ಕಾಶ್ಮೀರ ಅಶಾಂತಿ ಪರ್ವಕ್ಕೆ 100 ದಿನ!
ಶ್ರೀನಗರ, ಅ.16: ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಅಶಾಂತಿ ಪರ್ವ 100ನೆ ದಿನವನ್ನು ಪೂರೈಸಿದೆ. ಆದಾಗ್ಯೂ, ಕಣಿವೆಯ ಪರಿಸ್ಥಿತಿ ಸುಧಾರಿಸಿರುವುದರಿಂದ ಕರ್ಫ್ಯೂವನ್ನು ಹಿಂದೆಗೆಯಲಾಗಿದೆ.
ಈ 100 ದಿನಗಳಲ್ಲಿ ಇಬ್ಬರು ಪೊಲೀಸರು ಸಹಿತ 84 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಅವರು ಆಗಾಗ ಘೋಷಿಸುತ್ತಿದ್ದ ಸಡಿಲಿಕೆಯ ಹೊರತಾಗಿ ಸತತ 100 ದಿನಗಳಿಂದ ಬಂದ್ ಮುಂದುವರಿದಿದೆ. ಸಡಿಲಿಕೆಯ ಸಮಯದ ಹೊರತು ಅಂಗಡಿ-ಮುಂಗಟ್ಟು, ವ್ಯವಹಾರ ಸ್ಥಳಗಳು, ಮಾರುಕಟ್ಟೆಗಳು, ಪೆಟ್ರೋಲ್ ಬಂಕ್‌ಗಳು ಮುಚ್ಚಿದ್ದವು. ಶಾಲಾ-ಕಾಲೇಜುಗಳು ಹಾಗೂ ಇತರ ಶಿಕ್ಷಣ ಸಂಸ್ಥೆಗಳಿಗೆ ಅಡಚಣೆಯಾಗಿತ್ತು.
ಅಧಿಕಾರಿಗಳು ಹೆಚ್ಚಿನ ದಿನಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದರು. ಆದರೆ, ರವಿವಾರ ಕಣಿವೆಯಲ್ಲೆಲ್ಲೂ ಕರ್ಫ್ಯೂ ಇರಲಿಲ್ಲ. ಆದಾಗ್ಯೂ, ಕಾನೂನು-ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆಯ ಕ್ರಮವಾಗಿ ಕಣಿವೆಯಾದ್ಯಂತ 144ನೆ ಸೆಕ್ಷನ್ ಮುಂದುವರಿದಿದೆ.