ಮದುವೆ ಮನೆಯ ಮೇಲೆ ಆತ್ಮಾಹತ್ಯಾ ದಾಳಿ: 32 ಸಾವು; 100ಕ್ಕೂ ಅಧಿಕ ಮಂದಿಗೆ ಗಾಯ

Update: 2016-10-04 17:18 GMT

ಹಸಾಕೆಹ್ (ಸಿರಿಯ), ಅ. 4: ಈಶಾನ್ಯ ಸಿರಿಯದ ನಗರವೊಂದರಲ್ಲಿ ಮದುವೆ ಮನೆಯೊಂದರ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ 32 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ.

ಹಸಾಕೆಹ್ ಪ್ರಾಂತದ ತಾಲ್ ತಾವ್ಲಿ ಎಂಬ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ಕುರ್ದಿಶ್ ಪಕ್ಷವೊಂದರ ಪದಾಧಿಕಾರಿಯೊಬ್ಬರ ವಿವಾಹದಲ್ಲಿ ಈ ಹತ್ಯಾಕಾಂಡ ನಡೆದಿದೆ. ವಧೂ ವರರು ವಿವಾಹ ಬಂಧನದ ಪ್ರತಿಜ್ಞೆಗೈಯುತ್ತಿದ್ದಾಗ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡನು.

‘‘ವಧು ಮತ್ತು ವರರು ಪ್ರತಿಜ್ಞೆಗೈಯುತ್ತಿದ್ದಾಗ ದಪ್ಪ ಕಪ್ಪು ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬ ನನ್ನ ಪಕ್ಕದ ಹಾದುಹೋಗುವುದನ್ನು ನೋಡಿದೆ’’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘‘ಆತ ವಿಲಕ್ಷಣವಾಗಿ ಕಾಣುತ್ತಿದ್ದ ಎಂದು ನಾನು ಯೋಚಿಸಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಅಲ್ಲಿ ಭಾರೀ ಸ್ಫೋಟವೊಂದು ಸಂಭವಿಸಿತು’’ ಎಂದರು.

ಸುಮಾರು 100 ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲವೊಂದು ತಿಳಿಸಿದೆ.

ವಧು ಮತ್ತು ವರ ಇಬ್ಬರೂ ಸುರಕ್ಷಿತರಾಗಿದ್ದಾರೆ. ಆದರೆ ವರನ ತಂದೆ ಮತ್ತು ಸಹೋದರ ಹತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News