂ ನ್ಯಾಯಯುತವಾಗಿ ಕಾಣಬೇಕು ಎನ್ನುವ ನಾಣ್ನುಡಿಯೊಂದಿದೆ. ಕನ್ನಡಿಗರಿಗೆ ಕಾವೇರಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳಲ್ಲಿ, ರೂಪರಸಗಂಧ ಈ ಯಾವ ವಿಚಾರದಲ್ಲೂ ನ್ಯಾಯ ಕಾಣಿಸುತ್ತಿಲ್ಲ. ಕನ್ನಡಿಗರ ಆಕ್ರಂದನ ಗಿರಿ ಮುಟ್ಟಲಿಲ್ಲ. ಅವರ ನೋವುಹತಾಶೆಗಳು ಪರಾಕಾಷ್ಠೆ ಮುಟ್ಟಿವೆ. ಒಕ್ಕೂಟ ವ್ಯವಸ್ಥೆಯಂಥ ಅವಿಭಕ್ತ ಕುಟುಂಬದಲ್ಲಿ ನೋವುವಿರಸಗಳುಂಟಾದಲ್ಲಿ ಅದನ್ನು ತೃಪ್ತಿಕರವಾಗಿ ಬಗೆಹರಿಸಬೇಕಾದ ಮನೆಯ ಯಜಮಾನನ ಜವಾಬ್ದಾರಿ ಹೊತ್ತಿರುವ ಪ್ರಧಾನ ಮಂತ್ರಿಗಳೂ ಕಿವುಡುಮೂಕರಾಗಿದ್ದಾರೆ.(ಹಿಂದಿನ ಪ್ರಧಾನ ಮಂತ್ರಿಗಳು ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಿದ ಪೂರ್ವ ನಿದರ್ಶನಗಳುಂಟು). ಇನ್ನು ಕಾಂಗ್ರೆಸ್ ಮುಕ್ತ ದೇಶವಾಗಿಸುವ ಹುನ್ನಾರದಲ್ಲಿರುವ ಅವರ ಪಕ್ಷದ ಶಕುನಿ-ಚಾಣಕ್ಯರಿಗಳಿಗಂತೂ ಈ ತೀರ್ಪು ‘‘ಆಹಹ! ಇಂದೆನೆಗೆ ಆಹಾರಸಿಕ್ಕಿತು’’ಎಂಬಂಥ ಸರ್ಜರಿಗೆ ಭರ್ಜರಿ ಅವಕಾಶವಾಗಿಯೇ ಕಂಡಿದ್ದರೆ ಆಶ್ಚರ್ಯವೇನಿಲ್ಲ.
  
ಅನ್ಯಾಯಗಳು ಆಗುತ್ತಲೇ ಇರುತ್ತವೆ. ಬಹುತೇಕ ಅನ್ಯಾಯಗಳು ಹೊರಗಿನ ಶಕ್ತಿಗಳಿಂದ ಆಗುತ್ತವೆ. ಇನ್ನು ಕೆಲವೊಮ್ಮೆ ಸ್ವತ: ನಾವೇ ನಮಗೆ ಅನ್ಯಾಯ ಮಾಡಿಕೊಳ್ಳುತ್ತಿರುತ್ತೇವೆ, ನಮ್ಮ ಮುಂದಿನ ಪೀಳಿಗೆಗೂ ಅನ್ಯಾಯ ಮಾಡುತ್ತಿರುತ್ತೇವೆ. ಇದು ಸ್ವಯಂಕೃತ ಅಪರಾಧದ ಪರಿಣಾಮ. ಸ್ವಯಂಕೃತ ಅಪರಾಧಗಳಿಂದ ಅನ್ಯಾಯಗಳು ಆಗುತ್ತವೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನೀಡಬಹುದು. ಈಗ ಬೆಂಗಳೂರು ಮಹಾನಗರವನ್ನೇ ತೆಗೆದುಕೊಳ್ಳಿ. ಹಣದಾಸೆಯಿಂದ, ಸ್ವಾರ್ಥಲಾಲಸೆಯಿಂದ, ಆಧುನಿಕ ಸೌಕರ್ಯಗಳ ನೆಪದಿಂದ ಮಹಾನಗರದಲ್ಲಿರುವ ಮರಗಳನ್ನು ಕಡಿದೆವು, ಎಲ್ಲ ಕೆರೆಗಳನ್ನೂ ಬತ್ತಿಸಿ ನಿವೇಶನಗಳನ್ನಾಗಿಸಿದೆವು, ನೀರು ಹರಿಯ ಬೇಕಾದ ಕಾಲುವೆಗಳ ಮೇಲೆ ಮನೆಗಳನ್ನು, ಮಾಲುಗಳನ್ನು ಕಟ್ಟಿದೆವು. ಹಣ ಉಳ್ಳ ಮಂದಿ ಮತ್ತಷ್ಟು ಶ್ರೀಮಂತರಾಗಲು ರಾಜಕಾರಣಿಗಳ ಬೆಂಬಲ-ಕುಮ್ಮಕ್ಕುಗಳಿಂದ ಈ ಎಲ್ಲ ದಂಧೆಗಳನ್ನೂ ಮಾಡಿದರು. ಕೈಲಂಚದ ಸಣ್ಣಪುಟ್ಟ ಅಧಿಕಾರಿಗಳು, ಗುಮಾಸ್ತರುಗಳು, ವಿಲೇಜ್ ಅಕೌಂಟೆಂಟರುಗಳು ಎಂಜಲು ಕಾಸಿನ ಆಸೆಯಿಂದಾಗಿ ಇವರಿಗೆ ನೆರವಾದರು. ಪರಿಣಾಮವಾಗಿ ನಮ್ಮ ಹಿರಿಯರು ದೂರದರ್ಶಿತ್ವದಿಂದ ಪ್ರಕೃತಿಯ ಸಮತೋಲ ಕಾಪಾಡಲು ಮಾಡಿದ ಎಲ್ಲ ಕೆಲಸಗಳೂ ನಿರ್ನಾಮವಾದವು. ಮೆಟ್ರೊ ರೈಲಿಗಾಗಿ ನೂರಾರು ಮರಗಳನ್ನು ಬುಡಮೇಲು ಮಾಡಿದೆವು.ಇದೆಲ್ಲದರಿಂದಾಗಿ ಒಂದೆಡೆ ಮಳೆ ಇಲ್ಲ, ಇನ್ನೊಂದೆಡೆ ಕಾವೇರಿ ನೀರು ಇಲ್ಲ, ಅಂತರ್ಜಲ ಸಹ ಇಲ್ಲ...ಎನ್ನುವಂಥ ಭವಿಷ್ಯಕ್ಕೇ ಸಂಚಕಾರ ಒಡ್ಡುತ್ತಿರುವ ದುರ್ಭರ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ದೇವೇಗೌಡರು ಹೇಳಿರುವಂತೆ, ನಾವಿಂದು ಕುಡಿಯುವ ನೀರಿಗಾಗೀ ತಮಿಳುನಾಡಿನ ‘ಅಮ್ಮನ’ ಮುಂದೆ ಕೈ ಒಡ್ಡಿ ನಿಲ್ಲಬೇಕಾದಂಥ ದಯನೀಯ ಸ್ಥಿತಿ. ಮನುಷ್ಯನ ಸ್ವಾರ್ಥ ಲಾಲಸೆಗೆ ಬೆಂಗಳೂರು ನಗರ ಒಂದು ಸಣ್ಣ ಉದಾಹರಣೆಯಷ್ಟೆ. ಇನ್ನೂ ದೊಡ್ಡದು ಬೇಕೆಂದರೆ ಪಶ್ಚಿಮ ಘಟ್ಟಗಳೇ ಇವೆ. ಕಣ್ಣ ಮುಂದೆಯೇ ನೋಡನೋಡುತ್ತಿರುವಂತೆಯೇ ಬೋಳಾಗುತ್ತಿರುವ ಪಶ್ಚಿಮ ಘಟ್ಟಗಳು. ಪಶ್ಚಿಮ ಘಟ್ಟಗಳು ನಮ್ಮ ಜಲಸಂಪನ್ಮೂಲ, ನಮಗೆ ನೀರು ಉಣಿಸುವ ಕಾವೇರಿಯ ತೌರುಮನೆ ಇದ್ದಂತೆ. ಅದು ನಮಗೆ ಜಲನಿಧಿ ಇದ್ದಂತೆ. ಭೂದಾಹಿ ಅರಣ್ಯಗಳ್ಳರು, ಖನಿಜದಾಸೆಯ ಗಣಿಗಾರಿಕೆ ದೊರೆಗಳಿಂದಾಗಿ ಅದರ ಸ್ಥಿತಿಗತಿ ಈಗ ಏನಾಗಿದೆ? ನೋಡಿ...
