‘ಲೈವ್ ಶೋ’ ಕುರಿತಾಗಿ ಒಂದು ‘ಲೈವ್ ಚರ್ಚೆ’

Update: 2016-10-17 18:01 GMT

ಎಷ್ಟೇ ದೊಡ್ಡವರಾಗಿದ್ದರೂ ಕೆಲವು ಮನುಷ್ಯರು ಸಂಯುಕ್ತ (integrated)ವ್ಯಕ್ತಿಗಳಾಗಿಯೇನೂ ಇರುವುದಿಲ್ಲ. ಅವರ ವ್ಯಕ್ತಿತ್ವದಲ್ಲಿ ಹಲವು ಚೇಂಬರುಗಳಿರುತ್ತವೆ: ವೈಚಾರಿಕ, ಧಾರ್ಮಿಕ, ಆಧ್ಯಾತ್ಮಿಕ ಮುಂತಾಗಿ. ಆದ್ದರಿಂದಲೇ ದೈವಭಕ್ತರಾಗಿರುವ ವಿಜ್ಞಾನಿಗಳೂ ನಮಗೆ ಕಾಣಸಿಗುವುದು. ಪ್ರತಿಯೊಬ್ಬ ಸಂತನ ಹಿಂದೆ ಒಬ್ಬ ಪಾಪಿಯಿದ್ದಾನೆ, ಪ್ರತಿಯೊಬ್ಬ ಪಾಪಿಯ ಮುಂದೆ ಒಬ್ಬ ಸಂತನೂ ಇದ್ದಾನೆ ಎಂಬ ಮಾತಿದೆಯಲ್ಲ; ಕೆಲವು ವ್ಯಕ್ತಿಗಳಲ್ಲಿ (ವಾಸ್ತವವೆಂದರೆ ಹಲವು ವ್ಯಕ್ತಿಗಳಲ್ಲಿ) ಸಂತನೂ ಪಾಪಿಯೂ ಒಟ್ಟಿಗೇ ಇರುತ್ತಾರೆ. ವಿರೋಧಾಭಾಸಗಳಿಲ್ಲದ ಮನುಷ್ಯರೇ ಲೋಕದಲ್ಲಿಲ್ಲ. ಇನ್ನು ಹಲವರು ‘‘ಪಾಸ್ಕಾಲ್‌ನ ಪಣ’’ (Pascal’s wager) ತೊಟ್ಟವರು. ಅವರೇನೂ ಖಂಡಿತವಾದಿಗಳಲ್ಲ. ನಂಬೋಣ, ಅದರಿಂದ ನಮಗಾಗುವ ನಷ್ಟವೇನೂ ಇಲ್ಲ, ನಂಬದಿದ್ದರೆ ಎಲ್ಲವನ್ನೂ ಕಳಕೊಳ್ಳುತ್ತೇವೆ ಎನ್ನುವವರು.

 4. ಒಬ್ಬಾತ/ಕೆಯ ‘‘ಜೀವನ ಪಠ್ಯ’’ವನ್ನು ಆತನ ಬಾಲ್ಯಾವಸ್ಥೆಯ- ನಂತರದ ಆಯುಷ್ಯಕ್ಕೆ ಹೋಲಿಸಿದರೆ ಬಹಳ ಕಡಿಮೆ ಕಾಲಾವಧಿಯ- ಅನುಭವಗಳು ಮತ್ತು ಅವುಗಳಿಂದ ಹೊರಬಂದ ಭಾವನಾತ್ಮಕತೆಯೇ ನಿರ್ಧರಿಸುತ್ತದೆ, ಹಣೆ ಬರಹದಂತೆ ಎಂಬ ಮಹತ್ವದ ಮನೋವೈಜ್ಞಾನಿಕ ಪ್ರಮೇಯ ಸಹ ಭಾವನಾತ್ಮಕತೆಗೇ ಬಹಳಷ್ಟು ಒತ್ತು ನೀಡುವುದು...ಮತ್ತು ಇದನ್ನು ವೃದ್ಧಿಗೊಳಿಸಲೆಂಬಂತೆ ಇತ್ತೀಚಿನ ವರ್ಷಗಳಲ್ಲಿ ಅನ್ವೇಷಣೆಗೊಂಡ ಮತ್ತು ಹಿಂದಿನ ಮಾಪನವಾಗಿದ್ದ ‘‘ಬುದ್ಧಿಮತ್ತೆಯ ಸಂಖ್ಯೆ’’ಗಿಂತ-Intelligent Quotient   ಜಾಸ್ತಿ ನಿರ್ಣಯಾತ್ಮಕ ಎನ್ನಲಾಗುವ ಭಾವನಾತ್ಮಕ ಬುದ್ಧಿಮತ್ತೆ ಸಂಖ್ಯೆ- Emotional Intelligent  Quotient -ಮಾಪನ. ವೈಚಾರಿಕತೆ, ಮನುಷ್ಯನ ಮೂಲ ಪ್ರವೃತ್ತಿ ಅಲ್ಲ (ಭಾಗಶಃ) ಎಂದು ಇದರಿಂದ ತರ್ಕಿಸಬಹುದೇ?
