ಕೈರಾನ ವಲಸೆ: ಮಾನವಹಕ್ಕು ಆಯೋಗದ ವರದಿ ಮತ್ತು ರಾಜಕೀಯ ದಾಳ

Update: 2016-09-26 18:08 GMT

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆ ಕೈರಾನದಲ್ಲಿ 250 ಹಿಂದೂ ಕುಟುಂಬಗಳು ಭೀತಿಯಿಂದಾಗಿ ವಲಸೆ ಹೋಗಿವೆ ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ ನೀಡಿರುವ ಹೇಳಿಕೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಿದ್ಧಪಡಿಸಿದ ವರದಿ ದೃಢಪಡಿಸಿದೆ.

‘‘ಅಪರಾಧ ಹೆಚ್ಚಳ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿರುವ ಕಾರಣದಿಂದ ಹಲವು ಹಿಂದೂ ಕುಟುಂಬಗಳು ಕೈರಾನದಿಂದ ವಲಸೆ ಹೋಗಿವೆ’’ ಎಂದು ಎನ್‌ಎಚ್‌ಆರ್‌ಸಿ ತನಿಖಾ ತಂಡ ಅಭಿಪ್ರಾಯಪಟ್ಟಿದೆ. ಇದರ ಆಧಾರದಲ್ಲಿ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ. ಈ ಬಗ್ಗೆ ಎಂಟು ವಾರದ ಒಳಗಾಗಿ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಬಿಜೆಪಿ ಸಂಸದ ಹುಕುಂಸಿಂಗ್ ಅವರು ಕೈರಾನದಿಂದ ವಲಸೆ ಹೋದ 346 ಹಿಂದೂ ಕುಟುಂಬಗಳ ಪಟ್ಟಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕೈರಾನ ರಾಷ್ಟ್ರಮಟ್ಟದ ಮಾಧ್ಯಮಗಳ ಗಮನ ಸೆಳೆದಿತ್ತು, ನಿರ್ದಿಷ್ಟ ಸಮುದಾಯದಿಂದ ಅಪಾಯ ಮತ್ತು ಸುಲಿಗೆ ಭೀತಿ ಇರುವುದರಿಂದ ಈ ಕುಟುಂಬಗಳು ವಲಸೆ ಹೋಗಿವೆ ಎನ್ನುವುದು ಹುಕುಂ ಸಿಂಗ್ ವಾದವಾಗಿತ್ತು. ಈ ವಿವಾದ ಭುಗಿಲೇಳುತ್ತಿದ್ದಂತೆ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಮುದ್ವೇಷದ ಕಿಚ್ಚು ಹಚ್ಚಲು ಬಿಜೆಪಿ ಮುಂದಾಗಿದೆ ಎಂದು ಆ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದವು.

ಭಾರತದ 2011ರ ಜನಗಣತಿಯ ಪ್ರಕಾರ, ಕೈರಾನಾದ ಸಾಕ್ಷರತೆ ಪ್ರಮಾಣ ಶೇಕಡ 47.23. ಒಟ್ಟು ಜನಸಂಖ್ಯೆಯಲ್ಲಿ ಶೇಕಡ 70ರಷ್ಟು ಮಂದಿಯನ್ನು ಹೊಂದಿರುವ ಮುಸ್ಲಿಂ ಸಮುದಾಯ ಇಲ್ಲಿ ಪ್ರಬಲ ಧರ್ಮವಾಗಿದೆ. ಹಿಂದೂ ಸಮುದಾಯದವರು ಕೂಡಾ ಕೃಷಿ ಹಾಗೂ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು ಕೂಲಿಕಾರ್ಮಿಕರಾಗಿದ್ದಾರೆ.

