×
Ad

ಮೋದಿ ಪಾಕ್ ಔತಣ ಸವಿದದ್ದು ಸರಿಯೇ?

Update: 2016-10-16 23:31 IST

ಮುಂಬೈ, ಅ.16: ಪಾಕಿಸ್ತಾನಿ ನಟರಿರುವ ಚಿತ್ರಗಳನ್ನು ನಾಲ್ಕು ರಾಜ್ಯಗಳಲ್ಲಿ ಪ್ರದರ್ಶಿಸದಿರುವ ನಿರ್ಧಾರವನ್ನು ಸುಮಾರು 450 ಚಿತ್ರ ಮಂದಿರಗಳ ಮಾಲಕರ ಗುಂಪೊಂದು ಘೋಷಿಸಿದ ಬಳಿಕ, ತೊಂದರೆಗೆ ಸಿಲುಕಿರುವ, ‘ಯೇ ದಿಲ್ ಹೈ ಮುಶ್ಕಿಲ್’ ಚಿತ್ರದ ಬಿಡುಗಡೆಗೆ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ತಾರೆಯರಾದ ಆಲಿಯಾ ಭಟ್ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ನಟರಿರುವ ಚಿತ್ರಗಳನ್ನು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಹಾಗೂ ಗೋವಾಗಳಲ್ಲಿ ಬಿಡುಗಡೆ ಮಾಡುವುದಿಲ್ಲವೆಂದು ಇತ್ತೀಚೆಗೆ, ಭಾರತದ ಚಿತ್ರಮಂದಿರಗಳ ಮಾಲಕರು ಹಾಗೂ ಪ್ರದರ್ಶಕರ ಸಂಘಟನೆ(ಸಿಒಇಎಐ) ಹೇಳಿತ್ತು.
ಇದರಿಂದಾಗಿ ಪಾಕಿಸ್ತಾನಿ ನಟ ಫವಾದ್‌ಖಾನ್ ನಟಿಸಿರುವ, ಕರಣ್ ಜೋಹರ್‌ರ ‘ಯೇ ದಿಲ್ ಹೈ ಮುಶ್ಕಿಲ್’ ಚಿತ್ರದ ಬಿಡುಗಡೆ ಅನಿಶ್ಚಿತತೆಯಲ್ಲಿ ಸಿಲುಕಿತ್ತು. ಐಶ್ವರ್ಯಾ ರೈ, ರಣಬೀರ್ ಕಪೂರ್ ಹಾಗೂ ಅನುಷ್ಕಾ ಶರ್ಮಾ ತಾರಾ ಬಳಗದಲ್ಲಿರುವ ಈ ಚಿತ್ರವನ್ನು ಅ.28ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಶ್ಯಪ್, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಲಾಹೋರ್‌ಗೆ ನೀಡಿದ್ದ ಭೇಟಿಯನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಔತಣ ಬಡಿಸುತ್ತಿದ್ದ ಸಮಯದಲ್ಲಿ ಕರಣ್ ಜೋಹರ್ ಚಿತ್ರೀಕರಣ ನಡೆಸುತ್ತಿದ್ದರೆಂದು ಅವರು ಹೇಳಿದ್ದಾರೆ.
ಕಶ್ಯಪ್‌ರ ಈ ಟೀಕೆಯನ್ನು ಬಿಜೆಪಿ ಖಂಡಿಸಿದೆ. ಇದೊಂದು ರಾಜಕೀಯ ಟೀಕೆಯಾಗಿದೆ. ಅವರು ವಿದೇಶಾಂಗ ನೀತಿಯನ್ನು ಚಲನಚಿತ್ರವೊಂದರ ನಿಧಿ ಹೂಡಿಕೆಗೆ ಸಮೀಕರಿಸುವುದು ವಿಷಾದನೀಯವೆಂದು ಪಕ್ಷದ ವಕ್ತಾರ ನಳಿನ್ ಕೊಹ್ಲಿ ತಿಳಿಸಿದ್ದಾರೆ.
ಚಿತ್ರಪ್ರದರ್ಶನ ನಿಷೇಧವನ್ನು ಆಲಿಯಾ ಭಟ್ ಹಾಗೂ ಸ್ವರ ಭಾಸ್ಕರ್ ಸಹ ಆಕ್ಷೇಪಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News