ಇಮೋಶನಲ್ ಕೋಶೆಂಟ್ ಯಾವ ಮಾಪಕದ ಮೆಲೆ ನಿರ್ಧರಿಸು ತ್ತಾರೋ ನನಗೆ ತಿಳಿಯದು. ವೈಚಾರಿಕತೆ ಮತ್ತು ಭಾವನಾತ್ಮಕತೆ ಎಂಬ ದ್ವಂದ್ವದ ಕುರಿತೇ ನನಗೆ ಸ್ಪಷ್ಟತೆಯಿಲ್ಲ, ಇದ್ದವರು ಹೇಳಬೇಕು.

ಒಂದು ದನ ಕರುವಿನ ಮೈ ನೆಕ್ಕುವುದು ಆ ಮೈಯಲ್ಲಿನ ಉಪ್ಪಿಗೋಸ್ಕರ; ಆದರೆ ತಾಯಿದನ ನೆಕ್ಕುವ ಮೂಲಕ ತನ್ನ ಕಂದನ ಮೇಲೆ ಪ್ರೀತಿ ತೋರಿಸುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ; ಯಾಕೆಂದರೆ ಇದು ನಾವು ಸ್ವತಃ ತಾಯಿ-ಮಗುವಿನ ಪ್ರೀತಿಯನ್ನು ಕಲ್ಪಿಸುವ ರೀತಿ. ಪ್ರೀತಿ ಎನ್ನುವ ಇಮೋಶನ್ ನಮಗೆ ಬಹಳ ಮುಖ್ಯ. ಆದರೆ ಇದು ವೈಚಾರಿಕತೆಗೆ ವಿರುದ್ಧವಾಗಬೇಕಿಲ್ಲ. ದನ ಕರುವಿನ ಮೈ ನೆಕ್ಕುವುದು ಉಪ್ಪಿನ ರುಚಿಗೋಸ್ಕರ ಎಂದು ಗೊತ್ತಿದ್ದೂ ಅಲ್ಲಿ ಪ್ರೀತಿಯನ್ನು ಕಲ್ಪಿಸುವುದು ಸಾಧ್ಯ. ಒಂದು ವೇಳೆ ವೈಚಾರಿಕತೆ ಮನುಷ್ಯನ ಮೂಲ ಪ್ರವೃತ್ತಿಯಲ್ಲ ಎಂದಾದರೂ ಮನುಷ್ಯ ಜೀವನದ ಮೇಲೆ ಅದು ಬೀರುವ ಪ್ರಭಾವವೇನೂ ಕಡಿಮೆಯಾಗುವುದಿಲ್ಲ. ನಾವು ತೆಗೆದುಕೊಳ್ಳುವ ಹಲವು ನಿರ್ಣಯಗಳು ತಾರ್ಕಿಕ ಚಿಂತನೆಯ ಮೇಲೆಯೇ ಅವಲಂಬಿಸಿವೆ. ಇನ್ನು ಬಾಲ್ಯಜೀವನದ ಇಮೋಶನಲ್ ಅನುಭವಗಳು-ಉದಾಹರಣೆಗೆ, ನಮಗೆ ಸಿಗುವ ಅಥವಾ ಸಿಗದ ಪ್ರೀತಿ ವಿಶ್ವಾಸಗಳು, ಅನುಕಂಪಗಳು, ಪ್ರೋತ್ಸಾಹಗಳು, ಲೈಂಗಿಕ ಅನುಭವಗಳು ಜೀವನದ ಉದ್ದಕ್ಕೂ ಪ್ರಭಾವ ಬೀರುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಅಪ್ಪ ಅಮ್ಮನ ನಡುವಣ ಜಗಳ ಮಕ್ಕಳ ಮನಸ್ಸನ್ನು