ಯೋಧರಿಗಾಗಿ 21 ದೇಶಭಕ್ತ ಬ್ರಾಹ್ಮಣರಿಂದ ಗಡಿಯಲ್ಲಿ ವಿಶೇಷ ಯಜ್ಞ!

Update: 2016-10-07 04:05 GMT

ಜೈಪುರ, ಅ.7: ಮುಖ್ಯಮಂತ್ರಿ ವಸುಂಧರ ರಾಜೇ ಅವರ ಆದೇಶದ ಮೇರೆಗೆ ರಾಜಸ್ಥಾನ ಸಂಸ್ಕೃತ ಅಕಾಡೆಮಿ, ಭಾರತ- ಪಾಕಿಸ್ತಾನ ಗಡಿಯ ಮಾತೇಶ್ವರಿ ತನೋತ್ ರಾಯ್ ದೇವಸ್ಥಾನ ಬಳಿ, ರಾಷ್ಟ್ರರಕ್ಷ ಯಜ್ಞ ಹಮ್ಮಿಕೊಂಡಿದೆ. ವಿರೋಧಿಗಳಿಂದ ಭಾರತೀಯ ಸೈನಿಕರನ್ನು ರಕ್ಷಿಸುವುದು ಈ ಯಜ್ಞದ ಉದ್ದೇಶವಂತೆ!
"21 ಮಂದಿ ರಾಷ್ಟ್ರಪ್ರೇಮಿ ಬ್ರಾಹ್ಮಣ"ರು ನಡೆಸುವ ಈ ಯಜ್ಞದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಹಾಗೂ ಮುಖ್ಯಮಂತ್ರಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
"ನಮ್ಮ ಸನಾತನ ಪರಂಪರೆಯಲ್ಲಿ ಈ ಹಿಂದೆಯೂ ಕ್ಷತ್ರಿಯರು ಯುದ್ಧಗಳಲ್ಲಿ ಹೋರಾಡಿದ್ದಾರೆ. ಅವರ ರಕ್ಷಣೆಗಾಗಿ ಬ್ರಾಹ್ಮಣರು ಯಜ್ಞ ಮಾಡುತ್ತಿದ್ದರು. ಈ ಯಜ್ಞದ ಮೂಲಕ, ಪ್ರತಿಯೊಬ್ಬರೂ ಸೇನೆಯನ್ನು ಬೆಂಬಲಿಸಲು ಮುಂದಾಗಬೇಕು ಎನ್ನುವ ಸಂದೇಶ ರವಾನಿಸುವುದು ಉದ್ದೇಶ" ಎಂದು ರಾಜಸ್ಥಾನ ಸಂಸ್ಕೃತ ಅಕಾಡೆಮಿ ಅಧ್ಯಕ್ಷ ಜಯ ದವೆ ಹೇಳಿದ್ದಾರೆ.
ಸೈನಿಕರ ರಕ್ಷಣೆಗೆ ಪ್ರಾರ್ಥಿಸಿ, ಗಡಿಭಾಗದ ಮಾತೇಶ್ವರಿ ತನೋತ್ ರಾಯ್ ದೇವಸ್ಥಾನದಲ್ಲಿ ಸಿಎಂ ವಿಶೇಷ ಪೂಜೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೇಳಿದೆ. ಪಾಕಿಸ್ತಾನದ ಜತೆಗಿನ ಅತಿ ಉದ್ದದ ಗಡಿ (1,040) ಕಿಲೋಮೀಟರ್ ರಾಜಸ್ಥಾನದೊಂದಿಗೆ ಇರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿಕೊಂಡಿದೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News