ಎನ್‌ಎಚ್‌ಆರ್‌ಸಿ ತಂಡ ಸಾಕ್ಷಿಗಳನ್ನು, ಸಂತ್ರಸ್ತರನ್ನು, ಸಂಬಂಧಿತ ಪೊಲೀಸ್ ಕಡತಗಳನ್ನು ಮತ್ತು ಅಗತ್ಯ ಎನಿಸಿದ ಇತರ ದಾಖಲೆಗಳನ್ನು ಪಡೆದು ವಿಶ್ಲೇಷಣೆ ಮಾಡಿತ್ತು. 346 ಸ್ಥಳಾಂತರಗೊಂಡ ಕುಟುಂಬಗಳ ಪಟ್ಟಿಯನ್ನು ಪೊಲೀಸ್ ಠಾಣೆಯಿಂದ ಹಿಡಿದು ಸಂಸದರವರೆಗೆ ಹಲವರಿಂದ ಪಡೆದಿತ್ತು. ಈ ಪಟ್ಟಿಯಲ್ಲಿ, ಮೂರು ವಾಸದ ಸ್ಥಳಗಳನ್ನು ಆಯ್ಕೆ ಮಾಡಲಾಗಿತ್ತು. ಈ ಮೂರು ಸ್ಥಳಗಳಿಂದ ಆರು ಸಂತ್ರಸ್ತ ಕುಟುಂಬಗಳನ್ನು ಆಯ್ಕೆ ಮಾಡಿ, ದೃಢೀಕರಣಕ್ಕಾಗಿ ಕರೆಸಲಾಗಿತ್ತು. ಉಪ ಎಸ್ಪಿರವಿಸಿಂಗ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಸುಮನ್ ಕುಮಾರಿ, ಸರೋಜ್ ತಿವಾರಿ ಹಾಗೂ ಅರುಣ್ ಕುಮಾರ್ ಈ ತಂಡದಲ್ಲಿದ್ದರು.

ಮಾನವ ಹಕ್ಕು ಆಯೋಗದ ಉಪ ನಿರ್ದೇಶಕ (ಮಾಧ್ಯಮ ಹಾಗೂ ಸಂವಹನ) ಜೈಮಿನಿ ಕುಮಾರ್ ಶ್ರೀವಾಸ್ತವ ‘ಟೈಮ್ಸ್ ಆಫ್ ಇಂಡಿಯಾ’ ಜತೆ ಮಾತನಾಡಿ, ಕೈರಾನ, ಮುಝಪ್ಫರ್‌ನಗರ ಹಾಗೂ ಪಾಣಿಪತ್ ಪಟ್ಟಣದ ಹಲವೆಡೆಗಳಿಗೆ ತಂಡ ಭೇಟಿ ನೀಡಿತ್ತು. ಸೂಕ್ತ ಸಾಕ್ಷಿಗಳನ್ನು, ಸಂತ್ರಸ್ತರನ್ನು, ಸ್ವತಂತ್ರ ಸಾಕ್ಷಿಗಳನ್ನು, ಪೊಲೀಸ್ ಹಾಗೂ ಆಡಳಿತಾತ್ಮಕ ಅಧಿಕಾರಿಗಳನ್ನು ಭೇಟಿ ಮಾಡಿತ್ತು. ಅಗತ್ಯ ದಾಖಲೆಗಳನ್ನೂ ಪಡೆದು ವಿಶ್ಲೇಷಿಸಲಾಗಿದೆ. ಸಂಸದರ ಕಾರ್ಯದರ್ಶಿಯಿಂದ ಸ್ಥಳಾಂತರಿತ 346 ಕುಟುಂಬಗಳ ಪಟ್ಟಿಯನ್ನೂ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ, ಮೂರು ವಾಸದ ಸ್ಥಳಗಳನ್ನು ಆಯ್ಕೆ ಮಾಡಲಾಗಿತ್ತು. ಈ ಮೂರು ಸ್ಥಳಗಳಿಂದ ಆರು ಸಂತ್ರಸ್ತ ಕುಟುಂಬಗಳನ್ನು ಆಯ್ಕೆ ಮಾಡಿ, ದೃಢೀಕರಣಕ್ಕಾಗಿ ಕರೆಸಲಾಗಿತ್ತು. ಉತ್ತರಾಖಂಡದ ಡೆಹ್ರಾಡೂನ್, ಗುಜರಾತ್‌ನ ಸೂರತ್ ಮತ್ತಿತರ ಕಡೆಗಳಿಗೆ ವಲಸೆ ಹೋದ ಇತರ ನಾಲ್ಕು ಕುಟುಂಬಗಳ ಜತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.

