ಕೈ ಹಿಡಿದು ಎತ್ತಿದವರು

Update: 2016-10-11 18:22 GMT

ಖುಲ್ಸುಮಾಬಿಯಂತಹ ಮಹಿಳೆಯನ್ನು ನಾನು ಆ ಮೊದಲು ನೋಡಿರಲಿಲ್ಲ ಎಂದರೆ ಸರಿಯಾದುದೇ. ಅವರ ಮತ್ತು ನನ್ನ ಅಮ್ಮನ ಸ್ನೇಹ ಗಾಢವಾದಾಗ ಇತರ ಹಳೆಯ ನೆರೆಯ ಸ್ನೇಹಿತರಿಗೆ ಅಸಮಾಧಾನವಾದುದೂ ಇದೆ. ಜೊತೆಗೆ ಅವರ ಸ್ನೇಹದ ಕುರಿತು ಆಶ್ಚರ್ಯಪಟ್ಟವರೂ ಇದ್ದರು. ಆದರೆ ನಿಧಾನವಾಗಿ ಖುಲ್ಸುಮಾಬಿ ನೆರೆಯ ಎಲ್ಲರಿಗೂ ಹಬಿನಮ್ಮನಾಗಿ ಸ್ನೇಹಿತೆಯಾದರು. ಅವರಷ್ಟು ಲೋಕಜ್ಞಾನ ಸುತ್ತಮುತ್ತಲಿನ ಉಳಿದ ಹೆಂಗಸರಿಗೆ ಇರಲಿಲ್ಲ ಎನ್ನುವುದು ನನ್ನ ಗ್ರಹಿಕೆ. ಅಡುಗೆ ಮನೆಯ ಪ್ರಪಂಚದಿಂದ ತೊಡಗಿ ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ಅವರು ಜಾಣೆ. ಮೋಸ ಹೋಗುತ್ತಿರಲಿಲ್ಲ. ಬಹಳ ಧೈರ್ಯವಂತೆ. ಆದರೆ ಗಂಡನಿಗೆ ಅಷ್ಟೇ ಹೆದರುತ್ತಿದ್ದರು. ಯಾರಾದರೂ ಮೋಸ ಅನ್ಯಾಯ ಮಾಡಿದರೆ ಸುಮ್ಮನಿರುತ್ತಿರಲಿಲ್ಲ. ಒಳ್ಳೆಯ ಮಾತುಗಾತಿ. ನಮ್ಮ ಅಪ್ಪನಲ್ಲಿಯೂ ಸಲುಗೆಯಿಂದ ಮಾತನಾಡುತ್ತಿದ್ದರು. ಜೊತೆಗೆ ಅಷ್ಟೇ ಗೌರವವೂ ಇತ್ತು. ಅವರ ಮಾತಿನಲ್ಲಿ ಎಂದೂ ಯಾರ ಗೌರವಕ್ಕೂ ಅಡ್ಡಿ ಇರುತ್ತಿರಲಿಲ್ಲ. ಯಾರ ಕಷ್ಟಕ್ಕೂ ನೆರವಿಗೆ ಓಡುತ್ತಿದ್ದರು. ಅದರಲ್ಲೂ ಅವರ ಧನಿಗಳಾದ ಗ್ರೆಟ್ಟಾ ಬಾಯಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರಲ್ಲೇ ನೆಲೆಸಿದಾಗ ಅವರಿಗೆ ಬಲಗೈಯಂತೆ ನೆರವಾದರು. ತನ್ನ ಕುಟುಂಬಕ್ಕಾಗಿಯೂ ಸಾಕಷ್ಟು ಕಷ್ಟಪಟ್ಟವರು. ಬೆಳಗ್ಗೆ ಬೇಗ ಎದ್ದು ಮನೆ ಹಟ್ಟಿ ಗುಡಿಸಿ, ಒರಸಿ, ಸಾರಿಸಿ, ದನಗಳಿಗೆ ಅಕ್ಕಚ್ಚು ಹಿಂಡಿ ಕೊಟ್ಟು, ಹಾಲು ಕರೆದು ಮೇಯಲು ಬಿಟ್ಟರೆ ಎಮ್ಮೆಗಳು ಬೆಳಕಾಗುವ ಮೊದಲೇ ರಸ್ತೆಗಿಳಿಯುತ್ತಿತ್ತು. ಈ ಕಡೆ ಅಡುಗೆ ಕೋಣೆಗೆ ಸೇರಿದ ಹಬಿನಮ್ಮ ಈಗ ಒಂಬತ್ತು ಮಂದಿಗೆ ಬೇಕಾಗುವಷ್ಟು ಚಪಾತಿ ಮಾಡಬೇಕಿತ್ತು. ನಾನು ಹಾಲು ತರಲು ಹೋದಾಗ ಅವರ ಮಕ್ಕಳು ಓದುತ್ತಿರುತ್ತಾರೆ. ಅವರಲ್ಲಿ ಯಾರನ್ನಾದರೂ ಕರೆದು ಬೇರೆ ಬೇರೆ ಪಾತ್ರೆಗಳಲ್ಲಿ ಅಳತೆ ಮಾಡಿಟ್ಟಿದ್ದ ಹಾಲನ್ನು ತೋರಿಸಿ ನನಗೆ ಹಾಲು ಕೊಡಲು ಹೇಳಿದರೆ, ಈ ಕಡೆ ಒಂದು ಪ್ಲೇಟಿನಲ್ಲಿ ನನಗೆ ತಿನ್ನಲು ಚಪಾತಿ ಹಾಕಿ ಕೊಡುತ್ತಿದ್ದರು. ಅವರ ಮಕ್ಕಳು ಇನ್ನೂ ತಿಂದಿರುವುದಿಲ್ಲ. ನನಗೆ ತಿನ್ನಲು ಮುಜುಗರವಾದರೂ ತಿನ್ನಲು ಆಸೆ. ಕಾರಣ ನಮ್ಮ ಮನೆಯಲ್ಲಿ ಚಪಾತಿ ಮಾಡುತ್ತಿರಲಿಲ್ಲ. ಜೊತೆಗೆ ರುಚಿಯಾದ ಚಪಾತಿ. ಬಿಡುವುದುಂಟೇ? ತಿನ್ನುತ್ತಿದ್ದೆ.
ನಮ್ಮ ಅಮ್ಮ ತನ್ನ ಆತ್ಮೀಯ ಸ್ನೇಹಿತೆ ಲೂಸಿ ಬಾಯಿ ಮನೆಗೆ ಮಾತ್ರ ಹೋಗಿ ಮಾತನಾಡುತ್ತಾ ಅಲ್ಲಿ ಹೂ ಕಟ್ಟುತ್ತಾ ಅಥವಾ ಮಲ್ಲಿಗೆ ಕೊಯ್ಯುತ್ತಾ ಜೊತೆಗಿರುವುದು ಬಿಟ್ಟರೆ ಬೇರೆ ಯಾರ ಮನೆಗೂ ಹೋಗುತ್ತಿರಲಿಲ್ಲ. ಆದ್ದರಿಂದ ಹಬಿನಮ್ಮ ನಮ್ಮ ಮನೆಗೆ ಬಂದು ಅಮ್ಮನಲ್ಲಿ ಮಾತನಾಡುವ ರೂಢಿ ಇಟ್ಟುಕೊಂಡಿದ್ದರು. ಅದು ದಿನಾ ಅಲ್ಲ. ಅವರಿಗೆ ಸಮಯ ಸಿಕ್ಕಾಗ. ಅವರ ನಡುವಿನ ಮಾತುಕತೆಯನ್ನು ಕಾಲಹರಣ, ವೃಥಾಹರಟೆ ಎನ್ನುವಂತಿಲ್ಲ. ಕಾಲಹರಣ ಮಾಡುವುದಕ್ಕೆ ಹಬಿನಮ್ಮನಿಗೆ ಎಲ್ಲಿ ಪುರುಸೊತ್ತು? ಹಾಗೆಯೇ ಅದು