ಧರ್ಮ ಗುರಾಣಿಯಾಗಬಾರದು ರಾಜಕಾರಣಕ್ಕೆ ಬಳಕೆಯಾಗಬಾರದು ಕೆ.ಎಸ್.ನಿಸಾರ್ ಅಹಮದ್

Update: 2016-10-19 05:52 GMT

ಮಾನವೀಯತೆಯನ್ನು ಯಾರು ಮರೆಯುತ್ತಾರೋ, ಅವರು ಮನುಷ್ಯರಾಗುವುದಿಲ್ಲ. ಮನುಷ್ಯತ್ವವನ್ನು ಮರೆತು ಮಾಡೋ ಕೃತ್ಯಗಳು ಅಕ್ಷಮ್ಯ ಅಪರಾಧ. ಇವತ್ತು ಪ್ರಪಂಚದ ನಾನಾ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಕಾಣುತ್ತಿದ್ದೇವೆ. ಅಮಾಯಕರನ್ನು ಕೊಲ್ಲುವ ತೀವ್ರವಾದ, ಉಗ್ರವಾದ ಧರ್ಮವಲ್ಲ. ಅವರೆಲ್ಲ ಧರ್ಮದ ಅವಹೇಳನ ಮಾಡುವವರು. ಯಾರೋ ಒಬ್ಬ ದುಷ್ಟನಾದರೆ, ಕೆಟ್ಟದು ಮಾಡಿದರೆ ಇಡೀ ಸಮುದಾಯವನ್ನೇ ಕೆಟ್ಟದಾಗಿ ನೋಡುವುದು, ಅದನ್ನು ಧರ್ಮಕ್ಕೆ ತಳಕು ಹಾಕುವುದು ತಪ್ಪು. ಅದು ಹಾಲು ಒಡೆದುಹೋದರೆ ಹಸುವನ್ನು ದೂಷಿಸಿದಂತೆ!


ವಾರ್ತಾಭಾರತಿ: ಮನೆ ಮಾತು ಉರ್ದು, ಕಲಿತದ್ದು ಕನ್ನಡ, ಆಗಿದ್ದು ಕವಿ... ಹೇಗೆ?
ನಿಸಾರ್ ಅಹಮದ್: ನಾನು ಹುಟ್ಟಿದ್ದು ದೇವನಹಳ್ಳಿಯಲ್ಲಿ, ಬೆಳದದ್ದು ದೊಡ್ಡ ಮಾವಳ್ಳಿಯಲ್ಲಿ. ನಮ್ಮ ಮನೆ ಸುತ್ತಮುತ್ತ ನಾನೂರು ಐನೂರು ಮುಸ್ಲಿಂ ಕುಟುಂಬಗಳಿದ್ದವು. ಆ ಕುಟುಂಬದ ಮಕ್ಕಳೆಲ್ಲ ಉರ್ದು ಶಾಲೆಗೆ ಹೋಗುತ್ತಿದ್ದರು. ನಮ್ಮ ತಂದೆ ಸರಕಾರಿ ಸೇವೆಯಲ್ಲಿದ್ದರು, ಭವಿಷ್ಯದಲ್ಲಿ ಕನ್ನಡಕ್ಕೆ ಬೆಲೆ ಬರಬಹುದು, ಸರಕಾರಿ ಕೆಲಸ ಸಿಗಬಹುದು ಎಂದು ನನಗೆ ಕನ್ನಡ ಕಲಿಸಿದರು. ನಾನು, ನನ್ನ ತಮ್ಮ ಮತ್ತೊಬ್ಬ- ಮೂವರು ಮಾತ್ರ ಕನ್ನಡ ಶಾಲೆಗೆ ಹೋಗುತ್ತಿದ್ದ ಮುಸ್ಲಿಂ ಹುಡುಗರು.
ಸ್ವಾತಂತ್ರಪೂರ್ವದ ಆ ಕಾಲದಲ್ಲಿ ಮನರಂಜನೆ ಅಂದರೆ, ಮನೆಯ ಪಕ್ಕದಲ್ಲಿದ್ದ ಲಾಲ್‌ಬಾಗ್. ಕಾಂಪೌಂಡ್ ಹಾರಿ ಒಳಗೆ ಹೋದರೆ, ತುಂಬಿದ ಕೆರೆಯಲ್ಲಿ ಈಜಾಡಿಕೊಂಡು, ಹಕ್ಕಿಗಳ ಕಲರವ ಕೇಳಿಕೊಂಡು, ಗಿಡ ಮರ ಹೂವುಗಳ ಜೊತೆ ಮಾತಾಡಿಕೊಂಡು... ಸಂಜೆಯವರೆಗೆ, ದೇಹ ದಣಿಯುವವರೆಗೆ ಕುಣಿದು ಕುಪ್ಪಳಿಸಿ ಸುಸ್ತಾಗಿ ಬರುತ್ತಿದ್ದೆವು.
 
