ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ರಣಕಹಳೆ

Update: 2016-10-09 18:38 GMT

ಭಯಾನಕ ದಿನಗಳನ್ನು ಎದುರಿಗಿಟ್ಟುಕೊಂಡು ನಮ್ಮ ಯುವ ಸಂಗಾತಿಗಳು ಉಡುಪಿ ಸಮಾವೇಶ ಯಶಸ್ವಿಗೊಳಿಸಿದ್ದಾರೆ. ಫ್ಯಾಶಿಸಂ ಭಾರತವನ್ನು ಪ್ರವೇಶಿಸಿದೆಯೋ ಅಥವಾ ಇಲ್ಲವೋ ಎಂಬ ಬೌದ್ಧಿಕ ಗೊಂದಲದ ನಡುವೆ ನರಹಂತಕ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಉಡುಪಿ ಸಮಾವೇಶದಲ್ಲಿ ರಣಕಹಳೆ ಮೊಳಗಿದೆ. ದಾದ್ರಿಯಲ್ಲಿ ಗೋಮಾಂಸದ ಕಾರಣಕ್ಕೆ ಅಖ್ಲಾಕ್‌ರನ್ನು ಕೊಂದ ಹಂತಕನ ಹೆಣಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವಿಸುವ ಈ ದಿನಗಳಲ್ಲಿ, ಮೀರತ್‌ನಲ್ಲಿ ಗಾಂಧಿ ಹಂತಕ ನಾಥೂರಾಮ ಗೋಡ್ಸೆಯ ಪ್ರತಿಮೆಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಜಿಗ್ನೇಶ್ ಮೇವಾನಿ ಉಡುಪಿಗೆ ಬಂದು ಹೊಸ ತಲೆಮಾರಿನ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.
 ಈಗ ಪರಿಸ್ಥಿತಿ ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ ನವಾಝುದ್ದೀನ್ ಸಿದ್ದೀಕಿ ಅವರಿಗೆ ಆತ ಮುಸ್ಲಿಂ ಎಂಬ ಕಾರಣಕ್ಕೆ ಆತನ ಹುಟ್ಟೂರಾದ ಉತ್ತರ ಪ್ರದೇಶದ ಬುದಾನ ಎಂಬ ಊರಿನಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆಯುವ ರಾಮಲೀಲಾ ಉತ್ಸವದಲ್ಲಿ ಪಾಲ್ಗೊಳ್ಳದಂತೆ ದಿಗ್ಬಂಧನ ವಿಧಿಸಿವೆ. ಇದರಿಂದ ತುಂಬಾ ನೊಂದುಕೊಂಡ ಸಿದ್ದೀಕಿ, ನಮ್ಮೂರಿನ ರಾಮಲೀಲಾ ಉತ್ಸವದಲ್ಲಿ ಪಾಲ್ಗೊಳ್ಳುವುದು ನನ್ನ ಬಾಲ್ಯದ ಕನಸಾಗಿತ್ತು. ಮುಂದಿನ ವರ್ಷ ಈ ಅವಕಾಶ ಸಿಗುತ್ತದೋ ಇಲ್ಲವೋ ಕಾಯುತ್ತೇನೆ ಎಂದಿದ್ದಾರೆ. ‘ಬಜರಂಗಿ ಭಾಯ್‌ಜಾನ್’ ಹಿಂದಿ ಚಲನಚಿತ್ರದಲ್ಲಿ ಟಿವಿ ಪತ್ರಕರ್ತನಾಗಿ ಉತ್ತಮ ಅಭಿನಯ ತೋರಿದ ಸಿದ್ದೀಕಿ ಅವರಿಗೆ ಹಿಂದೂ ಧರ್ಮದ ಗುತ್ತಿಗೆ ಹಿಡಿದವರಿಂದ ಮಾಡಲ್ಪಟ್ಟ ಮಾನಸಿಕ ಹಿಂಸೆಯಿದು. ಹಾಡಹಗಲೇ ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿಯವರನ್ನು ಕೊಂದವರಿಗೆ ಒಬ್ಬ ಪ್ರತಿಭಾವಂತ ನಟನನ್ನು ಅವಮಾನಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಕಳೆದ ಎರಡೂವರೆ ದಶಕಗಳಿಂದ ಇವರು ನಡೆಸುತ್ತಲೇ ಬಂದ ಇಂತಹ ಗೂಂಡಾಗಿರಿಯನ್ನು ತಡೆಯಲು ನಮ್ಮ ಪ್ರಭುತ್ವ ವಿಫಲಗೊಂಡಿದೆ. ಪ್ರಭುತ್ವ ವಿಫಲಗೊಳ್ಳುವುದರ ಜೊತೆಗೆ ಸೌಹಾರ್ದಕ್ಕೆ ಹೋರಾಡುವ ನಾವೂ ವಿಫಲಗೊಂಡಿದ್ದೇವೆ. ನಮ್ಮ ನಿಜವಾದ ಶತ್ರು ಯಾರೆಂದು ಗುರುತಿಸಿಕೊಳ್ಳದಿರುವುದೇ ನಮ್ಮ ವೈಫಲ್ಯಕ್ಕೆ ಕಾರಣವಾಗಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ಈವರೆಗಿನ ನಮ್ಮ ಹೋರಾಟ ಅಂತಹ ಯಶಸ್ಸು ಕಂಡಿಲ್ಲ. ಆದರೆ ಬಿಸಿರಕ್ತದ ಯುವಕರ ನೇತೃತ್ವದಲ್ಲಿ ಆರಂಭವಾದ ಉಡುಪಿಯ ಹೋರಾಟ ಭರವಸೆಯನ್ನು ಮೂಡಿಸಿದೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮಗೊಂಡಿದ್ದಾಗಲೇ ಗುಜರಾತ್ ಹತ್ಯಾಕಾಂಡ ನಡೆದದ್ದು ಒಮ್ಮಿಂದೊಮ್ಮೆಲೇ ಸಂಭವಿಸಿದ ಘಟನೆಯಲ್ಲ. ಸಂಘ ಪರಿವಾರದ ಅವಿರತ ಕಾರ್ಯಾಚರಣೆಯಿಂದ ಇವು ಸಂಭವಿಸಿವೆ.
  ಉದಾಹರಣೆಗೆ, 80ರ ದಶಕಕ್ಕೂ ಮುಂಚೆ ವಿವಾದವೇ ಇಲ್ಲದ ಚಿಕ್ಕಮಗಳೂರಿನ ಬಾಬಾ ಬುಡಾನ್‌ಗಿರಿಯನ್ನು ದಕ್ಷಿಣ ಭಾರತದ ಅಯೋಧ್ಯೆಯನ್ನಾಗಿ ಮಾಡಲು ಹೋಗಿ ಸಂಘ ಪರಿವಾರ ಮಲೆನಾಡನ್ನು ಸ್ವಾಧೀನಪಡಿಸಿಕೊಂಡಿತು. ಪ್ರತೀ ವರ್ಷ ದತ್ತಮಾಲೆ ಹೆಸರಿನಲ್ಲಿ ಅದು ನಡೆಸುವ ಕಪಟ ನಾಟಕ ವಿರೋಧಿಸಿ 1999ರಿಂದ ಪ್ರತೀ ವರ್ಷ ಚಿಕ್ಕಮಗಳೂರಿಗೆ ಹೋಗಿ ಪ್ರತಿಭಟನೆ ಮಾಡುತ್ತಲೇ ಬಂದೆವು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, ಅಂದಿನ ಸೆಕ್ಯುಲರ್ ಕಾಂಗ್ರೆಸ್ ಸರಕಾರ ನಮ್ಮನ್ನು ಬಂಧಿಸಿ, ಈ ಕಪಟ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ.ಚಂದ್ರೇಗೌಡರೇ ಬಜರಂಗದಳದ ಕಾರ್ಯಕ್ರಮದಲ್ಲಿ ಅಂಗಿ ಬಿಚ್ಚಿ, ಪುರೋಹಿತರ ಎದುರು ಮಂಡಿಯೂರಿ ಕೂತರು. ಆ ಕಾಲಘಟ್ಟದಲ್ಲೇ ಸರಕಾರದ ಪರೋಕ್ಷ ಬೆಂಬಲದಿಂದ ಸಂಘ ಪರಿವಾರ ಇಲ್ಲಿ ನೆಲೆ ಕಂಡುಕೊಂಡಿತು.
