×
Ad

ಖಂಡು ನೇತೃತ್ವದ ಪಿಪಿಎ ಸರಕಾರಕ್ಕೆ ಬಿಜೆಪಿ ಸೇರ್ಪಡೆ

Update: 2016-10-14 23:31 IST

ಇಟಾನಗರ,ಅ.14: ಬಿಜೆಪಿಯು ಮುಖ್ಯ ಮಂತ್ರಿ ಪೆಮಾ ಖಂಡು ನೇತೃತ್ವದ ಅರುಣಾಚಲ ಪ್ರದೇಶದ ಪಿಪಿಎ ಸರಕಾರದಲ್ಲಿ ಸೇರ್ಪಡಗೊಂಡಿದೆ. ಇದರೊಂದಿಗೆ ಅರುಣಾಚಲ ಪ್ರದೇಶವು ಬಿಜೆಪಿಯು ಅಧಿಕಾರದಲ್ಲಿರುವ 14ನೆಯ ರಾಜ್ಯ ಮತ್ತು ಪ್ರ್ರಾದೇಶಿಕ ಪಕ್ಷಗಳೊಂದಿಗೆ ಅದು ಅಧಿಕಾರವನ್ನು ಹಂಚಿಕೊಂಡಿರುವ ಆರನೇ ರಾಜ್ಯವಾಗಿದೆ.

ಬಿಜೆಪಿ ನಾಯಕ ತಾಮಿಯೊ ತಾಗಾ ಅವರು ಖಂಡು ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಾಪಿರ್ ಗಾವೊ ಸುದ್ದಿಸಂಸ್ಥೆಗೆ ತಿಳಿಸಿದರು.
ಸೆ.13ರಂದು ಖಂಡು ಮತ್ತು ಕಾಂಗ್ರೆಸ್‌ನ ಇತರ 42 ಶಾಸಕರು ಪಕ್ಷಾಂತರ ಮಾಡಿ ಬಿಜೆಪಿಯ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಅಂಗಪಕ್ಷವಾಗಿರುವ ಪ್ರಾದೇಶಿಕ ಪಕ್ಷ ಪಿಪಿಎ ಅನ್ನು ಸೇರಿದ ಒಂದು ತಿಂಗಳ ಬಳಿಕ ಈ ಮಹತ್ವದ ಮೈತ್ರಿ ಏರ್ಪಟ್ಟಿದೆ.
 ಸೆಪ್ಟಂಬರ್ ಮಧ್ಯಭಾಗದಲ್ಲಿ 42 ಇತರ ಶಾಸಕರೊಂದಿಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಖಂಡು, ರಾಜೀನಾಮೆ ಸರ್ವಾನುಮತದ ನಿರ್ಧಾರವಾಗಿದೆ. ಸಂಪನ್ಮೂಲಗಳ ಕೊರತೆಯಿರುವ ಅರುಣಾಚಲ ಪ್ರದೇಶದಂತಹ ರಾಜ್ಯಗಳು ತಮ್ಮ ಎಲ್ಲ ಅಗತ್ಯಗಳಿಗಾಗಿ ಕೇಂದ್ರವನ್ನೇ ಅವಲಂಬಿಸಬೇಕಿದೆ. ಕೇಂದ್ರದಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದ್ದರೆ ಸಮಸ್ಯೆಗಳು ಎದುರಾಗುತ್ತವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 60 ಸದಸ್ಯಬಲದ ವಿಧಾನಸಭೆಯಲ್ಲಿ ಪಿಪಿಎ 43 ಮತ್ತು ಬಿಜೆಪಿ 11ಶಾಸಕರನ್ನು ಹೊಂದಿದ್ದರೆ ಮಾಜಿ ಮುಖ್ಯಮಂತ್ರಿ ನಬಂ ಟುಕಿ ಅವರು ಕಾಂಗ್ರೆಸ್‌ನ ಏಕೈಕ ಶಾಸಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News