ಸ್ಕೂಲಲ್ಲಿ ಕಮಲಮ್ಮ ಮೇಡಂ, ಧರಣಿ ಮಂಡಲ... ಹಾಡನ್ನು ಸೊಗಸಾಗಿ ಹಾಡುತ್ತಿದ್ದರು. ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತಿತ್ತು. ಮನೆಯಲ್ಲಿ, ತಂದೆ ಪ್ರತಿ ದಿನ ರಾತ್ರಿ ಅರೇಬಿಯನ್ ನೈಟ್ಸ್ ಕತೆ ಹೇಳುತ್ತಿದ್ದರು. ಹೈಸ್ಕೂಲಲ್ಲಿ ಎಲ್.ಗುಂಡಪ್ಪ, ಎಂ.ವಿ.ಸೀ, ರಾಜರತ್ನಂ, ವೀ.ಸಿ. ಗುರುಗಳಾಗಿ ಸಿಕ್ಕರು. ಜೊತೆಗೆ ಪಠ್ಯಗಳಲ್ಲಿದ್ದ ಕುವೆಂಪು, ಮಾಸ್ತಿ, ಬೇಂದ್ರೆ, ಪುತಿನ, ಬಿಎಂಶ್ರೀಗಳ ಪದ್ಯಗಳು ಬಾಯಿಪಾಠವಾದವು. ನನ್ನ ಕಲ್ಪನಾಲೋಕ ವಿಸ್ತರಿಸುತ್ತಾ ಹೋಯಿತು. ಆ ಸಾಹಿತ್ಯಕ ವಾತಾವರಣ ನನ್ನಲ್ಲೂ ಬರೆಯಬೇಕೆಂಬ ಪ್ರೇರಣೆಗೆ ಪುಷ್ಟಿ ನೀಡಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಹುಟ್ಟಿನಿಂದ ಬಂದ ಒಂದು ಕಿಡಿ ನನ್ನಲ್ಲಿ ಇತ್ತು ಅಂತ ಕಾಣುತ್ತೆ, ಅದು ನನ್ನನ್ನು ಬರೆಸಿತು. ನನಗೆ ಸಾವು, ನೋವು ಕಂಡರೆ ಮನ ಕರಗುತ್ತಿತ್ತು, ಕರುಣೆ, ಕನಿಕರ ಉಕ್ಕಿ ಬರುತ್ತಿತ್ತು. ನಾನು ಮೂಲತಃ ಭಾವಜೀವಿ. ಅಂತರ್ಮುಖಿ. ಲಾಲ್‌ಬಾಗ್ ನನ್ನ ಅಂತರ್ಮುಖತೆಗೆ, ಏಕಾಂತಕ್ಕೆ ಪ್ರಾಶಸ್ತ್ಯವಾದ ಸ್ಥಳವಾಗಿತ್ತು. ಹಾಗೆಯೇ ಗಾಂ ಬಜಾರು, ಅ.ನ.ಸುಬ್ಬರಾಯರ ಕಲಾಭವನ... ಇದು ಲೋಕಾಂತ. ಬಾಹ್ಯ ಬೆಳವಣಿಗೆಗೆ ಗಾಂಬಜಾರು, ಆಂತರಿಕ ಚಿಂತನೆಗೆ ಲಾಲ್‌ಬಾಗ್. ಇವರೆಡೂ ನನ್ನ ಭಾವನೆಗಳಿಗೆ ಇಂಬು ನೀಡಿ ಬರೆಯಲು ಪ್ರೇರೇಪಿಸಿದವು.


 ವಾರ್ತಾಭಾರತಿ: ಜನಪ್ರಿಯ ಕವಿಯಾದ ಬಗೆ ಹೇಗೆ?

 ನಿಸಾರ್ ಅಹಮದ್: 1952-53ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ನಾನು ಬರೆದ ಕವನಗಳನ್ನು ಎಲ್.ಗುಂಡಪ್ಪ ಮೇಸ್ಟ್ರಿಗೆ, ಅಳುಕಿನಿಂದಲೇ ನೋಡಲು ಕೊಟ್ಟಿದ್ದೆ. ಅವರು ಮುಖ್ಯ ಅತಿಥಿಗಳಾಗಿ ಹೋಗಿದ್ದ ನಾಡಹಬ್ಬದ ಕಾರ್ಯಕ್ರಮದ ಭಾಷಣದಲ್ಲಿ ನನ್ನ ಕವನಗಳ ಬಗ್ಗೆ ಮಾತಾಡಿ, ನನ್ನನ್ನು ಹೀರೋ ಮಾಡಿದರು. ಆಗ ಬೆಂಗಳೂರಿನಲ್ಲಿ ಸಾಹಿತ್ಯಕ ವೇದಿಕೆಗಳಿದ್ದುದೇ ಮೂರು- ಒಂದು ಕನ್ನಡ ಸಾಹಿತ್ಯ ಪರಿಷತ್ತು, ಇನ್ನೊಂದು ಜಿ.ಪಿ.ರಾಜರತ್ನಂರ ಕರ್ನಾಟಕ ಸಂಘ, ಮತ್ತೊಂದು ಮಲ್ಲೇಶ್ವರಂ ಸಾಹಿತ್ಯ ಸಂಘ. ಜಿ.ಪಿ.ರಾಜರತ್ನಂರ ನೇತೃತ್ವದಲ್ಲಿ ನಡೆಯು ತ್ತಿದ್ದ ಪ್ರತಿಷ್ಠಿತ ಕರ್ನಾಟಕ ಸಂಘಕ್ಕೆ ನನ್ನನ್ನು ಕಾರ್ಯದರ್ಶಿಯನ್ನಾಗಿ ಮಾಡಿದರು. ನನ್ನ ಅವಯಲ್ಲಿ ಸಂಸರ ಬಗ್ಗೆ ವಿಚಾರಸಂಕಿರಣ ಆಯೋಜಿಸಿದೆ. ಅಲ್ಲಿಗೆ ಹೆಸರಾಂತ ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು, ಪತ್ರಕರ್ತರು... ಹೀಗೆ ಎಲ್ಲರೂ ಬರುತ್ತಿದ್ದರು. ಅವರೊಂದಿಗೆ ಬೆರೆಯುವ ಸುಸಂದರ್ಭ ತಾನೇ ತಾನಾಗಿ ಒದಗಿ ಬಂತು. ವೈಎನ್‌ಕೆ ಪರಿಚಯವಾಗಿದ್ದು ಅಲ್ಲಿಯೇ, ಅವರಿಂದ ಲೆಫ್ಟಿಸ್ಟ್ ಥಿಂಕರ್ಸ್‌, ನೆರೂಡ ಪರಿಚಯವಾದರು. 1956-57ರಲ್ಲಿ ಬೆಂಗಳೂರಿಗೆ ಆಕಾಶವಾಣಿ ಬಂತು. ಆಕಾಶವಾಣಿಯಲ್ಲಿ ರಾಘವೇಂದ್ರ ಇಟಗಿ ಅಂತಿದ್ರು, ಪ್ರೋಗ್ರಾಂ ಎಕ್ಸಿಕ್ಯುಟಿವ್. ಅವರು ‘ಕಾವ್ಯಧಾರೆ’ ಎಂಬ ಕಾರ್ಯಕ್ರಮದಡಿ ಕಾಲೇಜ್ ವಿದ್ಯಾರ್ಥಿಗಳಿಂದ ಕಾವ್ಯವಾಚನ ಮಾಡಿಸುತ್ತಿದ್ದರು. ಅಲ್ಲಿಗೆ ನಾನು, ಲಂಕೇಶ್, ನಾಡಿಗ ಹೋಗುತ್ತಿದ್ದೆವು. ನನ್ನ ಕವನ ವಾಚನ ಅವರ ರೇಟಿಂಗ್‌ನಲ್ಲಿ ಟಾಪ್‌ನಲ್ಲಿತ್ತು, 2 ತಿಂಗಳಿಗೊಂದು ಸಲ ಕರೆದು ವಾಚಿಸುತ್ತಿದ್ದರು. 15 ನಿಮಿಷದ ಕವನಕ್ಕೆ 15 ರೂಪಾಯಿ ಸಂಭಾವನೆ ಕೊಡುತ್ತಿದ್ದರು. ಅದು ಆ ಕಾಲಕ್ಕೆ ಬಹಳ ದೊಡ್ಡ ಮೊತ್ತ. ಅದೇ ಸಮಯಕ್ಕೆ ಸರಿಯಾಗಿ ಭಾರತದ ಮೇಲೆ ಚೈನಾ ಆಕ್ರಮಣ ಮಾಡಿತು.

ಆಕಾಶವಾಣಿಯಲ್ಲಿ ಯುದ್ಧಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಕನ್ನಡದ ಮೊದಲ ಯುದ್ಧಕವಿ ಯಾರು ಗೊತ್ತೇನು- ಕೆ.ಎಸ್.ನರಸಿಂಹಸ್ವಾಮಿಗಳು. ಇವರು ಯುದ್ಧ ಗೀತೆಗಳನ್ನು ರಚಿಸುತ್ತಿದ್ದರು. ಇವರನ್ನು ಬಿಟ್ಟರೆ ಸಿದ್ದಯ್ಯ ಪುರಾಣಿಕ್, ರಾಜರತ್ನಂ ಮತ್ತು ನಾನು. ಒಂದು ಸಲ ಆಕಾಶವಾಣಿಯ ಮುಖ್ಯಸ್ಥರು ನನ್ನನ್ನು ಕರೆದು, ಒಂದು ಯುದ್ಧಗೀತೆ ಬರೆದುಕೊಡಿ, ಸ್ಕಿಟ್ ತಯಾರು ಮಾಡೋಣ ಎಂದರು. ನನಗೆ ಅಲ್ಲಿಯವರೆಗೆ ಅದನ್ನು ಹಾಡುವ ಬಗೆಯೇ ಗೊತ್ತಿರಲಿಲ್ಲ. ‘ಹೋಗಿ ಬಾ ಸುಂದರ’ ಎಂಬ ಗೀತೆ ಬರೆಯಲು ಸುಮಾರು ದಿನ ತೆಗೆದುಕೊಂಡೆ. ಟಿ ಕುಡಿಯೋದು, ಸಿಗರೇಟ್ ಸೇದೋದು. ರೂಮಿನಲ್ಲಿ ರಾತ್ರಿಯಿಡೀ ಒಬ್ಬನೇ ಕೂತು ಬರೆಯೋದು. ಇದನ್ನು ನೋಡಿ ನಮ್ಮಮ್ಮ, ‘ಎ ಬೊಮ್ಮನ್ ಕಾ ಬಚ್ಛಾ ಕ್ಯಾ ಲಿಕಾ’ ಎಂದು ಬಯ್ಕಾಂಡು ತಿರುಗಾಡೋರು. ಅಂತೂ ಬರೆದುಕೊಟ್ಟೆ. ಅದನ್ನು ಅವರು ಪಿ.ಕಾಳಿಂಗರಾವ್ ಮತ್ತು ಎಂ.ಎನ್.ರತ್ನ ನಾಯಕ-ನಾಯಕಿ ಪಾತ್ರದಲ್ಲಿಟ್ಟು ಸ್ಕಿಟ್ ತಯಾರಿಸಿ ದರು. ಅದು ಆ ಕಾಲಕ್ಕೆ ಭಾರೀ ಫೇಮಸ್ಸಾಗಿತ್ತು. ಆಕಾಶವಾಣಿ ಆಗ ಬಹಳ ಪವರ್ ಪುಲ್ ಮೀಡಿಯಾ. ಕರ್ನಾಟಕದಲ್ಲಿ ನಾನು ಹೆಸರು ಮಾಡಿದ್ದೇ ಆಕಾಶವಾಣಿಯಿಂದ.

ವಾರ್ತಾಭಾರತಿ: ನವೋದಯ, ನವ್ಯ- ಎರಡನ್ನೂ ಒಗ್ಗಿಸಿಕೊಂಡ ಬಗೆ?