ವೃಥಾಹರಟೆಯೂ ಅಲ್ಲ. ಅವರಿವರ ಚಾಡಿಯೂ ಅಲ್ಲ. ಇಬ್ಬರೂ ತಮ್ಮದೇ ಆದ ಕಷ್ಟ ಸುಖಗಳನ್ನು ಹಂಚಿ ನಿರಾಳವಾಗುತ್ತಿದ್ದರು. ಅಷ್ಟೇ ಅಲ್ಲ ನಮ್ಮ ಅಮ್ಮನಿಗೆ ಅದರಿಂದ ಹಲವಾರು ವಿಷಯಗಳ ತಿಳುವಳಿಕೆ ಪ್ರಾಪ್ತವಾಯಿತು ಎನ್ನಬೇಕು. ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ವ್ಯವಹಾರ ಜ್ಞಾನ ನನ್ನ ಅಮ್ಮನಿಗಿರಲಿಲ್ಲ ಎಂದರೂ ಸರಿಯೆ. ಸಂಸಾರ ನಿರ್ವಹಣೆಯಲ್ಲಿ ಅಮ್ಮನಿಗೆ ಅದೆಷ್ಟೋ ವಿಚಾರಗಳು ಅವರ ಸ್ನೇಹದಿಂದ ಲಭಿಸಿತು. ಅವುಗಳಲ್ಲಿ ಮೊದಲನೆಯದು ಚಪಾತಿ ಮಾಡಲು ಕಲಿತದ್ದು. ಆ ದಿನಗಳಲ್ಲಿ ರೇಷನ್‌ನಲ್ಲಿ ಇಡೀ ಗೋಧಿ ಸಿಗುತ್ತಿತ್ತು. ಅಮ್ಮ ಅದನ್ನು ನೆನೆ ಹಾಕಿಟ್ಟು ಕಲ್ಲಿನಲ್ಲಿ ಅರೆದು ತೆಳುವಾದ ದೋಸೆ ಮಾಡುತ್ತಿದ್ದರು. ಈಗ ಹಬಿನಮ್ಮ ನಮಗೆ ಸಿಗುವ ಗೋಧಿಯನ್ನು ಪುಡಿ ಮಾಡಿಸಿ ತರಿಸಿ ಕೊಡುತ್ತಿದ್ದರು. ಬಹುಶಃ ಅವರ ತಮ್ಮನ ಮೂಲಕ ಇರಬೇಕು. ಯಾಕೆಂದರೆ ನಮ್ಮ ರಸ್ತೆಯಲ್ಲಿ ಎಲ್ಲೂ ಗೋಧಿ ಪುಡಿ ಮಾಡುವ ಯಂತ್ರದ ಅಂಗಡಿ ಇರಲಿಲ್ಲ. ಈಗ ನಮ್ಮ ಮನೆಯಲ್ಲೂ ಚಪಾತಿ ಬಾಜಿ ತಯಾರಾಗುತ್ತಿತ್ತು.
ಎರಡನೆಯದು ಅಡುಗೆ ಒಲೆಗೆ ಸಂಬಂಧಿಸಿದ ವಿಚಾರ. ಆಗೆಲ್ಲಾ ಎಲ್ಲರ ಮನೆಯ ಒಲೆಗಳಿಗೆ ಕಟ್ಟಿಗೆಯೇ ಬೇಕಿತ್ತು. ನಮ್ಮಂತಹ ಬಿಡಾರದ ಮನೆಯವರು ಕಟ್ಟಿಗೆ ಡಿಪೋದಿಂದಲೇ ಕಟ್ಟಿಗೆ ತರಬೇಕಾಗಿತ್ತು. ಈ ಖರ್ಚನ್ನು ಉಳಿಸುವ ಉಪಾಯವನ್ನು ತಿಳಿಸಿಕೊಟ್ಟರು. ಆಗ ಕಬ್ಬಿಣದ ಒಲೆಯೊಂದು ರೆಡಿಮೇಡಾಗಿ ಪೇಟೆಯಲ್ಲಿ ಮಾರಾಟಕ್ಕೆ ಇರುತ್ತಿತ್ತು. ಈ ಕಬ್ಬಿಣದ ಒಲೆಗೆ ತಳಭಾಗದಲ್ಲಿ ಒಂದು ಕರಿಮರದ ಕಟ್ಟಿಗೆ ಇಡುವಷ್ಟು ದೊಡ್ಡ ತೂತು ಇತ್ತು. ಇದರೊಳಗೆ ಒಂದು ಕಟ್ಟಿಗೆ ಇಟ್ಟು, ಅದಕ್ಕೆ ಲಂಬವಾಗಿ ಇನ್ನೊಂದು ಕಟ್ಟಿಗೆಯನ್ನು ಒಳಗಿಟ್ಟು ನಡುವೆ ಮರದ ಪುಡಿಯನ್ನು ಸರಿಯಾಗಿ ಒತ್ತೊತ್ತಾಗಿ ತುಂಬಿಸಿ ಗಟ್ಟಿಗೊಳಿಸಿ ಎರಡೂ ಕೊಳವೆಯಂತಹ ಕಟ್ಟಿಗೆಗಳನ್ನು ಹೊರತೆಗೆಯಬೇಕು. ಬಳಿಕ ಉರಿವ ಕೊಳ್ಳಿಯ ಕಟ್ಟಿಗೆಯನ್ನು ತಳಭಾಗದಲ್ಲಿಟ್ಟರೆ ಇಡೀ ದಿನದ ಅಡುಗೆ ಒಂದೇ ಕಟ್ಟಿಗೆಯಲ್ಲಿ ಆಗುತ್ತಿತ್ತು. ಈ ಮರದ ಪುಡಿಯನ್ನು ಮರದ ಮಿಲ್ಲಿನವರು ಗಾಡಿಗಳಲ್ಲಿ ತಂದು ರಸ್ತೆಯಲ್ಲಿ ಸುರಿಯುತ್ತಿದ್ದರು. ನಾವು ಮಕ್ಕಳು ಅದನ್ನು ಚೀಲದಲ್ಲಿ ತುಂಬಿ ಮನೆಗೆ ತರುತ್ತಿದ್ದೆವು. ಇದನ್ನು ಆಗು ಮಾಡಿದವರು ಹಬಿನಮ್ಮ. ಈ ಮರದ ಪುಡಿಯನ್ನು ಎಲ್ಲಾ ಮನೆಯವರೂ ಸಿಕ್ಕಿದಷ್ಟು ಒಯ್ಯುತ್ತಿದ್ದರು. ಇದಕ್ಕೆ ಯಾರಿಗೂ ದುಡ್ಡು ಕೊಡಬೇಕಾಗಿರಲಿಲ್ಲ. ಹಾಗೆಯೇ ಕಾಫಿ ಬೀಜದ ಸಿಪ್ಪೆಯನ್ನೂ ರಸ್ತೆಯಲ್ಲಿ ಸುರಿಯುತ್ತಿದ್ದರು. ಈ ಮರದ ಪುಡಿಯ ಬೇಡಿಕೆ ಹಾಗೂ ಅಗತ್ಯವನ್ನು ಅರಿತ ಕೆಲವರು ತಾವೇ ಸ್ವತಃ ಮರದ ಮಿಲ್ಲುಗಳಿಗೆ ಹೋಗಿ ಅಂದಿನ 1 ಮುಡಿ ಅಕ್ಕಿಯ ಗೋಣಿ ಚೀಲದಲ್ಲಿ ತುಂಬಿಸಿ ಅದನ್ನು ಮನೆ ಮನೆಗಳಿಗೆ ತಂದು ಮಾರಾಟ ಮಾಡಲು ಶುರು ಮಾಡಿದರು. ಆಗ ಎಲ್ಲರೂ ಅದನ್ನು ದುಡ್ಡು ಕೊಟ್ಟೇ ಪಡೆದುಕೊಳ್ಳುವಂತಾಯ್ತು. ಆದರೂ ಯಾರೂ ಕೊಳ್ಳದೆ ಇಲ್ಲ. ಕಾರಣ ಈ ಒಲೆಯಿಂದ ಹೊಗೆ ಕಡಿಮೆ ಹಾಗೂ ಖರ್ಚು ಕಡಿಮೆ. ಹೀಗೆ ಕಟ್ಟಿಗೆಯ ಉಳಿತಾಯವನ್ನು ಕಲಿಸಿದವರು ಹಬಿನಮ್ಮ.