 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಮಣ್ಣು ವಿಜ್ಞಾನ ಕೇಂದ್ರದ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಬೀಳುವ ಮಳೆಯಲ್ಲಿ ಶೇ.ಮುವತ್ತರಷ್ಟು ಮಳೆಯ ಮೂಲ ಪಶ್ಚಿಮಘಟ್ಟಗಳು. ವಿಜ್ಞಾನಿಗಳು ಆಮ್ಲಜನಕ ಮತ್ತು ಜಲಜನಕಗಳಲ್ಲಿನ ಐಸೋಟೋಪ್‌ಗಳ ಮೂಲಕ ಒಂದು ನಿರ್ದಿಷ್ಟ ಸ್ಥಳದಲ್ಲಿ ಬೀಳುವ ಮಳೆಯ ಜನ್ಮಸ್ಥಾನವನ್ನು ಅಂದರೆ ಮೂಲವನ್ನು ನಿರ್ಧರಿಸುವ ತಂತ್ರವೊದನ್ನು ರೂಪಿಸಿದ್ದಾರೆ. 1,600 ಕಿ.ಮೀ. ಉದ್ದಗಲ ಎತ್ತರಗಳಲ್ಲಿ ಹರಡಿಕೊಂಡಿರುವ ಈ ಪರ್ವತ ಶ್ರೇಣಿಯನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು 2012ರಲ್ಲೇ ಘೋಷಿಸಿದೆ. ಹಾಗೂ ಪಶ್ಚಿಮ ಘಟ್ಟಗಳು ಭೂಮಿಯ ಮೇಲಿನ ಮಳೆಮಾರುತದ ರೀತಿರಿವಾಜುಗಳಿಗೆ ಒಂದು ಉತ್ತಮ ನಿದರ್ಶನವೆಂದು ಹೇಳಿದೆ. ಪಶ್ಚಿಮಘಟ್ಟಗಳು ಭಾರತದಲ್ಲಿ ಮಳೆಮಾರುತ ತರುವ ಗೋಪುರಗಳಿದ್ದಂತೆ ಎಂಬುದು ತಜ್ಞರ ಅಂಬೋಣ. ಆದರೆ ವ್ಯಸನಕರ ಸಂಗತಿ ಎಂದರೆ ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಮಳೆಯ ಉಗಮಸ್ಥಾನವಾದ ಪಶ್ಚಿಮ ಘಟ್ಟಗಳಲ್ಲಿ ಮಳೆಯ ಪ್ರಮಾಣ ಕುಗ್ಗುತ್ತಿರುವುದು. 1999-2005ರ ನಡುವಣ ಅವಧಿಯಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ವಾರ್ಷಿಕ ಮಳೆಯ ಪ್ರಮಾಣ ಶೇ. 10ರಷ್ಟು ಕಡಿಮಯಾಗಿದೆ ಎನ್ನುವುದು ಹವಾಮಾನ ತಜ್ಞರ ಲೆಕ್ಕಾಚಾರ. ಅಲ್ಲದೆ, ಜೂನ್-ಜುಲೈ ಮುಂಗಾರು ಅವಧಿಯಲ್ಲಿ ಮಳೆ ಕಮ್ಮಿಯಾಗುತ್ತಿದ್ದು ಅಕ್ಟೋಬರ್-ನವೆಂಬರ್ ಮುಂಗಾರೋತ್ತರ ಅವಧಿಯಲ್ಲಿ ಹೆಚ್ಚಿಗೆ ಮಳೆಯಾಗುತ್ತಿರುವ ಹೊಸ ವಿದ್ಯಮಾನವನ್ನೂ ತಜ್ಞರು ಗಮನಿಸಿದ್ದಾರೆ. ಕಡಿಮೆ ಮಳೆಯಾಗುವುದರಿಂದ ಭೂಮಿಯ ಮೇಲಿನ ಜೀವಜಾಲದ ವೈವಿಧ್ಯತೆಗೆ ಧಕ್ಕೆಯುಂಟಾಗಬಹುದು. ಭೂ ಸವೆತದಂಥ ದುಷ್ಪರಿಣಾಮ ಗಳಾಗಬಹುದು. ಇದರಿಂದಾಗಿ ಮಣ್ಣಿನ ಫಲವತ್ತತೆ ಕ್ಷೀಣಿಸಬಹುದು ಎಂದು ತಜ್ಷರು ಆತಂಕ ವ್ಯಕ್ತಪಡಿಸಿರುವುದೂ ಉಂಟು. ಭಾರತದ ಬಹುತೇಕ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತವೆ. ಈ ಪ್ರದೇಶಗಳಲ್ಲಿ ಮಳೆ ಕಡಿಮೆ ಯಾಗುವುದರಿಂದ ನದಿಗಳು, ಹೊಳೆ, ತೊರೆಗಳು, ಹಳ್ಳಕೊಳ್ಳಗಳು ಬತ್ತುತ್ತಿವೆ. ಅನೇಕ ನದಿಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಹರಿಯುತ್ತಿರುತ್ತದೆ. ಬಾಕಿಯಂತೆ ಅವು ಬತ್ತಿಹೋಗಿರುತ್ತವೆ. ಇದರಿಂದಾಗಿ ಸಾಗುವಳಿಯ ಮೇಲೂ ಪರಿಣಾಮವಾಗಿದೆ. ರೈತರು ಬೆಳೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಎನ್ನುವಂಥ ಪರಿಸ್ಥಿತಿ ತಲೆದೋರಿದೆ. ಭತ್ತದ ಗದ್ದೆಗಳು ಅಡಿಕೆ, ಬಾಳೆ ತೋಟಗಳಾಗಿ ಪರಿವರ್ತನೆ ಹೊಂದುತ್ತಿವೆ.