ಖಂಡಿತವಾಗಿಯೂ ಬಾಧಿಸುತ್ತದೆ. ಆಧುನಿಕ ಮನೋವಿಜ್ಞಾನ ಇಂಥ ಹಲವು ಸೂಕ್ಷ್ಮಸಂಗತಿಗಳನ್ನು ಹೊರಕ್ಕೆ ತಂದಿದೆ. ಬಹುಶಃ ಇತರರ ಜೀವ ತೆಗೆಯುವ ಉಗ್ರವಾದಿಗಳು ಭಾವನಾತ್ಮಕ ಸಂಬಂಧಗಳಿಂದ ವಂಚಿತರಾಗಿದ್ದರೂ ಇರಬಹುದು. ಇದನ್ನೆಲ್ಲ ಅರಿತುಕೊಳ್ಳುವುದಕ್ಕೆ, ತಪ್ಪಾದಲ್ಲಿ ಸರಿಪಡಿಸುವುದಕ್ಕೆ ನಮಗೆ ವೈಚಾರಿಕ ಪರಿಜ್ಞಾನ ಬೇಕಾಗುತ್ತದೆ. ತಾನು ಓದುವ ಕಾಲಕ್ಕೆ ತನಗೆ ಸರಿಯಾದ ಊಟ ಸಿಗಲಿಲ್ಲವೆನ್ನುವ ಕಾರಣಕ್ಕೆ ಸಾಮಾಜಿಕ ಕ್ರೋಧವನ್ನು ಬೆಳೆಸಿಕೊಂಡು ಒಬ್ಬ ಸರ್ಜನ್ ಟೇಬಲಿನ ಮೇಲಿರುವ ರೋಗಿಯನ್ನು ಕೊಲ್ಲಬೇಕೆಂದಿಲ್ಲ; ತನ್ನ ಸರ್ಜರಿ ಬಗ್ಗೆ ಮಾತ್ರ ಯೋಚಿಸಿ ಅದನ್ನು ಯಶಸ್ವಿಯಾಗಿ ಮುಗಿಸಿದರೆ ಅವನು ಗೆಲ್ಲುತ್ತಾನೆ. ವಿಚಾರವಂತಿಕೆ ಎಂದರೆ ಇದುವೇ. *

5. ಭಾವನೆಗಳ ಆವೇಗವನ್ನು ಸಹಾನುಭೂತಿಯಿಂದ ನೋಡುತ್ತ ನೋಡುತ್ತ, ವಿವಾಹೇತರ ಪ್ರೇಮಸಂಬಂಧಗಳನ್ನು ಗೌರವಿಸುವ ಮತ್ತು ಅವುಗಳಿಂದ ಜನಿಸಿದ ಮಕ್ಕಳನ್ನು ಕಳಂಕಿತರೆನ್ನದೆ ನೋಡುವ ಉದಾರತೆಯೂ ಈಗೀಗ ಕಾಣುತ್ತಿದೆ. ಪ್ರಮುಖ ಇಂಗ್ಲಿಷ್ ನಿಯತಕಾಲಿಕವೊಂದು ಇತ್ತೀಚೆಗೆ ‘‘ಪ್ರೇಮಸಂತಾನ’’ (Love Children)ವಿಷಯದ ಮೇಲೆ ‘‘ಕವರ್ ಸ್ಟೋರಿ’’ ಮಾಡಿತು. ಮಹಿಳೆಯರು ವಿವಾಹಿತ ಪುರುಷರನ್ನು ಪ್ರೇಮದಲ್ಲಿ ‘‘ಸಿಲುಕಿಸಿಕೊಳ್ಳಬಹುದೆ’’ ಎಂಬ ಟಿವಿ ಚರ್ಚೆ ಎತ್ತಲೂ ಮುಟ್ಟದೇ ಇದ್ದಾಗ ಒಬ್ಬಾಕೆ, ‘‘ಅರೆ, ಹೆಂಗಸರೂ ಮನುಷ್ಯರಲ್ಲವೇ? ಹೀಗಾಗುವುದು ಖಂಡಿತಾ ಕೂಡದೆಂದು ಚರ್ಚಿಸಿ, ನಿರ್ಣಯಿಸಿಬಿಟ್ಟರೆ ಸಾಕೇ? ಜೀವನ ಸಂದರ್ಭಗಳು ಹೇಗೆ ಬರುತ್ತದೋ’’ ಎಂದದ್ದು ಗೋಜಲಿನ ಒಂದು ಎಳೆ ಬಿಡಿಸಿಟ್ಟಿತು. ಆದರೆ, ಸಮಾಜ ಸ್ವಾಸ್ಥಕ್ಕೆ ಕಡೆಗೂ ಮುಖ್ಯವಾಗುವುದು, ಆಪ್ತ ಸಲಹೆಗಾರರು ಈ ವಿಷಯ ಕುರಿತು ‘‘ಯೋಚಿಸಿ’’ ನೀಡುವ ಸಲಹೆ: ‘‘ಸಂಬಂಧಗಳನ್ನು ಕಾನೂನಾತ್ಮಕ ಮಾಡಿಕೊಳ್ಳಿ...ಹಾಗಾಗುವುದು ಸಾಧ್ಯವಿಲ್ಲದಿದ್ದಾಗ ಅವುಗಳನ್ನು ಗಟ್ಟಿ ಮನಸ್ಸು ಮಾಡಿ ಕೈಬಿಡಿ’’. ಇದು ಏನನ್ನು ಹೇಳುತ್ತದೆ? ಇದನ್ನು ಪಾಲಿಸುವ ಅಭ್ಯರ್ಥಿಗಳೆಷ್ಟು? ಮುಕ್ತ ಲೈಂಗಿಕತೆಯನ್ನು ಬೆಂಬಲಿಸುವವರು ಕೂಡ ಇದ್ದಾರೆ.

19ನೆ ಶತಮಾನದ ಇಂಗ್ಲಿಷ್ ಕವಿ ಶೆಲ್ಲಿ ಬೆಂಬಲಿಸುತ್ತಿದ್ದ. ಮದುವೆಯೇ ಬೇಡ ಎನ್ನುವವರಿದ್ದಾರೆ. ಬೇಕೆಂದಾಗ ಹೆಣ್ಣು-ಗಂಡುಗಳು ಹತ್ತಿರ ಬರುವುದು, ಬೇಡವೆಂದಾಗ ದೂರ ಸರಿಯುವುದು. ‘‘ಲಿವಿಂಗ್-ಇನ್ ರಿಲೇಶನ್‌ಶಿಪ್’’. ಹುಟ್ಟುವ ಮಕ್ಕಳು? ಅವರ ಗತಿಯೇನು? ಅವು ಸ್ಟೇಟ್ ಪ್ರಾಪರ್ಟಿಯಾದರೆ ಹೇಗೆ? ಈಗ ಟೆಸ್ಟ್‌ಟ್ಯೂಬ್ ಬೇಬಿಗಳು ಬರುತ್ತಿವೆ. ಮುಂದೆ ಕ್ಲೋನಿಂಗ್ ಕೂಡ ಸಾಧ್ಯವಾಗಬಹುದು. ನಮಗೆ ಬೇಕಾದ ಬೇಬಿಗಳನ್ನು (ಸಿಂಗಲ್ ಪೇರೆಂಟೋ ಡಬಲ್ ಪೇರೆಂಟ್ಸೋ) ಕೊಂಡು ತಂದು ನಾವು ಮಾಡುವುದೇನು? ಪ್ರೇಮಸಂತಾನವೋ ಕಾಮಸಂತಾನವೋ ಏನಾದರೇನು, ತಂದೆ ತಾಯರಿಗೆ ಮಕ್ಕಳೊಂದಿಗೆ ಕಳೆಯಲು ವೇಳೆಯಿಲ್ಲದಿದ್ದರೆ? ಮಕ್ಕಳ ಕುರಿತು ಮಾತಾಡುವ ನಾವು ವೃದ್ಧರ ಕುರಿತು ಅದರ ಒಂದು ಚಿಕ್ಕ ಅಂಶದಷ್ಟಾದರೂ ಮಾತಾಡುತ್ತೇವೆಯೇ? ಹಲವು ದೈಹಿಕ ಕಾಯಿಲೆಗಳಿಂದಲೂ ಮಾನಸಿಕ ಸಮಸ್ಯೆಗಳಿಂದಲೂ ಬಳಲುವ ಅವರಿಗೂ ಪ್ರೀತಿ, ಮಮತೆ, ಸಾಂತ್ವನ, ಕನಿಷ್ಠ ಆಶ್ರಯ ಬೇಡವೇ? ಎಲ್ಲಿ ಹೋಯಿತು ಭಾರತೀಯ ಚಿಂತನಾಕ್ರಮ? ಅದೇ ರೀತಿ, ಇತರ ದುರ್ಬಲ ವರ್ಗದ ಜನರೂ ಇದ್ದಾರೆ: ವಿಶಿಷ್ಟ ಚೇತನರು, ಉನಾಂಗರು, ತ್ರಿಲಿಂಗಿಗಳು ಮುಂತಾಗಿ; ಎಲ್ಲರೂ ಮನುಷ್ಯರು, ನಮಗೆ ಬೇಕಾದ ಪ್ರೀತಿ ಪ್ರೇಮ ಅವರಿಗೂ ಬೇಕಾಗಿದೆ. 6. ಮೇಲೆ ಹೇಳಿದಂತಹ ಸಮಸ್ಯೆಗಳನ್ನು ಸ್ವತಃ ಪರಿಹರಿಸಿಕೊಳ್ಳಲು ಸಾಧ್ಯವಾಗುವಂತೆ, ಮನುಷ್ಯನ ಭಾವನಾತ್ಮಕ ವಿವೇಚನೆ ಕುರಿತು ಅಗಾಧವಾಗಿ ಸೃಷ್ಟಿಯಾಗಿರುವ, ಅನುದಿನವೂ ಒಂದಷ್ಟು ಸೇರಿಸಲ್ಪಡುವ ‘‘ಮೆದು ಕೌಶಲ’’- Soft Skills  ಕುರಿತಾದ ಬರವಣಿಗೆ ಹಾಗೂ ವೈಜ್ಞಾನಿಕ, ಐತಿಹಾಸಿಕ ಮತ್ತಿತರ ಶೋಧ, ಸಮಸ್ಯೆ, ಪರಿಹಾರ ಹಾಗೂ ಅದು ತರುವ ಬೌದ್ಧಿಕ ಆನಂದದ ಬರವಣಿಗೆಗಳ ಒಟ್ಟು ಉತ್ಪಾದನೆ ಹೋಲಿಸಿದಾಗ, ಎರಡನೆಯದರ ನ್ಯಾಯಯುತ ಜಾಗವನ್ನು ಮೊದಲನೆಯದು, ಪತ್ರಿಕೆ, ಟಿವಿ, ವೆಬ್, ವೀಡಿಯೊ ಇತ್ಯಾದಿ ಜನಪ್ರಿಯ ಮಾಧ್ಯಮಗಳಲ್ಲಿ ಅತಿಕ್ರಮಿಸಿರುವುದು ಮತ್ತು ಅದರಿಂದ ಓದುಗರಿಗೆ ಆಗುತ್ತಿರುವ ನಷ್ಟ. ಬಹುತೇಕ ಪತ್ರಿಕೆಗಳಲ್ಲಿ ಹಿಂದೆ ಇರುತ್ತಿದ್ದ ಶುದ್ಧ ವಿಜ್ಞಾನ ಸಪ್ಲಿಮೆಂಟ್ ಸಂಚಿಕೆಗಳು ಕ್ರಮೇಣ ಮಾಯವಾಗಿವೆ. ಈ ಮೆದುಕೌಶಲಗಳೂ ಕಾಲ ಸರಿದಂತೆ ‘‘ಉಪಚಾರ ಭಾವನೆ’’ಗಳಾಗುತ್ತವೆ. ಉದಾಹರಣೆಗೆ ವೈಫಲ್ಯ ಜೀವನದಲ್ಲಿ ಇರಲೇಕೂಡದು (Don't be a loser). ಪರಾಮರ್ಶೆಗೊಳ್ಳದೆ ಇವು ಹಾಗೆಯೇ ಗಿರಕಿಹೊಡೆಯುತ್ತಿರುವ ಸಂಗತಿ..

