ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಭಾರತ ಅನುಮೋದನೆ
ವಿಶ್ವಸಂಸ್ಥೆ, ಅ.2: ವಿಶ್ವದ ಮೂರನೆ ಅತ್ಯಧಿಕ ಇಂಗಾಲದ ಡೈಅಕ್ಸೈಡ್ ಹೊರಸೂಸುವ ರಾಷ್ಟ್ರವೆಂಬ ಹಣೆಪಟ್ಟಿ ಹೊಂದಿರುವ ಭಾರತವು ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದಕ್ಕೆ ರವಿವಾರ ಅನುಮೋದನೆ ನೀಡಿದೆ. ಭಾರತವು ಪ್ಯಾರಿಸ್ ಒಪ್ಪಂದಕ್ಕೆ ಸಹಿಹಾಕುವುದರೊಂದಿಗೆ,ಜಾಗತಿಕಕ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿ ಕ್ರಮಗಳನ್ನು ಜಾರಿಗೆ ತರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಹುರುಪು ಮೂಡಿದಂತಾಗಿದೆ.
ಈವರೆಗೆ 61 ರಾಷ್ಟ್ರಗಳು ಪ್ಯಾರಿಸ್ ಒಪ್ಪಂದಕ್ಕೆ ಅಂಕಿತ ಹಾಕಿದ್ದು, 62 ರಾಷ್ಟ್ರವಾಗಿ ಭಾರತವು ಗಾಂಧಿ ಜಯಂತಿ ದಿನವಾದ ರವಿವಾರ ಈ ಐತಿಹಾಸಿಕ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಮಹಾತ್ಮಾಗಾಂಧಿಯವರ 147ನೆ ಜನ್ಮದಿನಾಚರಣೆಯ ಅಂವಾಗಿ ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ವಿಶೇಷ ಸಮಾರಂಭಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹಿಹಾಕಿರುವ ಅನುಮೋದನಾ ಪತ್ರವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ವಿಶ್ವಸಂಸ್ಥೆಯ ಒಡಂಬಡಿಕೆಗಳ ವಿಭಾಗದ ವರಿಷ್ಠ ಸ್ಯಾಂಟಿಯಾಗೊ ವಿಲ್ಲಾಲ್‌ಪ್ಯಾಂಡೊ ಅವರಿಗೆ ಹಸ್ತಾಂತರಿಸಿದರು.
ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಲು, ಹವಾಮಾನ ಬದಲಾವಣೆಯಿಂದಾಗಿ ಅನಾಹುತಗಳನ್ನು ಎದುರಿಸುತ್ತಿರುವ ದೇಶಗಳಿಗೆ ಅರ್ಥಿಕ ನೆರವು ನೀಡುವ ಉದ್ದೇಶದಿಂದ 2015ರ ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಹವಾಮಾನ ಒಪ್ಪಂದಕ್ಕೆ 190 ದೇಶಗಳು ಸಹಿಹಾಕಿದ್ದವು. ಒಪ್ಪಂದ ಜಾರಿಗೊಳ್ಳಬೇಕಿದ್ದರೆ ಇನ್ನೂ 55 ರಾಷ್ಟ್ರಗಳ ಅಂಗೀಕಾರ ಅಗತ್ಯವಿತ್ತು. ಇದೀಗ ಭಾರತವೂ ಸೇರಿದಂತೆ ಒಟ್ಟು 62 ರಾಷ್ಟ್ರಗಳು ಅನುಮೋದನೆ ನೀಡಿವೆ.
ಅಂತಾರಾಷ್ಟ್ರೀಯ ಅಹಿಂಸಾದಿನದ ಅಂಗವಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ನೀಡಿದ ಸಂದೇಶದಲ್ಲಿ ಹವಾಮಾನ ಬದಲಾವಣೆ ಕುರಿತ ಒಪ್ಪಂದಕ್ಕೆ ಅನುಮೋದನೆ ನೀಡುವ ಮೂಲಕ ಭಾರತವು ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದೆ ಎಂದರು.
ಒಪ್ಪಂದದ ಸ್ಥಿರೀಕರಣಕ್ಕೆ ಭಾರತ ನೀಡಿರುವ ಅನುಮೋದನೆಯಿಂದ ಜಾಗತಿಕ ಇಂಗಾಲಾಮ್ಲ ಹೊರಸೂಸುವಿಕೆಯ ಪ್ರಮಾಣವನ್ನು ಶೇ.51.89ಕ್ಕೆ ಇಳಿಸುವ ಗುರಿಯನ್ನು ಕಾರ್ಯಗತಗೊಳಿಸಲು ಸಹಕಾರಿಯಾಗಲಿದೆ. ಪ್ಯಾರಿಸ್ ಒಪ್ಪಂದದ ಜಾರಿಗೆ ಶ್ರಮಿಸಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.