×
Ad

ಈ ಹಿಂದೆಯೂ ಸೇನೆ ಸೀಮಿತ ದಾಳಿ ನಡೆಸಿತ್ತು, ಆದರೆ ಅದನ್ನು ಬಹಿರಂಗಪಡಿಸಿರಲಿಲ್ಲ: ವಿದೇಶಾಂಗ ಕಾರ್ಯದರ್ಶಿ

Update: 2016-10-18 23:31 IST

ಹೊಸದಿಲ್ಲಿ, ಅ.18: ಗಡಿನಿಯಂತ್ರಣ ರೇಖೆಯುದ್ದಕ್ಕೂ ಈ ಹಿಂದೆ ಕೂಡಾ ಭಾರತದ ಸೇನಾಪಡೆಗಳು ಸೀಮಿತ ದಾಳಿ, ಭಯೋತ್ಪಾದನಾ ದಾಳಿಗಳಿಗೆ ಪ್ರತಿದಾಳಿ ನಡೆಸಿದ್ದವು. ಆದರೆ ಈ ವಿಷಯವನ್ನು ಸರಕಾರ ಬಹಿರಂಗಗೊಳಿಸಿರುವ ಘಟನೆ ಮೊತ್ತಮೊದಲ ಬಾರಿಗೆ ನಡೆದಿದೆ- ಹೀಗೆಂದವರು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್.

    ಈ ಹಿಂದೆ ಸರ್ಜಿಕಲ್ ದಾಳಿಯ ಘಟನೆ ನಡೆದಿದೆಯೇ ಎಂದು ವಿದೇಶ ವ್ಯವಹಾರಗಳ ಕುರಿತಾದ ಸಂಸತ್ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರನ್ನು ಸಂಸದರು ಕೇಳಿದಾಗ ಜೈಶಂಕರ್ ಈ ರೀತಿ ಉತ್ತರಿಸಿದರು. ಉದ್ದೇಶಿತ ಗುರಿಯ ಮೇಲೆ, ವೃತ್ತಿಪರವಾಗಿ ನಡೆಸಲಾದ, ಸೇನೆಯ ನೈತಿಕ ಬಲ ಹೆಚ್ಚಿಸುವ ಸೀಮಿತ ದಾಳಿಯನ್ನು ಈ ಹಿಂದೆ ಕೂಡಾ ನಡೆಸಲಾಗಿತ್ತು. ಆದರೆ ಇದುವರೆಗೆ ಈ ವಿಷಯವನ್ನು ಸರಕಾರ ಬಹಿರಂಗಗೊಳಿಸಿದ ಘಟನೆ ನಡೆದಿಲ್ಲ ಎಂದ ಅವರು, ಭಯೋತ್ಪಾದಕರು ಉರಿ ಸೇನಾನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ನಡೆದಿರುವ ಪ್ರಪಥಮ ಸರ್ಜಿಕಲ್ ಸ್ಟ್ರೈಕ್ ದಾಳಿ ಇದು ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಈ ರೀತಿಯ ದಾಳಿಗಳು ಹಲವಾರು ಬಾರಿ ನಡೆದಿದೆ ಮತ್ತು ಸರಕಾರದ ಅಪ್ಪಣೆಗೆ ಕಾಯದೆ ಸ್ಥಳೀಯವಾಗಿ ಸೇನಾ ಪಡೆಗಳು ಈ ರೀತಿಯ ಪ್ರತಿದಾಳಿ ನಡೆಸಿದ್ದವು ಎಂದಿದ್ದಾರೆ. ಸೆ.29ರ ಸರ್ಜಿಕಲ್ ಸ್ಟ್ರೈಕ್ ದಾಳಿಯ ಬಳಿಕ ಸೇನಾಪಡೆಗಳಿಗೆ ಮುಂದಿನ ಕಾರ್ಯಸೂಚಿಯ ಬಗ್ಗೆ ಸರಿಯಾದ ವಿವರಣೆ ನೀಡಲಾಗಿಲ್ಲ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೇನಾಪಡೆಯ ಉಪಮುಖ್ಯಸ್ಥ ಲೆ.ಜ. ಬಿಪಿನ್ ರಾವತ್ ಅವರು ಕೂಡಾ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಪಡೆಗಳು ನಡೆಸಿರುವ ದಾಳಿಗಳ ಬಗ್ಗೆ ಮಾಹಿತಿ ನೀಡಿದರು.
ಯುಪಿಎ ಸರಕಾರದ ಅವಧಿಯಲ್ಲೂ ಸೇನೆ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಿತ್ತು ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಯನ್ನು ರಕ್ಷಣಾ ಸಚಿವ ಮನೋಹರ್ ಪಾರಿಕರ್ ತಳ್ಳಿಹಾಕಿದ್ದ ಹಿನ್ನೆಲೆಯಲ್ಲಿ ವಿದೇಶಾಂಗ ಕಾರ್ಯದರ್ಶಿಯ ಈ ಹೇಳಿಕೆಗೆ ಮಹತ್ವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News