ಪಾಕ್ ಆಟಗಾರರನ್ನು ಭಾರತಕ್ಕೆ ಆಹ್ವಾನಿಸಿಲ್ಲ: ಸಾಕ್ಷಿ ಮಲ್ಲಿಕ್ ಸ್ಪಷ್ಟನೆ

Update: 2016-10-07 18:21 GMT

ಬೆಂಗಳೂರು, ಅ.7: ‘‘ವಿವಿಧ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಕಿಸ್ತಾನಿ ಆಟಗಾರರನ್ನು ಭಾರತಕ್ಕೆ ಆಹ್ವಾನಿಸಬೇಕು ಎಂದು ತಾನು ಬಯಸಿದ್ದಾಗಿ ಮಾಧ್ಯಮಗಳು ತಪ್ಪಾಗಿ ಪ್ರಚಾರ ಮಾಡಿವೆ. ನಾನು ಆ ರೀತಿಯ ಹೇಳಿಕೆಯನ್ನು ನೀಡಿರಲಿಲ್ಲ’’ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿರುವ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಸ್ಪಷ್ಟಪಡಿಸಿದ್ದಾರೆ.

ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ ಬಳಿಕ ಕೇಂದ್ರ ಸರಕಾರ ಸೀಮಿತ ದಾಳಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಬಿಕ್ಕಟ್ಟು ತಲೆ ಎತ್ತಿದೆ. ಈ ನಡುವೆ ಪಾಕಿಸ್ತಾನದ ಆಟಗಾರರಿಗೆ ಯಾವುದೇ ಟೂರ್ನಿಗಳಲ್ಲಿ ಆಡದಂತೆ ನಿರ್ಬಂಧಿಸುವುದು ತಪ್ಪು ಎಂದು ಸಾಕ್ಷಿ ಮಲ್ಲಿಕ್ ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿತ್ತು.

 ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸಾಕ್ಷಿ ಮಲ್ಲಿಕ್, ‘‘ ಆಟಗಾರರಿಗೆ ವಿಶ್ವದ ಯಾವುದೇ ಭಾಗಗಳಲ್ಲಿ ಆಡುವ ಹಕ್ಕಿದೆ ಎಂದು ನಾನು ಹೇಳಿದ್ದೆ. ಅದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗೆ ಕೊನೆಗೊಂಡ ಒಲಿಂಪಿಕ್ಸ್ ಗೇಮ್ಸ್ ಆಗಿದೆ. ಪಾಕಿಸ್ತಾನಿ ಕ್ರೀಡಾಳುಗಳಿಗೆೆ ಭಾರತದಲ್ಲಿ ಆಡಲು ಅವಕಾಶ ನೀಡಬೇಕು’’ ಎಂದು ನಾನು ವಾದಿಸಿಲ್ಲ ಎಂದರು.

‘‘ನನಗೆ ಕುಸ್ತಿ ಎಂದರೆ ತುಂಬಾ ಇಷ್ಟ. ಕ್ರೀಡೆಯಲ್ಲಿ ಮುಂದುವರಿಯಲು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವವರ ಮಕ್ಕಳಿಗೆ ಆರ್ಥಿಕ ಸಹಾಯ ನೀಡಲು ಬಯಸುವೆ. ಹಣ ಗಳಿಕೆ ಹಾಗೂ ಪದಕವನ್ನು ಜಯಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾವು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು’’ ಎಂದು ಸಾಕ್ಷಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News