ನಿಸಾರ್ ಅಹಮದ್: ಒಂದು ಕಡೆಯಿಂದ ಕುವೆಂಪು, ಮಾಸ್ತಿ, ಬೇಂದ್ರೆ, ಪುತಿನ, ರಾಜರತ್ನಂರ ಪ್ರಭಾವ; ಮತ್ತೊಂದು ಕಡೆ ಗುರುಗಳಿಂದ ತುಂಬುಹೃದಯದ ಪ್ರೋತ್ಸಾಹ. ಜೊತೆಗೆ ನನ್ನ ಅಂತ ರ್ಮುಖಿ ವ್ಯಕ್ತಿತ್ವ. ಇವೆಲ್ಲವೂ ಸಹಜವಾಗಿಯೇ ನನ್ನನ್ನು ನವೋದಯದತ್ತ ಆಕರ್ಷಿಸಿದ್ದವು. ನನಗೂ ರಮ್ಯತೆ ಬಗ್ಗೆ ಒಲವಿತ್ತು. ಹಾಗಾಗಿ ನವೋದಯ ಪ್ರಕಾರದಲ್ಲೂ ಸಾಕಷ್ಟು ಕವನಗಳನ್ನು ರಚಿಸಿದೆ. ಅದೇ ಸಮಯಕ್ಕೆ ಸರಿಯಾಗಿ ಗೋಪಾಲಕೃಷ್ಣ ಅಡಿಗರ ‘ಚಂಡಮದ್ದಳೆ’ ಕವನ ಸಂಕಲನ ಬಿಡುಗಡೆಯಾಗಿ ನವ್ಯದ ಶಕೆ ಶುರುವಾಗಿತ್ತು. ನಮ್ಮ ಮೇಸ್ಟ್ರಾದ ಪ್ರೊ.ಕೆ.ನರಸಿಂಹಮೂರ್ತಿ ಗಳು ಅಡಿಗರನ್ನು ಪರಿಚಯಿಸಿದರು. ಅಡಿಗರು ನಮ್ಮನ್ನು ಸ್ನೇಹಿತರಂತೆ ಕಂಡು ಸಿಗರೇಟ್ ಕೊಡುತ್ತಿದ್ದರು. ಅದೊಂದು ರೀತಿಯ ಪ್ರಭಾವ. ಆ ಮೂಲಕ ನವ್ಯ ನನ್ನನ್ನು ಒಳಗೆಳೆದು ಕೊಂಡಿತ್ತು. ಜೊತೆಗೆ ಸಮಕಾಲೀನರಾದ ಲಂಕೇಶ್, ಸುಮತೀಂದ್ರ ನಾಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಚಂಪಾ.. ಎಲ್ಲರೂ ನವ್ಯ ಪ್ರಕಾರದಲ್ಲಿ ಗುರುತಿಸಿ ಕೊಂಡದ್ದು, ನನ್ನನ್ನೂ ಪ್ರೇರೇಪಿಸಿತು. ಅದನ್ನೂ ಬರೆದೆ. ಒಂದೆರಡು ಕವನ ಸಂಕಲನಗಳು ಪ್ರಕಟಗೊಂಡವು. ನವೋದಯ ಬೇರು, ನವ್ಯ ಚಿಗುರು. ಒಂದು ರಮ್ಯತೆ, ಮತ್ತೊಂದು ವೈಚಾರಿಕತೆ. ಕೆಲವರಿಗೆ ರಮ್ಯತೆ ಇಷ್ಟ, ಕೆಲವರಿಗೆ ವೈಚಾರಿಕತೆ ಇಷ್ಟ. ನನ್ನೊಳಗೆ ಎರಡೂ ಇದ್ದದ್ದು ನನ್ನ ಅದೃಷ್ಟ.
 ವಾರ್ತಾಭಾರತಿ: ನಿಮ್ಮ ಸಮಕಾಲೀನರೊಂದಿಗಿನ ಬುದ್ಧಿಗುದ್ದಾಟ ಹೇಗಿತ್ತು?

ನಿಸಾರ್ ಅಹಮದ್: ಅಯ್ಯೋ... ಅದೊಂದು. ಆಕಾಶವಾಣಿಗೆ ಪದ್ಯ ಓದೋಕೆ ಕರೆಯೋರಲ್ಲ, ನನ್ನ ಕವನ ವಾಚನ ಜನಪ್ರಿಯವಾಗಿ, ಮತ್ತೆ ಮತ್ತೆ ಕರೆದು ವಾಚಿಸಿ, ಸಂಭಾವನೆ ಕೊಡುತ್ತಿದ್ದರು. ಆದರೆ ಲಂಕೇಶ್ ಮತ್ತು ನಾಡಿಗರನ್ನು ಹೆಚ್ಚಾಗಿ ಕರೆಯುತ್ತಿರಲಿಲ್ಲ. ಅವರ ರೇಟಿಂಗ್ ಇರಲಿಲ್ಲ. ಕೈ ತಪ್ಪಿದ ಅವಕಾಶ ಮತ್ತು ಅವಮಾನವನ್ನು ಅವರು ನನ್ನನ್ನು ಮಾಸ್ ಕವಿ ಎಂದು ಮೂದಲಿಸುವ ಮೂಲಕ ತೀರಿಸಿಕೊಳ್ಳುತ್ತಿದ್ದರು. ಒಳಗೊಳಗೆ ಹೊಟ್ಟೆ ಉರಿದುಕೊಂಡು ಸಾಯುತ್ತಿದ್ದರು. ಲಂಕೇಶನಂತೂ, ‘ಬಜಾರು ಮಂದಿಗೆಲ್ಲ, ಮಾಬ್‌ಗೆಲ್ಲ ಬರಕೊಂಡು, ಈಡಿಯಟ್, ಏನಯ್ಯಿ ನೀನು’ ಎಂದು ಮುಖಕ್ಕೆ ಹೊಡೆ ದಂತೆಯೇ ಹೇಳಿಬಿಡುತ್ತಿದ್ದ. ತುಂಬಾ ಒರಟ. ಆದರೆ ಹೃದಯವಂತ, ಸೃಜನಶೀಲ ಪ್ರತಿಭಾವಂತ. ಯಾರೋ ಬಸವ ಸಮಿತಿಯವರು ಕೇಳಿದ ರೆಂದು ಬಸವಣ್ಣನ ಮೇಲೊಂದು ಪದ್ಯ ಬರೆದಿದ್ದೆ, ಇನ್ಯಾರಿಗೋ ಪುರಂದರದಾಸರ ಮೇಲೆ ಬರೆದುಕೊಟ್ಟಿದ್ದೆ. ಅದಕ್ಕೂ ಲಂಕೇಶ, ‘ಯಾಕೆ ಇವರ ಮೇಲೆಲ್ಲ ಬರೀತಿಯ. ಇಂಟಲೆಕ್ಚುಯಲ್ ಬರವಣಿಗೇನ ಕಳಕೋತಿಯ’ ಎಂದು ಬುದ್ಧಿ ಹೇಳುತ್ತಿದ್ದ. ನಾನು ‘ಹೌದಯ್ಯ, ನನ್ನಿಷ್ಟ’ ಎಂದು ವಾಗ್ವಾದಕ್ಕೆ ಬೀಳುತ್ತಿದ್ದೆ.
   