ದೇಶದಲ್ಲಿ ಒಮ್ಮೆಲೇ ಈ ಸ್ಥಿತಿ ನಿರ್ಮಾಣವಾಗಲಿಲ್ಲ. ಸಂಘ ಪರಿವಾರ ಹಳ್ಳಿಹಳ್ಳಿಗಳಲ್ಲಿ ಶಾಖೆಗಳನ್ನು ಆರಂಭಿಸುವಾಗ, ಅಯೋಧ್ಯೆಗೆ ರಥಯಾತ್ರೆ, ಇಟ್ಟಿಗೆ ಯಾತ್ರೆ, ಪಾದುಕೆ ಯಾತ್ರೆ ಮಾಡುವಾಗ ಜಾತ್ಯತೀತ ಪಕ್ಷಗಳಿಂದ ಪ್ರತಿರೊಧ ವ್ಯಕ್ತವಾಗಲಿಲ್ಲ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ, ಸರಕಾರದ ಸಮ್ಮತಿಯಿಂದಲೇ ಅಯೋಧ್ಯೆಯ ಬಾಬರಿ ಮಸೀದಿ ನೆಲಕ್ಕುರುಳಿತು. ಆನಂತರ ರಥಯಾತ್ರೆ ಮಾಡಿ, ಬಿಜೆಪಿ ನೆಲೆ ವಿಸ್ತರಿಸಿಕೊಂಡಿತು. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ದಾವಣಗೆರೆಯಂತಹ ಕಾರ್ಮಿಕ ಹೋರಾಟದ ಕೇಂದ್ರಗಳು ಕೋಮು ಕಲಹದ ತಾಣಗಳಾಗಿ ಮಾರ್ಪಟ್ಟವು. ಒಂದು ಕಾಲದಲ್ಲಿ ದಲಿತ ಸಂಘರ್ಷ ಸಮಿತಿಯ ಚಟುವಟಿಕೆಯ ಕೇಂದ್ರಗಳಾಗಿದ್ದ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲೂ ಕೂಡ ಎಬಿವಿಪಿ ನುಸುಳಿತು. ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲೂ ಇಟ್ಟಿಗೆಯನ್ನು ತಲೆಯ ಮೇಲೆ ಹೊತ್ತುಕೊಂಡು ಅಯೋಧ್ಯೆಗೆ ಹೋದವರನ್ನು ನೋಡಿದ್ದೇನೆ. ವಿಶ್ವ ಹಿಂದೂ ಪರಿಷತ್ತಿಗೆ ನಿಧಿ ಸಂಗ್ರಹಿಸಿಕೊಟ್ಟ ಬ್ಯಾಂಕು ನೌಕರರು ಇದ್ದಾರೆ. ಈ ರೀತಿ ನಮ್ಮ ಕೋಟೆಯೇ ಬಿರುಕು ಬಿಟ್ಟಿದ್ದರಿಂದ ಸಂಘ ಪರಿವಾರ ತನ್ನ ನೆಲೆ ವಿಸ್ತರಿಸಿಕೊಂಡಿತು.
ಈಗಂತೂ ಫ್ಯಾಶಿಸಂ ದಿಕ್ಕಿನಲ್ಲಿ ಭಾರತ ಬಹಳ ದೂರ ಸಾಗಿ ಬಂದಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಜಾತ್ಯತೀತ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವಾಗಿಸಲು ದಾಪುಗಾಲು ಇಟ್ಟಿದೆ. ಇಂತಹ ಸನ್ನಿವೇಶದಲ್ಲೂ ಫ್ಯಾಶಿಸ್ಟ್ ದುರಾಕ್ರಮಣದ ವಿರುದ್ಧ ಜಾತ್ಯತೀತ ಪಕ್ಷಗಳಲ್ಲಿ ಒಗ್ಗಟ್ಟು ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ಎಲ್ಲ ಪ್ರಯೋಗಗಳಿಗೆ ಭಿನ್ನವಾಗಿ ಉಡುಪಿ ಸಮಾವೇಶ ನಡೆದಿದೆ.