‘‘ಹಲವು ಕುಟುಂಬಗಳು ಕೈರಾನದಲ್ಲಿ ಹೆಚ್ಚುತ್ತಿರುವ ಹಿಂಸೆ ಹಾಗೂ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಹಿನ್ನೆಲೆಯಲ್ಲಿ ವಲಸೆ ಹೋಗಿದ್ದಾಗಿ ವಿಚಾರಣೆ ವೇಳೆ ಬಹುತೇಕ ಮಂದಿ ಹೇಳಿದ್ದಾರೆ’’ ಎಂದು ತಂಡದ ವರದಿಯನ್ನಾಧರಿಸಿ ಆಯೋಗ ಹೇಳಿಕೆ ನೀಡಿದೆ.

‘‘ಕನಿಷ್ಠ 24 ಸಾಕ್ಷಿಗಳು ವಿಚಾರಣೆ ವೇಳೆ, ನಿರ್ದಿಷ್ಟ ಪ್ರಬಲ ಕೋಮಿನ ಯುವಕರು, ಆ ಪಟ್ಟಣದ ಅಲ್ಪಸಂಖ್ಯಾತ ಕೋಮಿನ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಇದರಿಂದಾಗಿ ಕೆಲ ನಿರ್ದಿಷ್ಟ ಕೋಮಿನ ಮಹಿಳೆಯರು ಕೈರಾನದಲ್ಲಿ ಮನೆಗಳಿಂದ ಹೊರಬರಲು ಕೂಡಾ ಇಷ್ಟಪಡುತ್ತಿಲ್ಲ’’ ಎಂದು ವರದಿ ಹೇಳಿದೆ. ಸ್ಥಳಾಂತರಗೊಂಡ ಕೆಲ ಕುಟುಂಬದವರು ಕೂಡಾ ಇದನ್ನು ದೃಢಪಡಿಸಿದ್ದಾರೆ. ತಮ್ಮ ವಲಸೆಗೆ ಇದೂ ಒಂದು ಕಾರಣ ಎಂದು ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಆದರೆ ಕೈರಾನ ಸಾಮೂಹಿಕ ವಲಸೆ ಬಗ್ಗೆ ಈ ವರ್ಷದ ಜೂನ್‌ನಲ್ಲಿ ಶಾಮ್ಲಿ ಜಿಲ್ಲಾಡಳಿತ ನಡೆಸಿದ ತನಿಖೆಯಲ್ಲಿ, 346 ಕುಟುಂಬಗಳ ಪೈಕಿ 188 ಕುಟುಂಬಗಳು ಐದು ವರ್ಷದ ಹಿಂದೆಯೇ ವಲಸೆ ಹೋಗಿವೆ ಎನ್ನುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಆಳವಾದ ತನಿಖೆ ನಡೆಸಿದಾಗ ಮೂರು ಕುಟುಂಬಗಳು ಮಾತ್ರ ‘ರಂಗದಾರಿ’ ಬೆದರಿಕೆ ಎದುರಿಸಿದ್ದು, ಪೊಲೀಸರು ಸಕಾಲಿಕ ಕ್ರಮ ಕೈಗೊಂಡಿದ್ದರು ಎನ್ನುವುದು ದೃಢಪಟ್ಟಿತ್ತು.

ಸಂಸದ ಹುಕುಂ ಸಿಂಗ್ ನೀಡಿರುವ ಪಟ್ಟಿಯ ಬಗ್ಗೆ ತನಿಖೆ ನಡೆಸಿದಾಗ 66 ಕುಟುಂಬಗಳು ಕೈರಾನದಿಂದ ಹತ್ತು ವರ್ಷ ಮೊದಲೇ ವಲಸೆ ಹೋಗಿವೆ ಎನ್ನುವುದು ತಿಳಿದುಬಂತು ಎಂದು ಗೃಹ ಇಲಾಖೆ ವಕ್ತಾರರು ಹೇಳಿದ್ದರು. ಆದರೆ ಎನ್‌ಎಚ್‌ಆರ್‌ಸಿ ತನಿಖಾ ತಂಡದ ಅಭಿಪ್ರಾಯದಂತೆ, 2013ರ ಮುಝಪ್ಫರ್‌ನಗರ ಗಲಭೆಯ ಬಳಿಕ ಸುಮಾರು 25 ಸಾವಿರದಿಂದ 30 ಸಾವಿರ ಮುಸ್ಲಿಮರಿಗೆ ಕೈರಾನದಲ್ಲಿ ಪುನರ್ವಸತಿ ಕಲ್ಪಿಸಿದ ಬಳಿಕ ಪಟ್ಟಣದ ಜನಸಂಖ್ಯೆ ಸಮತೋಲನದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಮುಸ್ಲಿಂ ಸಮುದಾಯದ ಪ್ರಾಬಲ್ಯ ಮತ್ತಷ್ಟು ಹೆಚ್ಚಿದೆ

