ಜಪಾನ್‌ನ ಯೊಶಿನೊರಿ ಒಹ್‌ಸುಮಿಗೆ ವೈದ್ಯಕೀಯ ನೊಬೆಲ್

Update: 2016-10-03 13:29 GMT

ಸ್ಟಾಕ್‌ಹೋಮ್, ಅ. 3: ಜಪಾನ್‌ನ ಯೊಶಿನೊರಿ ಒಹ್‌ಸುಮಿ 2016ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಜೀವಕೋಶಗಳು ಹೇಗೆ ಒಡೆಯುತ್ತವೆ ಹಾಗೂ ತಮ್ಮಲ್ಲಿನ ಪದಾರ್ಥವನ್ನು ಮರುಬಳಕೆ ಮಾಡುತ್ತವೆ ಎಂಬ ಸಂಶೋಧನೆಗಾಗಿ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಅವರ ಈ ಸಂಶೋಧನೆಯಿಂದಾಗಿ ಕ್ಯಾನ್ಸರ್, ಪಾರ್ಕಿನ್ಸನ್ಸ್ ಕಾಯಿಲೆ ಮತ್ತು ಟೈಪ್ 2 ಮಧುಮೇಹವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.
‘‘ಜೀವಕೋಶವು ತನ್ನಲ್ಲಿನ ಪದಾರ್ಥವನ್ನು ಹೇಗೆ ಮರುಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಒಹ್‌ಸುಮಿಯ ಸಂಶೋಧನೆ ಹೊಸ ಹಾದಿಯನ್ನು ತೆರೆದಿಟ್ಟಿದೆ’’ ಎಂದು ಸ್ವೀಡನ್‌ನ ಕ್ಯಾರೊಲಿನ್‌ಸ್ಕ ಇನ್‌ಸ್ಟಿಟ್ಯೂಟ್‌ನಲ್ಲಿರುವ ನೊಬೆಲ್ ಅಸೆಂಬ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪ್ರಶಸ್ತಿಯು 8 ಮಿಲಿಯ ಸ್ವೀಡಿಶ್ ಕ್ರೌನ್ (ಸುಮಾರು 6.2 ಕೋಟಿ ರೂಪಾಯಿ) ನಗದು ಮೊತ್ತವನ್ನು ಒಳಗೊಂಡಿದೆ.
‘‘ಹಸಿವೆಗೆ ಹೊಂದಿಕೊಳ್ಳುವ ಅಥವಾ ಸೋಂಕಿಗೆ ಪ್ರತಿಕ್ರಿಯಿಸುವ ಹಲವು ದೈಹಿಕ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವ ಹೊಸ ದಾರಿಯೊಂದನ್ನು ಅವರ ಸಂಶೋಧನೆಗಳು ತೆರೆದಿವೆ’’ ಎಂದು ಹೇಳಿಕೆ ತಿಳಿಸಿದೆ.
ಜೀವಕೋಶಗಳು ಒಡೆಯುವುದಕ್ಕೆ ಸಂಬಂಧಿಸಿದ ಒಹ್‌ಸುಮಿ ಅವರ ಸಂಶೋಧನೆ ಮಹತ್ವದ್ದಾಗಿದೆ ಯಾಕೆಂದರೆ, ಯಾಕೆ ರೋಗಗಳು ಸಂಭವಿಸುತ್ತವೆ ಎನ್ನವುದವನ್ನು ಅದು ವಿವರಿಸುತ್ತದೆ.
‘‘ ‘ಆಟೊಫಾಗಿ (ತನ್ನನ್ನು ತಾನೇ ತಿನ್ನುವ) ಜೀನ್ಸ್‌ನಲ್ಲಿ ಕಂಡುಬರುವ ವಿಕೃತ ಬದಲಾವಣೆಗಳು ರೋಗಕ್ಕೆ ಕಾರಣವಾಗಬಲ್ಲವು ಹಾಗೂ ಕ್ಯಾನ್ಸರ್ ಮತ್ತು ನರ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಪರಿಸ್ಥಿತಿಗಳಲ್ಲಿ ಆಟೊಫಾಗಿ ಪ್ರಕ್ರಿಯೆ ನಡೆಯುತ್ತದೆ’’ ಎಂದು ಹೇಳಿಕೆ ತಿಳಿಸಿದೆ.
ಜಪಾನ್‌ನ ಫುಕುವೊಕದಲ್ಲಿ 1945ರಲ್ಲಿ ಜನಿಸಿದ ಒಹ್‌ಸುಮಿ 2009ರಿಂದ ಟೋಕಿಯೊದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿದ್ದಾರೆ.
ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಣೆಯೊಂದಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಣೆಗಳ ಋತು ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News