ಭಾರತದ ಫ್ಯಾಶಿಸಂ ಯುರೋಪಿನ ಫ್ಯಾಶಿಸಂನಂತೆ ಅಲ್ಲ. ಯುರೋಪಿನ ಹಿನ್ನೆಲೆಯ ಶಾಸ್ತ್ರೀಯ ನಿರೂಪಣೆ ಇಲ್ಲಿ ಅಪ್ರಸ್ತುತ ಅನ್ನಿಸುತ್ತದೆ. ಮನುವಾದವನ್ನು ಮಿಶ್ರಣ ಮಾಡಿಕೊಂಡಿರುವ ಇಲ್ಲಿನ ಫ್ಯಾಶಿಸಂ ಈಗಾಗಲೇ ತನ್ನ ಕಾರ್ಯಾಚರಣೆ ಆರಂಭಿಸಿದೆ. ಇಂತಹ ಕಾರ್ಯಾಚರಣೆಯ ಭಾಗವಾಗಿಯೇ ದನ ಸಾಗಾಟದ ಹೆಸರಿನಲ್ಲಿ ಪ್ರವೀಣ್ ಪೂಜಾರಿಯಂತಹವರ ಕೊಲೆ ನಡೆಯುತ್ತದೆ. ಸಂಘ ಪರಿವಾರದ ಗುರಿ ಬರೀ ಗೋರಕ್ಷಣೆಯಲ್ಲ. ಗೋಮಾಂಸ ರಫ್ತು ವ್ಯಾಪಾರಿಗಳಿಂದ ನಿಧಿ ಸಂಗ್ರಹಿಸುವುದು ಶ್ರೇಣೀಕೃತ ಜಾತಿ ಪದ್ಧತಿಯನ್ನು ದೇಶದ ಮೇಲೆ ಹೇರುವ ಮಸಲತ್ತನ್ನು ನಡೆಸಿದೆ. ಮುಸಲ್ಮಾನರು ಮತ್ತು ಕ್ರೈಸ್ತರ ಮೇಲೆ ದೌರ್ಜನ್ಯವೆಸಗಿದ ಅದು ಈಗ ದಲಿತರನ್ನು ಮುಗಿಸಲು ಹೊರಟಿದೆ.
ಈ ದೇಶದ ಮೂಲನಿವಾಸಿಗಳಾದ ದಲಿತರ ಸಾಂಸ್ಕೃತಿಕ ಅಸ್ಮಿತೆಗಳ ಮೇಲೆ ಈಗಾಗಲೇ ದಾಳಿ ಆರಂಭಿಸಿದೆ. ಕೇರಳದ ಜನತೆ ದ್ರಾವಿಡ ರಾಜ ಬಲಿ ಚಕ್ರವರ್ತಿ ನೆನಪಿಗಾಗಿ ಆಚರಿಸುವ ಓಣಂ ಹಬ್ಬವನ್ನು ವಾಮನ ಜಯಂತಿಯಾಗಿ ಬದಲಿಸಲು ಹುನ್ನಾರ ನಡೆಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವಾಮನ ಜಯಂತಿಯ ಶುಭ ಸಂದೇಶ ನೀಡಿ, ಕೇರಳದಲ್ಲಿ ತೀವ್ರ ಪ್ರತಿರೋಧ ಎದುರಿಸಬೇಕಾಯಿತು.
