ಮಧ್ಯಯುಗದ ಭಾರತದಲ್ಲಿ ಅರಬ್ ಔಷಧಿಗೆ ಸಿಕ್ಕಿತ್ತು ಪ್ರಾಮುಖ್ಯತೆ!

Update: 2016-10-19 17:17 GMT

ಒಂಬತ್ತನೆ ಮತ್ತು ಹತ್ತನೆ ಶತಮಾನದಲ್ಲಿ ಗ್ರೀಕ್‌ನ ಔಷಧ ಬಗೆಗಿನ ಬರಹಗಳು ಬಗ್ದಾದ್‌ನ ರಾಜಧಾನಿ ಅಬ್ಬಸಿದ್‌ನಲ್ಲಿ ಭಾಷಾಂತರಗೊಳಿಸಲ್ಪಟ್ಟಾಗ ಅದು ಗ್ರೀಕ್‌ನ ರಸಧಾತು ಸಿದ್ಧಾಂತದ (ನಾಲ್ಕು ರಸಧಾತುಗಳು: ರಕ್ತ, ಕಫ, ಹಳದಿ ಪಿತ್ತರಸ ಮತ್ತು ಕಪ್ಪುಪಿತ್ತರಸ; ಅರಬ್ ಭಾಷೆಯಲ್ಲಿ: ದಮ್, ಬಲ್ಗಮ್, ಸಫ್ರಾ ಮತ್ತು ಸವ್ದಾ) ಮೂಲಕ ನೈಜ ಅರೆಬಿಕ್ ಔಷಧೀಯ ಮೂಲಗಳಿಗೆ ಹೇತುವಾಯಿತು. ಇವುಗಳಲ್ಲಿ ಪ್ರಮುಖವಾದುದು ಇಬ್ನ್ ಸಿನಾ(1037) ಕನುನ್, ಲಾಟಿನ್ ಭಾಷೆಯಲ್ಲಿ ಅವಿಸೆನಾಸ್ ಕನುನ್. ಕನುನ್‌ನನ್ನು ಯುನಾನಿ ಟಿಬ್ ಅಥವಾ ಗ್ರೀಕ್ ಔಷಧದ ಮೂಲಾಧಾರ ಎಂದು ಪರಿಗಣಿಸಲಾಗುತ್ತದೆ ಮತ್ತು ಗ್ರೀಕ್ ರಸಧಾತು ಸಿದ್ಧಾಂತವನ್ನು ರೋಗದ ಮೂಲ, ರೋಗದ ಪತ್ತೆ ಮತ್ತು ಚಿಕಿತ್ಸೆಗೆ ಆಧಾರ ಎಂದು ಹೇಳಲಾಗುತ್ತದೆ. ಕನುನ್‌ನಂಥಾ ಬರಹಗಳನ್ನು ಇತರ ಭಾಷೆಗಳಿಗೆ ಭಾಷಾಂತರ ಮಾಡುವ ಮೂಲಕ ಯುನಾನಿ ಟಿಬ್ ಇತರೆಡೆಗಳಲ್ಲೂ ಸಮೃದ್ಧವಾಗಿ ಹರಡುವಂತಾಯಿತು.