ಹಬಿನಮ್ಮನವರ ಮನೆ ರಸ್ತೆಗೆ ಸಮೀಪವಿದ್ದುದರಿಂದ ರಸ್ತೆಯಲ್ಲಿ ಏನು ಮಾರಾಟಕ್ಕೆ ಬಂದರೂ ಅವರಿಗೆ ತಿಳಿಯುತ್ತಿತ್ತು. ಪಾತ್ರೆಗಳು, ಇನ್ನಿತರ ಅಗತ್ಯದ ವಸ್ತಗಳು ಮಾರಾಟಕ್ಕೆ ಬಂದಾಗ ಅಮ್ಮನನ್ನು ತಾನೇ ಬಂದು ಕರೆದುಕೊಂಡು ಹೋಗಿ ವ್ಯಾಪಾರ ಮಾಡಿ ವಸ್ತು ತೆಗೆದುಕೊಳ್ಳುವಲ್ಲಿ ಸಹಕರಿಸುತ್ತಿದ್ದರು. ಅಮ್ಮನಲ್ಲಿ ಹಣವಿಲ್ಲದಿದ್ದರೆ ತನ್ನ ಸೊಂಟದಲ್ಲಿದ್ದ ಸಂಚಿಯಿಂದ ಹಣ ತೆಗೆದುಕೊಟ್ಟು ಉಪಕರಿಸುತ್ತಿದ್ದರು. ಇದಕ್ಕಿಂತ ಮುಖ್ಯವಾದುದು ಸೀರೆಗಳ ವ್ಯಾಪಾರಿಗಳ ಜೊತೆಗಿನ ವ್ಯಾಪಾರ. ಆಗ ತಮಿಳುನಾಡಿನ ಮಂದಿ ತಲೆಹೊರೆಯಲ್ಲಿ ಸೀರೆ ಮಾರುತ್ತಾ ಮನೆ ಮನೆಗೆ ಬರುತ್ತಿದ್ದರು. ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ಅಮ್ಮ ಸೀರೆ ಕೊಳ್ಳುವಂತೆ ಮಾಡುತ್ತಿದ್ದರು. ಅದು ವರೆಗೆ ಅಮ್ಮ ಕೈಮಗ್ಗದ ಸೀರೆಗಳನ್ನೇ ಉಡುತ್ತಿದ್ದವರು. ಇವರು ತರುತ್ತಿದ್ದ ಸೀರೆಗಳು ಮಗ್ಗದ ಸೀರೆಗಳೇ ಆಗಿದ್ದರೂ ಅದು ಸಿಲ್ಕ್ ಸೀರೆಗಳಾಗಿತ್ತು. ಅಂದರೆ ಅಪ್ಪಟ ರೇಷ್ಮೆ ಅಲ್ಲ. ಸಾಧಾರಣ ರೇಷ್ಮೆ. ಬಹುಶಃ ತಮಿಳುನಾಡಿನ ಸಾಮಾನ್ಯ ಜನರು ದಿನನಿತ್ಯ ಉಡುವಂತಹ ಸೀರೆಯಾಗಿದ್ದಿರಬಹುದು. ನಾನು ಸೀರೆ ಉಡುವ ಪ್ರಾರಂಭದ ದಿನಗಳಲ್ಲಿ ಅಮ್ಮನ ಈ ಸೀರೆಗಳೇ ನನ್ನ ಸೀರೆಗಳಾಗಿದ್ದುವು. ಈ ಸೀರೆಯವರು ‘ಕೇಕ’ದ ವ್ಯಾಪಾರ ಎಂಬ ನಿಯಮದಲ್ಲಿ ವಾರ ವಾರ ಬಂದು ಹಣ ಪಡೆಯುತ್ತಿದ್ದರು. ನನ್ನ ಅಮ್ಮನಿಗೆ ಅಪ್ಪ ಕೊಡುವ ತಿಂಗಳ ಸಂಬಳದ ಸಂದರ್ಭದಲ್ಲಿ ಕೊಡುವುದು ಮಾತ್ರ ಸಾಧ್ಯ. ಆಗೆಲ್ಲಾ ವಾರದ ಪಾಳಿಯಲ್ಲಿ ಬಂದಾಗ ಹಬಿನಮ್ಮನೇ ಅವರಿಗೆ ಹಣ ಕೊಡುತ್ತಿದ್ದರು. ಹೀಗೆ ಅಮ್ಮನ ಮನೆವಾರ್ತೆಯ ನಿರ್ವಹಣೆಯಲ್ಲಿ ಅವರ ನೆರವು ವಿಶೇಷವಾದುದು.