 ಮಳೆ ಪ್ರಮಾಣ ಕಡಿಮೆಯಾಗುತ್ತಿರುವುದರ ಜೊತೆಗೆ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ 1950-2010ರ ನಡುವಣ ಅವಧಿಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆಯೆಂದು ಹವಾಮಾನ ಇಲಾಖೆಯೆ ವರದಿ ಹೇಳುತ್ತದೆ. ಮಳೆ ಪ್ರಮಾಣ ಮುಂಗಾರಿನಿಂದ ಮುಂಗಾರಿಗೆ ಕಡಿಮೆಯಾಗುತ್ತಿರುವುದು ಇಂದಿನ ಕಟುವಾಸ್ತವ. ಅದರ ಫಲವಾದ ಅನೇಕ ಕಷ್ಟನಷ್ಟಗಳನ್ನು ನಾವು ಅನುಭವಿಸುತ್ತಿದ್ದೇವೆ. ಆದರೂ ನಮಗೆ ಬುದ್ಧಿ ಬಂದಿಲ್ಲ. ಭೂದಾಹಿ, ಧನದಾಹಿಗಳು ಅರಣ್ಯನಾಶವನ್ನು ನಿಲ್ಲಿಸಿಲ್ಲ. ಗಣಿಗಾರಿಕೆ ನಿಲ್ಲಿಸಿಲ್ಲ. ಕರ್ನಾಟಕದ, ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಎಂಟು ಜಿಲ್ಲೆಗಳಲ್ಲಿ 173 ಚದರ ಕಿ.ಮೀ ಅರಣ್ಯನಾಶವಾಗಿದೆಯೆಂದು 2015ರ ಭಾರತೀಯ ಅರಣ್ಯ ಸಮೀಕ್ಷಾ ವರದಿ ತಿಳಿಸಿದೆ. ಇಷ್ಟೆಲ್ಲ ಆಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಣ್ಣುಮುಚ್ಚಿ ಕುಳಿತಿವೆ ಅಥವಾ ನಿಷ್ಕ್ರಿಯವಾಗಿವೆ. ಈ ಮಾತಿಗೆ, ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಅರಣ್ಯ ಸಂರಕ್ಷಣೆ ಕುರಿತು ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಅವರು ನೀಡಿರುವ ವರದಿಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ.