  ಇಸ್ಲಾಮಿಕ್ ಜಗತ್ತಿನಲ್ಲಿ ಯುನಾನಿ ಔಷಧ ಪದ್ಧತಿಗೆ ಬಹಳ ಹಳೆಯ ಇತಿಹಾಸವಿದ್ದರೂ ಇತರ ಸಂಪ್ರದಾಯಗಳ ಜನಪ್ರಿಯ ಔಷಧ ಪದ್ಧತಿ ಕೂಡಾ ಗಮನ ಸೆಳೆದಿತ್ತು. ತಾಯಿತಗಳ ಬಳಕೆ, ಸ್ಥಳೀಯ ಸಸ್ಯಗಳ ಬಗ್ಗೆ ಜ್ಞಾನ ಮತ್ತು ಅವುಗಳ ಔಷಧೀಯ ಗುಣಗಳು, ಪ್ರಾರ್ಥನೆ ಮತ್ತು ಅಲ್-ಟಿಬ್ ಅಲ್ ನಬಾವಿ ಅಥವಾ ಪ್ರವಾದಿಯ ಔಷಧ ಮುಂತಾದ ಪದ್ಧತಿಗಳು ಜಾರಿಯಲ್ಲಿದ್ದವು. ಕೊನೆಯದ್ದನ್ನು, ಕುರ್‌ಆನ್‌ನಲ್ಲಿ ತಿಳಿಸಲಾದ ಮುಖ್ಯವಾಗಿ ಔಷಧೀಯ ಹದೀಸ್‌ನ ಬಳಕೆ ಅಥವಾ ಪುಸ್ತಕದ ರೂಪದಲ್ಲಿ ಸಂಗ್ರಹಿಸಲಾಗಿರುವ ಪ್ರವಾದಿ ಮುಹಮ್ಮದರ ಹೇಳಿಕೆಗಳು ಹೀಗೆ ಜನಪದ ಪರಿಹಾರ ಎಂದು ವಿಭಾಗಿಸಲಾಗಿತ್ತು. ಅಲ್-ಟಿಬ್ ಅಲ್-ನಬವಿ ಮತ್ತು ಯುನಾನಿ ಟಿಬ್ ಅನ್ನು ಇಸ್ಲಾಮಿಕ್ ಜಗತ್ತಿನಲ್ಲಿ ಬಹಳವಾಗಿ ಅನುಕರಿಸಲಾಗುತ್ತಿತ್ತು ಮತ್ತು ಈಗಲೂ ಅನುಕರಿಸಲಾಗುತ್ತಿದೆ. ಇಂಥಾ ಔಷಧ ಪದ್ಧತಿಗಳ ಪರಿಣಾಮಕಾರಿ ಇರುವಿಕೆಗೆ ಭಾರತವು ಒಂದು ಸರಿಯಾದ ಉದಾಹರಣೆಯಾಗಿದೆ. ಯುನಾನಿ ದಕ್ಷಿಣ ಏಷ್ಯಾಕ್ಕೆ ಆಗಮಿಸಿದ ಸಂದರ್ಭದಲ್ಲಿ 13ನೆ ಶತಮಾನದಲ್ಲಿ ಮಂಗೊಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪಂಡಿತರು ಮತ್ತು ಬುದ್ಧಿಜೀವಿಗಳು ಅರೆಬಿಕ್ ಮೂಲಗಳ ಆಧಾರದ ಔಷಧೀಯ ಜ್ಞಾನವನ್ನು ಜೊತೆಗೆ ತಂದರು ಮತ್ತು ಒಂದು ಔಷಧೀಯ ಸಂಪ್ರದಾಯವನ್ನು ಆರಂಭಿಸಿದರು ಅದು ದಿಲ್ಲಿ ಸುಲ್ತಾನರ (1206-1516) ಕಾಲದಿಂದ ಇಂದಿನ ದಿನದವರೆಗೂ ಮುಂದುವರಿದಿದೆ. ಇಂದು ಭಾರತ ಸರಕಾರದ ಪ್ರೋತ್ಸಾಹದೊಂದಿಗೆ ಯುನಾನಿ ಕಾಲೇಜುಗಳು ತೆರೆದಿವೆ ಮತ್ತು ಇಲ್ಲಿ ನಡೆಸುವ ಔಷಧ ಉಪಚಾರಗಳು ಯುನಾನಿ, ಆಯುರ್ವೇದ, ಅಲ್-ಟಿಬ್ ಅಲ್-ನಬವಿ ಮತ್ತು ಅಲೋಪಥಿ (ಪಾಶ್ಚಾತ್ಯ ಔಷಧ ಪದ್ಧತಿ)ಗಳ ಮಿಶ್ರಣವಾಗಿದೆ.

