ಈಡನ್‌ಗಾರ್ಡನ್ಸ್‌ಗೂ ಬಂತು ಲಾರ್ಡ್ಸ್ ಮಾದರಿಯ ಗಂಟೆ

Update: 2016-09-29 05:33 GMT

ಕೋಲ್ಕತಾ, ಸೆ.29: ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ಮಾದರಿಯಲ್ಲಿ ದೊಡ್ಡ ಗಾತ್ರದ ಬೆಲ್‌ವೊಂದನ್ನು ಭಾರತದ ಐತಿಹಾಸಿಕ ಸ್ಟೇಡಿಯಂ ಈಡನ್‌ಗಾರ್ಡನ್ಸ್‌ನಲ್ಲೂ ಅಳವಡಿಸಲಾಗಿದೆ. ಈ ಮೂಲಕ ಸೌರವ್ ಗಂಗುಲಿ ಅವರ ಬಹುದಿನದ ಕನಸು ನನಸಾಗಿದೆ.

ಭಾರತ-ನ್ಯೂಝಿಲೆಂಡ್ ನಡುವೆ ಶುಕ್ರವಾರ ಇಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಗಾತ್ರದ ಗಂಟೆಯೊಂದನ್ನು ಅಳವಡಿಸಲಾಗಿದೆ.

ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್‌ದೇವ್ ದ್ವಿತೀಯ ಟೆಸ್ಟ್‌ನ ಮೊದಲ ದಿನ ದೊಡ್ಡ ಬೆಲ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಚಾಲನೆ ನೀಡಲಿದ್ದಾರೆ. ಭಾರತ ಟೆಸ್ಟ್ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆಯಲ್ಲಿದೆ.

ಲಂಡನ್‌ನ ಐತಿಹಾಸಿಕ ಕ್ರೀಡಾಂಗಣ ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯ ಆರಂಭಕ್ಕೆ ಮೊದಲು ದೊಡ್ಡ ಗಾತ್ರದ ಗಂಟೆಯೊಂದನ್ನು ಮಾಜಿ ಶ್ರೇಷ್ಠ ಕ್ರಿಕೆಟಿಗರು ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡುವ ಸಂಪ್ರದಾಯವಿದೆ. ಲಾರ್ಡ್ಸ್‌ನ ಮಾದರಿಯನ್ನು ನಕಲು ಮಾಡಲು ಬಯಸಿರುವ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಅಧ್ಯಕ್ಷ ಸೌರವ್ ಗಂಗುಲಿ ಭಾರತದ ಅತ್ಯಂತ ದೊಡ್ಡ ಸ್ಟೇಡಿಯಂ ಈಡನ್‌ಗಾರ್ಡನ್ಸ್‌ನಲ್ಲೂ ದೊಡ್ಡ ಗಾತ್ರದ ಗಂಟೆಯೊಂದನ್ನು ಅಳವಡಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಬೆಳ್ಳಿ ಲೇಪಿತ ಗಂಟೆಯನ್ನು ಚಂಡೀಗಡದಿಂದ ಇಲ್ಲಿಗೆ ತರಲಾಗಿದ್ದು, ಬಿ.ಸಿ. ರಾಯ್ ಕ್ಲಬ್ ಹೌಸ್ ಎಂಡ್‌ನಲ್ಲಿರುವ ಸೈಟ್ ಸ್ಕ್ರೀನ್ ಬಳಿ ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News