ರಣಜಿ ಟ್ರೋಫಿ ಆಡಲಿರುವ ಇಶಾಂತ್ ಶರ್ಮ
ಹೊಸದಿಲ್ಲಿ, ಅ.18: ‘ಚಿಕುನ್‌ಗುನ್ಯಾ’ ಜ್ವರದಿಂದ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ವಂಚಿತರಾಗಿದ್ದ ಭಾರತದ ವೇಗದ ಬೌಲರ್ ಇಶಾಂತ್ ಶರ್ಮ ರಣಜಿ ಟ್ರೋಫಿಯಲ್ಲಿ ದಿಲ್ಲಿ ತಂಡದಲ್ಲಿ ಆಡುವ ಮೂಲಕ ಕಣಕ್ಕೆ ಮರಳಲಿದ್ದಾರೆ.
ಇಶಾಂತ್ ರಾಜ್ಯ ತಂಡ ದಿಲ್ಲಿಯೊಂದಿಗೆ ಮಂಗಳವಾರ ಕೋಲ್ಕತಾಕ್ಕೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿಲ್ಲಿ ತಂಡ ಗುರುವಾರದಿಂದ ಈಡನ್‌ಗಾರ್ಡನ್ಸ್‌ನಲ್ಲಿ ನಡೆಯಲಿರುವ ತನ್ನ 2ನೆ ಸುತ್ತಿನ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಎದುರಿಸಲಿದೆ.
ರಣಜಿ ಪಂದ್ಯವು ಇಶಾಂತ್‌ಗೆ ಮುಂಬರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಲಯ ಕಂಡುಕೊಳ್ಳಲು ನೆರವಾಗಲಿದೆ. ಇದೀಗ ಭಾರತ ತಂಡದಲ್ಲಿ ಮುಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಇಶಾಂತ್‌ಗೆ ಫಿಟ್‌ನೆಸ್ ಹಾಗೂ ಫಾರ್ಮ್‌ನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿಯಿದೆ.
ಭಾರತ ಈ ಋತುವಿನಲ್ಲಿ ಸ್ವದೇಶದಲ್ಲಿ 10ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಹಿನ್ನೆಲೆಯಲ್ಲಿ ಇಶಾಂತ್ ಫಿಟ್‌ನೆಸ್ ಹಾಗೂ ಫಾರ್ಮ್ ಅತ್ಯಂತ ಮುಖ್ಯವಾಗಿದೆ. ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುವ 4 ದಿನಗಳ ಮೊದಲು ಇಶಾಂತ್‌ಗೆ ಜ್ವರ ಹಾಗೂ ಗಂಟು ನೋವು ಕಾಣಿಸಿಕೊಂಡಿತ್ತು. ಇದೀಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧ ಸರಣಿಗೆ ಫಿಟ್ ಆಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ವಿರುದ್ಧದ ಮೊದಲ ಪಂದ್ಯದಲ್ಲಿ ಪರದಾಟ ನಡೆಸಿದ್ದ ಇಶಾಂತ್ ಸೇರ್ಪಡೆಯಿಂದ ದಿಲ್ಲಿ ತಂಡ ಬಲಿಷ್ಠವಾಗಿದೆ. ಕರ್ನಾಟಕದ ಬಲಿಷ್ಠ ಬ್ಯಾಟಿಂಗ್ ಸರದಿಯ ವಿರುದ್ಧ ಇಶಾಂತ್ ದಿಲ್ಲಿಯ ಬೌಲಿಂಗ್ ದಾಳಿ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.