‘‘ಮೆದು ಕೌಶಲಗಳು’’ ಜೀವನಕ್ಕೆ (ಎಂದರೆ ಸಾಮಾಜಿಕ ಜೀವನಕ್ಕೆ)ಅಗತ್ಯವೆನ್ನುವುದರಲ್ಲಿ ಸಂಶಯವಿಲ್ಲ. ಅವು ಮನೆಯಲ್ಲಿ, ಶಾಲೆ ಕಾಲೇಜುಗಳಲ್ಲಿ ಕರಗತ ಮಾಡಿಕೊಳ್ಳಬೇಕಾದ ಸಂಗತಿಗಳು; ಅವು ಮನುಷ್ಯನ ಸಂಸ್ಕಾರದ ಭಾಗವಾಗಿ ಬರಬೇಕಾದವು. ಅದರಿಂದ ವ್ಯಕ್ತಿ ಸಂಘರ್ಷ ಕಡಿಮೆಯಾಗಿ ವ್ಯಕ್ತಿ ಸೌಹಾರ್ದ ಹೆಚ್ಚುತ್ತದೆ. ಜನರಿಗೆ ನಮಸ್ಕರಿಸುವುದು, ಕೃತಜ್ಞತೆ ಹೇಳುವುದು, ತಪ್ಪಿಗೆ ಕ್ಷಮೆ ಕೇಳುವುದು, ಕ್ಯೂವನ್ನು ಪಾಲಿಸುವುದು, ಹಿರಿಯರಿಗೆ, ಕೈಲಾಗದವರಿಗೆ, ಗರ್ಭಿಣಿಯರಿಗೆ, ಕೈಗೂಸುಗಳನ್ನು ಎತ್ತಿಕೊಂಡವರಿಗೆ ಸೀಟು ಬಿಟ್ಟುಕೊಡುವುದು, ಅಂಧರಿಗೆ ಬೀದಿ ದಾಟಲು ಸಹಾಯ ಮಾಡುವುದೇ ಮುಂತಾದ ಸಣ್ಣ ಸಣ್ಣ ಸಂಗತಿಗಳು ಜೀವನದಲ್ಲಿ ಬಹು ಮುಖ್ಯವಾಗುತ್ತವೆ. ಇದನ್ನು ನೆನಪಿಸುವ ಬರಹಗಳು ಪತ್ರಿಕೆಗಳಲ್ಲಿ ಬಂದರೆ ಅಡ್ಡಿಯೇನಿಲ್ಲ. ಆದರೆ ಅವು ಕ್ರಮೇಣ ‘‘ಉಪಚಾರ ಭಾವನೆ’’ಗಳಾಗುವ ಅಪಾಯ ಇದ್ದೇ ಇದೆ. ಅವು ಹೃದ್ಗತವಾಗಬೇಕು.

ಬರೇ ಲೇಖನಗಳಿಂದ ಇದು ಸಾಧ್ಯವಿದೆಯೆಂದು ನನಗೆ ಅನಿಸುವುದಿಲ್ಲ. ನಾನು ಕಾಲೇಜಿನಲ್ಲಿದ್ದಾಗ ಡೇಲ್ ಕಾರ್ನಗಿ ಎಂಬ ಅಮೆರಿಕನ್ ಲೇಖಕನೊಬ್ಬನ ಒಂದು ಪುಸ್ತಕ ವಿದ್ಯಾರ್ಥಿಗಳ ನಡುವೆ ಬಹಳ ಜನಪ್ರಿಯವಾಗಿತ್ತು. How to Win Friends and Influence People ಎಂಬ ಹೆಸರಿನ ಪುಸ್ತಕ ಅದು-ಹೆಸರೇ ಹೇಳುವಂತೆ ಅದೊಂದು ‘‘ಮೆದು ಕೌಶಲ’’ ಕಲಿಸುವ ಪುಸ್ತಕ, ಮೆದು ಕೌಶಲವೆಂಬ ಪದ ಹುಟ್ಟುವ ಮೊದಲೇ ಬಂದುದು. ನನಗೆ ಗೊತ್ತಿದ್ದ ಹಲವರು ಅದನ್ನು ಓದುತ್ತಿದ್ದರು. ಅವರ ಜೀವನದ ಮೇಲೆ ಅದು ಪ್ರಭಾವ ಬೀರಿತೆಂದು ನನಗೆ ಅನಿಸಿಲ್ಲ. ನಾನಂತೂ ಅದನ್ನು ಓದಿಲ್ಲ. ಆದರೆ ಕಾರ್ನಗಿ ಬಹಳಷ್ಟು ಹಣ ಸಂಪಾದಿಸಿರಬೇಕು. ವಿಚಾರಕ್ಕಿಂತ ಆಚಾರ ಮಹತ್ವ ಪಡೆದಿರುವ ಲಕ್ಷಣ ಇದು. ಇಂದಿನ ಪತ್ರಿಕೆಗಳು, ಟಿವಿ ಮಾಧ್ಯಮಗಳು ಇಂಥ ಅನೇಕ ನಾನ್ಸೆನ್ಸ್‌ಗಳನ್ನು ಜನರಿಗೆ ಮಾರುತ್ತಿವೆ. ಅಪಾಯವೆಂದರೆ ಜನರು ಇವುಗಳಲ್ಲಿ ನಂಬಿಕೆಯಿಡಲು ಸುರುಮಾಡಿರುವುದು. ಇವೆಲ್ಲಾ ಫ್ಯಾಶನ್‌ನಂತೆ ಹಬ್ಬುತ್ತವೆ. ಆದರೆ ವಿಜ್ಞಾನ, ಗಣಿತ, ಇತಿಹಾಸ ಮುಂತಾದವು ಜೀವನಾನುಭವ ದಿಂದ ಬರುವುದಿಲ್ಲ; ಅವನ್ನು ಓದಿ ಕಲಿಯಬೇಕಾಗುತ್ತದೆ, ಹಲವು ವೇಳೆ ಇತರರ ಸಹಾಯದಿಂದ. ಆದ್ದರಿಂದ ಈ ವಿಷಯದಲ್ಲಿ ನೀವು ಹೇಳುವುದು ನಿಜ: ವೈಚಾರಿಕ, ವೈಜ್ಞಾನಿಕ ಬರಹಗಳು, ಅದೇ ರೀತಿ ಮನಸ್ಸನ್ನು ಎಚ್ಚರಿಸುವ ಕತೆ ಕವಿತೆ ಮುಂತಾದವು ಮಾಧ್ಯಮಗಳಿಂದ ಹೊರದಬ್ಬಲ್ಪಟ್ಟಿವೆ. ಅಲ್ಲಿ ಜ್ಯೋತಿಷಿಗಳು, ದೊಡ್ಡ ದೊಡ್ಡ ಹರಳಿನ ಮಾಲೆ ಹಾಕಿಕೊಂಡ ದೈವಜ್ಞರು, ಸ್ವಯಂಘೋಷಿತ ವಾಸ್ತುತಜ್ಞರು ಬಂದು ಜಪ್ಪನೆ ಕೂತುಬಿಟ್ಟಿದ್ದಾರೆ! ಇದು ನಮ್ಮ ಸಮಾಜ ಇನ್ನೂ ಎಂಥಾ ಪ್ರಾಕೃತ ಸ್ಥಿತಿಯಲ್ಲಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. 7. ಸಂಗೀತ, ನೃತ್ಯ, ಅಭಿನಯ ವಗೈರೆಗಳಲ್ಲಿ ತೊಡಗಿಸಿಕೊಳ್ಳಲು (ಮತ್ತು ಆ ಮೂಲಕ ರಿಯಾಲಿಟಿ ಶೋಗಳಲ್ಲಿ ದೊಡ್ಡ ಮೊತ್ತದ ಬಹುಮಾನ ಗೆಲ್ಲಲು / ಪ್ರಸಿದ್ಧರಾಗಲು / ತಂದೆತಾಯಿಗೆ ಕೀರ್ತಿ ತರಲು) ಬಹುಶಃ, ಸೈನಿಕರಷ್ಟು ದೇಹಶ್ರಮ, ಕಠಿಣ ಅಭ್ಯಾಸಗಳಿಗೆ ಸಿದ್ಧರಿರುವ ದೇಶದ ಅಸಂಖ್ಯ ಯುವಕ-ಯುವತಿಯರು ಅಷ್ಟೇ- ಆದರೆ ಬೇರೆ ಬಗೆಯ- ಶಕ್ತಿ ಬೇಡುವ ಬೌದ್ಧಿಕ ಶ್ರಮದ ಕೆಲಸಗಳಿಗೆ ಮಾಡುವ ತಯಾರಿ ಕಾಣುತ್ತಿಲ್ಲ ಎನ್ನುವುದು ಸೋಜಿಗ. ಅಥವಾ ಅದು ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿಲ್ಲ. ಮಾಧ್ಯಮ ಹತ್ತಿರ ಸುಳಿದರೆ ಅಂತಹ ತಯಾರಿಯ ಏಕಾಗ್ರತೆ ಭಂಗವಾಗುವುದು ಗ್ಯಾರಂಟಿ ಎಂಬoccupational hazard ಬಗೆಯ ಕಾರಣವೂ ಇದರ ಹಿಂದಿರಬಹುದು...