 
  ಆದರೂ ಈ ಔಷಧ ಸಂಪ್ರದಾಯಗಳನ್ನು ಅವು ಒಂದರ ಮೇಲೊಂದು ಬೀರಿರುವ ಪ್ರಭಾವದ ಬಗ್ಗೆ ಮುಖ್ಯವಾಗಿ ಯುನಾನಿಯು ಅಲ್-ಟಿಬ್ ಅಲ್-ನಬವಿಯಿಂದ ಪಡೆದುಕೊಂಡ ಚಿಕಿತ್ಸಾ ವಿಧಾನಗಳ ಬಗ್ಗೆ ಉಲ್ಲೇಖಿಸದೆ ಪ್ರತ್ಯೇಕವಾಗಿ ಚರ್ಚಿಸಲಾಗುತ್ತದೆ. ಇವುಗಳ ಮೂಲದ ಬಗ್ಗೆ ಒಂದು ಸಣ್ಣ ನೋಟ ಬೀರುವ ಮೂಲಕ ಈ ಔಷಧೀಯ ಪದ್ಧತಿಗಳು ಯಾವ ರೀತಿ ಶತಮಾನಗಳಿಂದ ಒಂದರಜೊತೆ ಮತ್ತೊಂದು ಮಿಳಿತವಾಗಿ ತಮ್ಮನ್ನು ರೂಪಿಸಿಕೊಂಡಿವೆ ಎಂಬುದನ್ನು ತಿಳಿದುಕೊಳ್ಳಬಹುದು. ಯುನಾನಿಯ ಹಸ್ತಪ್ರತಿಗಳನ್ನು ಅಧ್ಯಯನ ನಡೆಸಿದಾಗ ಯುನಾನಿ ಟಿಬ್ ಮತ್ತು ಅಲ್-ಟಿಬ್ ಅಲ್-ನಬವಿಯು ಯಾವ ರೀತಿ ಎರಡು ಪ್ರತ್ಯೇಕ ಔಷಧೀಯ ಪದ್ಧತಿಗಳಾಗಿದ್ದು ಮೊಘಲ್ ಸಾಮ್ರಾಜ್ಯದ ಅವಧಿಯಲ್ಲೇ ಯಾವ ರೀತಿ ಒಂದಕ್ಕೊಂದು ಮಿಳಿತಗೊಳ್ಳುತ್ತಾ ಬಂದಿವೆ ಎಂಬುದರ ಅರಿವಾಗುತ್ತದೆ. ಔಷಧೀಯ ಪದ್ಧತಿಗಳ ಪರಸ್ಪರ ಬರೆಯುವಿಕೆ ಮತ್ತು ಬರಹಗಳ ಅರ್ಥವನ್ನು ಉತ್ತಮವಾಗಿ ತಿಳಿದುಕೊಳ್ಳಲು ಆಧುನಿಕಪೂರ್ವ ಹಸ್ತಪ್ರತಿಗಳಲ್ಲಿರುವ ಕನಿಷ್ಠ ಸಂಕೇತಗಳನ್ನು ಅಧ್ಯಯನ ಮಾಡುವುದು ಒಳಿತು. ಈ ಬರಹಗಳು ಓದುಗನ ಯೋಚನೆಗೆ ನೀಡಲಾದ ಕಿಟಕಿಗಳಾಗಿವೆ: ಇವುಗಳು ಇತರ ಔಷಧೀಯ ಮೂಲಗಳ ಬಗ್ಗೆ ತಿಳಿಸುತ್ತದೆ, ಓದುಗರು ಉಪಯೋಗಿಸಿದಂತಹ ಔಷಧೋಪಚಾರಗಳನ್ನು ವಿವರಿಸುತ್ತದೆ ಮತ್ತು ರೂಡಿಯಲ್ಲಿರುವ ಔಷಧ ಪದ್ಧತಿಗಳ ನೈಜತೆಯೊಂದಿಗೆ ಸಂಬಂಧ ಕಲ್ಪಿಸುತ್ತದೆ.