 ಆರ್ಯರ ಆಕ್ರಮಣದ ವಿರುದ್ಧ ಬಂಡೆದ್ದ ರಾವಣ, ಮಹಿಷಾಸುರರಂತಹ ರಾಜರನ್ನು ರಾಕ್ಷಸರು ಎಂದು ಕರೆದು ನಾನಾ ಕುತಂತ್ರಗಳ ಮೂಲಕ ಅವರನ್ನು ಮುಗಿಸಿ, ಅದಕ್ಕೆ ದೈತ್ಯ ಸಂವಾದ ಎಂದು ಹೆಸರಿಟ್ಟರು. ಈಗ ಭಾರತದ ಮೂಲನಿವಾಸಿಗಳ ಈ ಸಂಕೇತಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ನಿಲ್ಲಿಸಿರುವ ಮಹಿಷಾಸುರನ ಪ್ರತಿಮೆ ತೆಗೆದುಹಾಕಲು ವಿಶ್ವ ಹಿಂದೂ ಪರಿಷತ್ತು ಒತ್ತಾಯಿಸಿದೆ. ಇನ್ನೊಂದು ಕಡೆ, ಸಾಮ್ರಾಟ ಅಶೋಕನ ಕಾಲದಲ್ಲಿ ಭಾರತದ ಅವನತಿ ಆರಂಭವಾಯಿತೆಂದು ಸೂಲಿಬೆಲೆಯಂತಹ ಕೋಡಂಗಿಗಳು ಪ್ರಚಾರ ಮಾಡುತ್ತಿದ್ದಾರೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಶೋಕನನ್ನು ಮುಂಚಿನಿಂದಲೂ ದ್ವೇಷಿಸುತ್ತ ಬಂದ ಸಂಘ ಪರಿವಾರ ರಾಷ್ಟ್ರಧ್ವಜದಲ್ಲಿರುವ ಅಶೋಕಚಕ್ರವನ್ನು ತೆಗೆದು ಹಾಕಲು ಒತ್ತಾಯಿಸುತ್ತಲೇ ಇದೆ. ಆದರೆ ಡಾ. ಅಂಬೇಡ್ಕರ್ ಮತ್ತು ನೆಹರೂ ಅವರು ಪಟ್ಟು ಹಿಡಿದು ಅಶೋಕ ಚಕ್ರವನ್ನು ರಾಷ್ಟ್ರಧ್ವಜದಲ್ಲಿ ಸೇರಿಸಿದರು. ದಲಿತ, ಹಿಂದುಳಿದ ಸಮುದಾಯದ ಮೇಲೆ ಮನುವಾದಿಗಳ ದಾಳಿ ಈಗ ಆರಂಭವಾಗಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಿಸಿ, ಈಗ ಆತ ದಲಿತನೇ ಅಲ್ಲ ಎಂಬ ಕತೆ ಕಟ್ಟಲಾಗುತ್ತಿದೆ. ಖೈರ್ಲಾಂಜಿಯಲ್ಲಿ ದಲಿತ ತಾಯಿ, ಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲೂ ಅಪರಾಧಿಗಳಿಗೆ ಸಿಗಬೇಕಾದ ಶಿಕ್ಷೆ ಸಿಗಲಿಲ್ಲ. ಇದು ಇಂದಿನ ಸ್ಥಿತಿ. ಬರಲಿರುವ ದಿನಗಳಲ್ಲಿ ಡಾ. ಅಂಬೇಡ್ಕರ್ ರೂಪಿಸಿರುವ ಸಂವಿಧಾನವನ್ನು ರದ್ದುಗೊಳಿಸುವ ಮತ್ತು ಮೀಸಲಾತಿ ತೆಗೆದು ಹಾಕುವ ಮಸಲತ್ತೂ ನಡೆಯಬಹುದು. ದೇಶ ಹಂತಹಂತವಾಗಿ ಫ್ಯಾಶಿಸಂನತ್ತ ಸಾಗುತ್ತಿದೆ. ಸಂಘ ಪರಿವಾರದ ಮನುವಾದಿ ಫ್ಯಾಶಿಸ್ಟ್ ಹುನ್ನಾರಗಳ ವಿರುದ್ಧ ಅಂತಿಮ ಸಮರಕ್ಕೆ ರಣರಂಗ ಈಗ ಸಜ್ಜಾಗಿದೆ. ಉಡುಪಿಯಲ್ಲಿ ನಡೆದ, ಬಿಸಿರಕ್ತದ ಯುವಕರು ಸಂಘಟಿಸಿದ ಸಮಾವೇಶ ಈ ದೇಶವನ್ನು ಮನುವಾದಿ ಫ್ಯಾಶಿಸ್ಟ್ ಗಂಡಾಂತರದಿಂದ ಪಾರು ಮಾಡುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಾಗಿದೆ. ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿ, ರಕ್ಷಿಸುವ ಜವಾಬ್ದಾರಿ ದಲಿತ, ಅಲ್ಪಸಂಖ್ಯಾತ ಸಮುದಾಯದ ಮೇಲಿದೆ. ನೀಲಿ ಬಾವುಟ ಮತ್ತು ಕೆಂಬಾವುಟ ಜೊತೆಜೊತೆಯಾಗಿ ಅಪಾಯದಲ್ಲಿರುವ ಭಾರತಕ್ಕೆ ಭರವಸೆಯ ಬೆಳಕು ನೀಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News