×
Ad

ನಕಲಿ ಕಾಲ್ ಸೆಂಟರ್ ಹಗರಣದ ರೂವಾರಿ ಸಾಗರ ಥಕ್ಕರ್‌ನ ‘ಗುರು’ವಿನ ಬಂಧನ

Update: 2016-10-17 23:52 IST

ಥಾಣೆ,ಅ.17: ಬಹು ಮಿಲಿಯ ಡಾಲರ್‌ಗಳ ನಕಲಿ ಕಾಲ್ ಸೆಂಟರ್ ಜಾಲದ ರೂವಾರಿಯಾಗಿದ್ದು, ಪ್ರಸಕ್ತ ತಲೆ ಮರೆಸಿಕೊಂಡಿರುವ ಸಾಗರ್ ಥಕ್ಕರ್‌ನ ಗುರು, ಮುಂಬೈನ ಉದ್ಯಮಿ ಜಗದೀಶ ಕನಾನಿ(33) ಎಂಬಾತನನ್ನು ಪೊಲೀಸರು ಕಳೆದ ರಾತ್ರಿ ಬೋರಿವಿಲಿಯಲ್ಲಿ ಬಂಧಿಸಿದ್ದಾರೆ. ಈ ಜಾಲದ ಮೂಲಕ ಭಾರತೀಯ ಟೆಲಿ ಕಾಲರ್‌ಗಳು ಅಮೆರಿಕದ ತೆರಿಗೆದಾತರನ್ನು ವಂಚಿಸಿದ್ದರು.

ಈ ಹಿಂದೆ ಅಹ್ಮದಾಬಾದ್ ಮತ್ತು ಮುಂಬೈಗಳಲ್ಲಿ ಕನಾನಿಯ ಕೈಕೆಳಗೆ ಕೆಲಸ ಮಾಡಿದ್ದ ಥಕ್ಕರ್ ಮತ್ತು ಆತನ ಕೆಲ ಸಹವರ್ತಿಗಳು ತಮ್ಮ ‘ಗುರು’ವಿನ ಚಾಣಾಕ್ಷ ತಂತ್ರಗಳನ್ನು ಕಲಿತುಕೊಂಡಿದ್ದರು.
ಕನಾನಿ ಈ ಹಿಂದೆ ವಿದೇಶದಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೊರಗುತ್ತಿಗೆ ಸಂಸ್ಥೆಗಳ ಮೂಲಕ ಹಣ ಸಂಗ್ರಹಿಸುವ ಪದ್ಧತಿಗಳ ಬಗ್ಗೆ ಅರಿತುಕೊಂಡಿದ್ದ ಮತ್ತು ಅದಕ್ಕೆ ತನ್ನ ಬುದ್ಧಿಯನ್ನೂ ಸೇರಿಸಿ ಅಮೆರಿಕದ ತೆರಿಗೆದಾತರಿಂದ ಹಫ್ತಾ ಕೀಳುವ ಮೂಲಕ ದಿಢೀರ್ ದುಡ್ಡು ಮಾಡಲು ದೇಶಾದ್ಯಂತ ನಕಲಿ ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಿದ್ದ.
ಜಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನದಲ್ಲಿರು ವವರು ನೀಡಿದ ಮಾಹಿತಿಗಳ ಆಧಾರದಲ್ಲಿ ಕನಾನಿಯನ್ನು ಬಂಧಿಸುವಲ್ಲಿ ಥಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರು ಇಲ್ಲಿಯ ಮೀರಾ ರೋಡ್‌ನಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿ 70 ಜನರನ್ನು ಬಂಧಿಸಿದ್ದರು. ಅಲ್ಲದೆ ಮಾಹಿತಿ ತಂತ್ರಜ್ಞಾನ ಮತ್ತು ಭಾರತೀಯ ಟೆಲಿಗ್ರಾಫ್ ಕಾಯ್ದೆಗಳಡಿ ಇತರ 630 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಅಮೆರಿಕದ ನಿವಾಸಿಗಳಿಗೆ ಕರೆಗಳನ್ನು ಮಾಡಿ ಅಲ್ಲಿಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕನ್ ಉಚ್ಚಾರದಲ್ಲಿ ಮಾತನಾಡಿ ಅವರನ್ನು ವಂಚಿಸಿ ಹಣವನ್ನು ದೋಚುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News