ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ: ಕನಿಷ್ಠ 23 ಮಂದಿ ಮೃತ್ಯು

Update: 2016-10-17 18:39 GMT

ಭುವನೇಶ್ವರ, ಅ.17: ಇಲ್ಲಿಯ ಸುಮ್ ಆಸ್ಪತ್ರೆಯಲ್ಲಿ ಇಂದು ಸಂಜೆ ವೇಳೆ ನಡೆದ ಬೆಂಕಿ ಅನಾಹುತದಲ್ಲಿ ಕನಿಷ್ಠ 23 ರೋಗಿಗಳು ಸಾವನ್ನಪ್ಪಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

ಆಸ್ಪತ್ರೆಯ ಪ್ರಥಮ ಮಹಡಿಯಲ್ಲಿರುವ ಡಯಾಲಿಸಿಸ್ ವಾರ್ಡ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು ಬಳಿಕ ಇದಕ್ಕೆ ತಾಗಿಕೊಂಡಿದ್ದ ತೀವ್ರ ನಿಗಾ ಘಟಕಕ್ಕೆ ವ್ಯಾಪಿಸಿಕೊಂಡಿತು.ಮೃತಪಟ್ಟವರಲ್ಲಿ ಹೆಚ್ಚಿನವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಎಂದು ತಿಳಿದು ಬಂದಿದೆ. ಇದುವರೆಗೆ ಕೆಲವು ಮೃತದೇಹಗಳನ್ನು ಕ್ಯಾಪಿಟಲ್ ಆಸ್ಪತ್ರೆಗೆ ತರಲಾಗಿದೆ. ಅದಾಗ್ಯೂ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ನಿಖರವಾಗಿ ತಿಳಿಸಲಾಗದು ಎಂದು ಒರಿಸ್ಸಾದ ಆರೋಗ್ಯ ಇಲಾಖಾ ಕಾರ್ಯದರ್ಶಿ ಆರತಿ ಅಹುಜಾ ತಿಳಿಸಿದ್ದಾರೆ.

ಆಸ್ಪತ್ರೆಯ ಕಟ್ಟಡದಲ್ಲಿ 500ಕ್ಕೂ ಅಧಿಕ ಒಳರೋಗಿಗಳು ಸಿಕ್ಕಿಹಾಕಿಕೊಂಡಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ವಯಂಸೇವಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ವ್ಯಾಪಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಕಿಯನ್ನು ನಂದಿಸಲು ಕನಿಷ್ಠ 7 ಅಗ್ನಿಶಾಮಕ ಯಂತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಡಜನ್‌ಗೂ ಅಧಿಕ ಆ್ಯಂಬುಲೆನ್ಸ್‌ಗಳನ್ನು ಸಿದ್ಧವಾಗಿರಿಸಲಾಗಿದೆ. ಕಟ್ಟಡದ ಕಿಟಕಿಗಳ ಗಾಜುಗಳನ್ನು ಒಡೆದು ಹಲವಾರು ರೋಗಿಗಳನ್ನು ರಕ್ಷಿಸಲಾಗಿದೆ.

2011ರಲ್ಲಿ ಕೋಲ್ಕತಾದ ಎಎಂಆರ್‌ಐ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ 85 ರೋಗಿಗಳು ಸೇರಿದಂತೆ 89 ಜನರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News