×
Ad

ಏಣಿಗಳನ್ನು ಬಳಸಿ ಗಡಿಬೇಲಿ ದಾಟಿದ್ದ ಉಗ್ರರು!

Update: 2016-10-16 23:32 IST

ಹೊಸದಿಲ್ಲಿ, ಅ.16: ಕಳೆದ ತಿಂಗಳು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಸೈನಿಕರ ಹತ್ಯೆ ನಡೆಸಿದ್ದ ನಾಲ್ವರು ಭಯೋತ್ಪಾದಕರು ನಿಯಂತ್ರಣ ರೇಖೆಯ ವಿದ್ಯುತ್ ಬೇಲಿಯನ್ನು ಏರಲು ಏಣಿಯನ್ನು ಉಪಯೋಗಿಸಿದ್ದಾರೆ ಎನ್ನಲಾಗಿದೆ.

ಅವರು ಸಲಾಮಾಬಾದ್ ನಾಲಾದ ಬಳಿ ಏಣಿಯನ್ನೇರಿ ಒಳನುಸುಳಿದ್ದಾರೆಂದು ಭಯೋತ್ಪಾದಕರ ಒಳ ನುಸುಳುವಿಕೆಯ ಮಾರ್ಗದ ಕುರಿತು ಸೇನೆ ನಡೆಸಿದ ತನಿಖೆಯಿಂದ ತಿಳಿದುಬಂದಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ನಾಲ್ವರಲ್ಲೊಬ್ಬ ಭಯೋತ್ಪಾದಕ ಸಲಾಮಾಬಾದ್‌ನಲ್ಲಿ ಗಡಿಬೇಲಿಯಲ್ಲಿದ್ದ ಗಂಡಿಯೊಂದನ್ನು ನುಸುಳಿ ಭಾರತದ ಕಡೆಗೆ ಬಂದು ಬೇಲಿಗೆ ಏಣಿಯನ್ನು ಇರಿಸಿದ್ದನು. ಇನ್ನೊಂದು ಏಣಿ ಆ ಕಡೆಯಿದ್ದ ಮೂವರ ಬಳಿಯಿತ್ತು. ಎರಡು ಏಣಿಗಳನ್ನು ಪಾದಚಾರಿ ಸೇತುವೆಯಂತೆ ಜೋಡಿಸಲಾಗಿತ್ತೆಂದು ಸೇನಾಧಿಕಾರಿಗಳು ವಿವರಿಸಿದ್ದಾರೆ.
ನಾಲ್ವರಲ್ಲೂ ಸ್ಫೋಟಕ ಆಹಾರ ಹಾಗೂ ಶಸ್ತ್ರಾಸ್ತ್ರ ತುಂಬಿದ್ದ ಭಾರೀ ಚೀಲಗಳಿದ್ದುದರಿಂದಾಗಿ, ಎಲ್ಲರಿಗೂ ಆ ಗಂಡಿಯಿಂದ ನುಸುಳಲು ಸಾಧ್ಯವಿರಲಿಲ್ಲ. ಆ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ಭದ್ರತಾ ಪಡೆಗಳ ಕಣ್ಣಿಗೆ ಬೀಳದಂತೆ ಜೀವವನ್ನು ಒತ್ತೆಯಿಟ್ಟು ಬೇಲಿ ದಾಟಲು ಉಗ್ರರಿಗೆ ಬಹಳ ಸಮಯ ಹಿಡಿದಿರಬಹುದೆಂದು ಅವರು ಅಭಿಪ್ರಾಯಿಸಿದ್ದಾರೆ.
ಭಾರತದೊಳಗೆ ನುಸುಳಿದ ಬಳಿಕ ಭಯೋತ್ಪಾದಕರು ಎರಡೂ ಏಣಿಗಳನ್ನು ಮಾರ್ಗದರ್ಶಕರಾಗಿದ್ದ ಮುಹಮ್ಮದ್ ಕಬೀರ್ ಅಮೀನ್ ಹಾಗೂ ಬಶರತ್ ಎಂಬವರಿಗೆ ಹಸ್ತಾಂತರಿಸಿದ್ದರು. ಸುಳಿವು ತಿಳಿಯದಂತೆ ಅದನ್ನು ಮಾಡಲಾಗಿತ್ತೆಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News