ಭಾರತೀಯ ಸೇನೆ ಇಸ್ರೇಲಿ ಸೇನೆಗಿಂತ ಕಮ್ಮಿಯಿಲ್ಲ: ಮೋದಿ

Update: 2016-10-18 14:40 GMT

ಹೊಸದಿಲ್ಲಿ, ಅ.18: ಪಾಕಿಸ್ತಾನದಲ್ಲಿ ನಡೆಸಲಾದ ಸರ್ಜಿಕಲ್ ದಾಳಿಯ ಬಗ್ಗೆ ಮಂಗಳವಾರ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಸೇನೆಯ ಬಗ್ಗೆ ಈಗ ಎಲ್ಲರೂ ಮಾತನಾಡುವಂತಾಗಿದೆ. ಅದೀಗ ಇಸ್ರೇಲಿ ಸೇನೆಯಷ್ಟೇ ಉತ್ತಮವಾಗಿದೆಯೆಂದು ಹೇಳಿದ್ದಾರೆ.

ಪ್ರತಿಯೊಬ್ಬರೂ ನಮ್ಮ ಸೇನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಸ್ರೇಲ್ ಸೇನೆಯ ಇಂತಹದೇ ಸಾಹಸಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೀಗ, ಭಾರತೀಯ ಸೇನೆಯೂ ಕಡಿಮೆಯೇನಲ್ಲವೆಂದು ಪ್ರತಿಯೊಬ್ಬರೂ ತಿಳಿಯುವಂತಾಗಿದೆಯೆಂದು ಹಿಮಾಚಲಪ್ರದೇಶದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಅವರು ಶ್ಲಾಘಿಸಿದರು.

ಇದೇ ವೇಳೆ, ಒಂದು ರ್ಯಾಂಕ್ ಒಂದು ಪಿಂಚಣಿಯನ್ನು (ಒಆರ್‌ಒಪಿ) ಜಾರಿಗೊಳಿಸಿದುದಕ್ಕಾಗಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ ಮೋದಿ, ನಿವೃತ್ತ ಯೋಧರ ಕುಟುಂಬಗಳು ತನ್ನನ್ನೀಗ ಅದಕ್ಕಾಗಿ ಆಶೀರ್ವದಿಸುತ್ತಿದೆ ಎಂದರು.

ಒಂದು ಹುದ್ದೆ ಒಂದು ಪಿಂಚಣಿ ಯೋಜನೆ 40 ವರ್ಷಗಳಿಂದ ತೂಗುಯ್ಯೆಲೆಯಲ್ಲಿತ್ತು. ತಮ್ಮ ಸರಕಾರ ಅದನ್ನು ಜಾರಿಗೆ ತಂದಿದೆ. ಅದಕ್ಕಾಗಿ ಯೋಧರು ಮಾತ್ರವಲ್ಲದೆ ಅವರ ಕುಟುಂಬಗಳೂ ತನ್ನನ್ನು ಹರಸುತ್ತಿವೆ. ತಾವು ಯೋಜನೆಗಾಗಿ ರೂ. 5,500 ಕೋಟಿ ಬಿಡುಗಡೆಗೊಳಿಸಿದ್ದು, ಉಳಿದುದನ್ನು ಶೀಘ್ರವೇ ಬಿಡುಗಡೆಗೊಳಿಸುವ ಭರವಸೆ ನಿಡುತ್ತೇವೆಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಇದು ಮೋದಿಯವರ ಮೊದಲನೆ ಹಿಮಾಚಲಪ್ರದೇಶ ಭೇಟಿಯಾಗಿದೆ.

ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಹಿಮಾಚಲಪ್ರದೇಶದಲ್ಲಿ ತಾನು ಒಆರ್‌ಒಪಿಯ ಕುರಿತು ಮಾತನಾಡಿದ್ದೇನೆಂದು ಜ್ಞಾಪಿಸಿಕೊಂಡ ಪ್ರಧಾನಿ, ತಮ್ಮ ಹಕ್ಕನ್ನು ಒದಗಿಸಲಾಗಿದೆಯೆಂದು ಇಂದು ತಾನು ಈ ವೀರಭೂಮಿಯಲ್ಲಿ ಹೇಳಬಲ್ಲೆನೆಂದರು.

ಇಂದು ಮುಂಜಾನೆ ಪ್ರಧಾನಿ ಮೋದಿ ಹಿಮಾಚಲಪ್ರದೇಶದ ಮೂರು ಜಲ ವಿದ್ಯುತ್ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಅವುಗಳ ಒಟ್ಟು ವಿದ್ಯುದುತ್ಪಾದನಾ ಸಾಮರ್ಥ್ಯ 1,732 ಮೆಗಾ ವಾಟ್‌ಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News