×
Ad

ಯಾರಿಗೂ ಬೇಡವಾಯಿತೇ ಈ 8 ಕೋಟಿ ಮೊತ್ತದ ಲಾಟರಿ ಬಹುಮಾನ?

Update: 2016-09-30 15:31 IST

ರೂ 8 ಕೋಟಿ. ಕೇರಳ ಸರ್ಕಾರದ ಓಣಂ ಲಾಟರಿಯ ಮೊತ್ತವಿದು. ಹಾಗಿದ್ದರೂ ಗೆಲುವಿನ ಟಿಕೆಟ್ ಘೋಷಿಸಿ ವಾರವಾದರೂ ಅದನ್ನು ಸಂಗ್ರಹಿಸಲು ಯಾರೂ ಮುಂದೆ ಬಂದಿಲ್ಲ. ಇತರ ಎಲ್ಲಾ ಲಾಟರಿಗಳ ವಾರಸುದಾರರೂ ಮುಂದೆ ಬಂದಿದ್ದಾರೆ. ಸರ್ಕಾರವು ಲಾಟರಿ ಟಿಕೆಟ್ ಫಲಿತಾಂಶ ಘೋಷಿಸಿ ಎಂಟು ದಿನಗಳೇ ಆಗಿವೆ. ನಂಬ್ರ ಟಿಸಿ 788368 ಗೆ ಪ್ರಶಸ್ತಿ ಸಿಕ್ಕಿದೆ. ಗೆದ್ದ ನಂಬರನ್ನು ಘೋಷಿಸಿದ ನಂತರ ಕೊಲ್ಲಂ ಜಿಲ್ಲೆಯ ಕಾಯಂಕುಳಂನ ವಿಶಾಲ್ ತನ್ನ ದುರದೃಷ್ಟವನ್ನು ಹಳಿಯುತ್ತಿದ್ದಾರೆ. ಆತ ಅದೇ ಸೀರೀಸ್‌ನ ಲಾಟರಿ ಟಿಕೆಟನ್ನು ತ್ರಿಶೂರ್‌ನ ಏಜೆಂಟ್ ಸಂತೋಷ್‌ನಿಂದ ಪಡೆದಿದ್ದಾನೆ.

“ನಾನು ಸ್ನೇಹಿತನ ಮದುವೆಗೆ ತ್ರಿಶೂರ್‌ಗೆ ಹೋಗಿದ್ದಾಗ ಈ ಟಿಕೆಟನ್ನು ಖರೀದಿಸಿದೆ. ಅದು ಟಿಸಿ ಸೀರೀಸ್‌ನದ್ದೆಂದು ನನಗೆ ಗೊತ್ತಿದೆ. ಏಕೆಂದರೆ ಟಿಸಿ ಎಂದರೆ ತ್ರಿಶೂರ್ ಹೌದೇ ಎಂದು ನಾನು ಏಜೆಂಟರನ್ನು ಕೇಳಿದ್ದೆ. ನಾನು ಟಿವಿಯಲ್ಲಿ ಏಜೆಂಟನ್ನು ಕಂಡಾಗ ಆತನನ್ನು ಗುರುತಿಸಿ ನೆನಪಿಸಿಕೊಂಡಿದ್ದೇನೆ” ಎಂದು ವಿಶಾಲ್ ಹೇಳಿದ್ದಾರೆ.

ಆದರೆ ವಿಶಾಲ್‌ಗೆ ಆ ಟಿಕೆಟ್ ತನ್ನದೇ ಎಂದು ಪರಿಶೀಲಿಸಲೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ಆತನ ಬಳಿ ಈಗ ಟಿಕೆಟ್ ಇಲ್ಲ. ಅವರು ಟಿಕೆಟನ್ನು ತಮ್ಮ ಹಳೇ ಮೊಬೈಲ್ ಕೇಸ್ ಕವರ್‌ನಲ್ಲಿ ಸಿಕ್ಕಿಸಿದ್ದರು. ಆದರೆ ಮನೆ ಸ್ವಚ್ಛ ಮಾಡುವಾಗ ಕಸ ವಿಲೇವಾರಿ ಮಾಡುವಾಗ ಅದರ ಜೊತೆಗೆ ಬೆಂಕಿಗೆ ಹಾಕಿದ್ದಾರೆ.

“ಅದೇ ಮಾರಾಟಗಾರ ಮತ್ತು ಅದೇ ಸೀರೀಸ್. ಹೀಗಾಗಿ ಅದು ನನ್ನದೂ ಆಗಿರಬಹುದು. ಆದರೆ ಅದೀಗ ನನ್ನ ಬಳಿಯಿಲ್ಲ” ಎನ್ನುತ್ತಾರೆ ವಿಶಾಲ್. ಈಗ ಟಿಕೆಟ್ ಮಾಲೀಕರು ಯಾರೂ ಮುಂದೆ ಬಾರದೆ ಇರುವ ಕಾರಣ ಅದು ವಿಶಾಲ್ ಖರೀದಿಸಿದ ಟಿಕೆಟ್ ಆಗಿರುವ ಸಾಧ್ಯತೆಯೇ ಹೆಚ್ಚಿದೆ. ಆದರೆ ಲಾಟರಿ ಗೆದ್ದಿರಬಹುದಾದ ವಿಶಾಲ್ ಟಿಕೆಟು ಈಗ ಸುಟ್ಟು ಹೋಗಿದೆ. ಈ ನಡುವೆ ತೆಂಜಿಪ್ಪಳಂನ ವ್ಯಕ್ತಿಯೊಬ್ಬನ ಫೋಟೋ ಈಗ ವಾಟ್ಸಪ್‌ನಲ್ಲಿ ಪ್ರಶಸ್ತಿ ಗೆದ್ದವ ಎಂದು ಪ್ರಸಾರವಾಗುತ್ತಿರುವುದು ಆ ವ್ಯಕ್ತಿಗೆ ದೊಡ್ಡ ತಲೆನೋವಾಗಿಬಿಟ್ಟಿದೆ.

ಕೃಪೆ: http://www.thenewsminute.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News