ಲಂಕೇಶ ಕೆಟ್ಟ ಟೀಚರ್, ಕೆಟ್ಟದಾಗಿ ಪದ್ಯ ಓದುತ್ತಿದ್ದ, ಉಚ್ಚಾರ ಸರಿ ಇರಲಿಲ್ಲ. ಸಿಡುಕು ಸ್ವಭಾವ ಬೇರೆ. ಇನ್ನೊಬ್ಬನದು ಇನ್ನೊಂದು ರೀತಿ, ಅದನ್ನು ಹೇಳದಿರುವುದೇ ಒಳ್ಳೇದು ಬಿಡಿ. ಆಶ್ಚರ್ಯವೆಂದರೆ, ನಾವು ಮೂರೂ ಜನ ಒಟ್ಟಿಗೆ ಸೇರಿದರೆ ಬಿಯರ್ ಕುಡಿಯುತ್ತಿದ್ದೆವು, ಹರಟೆ ಹೊಡೆಯುತ್ತಿದ್ದೆವು, ಬುದ್ಧಿಗೆ ಸಾಣೆ ಹಿಡಿದುಕೊಳ್ಳುತ್ತಿದ್ದೆವು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲೊಂದು ಕವಿಗೋಷ್ಠಿ, ಬೇಂದ್ರೆ ಅಧ್ಯಕ್ಷರು. ಘಟಾನುಘಟಿ ಕವಿಗಳೆಲ್ಲ ಪದ್ಯ ಓದಿದರು. ನಾನೇ ಕೊನೆಯವನು. ಅಂಜುತ್ತಾ, ಅಳುಕುತ್ತಾ ಬೇಂದ್ರೆ ಕಾಲು ಮುಟ್ಟಿ ನಮಸ್ಕರಿಸಿ ಓದಿದೆ. ಪದ್ಯ ಕೇಳಿಸಿಕೊಂಡ ಬೇಂದ್ರೆ ಕರೆದರು. ಹೋದೆ, ‘ಇವ, ಇವ ನಿಸಾರ ಅಲ್ಲ, ಸಾರ. ಅಹಮತ್, ಮದ ಇವನಲ್ಲಿಲ್ಲ. ಬೆಳೀತಾನೆ, ಬೆಳೀತಾನೆ’ ಎಂದು ಬಾಯ್ತುಂಬ ಹರಸಿದರು. ಇದು ಕೂಡ ಲಂಕೇಶ ಮತ್ತು ನಾಡಿಗನ ಹೊಟ್ಟೆಯುರಿಗೆ, ಮೂದಲಿಕೆಗೆ ಕಾರಣವಾಯಿತು. ಅವರು ಮೂದಲಿಸಿದರೂ ನಾನು ಅವರೊಂದಿಗೆ ಕದನಕ್ಕೆ ಇಳಿಯಲಿಲ್ಲ. ನನ್ನದೇ ಆದ ಮಾರ್ಗದಲ್ಲಿ ನನ್ನ ನೋವನ್ನು, ವಿರೋಧವನ್ನು ಅಭಿವ್ಯಕ್ತಿಸಿದೆ... ನಿಮ್ಮಿಳಗಿದ್ದೂ ನಿಮ್ಮಂತಾಗದೆ ಎಂಬ ಪದ್ಯ ಬರೆದದ್ದು ಆಗಲೇ. ಈ ಕವನದಲ್ಲಿ ನನ್ನೊಳಗಿನ ತುಮುಲ, ತಳಮಳ, ತಾಕಲಾಟವೆಲ್ಲ ತೆರೆದುಕೊಂಡಿದೆ. ಇದು ನನ್ನ ಪ್ರತಿರೋಧದ ಕವಿತೆ. ಅದೊಂದೇ ಅಲ್ಲ, ಇಬ್ಬಂದಿ, ನಾನೆಂಬ ಪರಕೀಯ, ರಂಗೋಲಿ ಮತ್ತು ಮಗ, ಸವತಿ ಮಕ್ಕಳ ಹಾಗೆ, ಅಮ್ಮ ಆಚಾರ ನಾನು.. ಎಂಬ ಕವನಗಳನ್ನೂ ಬರೆದೆ. ಇದನ್ನು ಸಾಹಿತ್ಯಕ ಭಾಷೆಯಲ್ಲಿ ಕೆಲ ವಿಮರ್ಶಕರು ಅನ್ಯಪ್ರಜ್ಞೆ ಎಂದು ವಿಮರ್ಶಿಸಿದ್ದೂ ಇದೆ. ಬುದ್ಧಿಜೀವಿಗಳಿಗೂ ಬರೆಯೋಣ... ನನ್ನ ಪ್ರಕಾರ ಕವಿಯಾದವನು ಜನಸಾಮಾನ್ಯರಿಗೂ ಬರೆಯಬೇಕು, ಅದರಿಂದ ನಮ್ಮ ಸಮಾಜಕ್ಕೆ ಏನಾದ್ರು ಆಗಬೇಕು, ಮಾನವೀಯ ವೌಲ್ಯಗಳನ್ನು ಉದ್ದೀಪಿಸಬೇಕು ಎನ್ನುವುದು ನನ್ನ ಆಶಯವಾಗಿತ್ತು.

 ವಾರ್ತಾಭಾರತಿ: ಕರ್ನಾಟಕದ ಸಂದರ್ಭದಲ್ಲಿ ನೀವು ಸಾಮಾಜಿಕ ಚಳವಳಿ ಗಳೊಂದಿಗೆ ಗುರುತಿಸಿಕೊಂಡಿದ್ದು ಕಡಿಮೆಯಲ್ಲವೆ?

 ನಿಸಾರ್ ಅಹಮದ್: ಹೌದು. ನಿಮಗೆ ಮೊದಲೇ ಹೇಳಿದೆ.... ನಾನು ಅಂತರ್ಮುಖಿ, ಭಾವಜೀವಿ ಅಂತ. ನಾನು ನನ್ನ ಭಾವನೆಗಳನ್ನು ಅಭಿವ್ಯಕ್ತಿಸಲು ಬಳಸಿಕೊಂಡದ್ದು ಬರವಣಿಗೆಯನ್ನು. ಏಕೆಂದರೆ ನಾನು ಕುವೆಂಪು, ಡಿವಿಜಿ, ಪುತಿನರ ಪ್ರಭಾವಕ್ಕೊಳಗಾದವನು. ಆಡಂಬರ, ಆರ್ಭಟ, ಅಬ್ಬರ ನನಗೆ ಹಿಡಿಸಲ್ಲ. ಸಮಾಜಕ್ಕೆ ಒಳಿತಾಗುವ ಇಷ್ಯೂ ಇದ್ದಾಗ ಹೋಗಬೇಕು ಅನ್ನೋದಿದೆ. ಆದರೆ ಅದು ನನ್ನ ಬರವಣಿಗೆಯಲ್ಲಿಯೇ ಬಂದಿದೆ. ಟಾಲ್‌ಸ್ಟಾಯ್, ರವೀಂದ್ರನಾಥ ಠಾಗೂರ್ ಕೂಡ ಅಂತರ್ಮುಖಿಗಳು. ಏಕಾಂತದಲ್ಲಿ ಬರೆದವರು. ವಾರ್ತಾಭಾರತಿ: ಕನ್ನಡದ ಕವಿ ನೀವು, ಇವತ್ತು ಇಂಗ್ಲಿಷ್ ಅನ್ನದ ಭಾಷೆಯಾಗಿರು ವುದನ್ನು ಹೇಗೆ ವಿಶ್ಲೇಷಿಸುತ್ತೀರಿ?

