×
Ad

ಶ್ರೀಲಂಕಾ ಕೂಡಾ ಹೊರಗೆ

Update: 2016-09-30 23:57 IST

 ಕೊಲಂಬೊ, ಸೆ.30: ಪಾಕಿಸ್ತಾನಕ್ಕೆ ಇನ್ನೊಂದು ಹಿನ್ನಡೆಯೆಂಬಂತೆ, ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ 19ನೆ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸದಿರಲು ಶ್ರೀಲಂಕಾ ಶುಕ್ರವಾರ ನಿರ್ಧರಿಸಿದೆ. ಉರಿ ದಾಳಿ ಘಟನೆಯನ್ನು ಪ್ರತಿಭಟಿಸಿ ಭಾರತವು ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನ, ಬಾಂಗ್ಲಾ ಹಾಗೂ ಭೂತಾನ್ ದೇಶಗಳು ಕೂಡಾ ಸಮಾವೇಶದಿಂದ ಹೊರಗುಳಿಯಲು ನಿರ್ಧರಿಸಿದ್ದವು. ಇದೀಗ ಶ್ರೀಲಂಕಾ ಕೂಡಾ ಅದೇ ದಾರಿಹಿಡಿಯುವುದರೊಂದಿಗೆ ಒಟ್ಟು ಐದು ದೇಶಗಳು ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿದಂತಾಗಿದೆ.
 ‘‘ ಈ ಪ್ರದೇಶದಲ್ಲಿ ನೆಲೆಸಿರುವ ಪ್ರಸಕ್ತ ಪರಿಸ್ಥಿತಿಯು 19ನೆ ಸಾರ್ಕ್ ಶೃಂಗಸಭೆಯನ್ನ ಇಸ್ಲಾಮಾಬಾದ್‌ನಲ್ಲಿ ನಡೆಸುವುದಕ್ಕೆ ಪೂರಕವಾಗಿಲ್ಲವೆಂದು ಹೇಳಲು ಶ್ರೀಲಂಕಾ ವಿಷಾದಿಸುತ್ತದೆ’’ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ.

ಶೃಂಗಸಭೆಯ ಎಲ್ಲಾ ಮಟ್ಟದ ನಿರ್ಧಾರಗಳನ್ನು ಅವಿರೋಧವಾಗಿ ಕೈಗೊಳ್ಳಬೇಕೆಂದು ಸಾರ್ಕ್ ಸನದಿನ ಸಾಮಾನ್ಯ ನಿಯಮಾವಳಿಗಳು ಪ್ರತಿಪಾದಿಸುತ್ತವೆ. ಸಾರ್ಕ್ ಸದಸ್ಯ ರಾಷ್ಟ್ರಗಳ ಸರಕಾರಿ ವರಿಷ್ಠರ ಸಭೆಯನ್ನು ಆಯೋಜಿಸುವುದಕ್ಕೂ ಈ ನಿಯಮಗಳು ಅನ್ವಯವಾಗುತ್ತವೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವಾಲಯದ ಸಂಕ್ಷಿಪ್ತ ಹೇಳಿಕೆಯೊಂದು ತಿಳಿಸಿದೆ. ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಪ್ರಸ್ತುತ ತಲೆದೋರಿರುವ ಉದ್ವಿಗ್ನತೆಯ ಬಗ್ಗೆ ಹೇಳಿಕೆಯು ಯಾವುದೇ ಪ್ರಸ್ತಾಪ ಮಾಡಿಲ್ಲವಾದರೂ, ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ತಾನು ಖಂಡಿಸುವುದಾಗಿ ಅದು ಹೇಳಿದೆ. ದಕ್ಷಿಣ ಏಶ್ಯದ ಜನತೆಯ ಹಿತದೃಷ್ಟಿಯಿಂದ ಅರ್ಥಪೂರ್ಣವಾದ ಪ್ರಾದೇಶಿಕ ಸಹಕಾರದ ಅಗತ್ಯವಿದೆಯೆಂದು ಅದು ಪ್ರತಿಪಾದಿಸಿದೆ. 1985ರಲ್ಲಿ ರಚನೆಯಾದ ದಕ್ಷಿಣ ಏಶ್ಯ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್)ದಲ್ಲಿ ಭಾರತ, ಅಫ್ಘಾನಿಸ್ತಾನ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿವೆ.

ಈ ಪ್ರದೇಶದಲ್ಲಿ ನೆಲೆಸಿರುವ ಪ್ರಸಕ್ತ ಪರಿಸ್ಥಿತಿಯು 19ನೆ ಸಾರ್ಕ್‌ಶೃಂಗಸಭೆಯನ್ನ ಇಸ್ಲಾಮಾಬಾದ್‌ನಲ್ಲಿ ನಡೆಸುವುದಕ್ಕೆ ಪೂರಕವಾಗಿಲ್ಲವೆಂದು ಹೇಳಲು ಶ್ರೀಲಂಕಾ ವಿಷಾದಿಸುತ್ತದೆ.

♦ಶ್ರೀಲಂಕಾ ವಿದೇಶಾಂಗ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News