ಇದಕ್ಕೆ ಸಂವಾದಿಯಾಗಿ, ಓದು, ಬರವಣಿಗೆ, ಸ್ವತಂತ್ರ ಉದ್ದಿಮೆ, ಸಮಾಜಸೇವೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ತಮಗಿರುವ ‘ಫ್ಯಾಶನ್’ ಬೆಂಬತ್ತಲು ಅರ್ಧ ಜೀವನ ಮುಗಿದ ಮೇಲೆ ಹೊರಡುವವರೂ ಕಾಣಸಿಗುತ್ತಾರೆ. (ಅನುಕೂಲಕರ ಜೀವನ ತ್ಯಜಿಸಿ, ಇಂತಿಷ್ಟು ಕಾಲ, ದಿನಕ್ಕೆ ಐನೂರು ರೂಪಾಯಿ ಬಜೆಟ್‌ನಲ್ಲಿ ಭಾರತ ಸುತ್ತಿ, ಅದರಿಂದಾದ ಅನುಭವಗಳನ್ನು ಬರೆಯಲು ಹೊರಟ ಮಧ್ಯವಯಸ್ಕ ದಂಪತಿಯ ವೃತ್ತಾಂತ ಓದಿದ್ದು ನೆನಪಾಗುತ್ತಿದೆ.) ಈ ಎಲ್ಲವನ್ನೂ ದಾಖಲಿಸುವ ಅನೇಕ ಸೃಜನಾತ್ಮಕ ಕಲೆಗಳ ಮೊತ್ತ ಮಾಧ್ಯಮವಾದ ಸಿನೆಮಾ ಅಂತೂ, ಮನುಷ್ಯ ಜೀವನ ಸಂದರ್ಭಗಳ ಅನೇಕಾನೇಕ ಸಾಧ್ಯತೆ, ಭಾವನಾತ್ಮಕ ಅನುಭವಗಳನ್ನು ಒಂದೂ ಬಿಡದೆ, ನಕ್ಷೆಗೊಳಿಸಲು ಉದ್ಯುಕ್ತವಾಗಿರುವಷ್ಟು ವೈವಿಧ್ಯಮಯ ಮತ್ತು ಪ್ರಯೋಗಶೀಲವಾಗಿದೆ. ಇವುಗಳಲ್ಲಿ ಯೋಚನೆ, ಚಿಂತನೆಯೂ ಹಾಸುಹೊಕ್ಕಾಗಿ ಇರುತ್ತದಾದರೂ ಬೌದ್ಧಿಕತೆಯೇ ಪ್ರಧಾನವಾದ ಶಿಸ್ತುಗಳ ಸಂಭ್ರಮಾಚರಣೆ ವಿರಳ. ಈ ಪ್ರಶ್ನೋತ್ತರಗಳನ್ನು ಪ್ರಕಟನೆಗೆ ಸಿದ್ಧಪಡಿಸುವಾಗ ಚಿಕ್ಕವರಿರುವಾಗ ಆಡುತ್ತಿದ್ದ ದಾರದಾಟ ನೆನಪಿಗೆ ಬಂತು. ‘‘ಸೂತ್ರ ಕ್ರೀಡಾ’’ ಎಂಬ (ಸು)ಸಂಸ್ಕೃತ ಹೆಸರೂ ಇರುವ ಇದರಲ್ಲಿ ಮಕ್ಕಳು, ಬೆರಳುಗಳಲ್ಲಿ ಹಿಡಿದ ದಾರದಿಂದ ಒಂದು ಸಾಮಾನ್ಯ, ಕಡಿಮೆ ಮಟ್ಟದ ವಿನ್ಯಾಸ ರಚಿಸಿದರೆ, ದೊಡ್ಡವರು (ಪರಿಣತರು) ಅದನ್ನು ತಮ್ಮ ಬೆರಳುಗಳಿಗೆ ವರ್ಗಾಯಿಸಿಕೊಳ್ಳುವಾಗ, ಮನೆ, ದೇವಾಲಯ, ಮಿನಾರ ಇತ್ಯಾದಿ ಸಂಕೀರ್ಣ ರೇಖಾ ವಿನ್ಯಾಸಗಳಾಗಿ ಬದಲಿಸಿ ತೋರಿಸುತ್ತಿದ್ದರು.

 ಕೆ.ವಿ. ತಿರುಮಲೇಶ್ ಸರ್ ಮಾಡಿರು ವುದು ಅದನ್ನೇ. ಇನ್ನು ತಮ್ಮತಮ್ಮ ಬೆರಳುಗಳಲ್ಲಿ ನವನವೀನ ವಿನ್ಯಾಸಗಳನ್ನು ರಚಿಸುವ ಅವಕಾಶ ಓದುಗರಿಗೆ ಸದಾ ಇದ್ದೇ ಇದೆ. 

(ಮುಂದುವರಿಯುವುದು)

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News