ಕೈರಾನ ವಿವಾದದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್‌ಸಿಂಗ್ ರಾಜ್ಯದ ಮುಖ್ಯಮಂತ್ರಿಯ ರಕ್ಷಣೆಗೆ ನಿಂತಿದ್ದಾರೆ. ‘‘ಮಾನವ ಹಕ್ಕುಗಳ ಆಯೋಗ ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಅದರ ವರದಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ. ಆದರೆ ವರದಿಗೆ ಸದಾ ಎರಡು ಮುಖಗಳಿರುತ್ತವೆ’’ ಎಂದು ಅವರು ಪ್ರತಿಪಾದಿಸಿದ್ದಾರೆ.

‘‘ಕೈರಾನ ಸಮಸ್ಯೆಗೆ ಎರಡು ಆಯಾಮ ಗಳಿವೆ. ಕೈರಾನ ವಿವಾದವನ್ನು ಬಿಜೆಪಿ ಏಕೆ ಎಬ್ಬಿಸುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶದ ಚುನಾವಣೆಯ ಕಾರಣಕ್ಕಾಗಿಯೇ? ದಿಢೀರನೇ ಇಲ್ಲಿನ ಹಿಂದೂ ವಲಸೆ ಬಗ್ಗೆ ಅವರು ಎಚ್ಚೆತ್ತುಕೊಂಡಿದ್ದಾರೆ. ಆದರೆ ಕಾಶ್ಮೀರಿ ಪಂಡಿತರ ವಿಚಾರದಲ್ಲಿ ಏಕೆ ಅವರು ಮೌನವಾಗಿದ್ದಾರೆ ಎಂದು ನಾನು ಕೇಳಬಯಸುತ್ತೇನೆ. ಅವರು ದಿಲ್ಲಿ ಹಾಗೂ ಜಮ್ಮು-ಕಾಶ್ಮೀರ ಎರಡು ಕಡೆಯೂ ಅಧಿಕಾರದಲ್ಲಿದ್ದಾರೆ. ಪಂಡಿತರ ಪುನರ್ವಸತಿಗೆ ಅವರು ಏನು ಮಾಡಿದ್ದಾರೆ? ಬಿಜೆಪಿಯ ದೃಷ್ಟಿಕೋನ ಒಂದೇ ಆಗಿರಬೇಕು. ಬಲಾತ್ಕಾರದ ವಲಸೆ ಸರಿಯಲ್ಲ’’ ಎಂದು ಅಮರ್‌ಸಿಂಗ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

‘‘ಈ ವೇಳೆ ಪರಿಶೀಲನೆ ಮಾಡಲಾದ ಬಹುತೇಕ ಸಾಕ್ಷಿಗಳು ಹೇಳುವಂತೆ, 2013ರ ಪುನರ್ವಸತಿ ಬಳಿಕ ಕೈರಾನ ಪಟ್ಟಣದ ಸಾಮಾಜಿಕ ಸ್ಥಿತಿಗತಿ ಕಾಯಂ ಆಗಿ ಬದಲಾಗಿದೆ. ಇದು ಕಾನೂನು ಹಾಗೂ ಸುವ್ಯವಸ್ಥೆ ಸ್ಥಿತಿ ಹದಗೆಡಲೂ ಕಾರಣವಾಗಿದೆ’’ ಎಂದು ಎನ್‌ಎಚ್‌ಆರ್‌ಸಿ ವರದಿ ಹೇಳುತ್ತದೆ. ಈ ಬಗ್ಗೆ ಆಯೋಗ ನೀಡಿದ ನೋಟಿಸ್ ಇನ್ನೂ ಸರಕಾರದ ಕೈಸೇರಿಲ್ಲ ಎಂದು ಸರಕಾರದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ನೋಟಿಸ್ ಬಂದ ಬಳಿಕ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ. ಈ ವರದಿ ಬಿಡುಗಡೆಯಾದ ತಕ್ಷಣ ಹುಕುಂ ಸಿಂಗ್ ನೇತೃತ್ವದ ಬಿಜೆಪಿ ನಿಯೋಗ ಆ ವಲಯದ ಐಜಿಯನ್ನು ಭೇಟಿ ಮಾಡಿ ತಕ್ಷಣ ಕ್ರಮಕ್ಕೆ ಆಗ್ರಹಿಸಿದೆ.