ಕೇವಲ ಒಂದು ಹಸ್ತಪ್ರತಿಯಲ್ಲೂ ಕೂಡಾ ಗಲೆನ್, ಇಬ್ನ್ ಸಿನಾ ಮತ್ತು ಪ್ರವಾದಿ ಮುಹಮ್ಮದರಿಗೆ ಸಂಬಂಧಪಟ್ಟ ಕನಿಷ್ಠ ಸಂಕೇತಗಳು ಇರಬಹುದು, ಉದಾಹರಣೆಗೆ ಹಲ್ಲುನೋವಿಗೆ ಅತ್ಯುತ್ತಮ ಪರಿಹಾರ. ಹಾಗಾಗಿ ಈ ಸಂಕೇತಗಳು ನಮ್ಮ ಕೈಯಲ್ಲಿರುವ ಬರಹಗಳನ್ನು ಉಪಯೋಗಿಸುವ ಮತ್ತು ಅವುಗಳ ಉಪಯೋಗದ ಬಗ್ಗೆ ಅರ್ಥಮಾಡಿಕೊಳ್ಳುವಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ. ನಜಿಬ್ ಅಲ್-ದಿನ್ ಅಲ್-ಸಮರ್ಕಂದಿ (1222) ಯ ಪ್ರಮುಖ ಔಷಧ ಮಾಹಿತಿ ಗ್ರಂಥ ಅಲ್-ಅಸ್ಬಬ್ ವ ಅಲ್-ಅಲಮತ್ (ಕಾರಣಗಳು ಮತ್ತು ಪರಿಹಾರಗಳು) ಮತ್ತದರ ಹೇಳಿಕೆಗಳು ಯುನಾನಿ ಔಷಧ ಪದ್ಧತಿಯನ್ನು ಅನುಸರಿಸುತ್ತದೆ. ಭಾರತೀಯ ಹಸ್ತಪ್ರತಿ ಸಂಗ್ರಹದಲ್ಲಿ ಹೇಳಿಕೆಗಳು ಮತ್ತು ನಿಜರೂಪದ ಪ್ರತಿಗಳ ನೂರಕ್ಕೂ ಹೆಚ್ಚು ಸಂಗ್ರಹಗಳು ಇದ್ದು ಇಬ್ನ್ ಸಿನಾನ ಕನುನ್ ಮತ್ತು ಅದರ ವ್ಯಾಖ್ಯಾನಗಳಿಗಿಂತ ಹೆಚ್ಚೇನೂ ಕಡಿಮೆಯಿಲ್ಲ. ಅಲ್-ಸಮರ್ಕಂದಿಯ ಮೂಲಗಳು ಔಷಧೀಯ ದಿಗ್ಗಜರುಗಳಾದ ಅಲ್-ರಝಿ (925), ಅಲ್-ಮಜುಸಿ (994) ಮತ್ತು ಇಬ್ನ್ ವ ಅಲ್-ಅಲಮತ್‌ನಿಂದ ಬಂದಂಥವುಗಳಾಗಿವೆ. ಆದರೆ ಅಲ್-ಸಮರ್ಕಂದಿಯ ಅಲ್-ಅಸ್ಬಬ್ ವ ಅಲ್-ಅಲಮತ್ ಕನುನ್‌ನಂತೆ ಐದು ಆವೃತ್ತಿಗಳ ಔಷಧೀಯ ಸಂಗ್ರಹವಲ್ಲದೆ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವೈಯಕ್ತಿಕ ಬಳಕೆಯ ಕೈಪಿಡಿಯಾಗಿದೆ. ಇತರ ವೈದ್ಯಕೀಯ ಪಂಡಿತರುಗಳಾದ ನಫಿಸ್ ಬಿ ಇವದ್ ಅಲ್-ಕಿರ್ಮಾನಿ (1437) ಮತ್ತು ಮುಹಮ್ಮದ್ ಅಕ್ಬರ್ ಅರ್ಝಾನಿ (1700) ಅರೆಬಿಕ್ ಮತ್ತು ಪರ್ಶಿಯನ್ ಭಾಷೆಗಳಲ್ಲಿ ಬರಹಗಳನ್ನು ಮತ್ತು ವ್ಯಾಖ್ಯಾನಗಳನ್ನು ಬರೆದರು. ಈಗ ನಾನು ಯುನಾನಿ ಟಿಬ್ ಮತ್ತು ಅಲ್-ಟಿಬ್ ಅಲ್-ನಬವಿ ಮಧ್ಯೆಯಿರುವ ಪರಸ್ಪರ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಿ ಅಲ್-ಕಿರ್ಮಾನಿಯ ಭಾರತೀಯ ಹಸ್ತಪ್ರತಿ ಸರಹ್ (ವ್ಯಾಖ್ಯಾನಗಳು) ಅಲ್-ಅಸ್ಬಬ್ ವ ಅಲ್-ಅಲಮತ್ ಬಗ್ಗೆ ತಿಳಿಸುತ್ತೇನೆ.

  ಅಲ್-ಕಿರ್ಮಾನಿ ಈ ಸರಹ್ ಅನ್ನು ತಾನು ಆಸ್ಥಾನ ವೈದ್ಯನಾಗಿದ್ದ ತಿಮುರಿಡ್‌ನ ದೊರೆ ತನ್ನ ಪ್ರೋತ್ಸಾಹಕ ಉಲುಗ್ ಬೆಗ್‌ಗೆ ಸಮರ್ಪಿಸಿದ್ದಾನೆ. ಈ ಸರಹ್‌ದ ಪ್ರತಿಗಳನ್ನು ಭಾರತದಾದ್ಯಂತ ಕಾಣಬಹುದು ಮತ್ತು ಇದು ಈ ವ್ಯಾಖ್ಯಾನಕ್ಕೆ ಆಧಾರವಾಗಿರುವ ಅಲ್-ಸಮರ್ಕಂದಿ ಬರೆದಿರುವ ಮೂಲಪ್ರತಿಗಿಂತಲೂ ಹೆಚ್ಚು ಇಲ್ಲಿ ಕಂಡುಬರುತ್ತದೆ. ಉತ್ತರ ಪ್ರದೇಶದ ರಾಮ್‌ಪುರ್‌ನಲ್ಲಿರುವ ರಝಾ ಗ್ರಂಥಾಲಯದಲ್ಲಿ ಅಲ್-ಕಿರ್ಮಾನಿಯ ಸರಹ್ ಅಲ್-ಅಸ್ಬಬ್ ವ ಅಲ್-ಅಲಮತ್‌ನ ಆರು ಹಸ್ತಪ್ರತಿಗಳಿದ್ದು 17ನೆ ಶತಮಾನದಿಂದ 19ನೆ ಶತಮಾನದವರೆಗೆ ಅಂದರೆ ಮೊಘಲರ ಕೈಯಿಂದ ಅಧಿಕಾರ ಕಳೆದು ಬ್ರಿಟಿಷರ ಕೈಗೆ ಹೋಗುವ ವರೆಗಿನ ಸಮಯದ ದಾಖಲೆಗಳಿವೆ. ಅಲ್ಲಿರುವ 3999 ಸಂಖ್ಯೆಯ ಹಸ್ತಪ್ರತಿಯು ಅಲ್-ಕಿರ್ಮಾನಿಯ ಹದಿನೆಂಟನೆ ಶತಮಾನಕ್ಕೆ ಸೇರಿದ ಸರಹ್ ಆಗಿದ್ದು ಅದರ ಅಂಚು ತುಂಬಾ ಅರಬ್ ಭಾಷೆಯಲ್ಲಿ ವಿವರಣೆಗಳು, ಔಷಧ ಸಲಹೆಗಳು ಮತ್ತು ಔಷಧ ಮೂಲಗಳ ಹೋಲಿಕೆಗಳಿವೆ. ಕೆಲವು ಸಾಲುಗಳು ಗಲೆನ್ ಅಥವಾ ಇಬ್ನ್ ಸಿನಾನ ವ್ಯಾಖ್ಯಾನಗಳನ್ನು ಒದಗಿಸಿದರೆ ಇತರವುಗಳು ಅಲ್-ಸಮರ್ಕಂದಿಯ ಬರವಣಿಗೆಗಳನ್ನು ತೋರಿಸುತ್ತದೆ. ಇಸ್ಲಾಮಿನ ಆರಂಭಿಕ ಅವಧಿ ಮತ್ತು ಕೆಲವು ಕಡೆ ಇಸ್ಲಾಂ ಪೂರ್ವ ಔಷಧೀಯ ಸಲಹೆಗಳನ್ನು ಹೊಂದಿರುವ ಕಾರಣ ಯುನಾನಿ ಮತ್ತು ಪ್ರವಾದಿ ಔಷಧೀಯ ಸಂಬಂಧಗಳನ್ನು ಅಧ್ಯಯನ ಮಾಡಲು ಈ ಹಸ್ತಪ್ರತಿ ಬಹಳ ಪ್ರಮುಖವಾಗುತ್ತದೆ. ಹದಿನಾಲ್ಕು ಪುಸ್ತಕಗಳ ಅಂಚುಗಳಲ್ಲಿ ಔಷಧ ಅಭ್ಯಾಸದ ಲೋಕದಲ್ಲಿನ ಪ್ರವಾದಿಯವರ ಸಲಹೆ ಮತ್ತು ಕ್ರಿಯೆಗಳನ್ನು ಸೂಚಿಸುತ್ತದೆ.