 ವರುಣ ದೇವರು ನಿಷ್ಕರುಣಿಯಾಗಿ ಮುಂಗಾರು ವಿಫಲವಾದಾ ಗಲೆಲ್ಲ ಕರ್ನಾಟಕ ಮತ್ತು ತಮಿಳನಾಡಿನ ನಡುವೆ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಶುರುವಾಗುತ್ತದೆ. ವಾದವಿವಾದಗಳು ಭುಗಿಲೇಳುತ್ತವೆ. ಇದು ಅನುಭವಜನ್ಯ ಸಂಗತಿ. ಕೇರಳ ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹಾಗೂ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶಗಳಲ್ಲಿ ಅರಣ್ಯನಾಶವಾಗುತ್ತಿರುವುದೇ ಮಳೆಮಾರುತಗಳ ವೈಫಲ್ಯಕ್ಕೆ ಮುಖ್ಯ ಕಾರಣ. ಇದು ಸಮಸ್ಯೆಯ ಮೂಲ. ಮಾಧವ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ಅವರ ವರದಿಗಳಲ್ಲಿ ಈ ಸಮಸ್ಯೆಗೆ ಪರಿಹಾರೋಪಾಯಗಳನ್ನು ಸೂಚಿಸಲಾಗಿದೆ. ಈ ವರದಿ ಜಾರಿಗೆ ಇರುವ ದೊಡ್ಡ ತೊಡಕೆಂದರೆ ಪಟ್ಟಭದ್ರಹಿತಾಸಕ್ತಿಗಳು. ಈ ಪಟ್ಟಭದ್ರಹಿತಾಸಕ್ತಿಗಳ ಕೂಟದಲ್ಲಿ ರಾಜಕಾರಣಿಗಳು, ಧರ್ಮದ ಸೋಗಿನ ಶಕ್ತಿಗಳು, ಪಶ್ಚಿಮಘಟ್ಟ ಹರವಿನ ಶ್ರೀಮಂತ ಭೂ ಮಾಲಕರು, ತೋಟಾಧಿಪತಿಗಳು, ಕೋಟ್ಯಧಿಪತಿಗಳು, ಪೀಠಾಧಿಪತಿಗಳು ಎಲ್ಲ ಇದ್ದಾರೆ.ಇವರೆಲ್ಲ ಶಾಮೀಲಾಗಿರುವುದೇ ಈ ವರದಿಗಳ ಅನುಷ್ಠಾನಕ್ಕೆ ಕಂಟಕವಾಗಿದೆ ಎನ್ನಲಾಗುತ್ತಿದೆ. ಇದು ಜನಜೀವನವನ್ನು ಆತಂಕಕ್ಕೆ ದೂಡುವ ವಿಷಾದಕರ ಸಂಗತಿ. ದಕ್ಷಿಣ ಭಾರತದ ನೀರು, ಗಾಳಿಯ ಮೂಲವಾಗಿರುವ ಪಶ್ಚಿಮ ಘಟ್ಟಗಳನ್ನು ರಕ್ಷಿಸುವ ರಾಜಕೀಯಬದ್ಧತೆ, ಇಚ್ಛಾಶಕ್ತಿಯುಳ್ಳವರಿಗಾಗಿ ನಾವೀಗ ತಡಕಾಡಬೇಕಾಗಿದೆ. ಯಾರಲ್ಲಿ, ಯಾವ ರಾಜಕೀಯ ಪಕ್ಷಗಳಲ್ಲಿ ಇಂಥ ಬದ್ಧತೆ, ರಾಜಕೀಯ ಸಂಕಲ್ಪ ಶಕ್ತಿಗಳನ್ನು ಹುಡುಕುವುದು?
 ತಮಿಳುನಾಡಿಗೆ ನೀರು ಹರಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ತೀವ್ರ ಹತಾಶೆಯಿಂದ, ಅರೆಹೊತ್ತಿನ ಊಟದ ಆಸೆಯಿಂದ, ಬಾಹ್ಯ ಪ್ರಚೋದನೆ, ಪ್ರಲೋಭನೆಗಳಿಂದ ಅಥವಾ ಇಂತಹ ಹತ್ತಾರು ಉಮೇದುಗಳಿಂದ ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಮೊದಲಾದ ಪಟ್ಟಣಗಳು ಹೊತ್ತಿ ಉರಿದವು. ಈ ಬೆಂಕಿ ಹಚ್ಚಿದವರು ಯಾರು? ಸರ್ವೋಚ್ಚ ಸ್ಥಾನಗಳಿಂದ ಹಿಡಿದು ಒಂದು ಪ್ಲೇಟ್ ಬಿರಿಯಾನಿ ಆಮಿಷದಿಂದ ಪ್ರಲೋಭಿತಳಾದ ಕೊಳೆಗೇರಿಯ ಮಹಿಳೆಯವರೆಗೆ ಅನೇಕರಿದ್ದಾರೆ. ಆದರೆ ಕಾನೂನಿನ ಕಪಿಮುಷ್ಟಿಗೆ ಸಿಕ್ಕಿ ಬೀಳುವುದು ಒಡಲಾಳದ ಹಸಿವು ತಣಿಸುವ ತುತ್ತು ಕೂಳಿಗಾಗಿ ಎಲ್ಲದಕ್ಕೂ ತಯಾರಾಗಿ ನಿಂತ ಬಡವಬಡವಿಯರು ಮಾತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News