ಸುಪ್ರೀಂನಿಂದ ಪರಿಶೀಲನೆ, ಕೇಂದ್ರದ ವರದಿಗೆ ಸೂಚನೆ
ಹೊಸದಿಲ್ಲಿ, ಅ.3: ಮೊಬೈಲ್ ಟವರ್‌ಗಳಿಂದ ಹೊರಸೂಸುವ ವಿಕಿರಣದ ಹಾನಿಕಾರಕ ಪರಿಣಾಮಗಳ ಪರಿಶೀಲನೆಯನ್ನು ಇಂದು ಆರಂಭಿಸಿರುವ ಸರ್ವೋಚ್ಚ ನ್ಯಾಯಾಲ ಯವು, ಇಂತಹ ವಿಕಿರಣಗಳಿಗೆ ಸಂಬಂಧಿಸಿದ ಮಾನದಂಡಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ವರದಿಯೊಂದನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.
ಇಂತಹ ಮೊಬೈಲ್ ಟವರ್‌ಗಳಿಂದ ಪ್ರತಿಕೂಲ ಪರಿಣಾಮಗಳೇನು? ಈ ಬಗ್ಗೆ ನಿಗಾ ಇಡಲು ಯಾವುದೇ ಸಂಸ್ಥೆ ಯನ್ನು ನೇಮಿಸಲಾಗಿದೆಯೇ? ಇಂತಹ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣದ ಮಾನದಂಡಗಳ ಜಾರಿಗಾಗಿ ನೀವು (ದೂರಸಂಪರ್ಕ ಇಲಾಖೆ) ಏನಾದರೂ ವ್ಯವಸ್ಥೆಯನ್ನು ಹೊಂದಿದ್ದೀರಾ ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿಗಳಾದ ಸಿ.ನಾಗಪ್ಪನ್ ಹಾಗೂ ಎ.ಎಂ.ಖನ್ವಿಲ್ಕರ್ ಅವರ ಪೀಠವು ಪ್ರಶ್ನಿಸಿತು.
ವಿಕಿರಣದ ಪರಿಣಾಮ ಮತ್ತು ಅದನ್ನು ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿಗಳನ್ನೊಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ದೂರಸಂಪರ್ಕ ಇಲಾಖೆಯ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ಪಟ್ವಾಲಿಯಾ ಅವರಿಗೆ ಪೀಠವು ನಿರ್ದೇಶ ನೀಡಿತು.
ದೇಶದಲ್ಲಿಯ ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣ ಮಾನ ದಂಡಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸರಿಸಮವಾಗಿವೆಯೇ ಎಂದು ಪ್ರಶ್ನಿಸಿದ ಪೀಠವು, ಈ ವರೆಗೆ ದೂರಸಂಪರ್ಕ ಸಂಸ್ಥೆಗಳು ದೇಶದಲ್ಲಿ ಎಷ್ಟು ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿವೆ ಮತ್ತು ಇಲಾಖೆಯು ಅವುಗಳ ತಪಾಸಣೆ ನಡೆಸಿದೆಯೇ ಎಂದೂ ಪ್ರಶ್ನಿಸಿತು.
ಅರ್ಜಿದಾರರಲ್ಲೋರ್ವರಾಗಿರುವ ನೊಯ್ಡೋ ನಿವಾಸಿ ನರೇಶಚಂದ್ ಗುಪ್ತಾ ಪರ ವಕೀಲ ಪ್ರಶಾಂತ ಭೂಷಣ್ ಅವರು, ವಸತಿ ಪ್ರದೇಶಗಳು ಮತ್ತು ಶಾಲೆಗಳ ಬಳಿ ಇಂತಹ ಟವರ್‌ಗಳನ್ನು ಸ್ಥಾಪಿಸಲಾಗಿದೆ ಎನ್ನುವುದನ್ನು ಗಮನಕ್ಕೆ ತಂದಾಗ ಪೀಠವು, ಈ ಬಗ್ಗೆ ನಿಯಮಾವಳಿಗಳೇನಾದರೂ ಇವೆಯೇ ಮತ್ತು ಇದ್ದರೆ ಅವು ಯಾವುದು ಎಂದು ಸರಕಾರವನ್ನು ಪ್ರಶ್ನಿಸಿತು. ಮುಂದಿನ ವಿಚಾರಣಾ ದಿನಾಂಕವಾದ ಅ.17ರೊಳಗೆ ಎಲ್ಲ ವಿವರಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶ ನೀಡಿತು.