ಸಾವು,ನೋವನ್ನು ಮುಚ್ಚಿಡುತ್ತಿರುವ ಭಾರತ ಸೇನೆ : ಪಾಕ್ ಸೇನೆ
ಇಸ್ಲಾಮಾಬಾದ್,ಅ.1: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸುವ ಪ್ರಯತ್ನದಲ್ಲಿ ಭಾರತೀಯ ಸೈನಿಕರ ಕಡೆಯಿಂದ ಭಾರೀ ಸಾವುನೋವು ಸಂಭವಿಸಿರುವುದು ತನಗೆ ಖಚಿತವಾಗಿದೆಯೆಂದು ಪಾಕ್ ಸೇನೆಯು ಶನಿವಾರ ತಿಳಿಸಿದೆ. ಭಾರತದ ಸೇನೆಯು ತನಗಾದ ಹಾನಿಯನ್ನು ಮುಚ್ಚಿಹಾಕಿದೆಯೆಂದು ಅದು ಹೇಳಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಬಗ್‌ಸಾರ್ ಪ್ರದೇಶದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಪಾಕ್ ಸೇನಾ ವಕ್ತಾರ ಲೆ.ಜ. ಆಸೀಮ್ ಸಲೀಂ ಬಾಜ್ವಾ ಅವರು, ಗಡಿನಿಯಂತ್ರಣ ರೇಖೆಯಲ್ಲಿ ದಾಳಿಗೆ ಯತ್ನಿಸಿದ ಭಾರತೀಯ ಸೇನೆಗೆ ಪಾಕ್ ಪಡೆಗಳು ಸೂಕ್ತ ಉತ್ತರವನ್ನು ನೀಡಿದೆಯೆಂದು ಹೇಳಿದರು.
‘‘ಭಾರತದ ಕಡೆಯಿಂದ ಭಾರೀ ಹಾನಿಯಾಗಿರುವುದು ನಮಗೆ ಖಾತರಿಯಾಗಿದೆ. ಆದರೆ ಅದು ಈ ಬಗ್ಗೆ ವಿವರಗಳನ್ನು ಮುಚ್ಚಿಟ್ಟಿದೆ’’ ಎಂದವರು ತಿಳಿಸಿದರು.
ಯಾವುದೇ ರೀತಿಯ ಆಕ್ರಮಣವನ್ನು ಎದುರಿಸಲು ಪಾಕ್ ಪಡೆಗಳು ಸಂಪೂರ್ಣ ಸನ್ನದ್ಧವಾಗಿದೆಯೆಂದವರು ಹೇಳಿದರು. ಆದರೆ ಯುದ್ಧ ಹೂಡುವ ಬಗ್ಗೆ ಯಾರಿಗೂ ಅಸಕ್ತಿಯಿಲ್ಲವೆಂದು ಅವರು ತಿಳಿಸಿದರು. ಪಾಕಿಸ್ತಾನದ ಪ್ರಾಂತ್ಯದೊಳಗೆ ತಾನು ಸೀಮಿತ ದಾಳಿಯನ್ನು ನಡೆಸಿರುವೆನೆಂಬ ಭಾರತದ ಹೇಳಿಕೆಯು ಸಂಪೂರ್ಣ ಸುಳ್ಳು ಹಾಗೂ ಕಪೋಲಕಲ್ಪಿತವೆಂದು ಸಲೀಂ ಬಾಜ್ವಾ ಟೀಕಿಸಿದರು.