32 ವರ್ಷಗಳಲ್ಲಿ ಮೊದಲ ಬಾರಿಗೆ ಈ ಬಾರಿ ಎನ್‌ಎಸ್‌ಜಿ ಸ್ಥಾಪನಾ ದಿನಾಚರಣೆಯಿಲ್ಲ!

Update: 2016-10-16 13:38 GMT

ಹೊಸದಿಲ್ಲಿ, ಅ.16: ತನ್ನ 32 ವರ್ಷಗಳ ಇತಿಹಾಸದಲ್ಲಿ ದೇಶದ ಉನ್ನತ ಒಕ್ಕೂಟ ಭಯೋತ್ಪಾದನೆ ನಿಗ್ರಹ ಪಡೆಯಾಗಿರುವ ರಾಷ್ಟ್ರೀಯ ಭದ್ರತಾ ಗಾರ್ಡ್ ಮೊದಲ ಬಾರಿಗೆ ಇಂದು ತನ್ನ ಪಾರಂಪರಿಕ ಸ್ಥಾಪನಾ ದಿನದ ಸಮಾರಂಭವನ್ನು ನಡೆಸದಿರಲು ನಿರ್ಧರಿಸಿವೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ ಬಳಿಕ ಭದ್ರತೆಯನ್ನು ಬಿಗುಗೊಳಿಸಿರುವುದರಿಂದಾಗಿ, ದೇಶಾದ್ಯಂತ ಅದಕ್ಕೆ ಹಲವು ತುರ್ತು ಕೆಲಸಗಳಿರುವುದರಿಂದ ಸಮಾರಂಭದಲ್ಲಿ ಭಾಗವಹಿಸಲು ಅಸಾಧ್ಯವಾಗಿದೆಯೆಂಬ ಕಾರಣವನ್ನು ಅದು ನೀಡಿದೆ.

1984ರಲ್ಲಿ ಸ್ಥಾಪನೆಗೊಂಡಿರುವ ‘ಬ್ಲಾಕ್ ಕ್ಯಾಟ್ಸ್’ ಕಮಾಂಡೊ ದಳವು ಹೊಸದಿಲ್ಲಿಯ ಸಮೀಪದ ಮನೇಸರ್‌ನಲ್ಲಿರುವ ತನ್ನ ಮುಖ್ಯಾಲಯದಲ್ಲಿ ಈ ಬಾರಿ ಭಯೋತ್ಪಾದನೆ ನಿಗ್ರಹ ಅಪಹರಣ ತಡೆ ಕವಾಯತುಗಳ ಸಾರ್ವಜನಿಕ ಪ್ರದರ್ಶನವನ್ನು ನಡೆಸದಿರಲು ನಿರ್ಧರಿಸಿದೆ. ಅದರ ಬದಲು, ಕೇವಲ ಕಮಾಂಡೋಗಳಿಗೆ ಬಡಾಖಾನಾ(ಔತಣ) ಹಾಗೂ ಭಯೋತ್ಪಾದನೆಯ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವೊಂದನ್ನು ಅದು ನಡೆಸಲಿದೆ.

ಪ್ರತಿ ವರ್ಷ ಎನ್‌ಎಸ್‌ಜಿ ಸ್ಥಾಪನಾ ದಿನನಂದು ಅದ್ದೂರಿಯ ಸಮಾರಂಭ ನಡೆಸುತ್ತದೆ ಹಾಗೂ ಮುಖ್ಯ ಅಭ್ಯಾಗತರಾಗಿ ಹಾಗೂ ಅದರ ಸಿಬ್ಬಂದಿಯನ್ನು ಗೌರವಿಸಲು ಕೇಂದ್ರ ಸಚಿವರೊಬ್ಬರನ್ನು(ಗೃಹ ಸಚಿವಾಲಯ) ಆಹ್ವಾನಿಸುತ್ತದೆ.

ಎನ್‌ಎಸ್‌ಜಿಯ ನೂತನ ಮಹಾ ನಿರ್ದೇಶಕ ಎಸ್.ಪಿ. ಸಿಂಗ್, ಸಾರ್ವಜನಿಕ ಸಮಾರಂಭಗಳನ್ನು ನಡೆಸದಿರುವ ನಿರ್ಧಾರ ಕೈಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News