ವಿಪಕ್ಷಗಳ ವಿರುದ್ಧ ಚುನಾವಣೆಯಲ್ಲಿ 'ಸರ್ಜಿಕಲ್ ದಾಳಿ'ಗೆ ಬಿಜೆಪಿ ಸಜ್ಜು

Update: 2016-10-08 03:33 GMT

ಹೊಸದಿಲ್ಲಿ, ಅ.8: ನಿರೀಕ್ಷೆಯಂತೆಯೇ ಬಿಜೆಪಿ ಉತ್ತರ ಪ್ರದೇಶ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಇತ್ತೀಚಿಗೆ ನಡೆದ ಯಶಸ್ವಿ ಸರ್ಜಿಕಲ್ ದಾಳಿಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಇದನ್ನು ಖುದ್ದು ಪಕ್ಷಾಧ್ಯಕ್ಷ ಅಮಿತ್ ಷಾ ಅವರು ಶುಕ್ರವಾರ ಖಚಿತಪಡಿಸಿದ್ದಾರೆ. 

ಸರ್ಜಿಕಲ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದ ಸಾಕ್ಷ್ಯ ಹಾಗು ಬಹುದೊಡ್ಡ ಸಾಧನೆ ಎಂದು ಜನರ ಮುಂದೆ ತೆಗೆದುಕೊಂಡು ಹೋಗಲು ಪಕ್ಷ ಸಜ್ಜಾಗಿದೆ ಎಂದು ಷಾ ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ಗೆ ಸವಾಲಾಗಿ ಮಾಡಲು ಪಕ್ಷ ಚಿಂತಿಸಿದೆ. " ಈಗ ಪ್ರಶ್ನೆ ಏನಂದರೆ, ನೀವು (ಕಾಂಗ್ರೆಸ್ ) ಯಾಕೆ ಸಂತುಷ್ಟರಾಗಿಲ್ಲ, ಹೆಮ್ಮೆ ಪಡುತ್ತಿಲ್ಲ ಎಂಬುದು. ಇದರರ್ಥ ನಿಮ್ಮಲ್ಲಿ ಏನೋ ಮೂಲಭೂತ ಸಮಸ್ಯೆ ಇದೆ... ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬದಲು ಕಾಂಗ್ರೆಸ್ ಪಾಕಿಸ್ತಾನದ ನಿರಾಶೆ ಜೊತೆ ಗುರುತಿಸಿಕೊಳ್ಳುತ್ತಿದೆ ಯಾಕೆ ... ?" ಎಂದು ಷಾ ಪ್ರಶ್ನಿಸಿದ್ದಾರೆ. 

"ನಾವು ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಲು ಜನರ ಬಳಿ ಹೋಗುತ್ತೇವೆ. ಈ ದಾಳಿಗಳು ಭಯೋತ್ಪಾದನೆಗೆ ಪ್ರಧಾನಿ ಮೋದಿ ಅವರ ಶೂನ್ಯ ಸಂಯಮದ ಸಂಕೇತವಾಗಿವೆ. ಇದು ಸೇನೆಯ ಬಹುದೊಡ್ಡ ಸಾಧನೆ ಹಾಗು ಪ್ರಧಾನಿಯ ಸದೃಢ ರಾಜಕೀಯ ಇಚ್ಛಾಶಕ್ತಿಯ ದ್ಯೋತಕವಾಗಿದೆ" ಎಂದು ಷಾ ಹೇಳಿದ್ದಾರೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News