ನಿಸಾರ್ ಅಹಮದ್: ಹಳ್ಳಿ-ನಗರ ಎರಡೂ ಒಂದಾಗುತ್ತಿರುವ ಕಾಲಘಟ್ಟವಿದು. ಒಂದಾಗ ಬೇಕು. ಎಷ್ಟು ದಿನಾಂತ ಹಳ್ಳಿಗರನ್ನು ಕತ್ತಲಲ್ಲೇ ಇಡೋದು. ಅವರಿಗೂ ಬೆಳಕು ಬೇಡವೇ. ಹಳ್ಳಿ ಜನ ಮುಂದೆ ಬರುವುದು ಬೇಡವೇ. ಆದರೆ ಈ ನಗರೀಕರಣದ ಭರಾಟೆಯಲ್ಲಿ ನಮ್ಮತನವನ್ನು ಕಳೆದುಕೊಳ್ಳಬಾರದು. ಚೈನಾ, ಜಪಾನ್, ರಷ್ಯಾ ದೇಶಗಳು ಇವತ್ತು ಇಂಗ್ಲಿಷ್ ಕಡೆ ಹೋಗ್ತಿವೆ. ್ರಾನ್ಸ್‌ನ ್ರೆಂಚರು ಇಂಗ್ಲಿಷಿನ ಕಟ್ಟಾ ವಿರೋಗಳು, ಅವರೆ ಇವತ್ತು ಇಂಗ್ಲಿಷ್ ಕಲಿಯುತ್ತಿದ್ದಾರೆ. ಆದರೆ ಇವರೆಲ್ಲ ಅವರವರ ಭಾಷೆಯನ್ನು ಉಳಿಸಿಕೊಂಡು ಇಂಗ್ಲಿಷನ್ನು ಒಳಗೆಳೆದುಕೊಂಡಿದ್ದಾರೆ. ಆದರೆ ನಾವು ಕನ್ನಡವನ್ನೂ ಬಿಟ್ಟು, ಇಂಗ್ಲಿಷನ್ನೂ ಕಲಿಯದೆ ಅತಂತ್ರರಾಗುತ್ತಿದ್ದೇವೆ. ನನ್ನ ಪ್ರಕಾರ ನಮಗೆ ಎರಡೂ ಮುಖ್ಯ. ಕನ್ನಡ ಮನೆ ಭಾಷೆ, ಅದನ್ನು ಉಳಿಸಿಕೊಳ್ಳಬೇಕು. ಇಂಗ್ಲಿಷ್ ಅನ್ನದ ಭಾಷೆ, ಕಷ್ಟಪಟ್ಟು ಕಲಿಯಬೇಕು.
  ಕನ್ನಡವನ್ನು ಉಳಿಸಿಕೊಳ್ಳಬೇಕು ಎಂದು ಹೇಳುವುದು ಸುಲಭ. ಆದರೆ ಉಳಿಸಿಕೊಳ್ಳುವ ಮಾರ್ಗವೇನು ಎಂದು ಯೋಚಿಸಿದಾಗ, ಇವತ್ತು ಕನ್ನಡಕ್ಕೆ ಒದಗಿರುವ ಸ್ಥಿತಿ, ಕನ್ನಡ ಶಾಲೆಗಳ ದುಃಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಕಟ್ಟಡವಿಲ್ಲ, ಶಿಕ್ಷಕರಿಲ್ಲ, ಪರಿಕರವಿಲ್ಲ, ಶೌಚಾಲಯ ವಂತೂ ಇಲ್ಲವೇ ಇಲ್ಲ... ಯಾರು ಕಳಿಸುತ್ತಾರೆ ಇಂತಹ ಶಾಲೆಗಳಿಗೆ? ಕಷ್ಟವೋ ಸುಖವೋ ಇಂಗ್ಲಿಷ್ ಕಾನ್ವೆಂಟ್ ಕಡೆ ಹೋಗುತ್ತಾರೆ. ತಪ್ಪಲ್ಲ. ಇಂಗ್ಲಿಷ್ ಬೇಕು. ಅದಿವತ್ತು ಹೊಟ್ಟೆಪಾಡಿನ ಭಾಷೆ. ಈ ಹೊಟ್ಟೆಪಾಡಿನ ಭಾಷೆಯಾಗಿ ಕನ್ನಡವಾಗಬೇಕು. ಕನ್ನಡ ಕಲಿತವರಿಗೆ ಮಣೆ, ಮನ್ನಣೆ ಸಿಗಬೇಕು. ಮೀಸಲಾತಿ ಕಲ್ಪಿಸಿಕೊಟ್ಟರೂ ತಪ್ಪಲ್ಲ.

ವಾರ್ತಾಭಾರತಿ: ಕನ್ನಡದ ಕವಿ ನೀವು, ಇವತ್ತು ಇಂಗ್ಲಿಷ್ ಅನ್ನದ ಭಾಷೆಯಾಗಿರು ವುದನ್ನು ಹೇಗೆ ವಿಶ್ಲೇಷಿಸುತ್ತೀರಿ?