ಮಾಧ್ಯಮದ ಜತೆ ಮಾತನಾಡಿದ ಹುಕುಂ ಸಿಂಗ್, ‘‘ಇದು ಸತ್ಯದ ಜಯ. ಕೈರಾನ ಸಾಮೂಹಿಕ ವಲಸೆ ಬಗ್ಗೆ ನನ್ನ ಹೇಳಿಕೆ ಯಾವಾಗಲೂ ನಿಜ. ಕೈರಾನ ಜನ ಸದಾ ಭೀತಿಯ ನೆರಳಲ್ಲಿ ಬದುಕುತ್ತಿದ್ದಾರೆ. ಆದರೆ ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲ...ಈ ಬಗ್ಗೆ ಯಾವುದೇ ಸಮುದಾಯ ಅಥವಾ ಆಡಳಿತ ಪಕ್ಷವನ್ನೂ ಲೆಕ್ಕಿಸದೆ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಐಜಿಗೆ ಸೂಚಿಸಿದ್ದೇನೆ’’ ಎಂದು ಹೇಳಿದರು.

ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಅಜಿತ್ ಸಿಂಗ್ ಎನ್‌ಎಚ್‌ಆರ್‌ಸಿ ವರದಿಯನ್ನು ಟೀಕಿಸಿ, ಹಿಂದೂ ವಲಸೆ ಬಗೆಗಿನ ಈ ವರದಿ ಅರ್ಥಹೀನ ಎಂದಿದ್ದಾರೆ. ಕೆಲವೇ ಮಂದಿಯ ಜತೆ ಎನ್‌ಎಚ್‌ಆರ್‌ಸಿ ಮಾತುಕತೆ ನಡೆಸಿರುವುದು ಅದರ ವಿಶ್ವಾಸಾರ್ಹತೆಯ ಬಗ್ಗೆಯೇ ಸಂದೇಹ ಮೂಡಲು ಕಾರಣವಾಗಿದೆ ಎಂದು ಹೇಳಿದ್ದಾರೆ.

‘‘ವಲಸೆ ಬಗೆಗಿನ ಆಯೋಗದ ವರದಿಗೆ ಅರ್ಥವೇ ಇಲ್ಲ. 346 ಕುಟುಂಬಗಳು ವಲಸೆ ಹೋಗಿವೆ ಎಂದು ಹೇಳುವ ಆಯೋಗ ಕೇವಲ ಆರು ಕುಟುಂಬಗಳನ್ನಷ್ಟೇ ಮಾತನಾಡಿಸಿದೆ. ಇತರ ಕುಟುಂಬಗಳ ಜತೆಗೂ ಮಾತನಾಡಬಹುದಿತ್ತು’’ ಎಂದು ಹೇಳಿದ್ದಾರೆ. ಇದು ವಲಸೆ ದೊಡ್ಡ ಸಮಸ್ಯೆಯೇ ಅಲ್ಲ. ಒಳ್ಳೆಯ ಅವಕಾಶ ಹುಡುಕಿಕೊಂಡು ವಿಶ್ವಾದ್ಯಂತ ಜನ ವಲಸೆ ಹೋಗುತ್ತಿದ್ದಾರೆ ಎನ್ನುವುದು ಅವರ ಅಭಿಮತ.

ಕೃಪೆ: firstpost.com

‘‘ಅಪರಾಧ ಹೆಚ್ಚಳ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟಿರುವ ಕಾರಣದಿಂದ ಹಲವು ಹಿಂದೂ ಕುಟುಂಬಗಳು ಕೈರಾನದಿಂದ ವಲಸೆ ಹೋಗಿವೆ’’ ಎಂದು ಎನ್‌ಎಚ್‌ಆರ್‌ಸಿ ತನಿಖಾ ತಂಡ ಅಭಿಪ್ರಾಯಪಟ್ಟಿದೆ. ಇದರ ಆಧಾರದಲ್ಲಿ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ. ಈ ಬಗ್ಗೆ ಎಂಟು ವಾರದ ಒಳಗಾಗಿ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News