×
Ad

ಸಾಹಿತ್ಯವನ್ನು ಗ್ರಹಿಸಲು ಭಾಷಾಜ್ಞಾನ ಅಗತ್ಯ: ಸಂಪತ್

Update: 2016-09-27 22:26 IST

ಮೂಡಿಗೆರೆ, ಸೆ.27: ಸಾಹಿತ್ಯವನ್ನು ಸರಿಯಾಗಿ ಗ್ರಹಿಸಲು ಭಾಷಾಜ್ಞಾನ ಅಗತ್ಯವಾಗಿ ಬೇಕಾಗಿದೆ ಎಂದು ಲೇಖಕ ಸಂಪತ್ ಬೆಟ್ಟಗೆರೆ ಅಭಿಪ್ರಾಯಪಟ್ಟರು.

ಅವರು ಬೆಟ್ಟಗೆರೆ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಬಣಕಲ್ ಹೋಬಳಿ ಘಟಕದವರು ಆಯೋಜಿಸಿದ್ದ ‘ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸರಿಯಾಗಿ ಆಲಿಸಿದರೆ, ಸರಿಯಾಗಿ ಮಾತನಾಡುವುದನ್ನು, ಸರಿಯಾಗಿ ಓದುವುದನ್ನು ರೂಢಿಸಿಕೊಂಡರೆ ಸರಿಯಾಗಿ ಬರೆಯಲು ಕಲಿತುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಭಾಷಾಜ್ಞಾನವನ್ನು ಸಾಹಿತ್ಯದ ಮೂಲಕ ಹೇಳಿಕೊಡಬೇಕೆಂದು ಹೇಳಿದರು. ನಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ, ಇಂಗ್ಲಿಷ್ ಭಾಷಾಜ್ಞಾನದ ಜತೆಗೆ, ಗಣಿತ, ಸಾಮಾನ್ಯಜ್ಞಾನವನ್ನು ಹೇಳಿಕೊಡಬೇಕಿದೆ. ಇದನ್ನು ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಈಗಾಗಲೇ ಬೋಧಿಸುತ್ತಿದ್ದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಈ ಕ್ರಮದಲ್ಲಿ ಶಿಕ್ಷಣ ನೀಡದೇ ಅವರನ್ನು ಪರೋಕ್ಷವಾಗಿ ವಂಚಿಸಲಾಗುತ್ತಿದೆ. ಇದು ಆತಂಕ ವಿಷಯ ಎಂದು ತಿಳಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಸಾಪದ ಆಜೀವ ಸದಸ್ಯತ್ವ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯವಾಗಿಬೇಕಿದೆ. ಅದಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಿ ಕಾರ್ಯನಿರ್ವಹಿಸಬೇಕೆಂದರು.

ಕಸಾಪ ಬಣಕಲ್ ಹೋಬಳಿ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಕ್ಕಿ ಮಂಜುನಾಥ್, ರವಿ ಕನ್ನಡಗೀತೆಗಳನ್ನು ಹೇಳಿ ರಂಜಿಸಿದರು.

ಕಸಾಪ ರಾಯಭಾರಿ ದೀಪಕ್ ದೊಡ್ಡಯ್ಯ, ಮುಖಂಡರಾದ ಬಿ.ಎಂ.ಜಯಪಾಲ್, ಲಕ್ಷ್ಮಣ್‌ಗೌಡ, ಎಂ.ಎಸ್.ನಾಗರಾಜ್, ಶಿಕ್ಷಕ ಚಂದ್ರಪ್ಪ, ರಾಜ್‌ಕುಮಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