ನಿಸಾರ್ ಅಹಮದ್: ಹಳ್ಳಿ-ನಗರ ಎರಡೂ ಒಂದಾಗುತ್ತಿರುವ ಕಾಲಘಟ್ಟವಿದು. ಒಂದಾಗ ಬೇಕು. ಎಷ್ಟು ದಿನಾಂತ ಹಳ್ಳಿಗರನ್ನು ಕತ್ತಲಲ್ಲೇ ಇಡೋದು. ಅವರಿಗೂ ಬೆಳಕು ಬೇಡವೇ. ಹಳ್ಳಿ ಜನ ಮುಂದೆ ಬರುವುದು ಬೇಡವೇ. ಆದರೆ ಈ ನಗರೀಕರಣದ ಭರಾಟೆಯಲ್ಲಿ ನಮ್ಮತನವನ್ನು ಕಳೆದುಕೊಳ್ಳಬಾರದು. ಚೈನಾ, ಜಪಾನ್, ರಷ್ಯಾ ದೇಶಗಳು ಇವತ್ತು ಇಂಗ್ಲಿಷ್ ಕಡೆ ಹೋಗ್ತಿವೆ. ್ರಾನ್ಸ್‌ನ ್ರೆಂಚರು ಇಂಗ್ಲಿಷಿನ ಕಟ್ಟಾ ವಿರೋಗಳು, ಅವರೆ ಇವತ್ತು ಇಂಗ್ಲಿಷ್ ಕಲಿಯುತ್ತಿದ್ದಾರೆ. ಆದರೆ ಇವರೆಲ್ಲ ಅವರವರ ಭಾಷೆಯನ್ನು ಉಳಿಸಿಕೊಂಡು ಇಂಗ್ಲಿಷನ್ನು ಒಳಗೆಳೆದುಕೊಂಡಿದ್ದಾರೆ. ಆದರೆ ನಾವು ಕನ್ನಡವನ್ನೂ ಬಿಟ್ಟು, ಇಂಗ್ಲಿಷನ್ನೂ ಕಲಿಯದೆ ಅತಂತ್ರರಾಗುತ್ತಿದ್ದೇವೆ. ನನ್ನ ಪ್ರಕಾರ ನಮಗೆ ಎರಡೂ ಮುಖ್ಯ. ಕನ್ನಡ ಮನೆ ಭಾಷೆ, ಅದನ್ನು ಉಳಿಸಿಕೊಳ್ಳಬೇಕು. ಇಂಗ್ಲಿಷ್ ಅನ್ನದ ಭಾಷೆ, ಕಷ್ಟಪಟ್ಟು ಕಲಿಯಬೇಕು.
  ಕನ್ನಡವನ್ನು ಉಳಿಸಿಕೊಳ್ಳಬೇಕು ಎಂದು ಹೇಳುವುದು ಸುಲಭ. ಆದರೆ ಉಳಿಸಿಕೊಳ್ಳುವ ಮಾರ್ಗವೇನು ಎಂದು ಯೋಚಿಸಿದಾಗ, ಇವತ್ತು ಕನ್ನಡಕ್ಕೆ ಒದಗಿರುವ ಸ್ಥಿತಿ, ಕನ್ನಡ ಶಾಲೆಗಳ ದುಃಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಕಟ್ಟಡವಿಲ್ಲ, ಶಿಕ್ಷಕರಿಲ್ಲ, ಪರಿಕರವಿಲ್ಲ, ಶೌಚಾಲಯ ವಂತೂ ಇಲ್ಲವೇ ಇಲ್ಲ... ಯಾರು ಕಳಿಸುತ್ತಾರೆ ಇಂತಹ ಶಾಲೆಗಳಿಗೆ? ಕಷ್ಟವೋ ಸುಖವೋ ಇಂಗ್ಲಿಷ್ ಕಾನ್ವೆಂಟ್ ಕಡೆ ಹೋಗುತ್ತಾರೆ. ತಪ್ಪಲ್ಲ. ಇಂಗ್ಲಿಷ್ ಬೇಕು. ಅದಿವತ್ತು ಹೊಟ್ಟೆಪಾಡಿನ ಭಾಷೆ. ಈ ಹೊಟ್ಟೆಪಾಡಿನ ಭಾಷೆಯಾಗಿ ಕನ್ನಡವಾಗಬೇಕು. ಕನ್ನಡ ಕಲಿತವರಿಗೆ ಮಣೆ, ಮನ್ನಣೆ ಸಿಗಬೇಕು. ಮೀಸಲಾತಿ ಕಲ್ಪಿಸಿಕೊಟ್ಟರೂ ತಪ್ಪಲ್ಲ.

 ವಾರ್ತಾಭಾರತಿ: ಇತ್ತೀಚಿನ ದಿನಗಳಲ್ಲಿ ಮಾನವೀಯತೆಯೇ ಮರೆಯಾಗುತ್ತಿ ದೆಯಲ್ಲ...?
ನಿಸಾರ್ ಅಹಮದ್: ಮಾನವೀಯತೆಯನ್ನು ಯಾರು ಮರೆಯುತ್ತಾರೋ, ಅವರು ಮನುಷ್ಯರಾಗುವುದಿಲ್ಲ. ಮನುಷ್ಯತ್ವವನ್ನು ಮರೆತು ಮಾಡೋ ಕೃತ್ಯಗಳು ಅಕ್ಷಮ್ಯ ಅಪರಾಧ. ಇವತ್ತು ಪ್ರಪಂಚದ ನಾನಾ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯ ಗಳನ್ನು ಕಾಣುತ್ತಿದ್ದೇವೆ. ಅಮಾಯಕರನ್ನು ಕೊಲ್ಲುವ ತೀವ್ರವಾದ, ಉಗ್ರವಾದ ಧರ್ಮವಲ್ಲ. ಅವರೆಲ್ಲ ಧರ್ಮದ ಅವಹೇಳನ ಮಾಡುವವರು. ಯಾರೋ ಒಬ್ಬ ದುಷ್ಟನಾದರೆ, ಕೆಟ್ಟದು ಮಾಡಿದರೆ ಇಡೀ ಸಮುದಾಯವನ್ನೇ ಕೆಟ್ಟದಾಗಿ ನೋಡುವುದು, ಅದನ್ನು ಧರ್ಮಕ್ಕೆ ತಳಕು ಹಾಕುವುದು ತಪ್ಪು. ಅದು ಹಾಲು ಒಡೆದುಹೋದರೆ ಹಸುವನ್ನು ದೂಷಿಸಿದಂತೆ!