ಇನ್ನು ನಾನು ನನ್ನ ವೈಯಕ್ತಿಕ ಬದುಕಿನ ಸಂದರ್ಭ ಒಂದನ್ನು ಹೇಳಲೇಬೇಕು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ನನ್ನ ಫಲಿತಾಂಶ ನನಗಿಂತ ಮೊದಲು ಅದನ್ನೇ ಕಾಯುತ್ತಿದ್ದ ಹಬಿನಮ್ಮನಿಗೆ ತಿಳಿಯಿತು. ಹೇಗನ್ನುತ್ತೀರಾ? ಆ ವರ್ಷ ಮೊತ್ತ ಮೊದಲಿಗೆ ಇಡೀ ರಾಜ್ಯದಲ್ಲಿ ಅತ್ಯಂತ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು. ಹೈಸ್ಕೂಲಿನಲ್ಲಿ 8ನೇ ತರಗತಿ ಅಂದರೆ ಥರ್ಡ್‌ಫಾರ್ಮ್ ಕಲಿತವರು ಹಾಗೂ 7ನೆಯ ತರಗತಿಯ ಪಬ್ಲಿಕ್ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಘೆಛಿಡಿ ್ಖಐಐಐ ಖಠಿ. ಎಂದು ಸರಕಾರ ಘೋಷಿಸಿತು. ಥರ್ಡ್‌ಫಾರ್ಮ್‌ನವರಿಗೆ ಒಂದು ವರ್ಷ ನಷ್ಟವಾಯಿತು. 7ನೆಯ ತರಗತಿಯವರಿಗೆ ಒಂದು ವರ್ಷ ಲಾಭವಾಯ್ತು. ಈ ಕಾರಣದಿಂದ 1966ರ ಮಾರ್ಚ್‌ನಲ್ಲಿ ನಡೆದ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟಿಸಲು ಸಾಧ್ಯವಾಗದ ಕಾರಣ ವಿದ್ಯಾರ್ಥಿಗಳ ಮನೆ ವಿಳಾಸಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಿತ್ತು. ಆದ್ದರಿಂದಲೇ ಕೆಲವು ದಿನಗಳಿಂದ ಅಂಚೆಯವನನ್ನು ಹಬಿನಮ್ಮ ಕಾಯುತ್ತಿದ್ದರು. ಆ ಫಲಿತಾಂಶವು ಬಂತು. ಅದು ಕೆಂಪು ಅಂಚೆ ಕಾರ್ಡಿನಲ್ಲಿ ಶ್ರೇಣಿಗಳ ಸಹಿತ ವಿವರವಾಗಿ ಬರೆಯಲಾಗಿತ್ತು. ಅಂಚೆಯವನಿಂದ ಸುದ್ದಿ ತಿಳಿದ ಹಬಿನಮ್ಮ ಅವನ ಜೊತೆಗೆ ನಮ್ಮ ಮನೆಗೆ ಬಂದರು. ನಮ್ಮ ಸಂತೋಷವನ್ನು ಹೆಚ್ಚಿಸಿದರು. ‘‘ಸಿಹಿ ಕೊಡ್ಬೇಕು ಮಾಷ್ಟ್ರೇ’’ ಅಂತ ಕೇಳಿದರು. ಅವರ ಆಸೆಯಂತೆ ನೆರೆಯ ಎಲ್ಲಾ ಮನೆಗಳಿಗೂ ಮಿಠಾಯಿ ಲಾಡು ಹಂಚಿದ ಸಂಭ್ರಮ ನನ್ನದು. ನನ್ನ ಸಂತೋಷದಲ್ಲಿ ಎಲ್ಲರೂ ಭಾಗಿಗಳು. ನನ್ನ ಜೊತೆಗೆ ಲೂವಿಸ್ ಪೊರ್ಬುಗಳ ಮಗಳು, ಐರಿಬಾಯಿಯ ಮಗಳು ಇವರೂ ಪಾಸಾಗಿದ್ದಾರೆ. ಆದರೆ ನಾನು ನನ್ನ ತಂದೆಯ ಗೌರವಕ್ಕೆ ಸರಿಯಾಗಿ ಎಂಬಂತೆ ಅಂದರೆ ಮಾಸ್ಟ್ರ ಮಗಳು ಎನ್ನುವ ನಿರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದೆ. ಇನ್ನಿಬ್ಬರು ಹುಡುಗರು ನಮ್ಮ ಧನಿ ಬಾಯಿಗಳ ಮೊಮ್ಮಗ ವಾಲ್ಟಿ ಮತ್ತು ರಂಗಕ್ಕನ ಮೊಮ್ಮಗ ನನ್ನ ಪ್ರಾಥಮಿಕ ಶಾಲಾ ಸಹಪಾಠಿ ಅಶೋಕ. ಇಬ್ಬರೂ ಅಲೋಶಿಯಸ್ ಕಾಲೇಜಿಗೆ ಸೇರುವುದು ಖಚಿತ. ಹಾಗೆಯೇ ಹಿಲ್ಡಾ ಮತ್ತು ಕರ್ಮಿನಾ ಇಬ್ಬರೂ ಶಿಕ್ಷಕ ತರಬೇತಿಗೆ ಸೇರುವ ನಿರ್ಧಾರವೂ ಆಗಿತ್ತು. ಇನ್ನು ನಾನು. ಇನ್ನೂ ಯಾವ ನಿರ್ಧಾರಕ್ಕೂ ಬಂದಿರಲಿಲ್ಲ. ಜೊತೆಗೆ ಫಲಿತಾಂಶ ಬರುವ ಮೊದಲೇ ‘‘ಫೈಲಾದರೆ ಬೀಡಿ ಕಟ್ಟಿ ಸ್ವಲ್ಪ ಹಣ ಕಾಸು ಕೂಡಿಡು. ಆಮೇಲೆ ಎರಡು ವರ್ಷದಲ್ಲಿ ಮದುವೆ ಮಾಡಿಸುವಾ’’ ಎಂಬ ಅಪ್ಪನ ಮಾತಿಗೆ ಹೆದರಿ ಹೋಗಿದ್ದೆ. ನನ್ನ ಬಾಲ್ಯದ ಪ್ರಾರಂಭದಲ್ಲಿ ಬೀಡಿ ಕಟ್ಟುವ ಕೆಲಸ ಊರಿನಲ್ಲಿರಲಿಲ್ಲ. ಇದೀಗ ಬಂದ ಹೊಸ ವೃತ್ತಿ. ಇದು ಬಂದುದರಿಂದ ಅನೇಕ ಗೆಳತಿಯರು ಹೈಸ್ಕೂಲಿಗೆ ಹೋಗುವುದನ್ನು ಅದು ತಪ್ಪಿಸಿತು ಎಂದರೆ ತಪ್ಪಲ್ಲ. ಯಾಕೆಂದರೆ 7ನೆಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ನನ್ನ ತರಗತಿಯ ವಿದ್ಯಾರ್ಥಿನಿಯರಲ್ಲಿ ಅರ್ಧಕ್ಕರ್ಧ ವಿದ್ಯಾರ್ಥಿನಿಯರು ಮನೆಯಲ್ಲೇ ಉಳಿದರು. ಹೈಸ್ಕೂಲಿಗೆ ಸೇರಿದವರಲ್ಲಿ ಅನೇಕರು ಎಸೆಸ್ಸೆಲ್ಸಿ ಉತ್ತೀರ್ಣರಾಗದೆ ಬೀಡಿ ಕಟ್ಟುವುದಕ್ಕೆ ತೊಡಗಿದರು. ಇದು ಬಹು ಆಕರ್ಷಣೀಯ ವೃತ್ತಿಯಾಯಿತು. ಅದಕ್ಕೆ ಎರಡು ಕಾರಣಗಳು. ಒಂದು ಮನೆಯವರಿಗೆ ಮಗಳು, ಹೆಂಡತಿ ಅಥವಾ ಅಕ್ಕ ತಂಗಿಯರು ಮನೆಯಲ್ಲೇ ಇದ್ದು ಕೆಲಸ ಮಾಡುತ್ತಾರೆ ಎನ್ನುವುದಾದರೆ ಇನ್ನೊಂದು ಹೆಣ್ಣು ಮಕ್ಕಳಿಗೆ ಯಾ ಹೆಂಗಸರಿಗೆ ಆರ್ಥಿಕ ಸಬಲತೆ ಎಂದರೆ ಒಂದಿಷ್ಟು ಸಂಪಾದನೆಯಲ್ಲಿ ನನ್ನದು ಎಂಬ ಹಕ್ಕು ಸ್ಥಾಪಿಸಲು ಅವಕಾಶವಾಯಿತು. ಅದು ಬಟ್ಟೆ ಬರೆಗಳ ರೂಪದಲ್ಲಿ ಪ್ರಕಟವಾಗುತ್ತಿತ್ತು. ಇನ್ನೂ ಚಿನ್ನ ಕೊಳ್ಳುವ ಹಂತಕ್ಕೆ ತಲುಪಿರಲಿಲ್ಲ. ಆದ್ದರಿಂದ ಹೆಣ್ಣು ಮಕ್ಕಳು ಪಾಸಾದರೂ ಸರಿ ಫೈಲಾದರೂ ತೊಂದರೆಯಿಲ್ಲ ಎನ್ನುವ ಅಭಿಪ್ರಾಯ ಒಟ್ಟಾರೆ ಸಮಾಜದಲ್ಲಿ ನಿರ್ಮಾಣವಾಗಿತ್ತು. ಇಂತಹ ಯೋಚನೆ, ಅಭಿಪ್ರಾಯಗಳಿಗೆ ಒಳಗಾದವರು ಶೂದ್ರ ಸಮುದಾಯದವರೇ ಹೊರತು ಬ್ರಾಹ್ಮಣರೂ ಅಲ್ಲ, ಪರಿಶಿಷ್ಟ ಜಾತಿ, ಪಂಗಡದವರೂ ಅಲ್ಲ. ಪರಿಶಿಷ್ಟ ಜಾತಿಗಳವರಿಗೆ ಶಾಲೆಗಳಿಗೆ ಹೋಗುವುದಕ್ಕಿರುವ ಪ್ರೋತ್ಸಾಹದ ಯೋಜನೆಗಳು ಕಾಪಿಕಾಡು ಕಾಲನಿಯ ಜನರಿಗೆ ತಲುಪಿ ಅಲ್ಲಿನ ಹೆಣ್ಣು ಮಕ್ಕಳು ಹೈಸ್ಕೂಲಿಗೆ ಹೋದವರೇ. ಆದರೆ ಅಲ್ಲಿನ ಗಂಡು ಮಕ್ಕಳ ಬಗ್ಗೆ ಪೂರ್ಣವಾಗಿ ಈ ಮಾತು ಅನ್ವಯಿಸುವುದಿಲ್ಲ ಆ ದಿನಗಳಲ್ಲಿ. ವಿದ್ಯಾವಂತರಾದ ಹುಡುಗರೂ ಇದ್ದಾರೆ. ಉಳಿದವರು ಗೋಲಿ ಆಟ, ಗೇರು ಬೀಜದ ಆಟ, ತೆಂಗಿನಕಾಯಿ ಕುಟ್ಟುವ ಆಟಗಳಲ್ಲಿ ಕಳೆದು ಹೋದವರೂ ಇದ್ದಾರೆ. ಈ ಮಾತುಗಳು ಹುಡುಗಿಯರಿಗೆ ಅನ್ವಯಿಸುವುದಕ್ಕೆ ಅವಕಾಶವಿರಲಿಲ್ಲ. ಯಾಕೆಂದರೆ ನನ್ನ ಓರಗೆಯ ಹಿರಿಯ ಕಿರಿಯ ಸಹಪಾಠಿಗಳು ಸರಕಾರಿ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವುದರಿಂದಲೇ ಕಾಪಿಕಾಡು ಕಾಲನಿಯ ಜನರೂ ಸಮಾಜದ ಮುಖ್ಯ ಪ್ರವಾಹಕ್ಕೆ ಸೇರಿಕೊಳ್ಳುವುದಕ್ಕೆ ಮೊದಲ ಅವಕಾಶಗಳನ್ನು ಪಡೆದಿದ್ದಾರೆ. ನನ್ನ ಯೋಚನೆ ನನ್ನನ್ನು ಬಿಟ್ಟು ನನ್ನ ಸಹಪಾಠಿಗಳ ಬಗ್ಗೆ ಹರಿಯಿತು. ಅದು ಸರಿಯೇ. ಈಗ ನಾನು ಪ್ರಥಮ ಶ್ರೇಣಿ ಪಾಸಾದುದಂತೂ ಸಂತೋಷವೇ. ಆದರೆ ಅಪ್ಪ ಶಿಕ್ಷಕ ತರಬೇತಿಗೆ ಸೇರಿಕೋ ಎಂದಾಗ ಮಾತ್ರ ಪ್ರಥಮ ಶ್ರೇಣಿಯಲ್ಲಿ ಪಾಸಾದ ನನಗೆ ತೀವ್ರ ನಿರಾಸೆಯಾಯಿತು. ಜೊತೆಗೆ ಅಮ್ಮನಿಗೂ ನಿರಾಸೆಯಾಯಿತು. ಆದರೆ ಈ ನಿರಾಸೆಯನ್ನು ಬದಲಾಯಿಸಿ ನಾನು ಕಾಲೇಜು ಮೆಟ್ಟಲು ಹತ್ತುವಂತೆ ನನ್ನ ಇಂದಿನ ಬದುಕಿನ ಮೊದಲ ಹೆಜ್ಜೆಗೆ ಕೈ ಹಿಡಿದು ಎತ್ತಿದವರು ಖುಲ್ಸುಮಾಬಿ ಎಂಬ ಹಬಿನಮ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News