ಹಾ... ಹಸು ಅಂದಾಕ್ಷಣ ನೆನಪಾಯಿತು. ಈ ಹಸು ಹೆಸರಲ್ಲಿ ಮೊದಲು ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಈಗ ದಲಿತರನ್ನು ಹಿಡಿದು ಬಡಿಯುತ್ತಿದ್ದಾರೆ. ಇದು ಮನುಷ್ಯರು ಮಾಡುವ ಕೆಲಸವಲ್ಲ. ಇವತ್ತು ಮಾಂಸಾಹಾರಿಗಳು ಶೇ.80ರಷ್ಟಿದ್ದಾರೆ. ಒಂದು ವರ್ಗ ತಿನ್ನದೆ ಇರಬಹುದು. ತಿನ್ನುವ ವರ್ಗ ವನ್ನು ಸಹಿಸಬೇಕಾದ್ದು ಧರ್ಮ. ಭಾವನಾತ್ಮಕ ಬಂಧಗಳನ್ನು ಬೆಂಕಿಗೆ ಹಾಕಿ, ಬೆಂಕಿ ಕಾಯಿಸಿಕೊಳ್ಳುವ ಕೆಲಸ ಯಾರೂ ಮಾಡಬಾರದು. ಕಂದಾಚಾರಿಗಳು, ಕರ್ಮಠರು ಎಲ್ಲಾ ಧರ್ಮದಲ್ಲೂ ಇದ್ದಾರೆ. ಅವರನ್ನು ಕಣ್ಣುಮುಚ್ಚಿ ಕೊಂಡು ಅನುಸರಿಸಬಾರದು. ಅಂತಿಮವಾಗಿ ಮನುಷ್ಯನಿಗೆ ಬೇಕಾಗಿರುವುದು ಆಂತರಿಕವಾಗಿ ಶಾಂತಿ, ಬಹಿರಂಗವಾಗಿ ಸಾಮರಸ್ಯ.

 ಹಾಗೆಯೇ ನಮ್ಮ ದೇಶವನ್ನು ಹಿಂದೂದೇಶ ಮಾಡಲಿಕ್ಕೆ ಹೋಗುವುದು ತಪ್ಪು. ಧರ್ಮ ಅನ್ನುವುದು ಗುರಾಣಿಯಾಗಬಾರದು. ರಾಜಕೀಯ ವಾಗಿ ಬಳಕೆಯಾಗಬಾರದು. ಮನಸ್ಸುಗಳನ್ನು ಕೆಡಿಸಬಾರದು. ನಾವು ಜಾತಿ ಮತ ಪಂಥಗಳ ದಾಟಿ ಮನುಷ್ಯರಾಗಬೇಕು. ನಮ್ಮ ದೇಶ ಬಹುಸಂಸ್ಕೃತಿಗಳ ದೇಶ. ವೈವಿಧ್ಯಮಯ ದೇಶ. ಹೂವಿನ ತೋಟದಂತೆ, ಅಲ್ಲಿ ಎಲ್ಲಾ ಜಾತಿಯ ಹೂವುಗಳು ನಳನಳಿಸಿದರೇನೇ ಚೆಂದ. ಪರಮಹಂಸ, ಸೂಫಿ, ತೆರೇಸಾರಲ್ಲಿ ಎಷ್ಟೆಲ್ಲ ವೌಲ್ಯಗಳಿಲ್ಲ. ಅವರವರ ಆಚಾರ ವಿಚಾರ ಅವರಿಗೆ ದೊಡ್ಡದು. ಅದಕ್ಕೆ ಧಕ್ಕೆ ತರಬಾರದು, ಘಾಸಿಗೊಳಿಸಬಾರದು.

ವಾರ್ತಾಭಾರತಿ: ಸಮಕಾಲೀನ ಸಂದರ್ಭದಲ್ಲಿ ಸುದ್ದಿಮಾಧ್ಯಮಗಳ ಪಾತ್ರವೇನು?
ನಿಸಾರ್ ಅಹಮದ್: ವೌಲ್ಯಗಳು ಪತನವಾಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಗಾಂ, ಸೂಫಿ ಸಂತರು, ಪರಮಹಂಸರು, ನೆಲ್ಸನ್ ಮಂಡೇಲಾ, ಠಾಗೂರ್, ಬುದ್ಧ, ತೆರೇಸಾರ ಬಗ್ಗೆ ಜಾತಿ ಮತ ಪಂಥ ಮರೆತು ಹೇಳಬೇಕು. ಮುಂದಿನ ಪೀಳಿಗೆಯ ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಬೇಕು. ಹೃದಯಗಳನ್ನು ಬೆಸೆಯುವಂತಹ ಮಹತ್ತರವಾದ ಜವಾಬ್ದಾರಿ ಮಾಧ್ಯಮಗಳ ಮೇಲಿದೆ.

ಆದರೆ ಏನಾಗಿದೆ, ಸ್ಲೋ ಪಾಯ್ಸನ್ ಮನೆಯೊಳಗೇ ಬಂದು ಕೂತಿದೆ. ಬ್ರೇಕಿಂಗ್ ನ್ಯೂಸ್ ಪೈಪೋಟಿಗೆ ಬಿದ್ದು ಯಾವುದು ಸುದ್ದಿ, ಯಾವುದಲ್ಲ ಎನ್ನುವ ವಿವೇಚನೆಯನ್ನೇ ಕಳೆದುಕೊಂಡಿವೆ. ಸಣ್ಣ ಸುದ್ದಿಯನ್ನು ದೊಡ್ಡದು ಮಾಡಿ, ಕೆಟ್ಟದ್ದನ್ನೆ ಹೆಚ್ಚು ಮಾಡಿ, ಇಡೀ ದಿನ ಪ್ರಸಾರ ಮಾಡಿ ಜನರ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಸೌಹಾರ್ದ ಬದುಕಿಗೆ ಬೆಂಕಿ ಇಡುತ್ತಿವೆ. ಇವತ್ತಿನ ಮಾಧ್ಯಮದ ಮುಂದಿನ ಮಾರ್ಗದ ಬಗ್ಗೆ ಯೋಚಿಸಿದರೆ ಭಯವಾಗುತ್ತದೆ. ನಮ್ಮ ಬದುಕಿನಲ್ಲಿ ಏನೆಲ್ಲ ಇದೆ, ಎಷ್ಟೆ

Writer - ಸಂದರ್ಶನ: ಬಸು ಮೇಗಲ್ಕೇರಿ

contributor

Editor - ಸಂದರ್ಶನ: ಬಸು ಮೇಗಲ್ಕೇರಿ

contributor

Similar News