ಪ್ರವಾದಿಯವರ ಹನ್ನೆರಡು ವಿವಿಧ ಸಂಗಡಿಗರು ಮತ್ತು ಕುಟುಂಬ ಸದಸ್ಯರು ಈ ವಿವಿಧ ಹದೀಸ್‌ಗಳನ್ನು ವರದಿ ಮಾಡಿದ್ದು ಇವುಗಳು ಮುಹಮ್ಮದ್‌ರಿಗೆ ಆ ಪ್ರದೇಶದ ಸಸ್ಯ ಮತ್ತು ಅವುಗಳ ಔಷಧೀಯ ಉಪಯುಕ್ತತೆಗಳ ಬಗ್ಗೆ ಮತ್ತು ಅರಬ್‌ನ ಸಾಂಪ್ರದಾಯಿಕ ಜನಪದ ಔಷಧದ ಬಗ್ಗೆ ಇರುವ ಜ್ಞಾನವನ್ನು ಸೂಚಿಸುತ್ತದೆ. ಉದಾಹರಣೆಗೆ ಅಲ್-ಕಿರ್ಮಾನಿಯ ಶರಹ್‌ನ ಮಧ್ಯದಲ್ಲಿ ದತ್ ಅಲ್-ಜಂಬ್ ಅಥವಾ ಪಕ್ಕೆಬಾವು ರೋಗದಿಂದ ದೇಹದಲ್ಲಿನ ಅತಿಯಾದ ದ್ರವವನ್ನು ಹೊರಹಾಕಲು ನೀಡಲಾಗುವ ಚಿಕಿತ್ಸೆ ಬಗ್ಗೆ ತಿಳಿಸಲಾಗಿದೆ. ಈ ಪುಟದಲ್ಲಿ ಪ್ರವಾದಿಯವರ ಸಂಗಡಿಗರಾಗಿದ್ದ ಝೈದ್ ಬಿ ಅಕ್ರಮ್ ಅವರು ಪಕ್ಕೆಬಾವು ರೋಗಕ್ಕೆ ಝಯ್ತೆ (ಎಣ್ಣೆ) ಮತ್ತು ವರ್ಸ್ ಎಂಬ ಸಸ್ಯವನ್ನು ಚಿಕಿತ್ಸೆಗೆ ಬಳಸಬಹುದೆಂದು ಮುಹಮ್ಮದರು ತಿಳಿಸಿದ್ದಾರೆ ಎಂದು ಹೇಳಿರುವ ಬಗ್ಗೆ ವರದಿ ನೀಡುತ್ತದೆ. ಇದೇ ರೀತಿ ಅಲ್-ಸಮರ್ಕಂದಿಯು ಕುಲ್ಫ್ ಅಥವಾ ಚರ್ಮದ ಮೇಲೆ ಕಲೆ ಮೂಡುವ ಬಗ್ಗೆ ಪ್ರಸ್ತಾಪಿಸುತ್ತಾ ಮುಹಮ್ಮದರ ಪತ್ನಿಯರಲ್ಲಿ ಒಬ್ಬರಾದ ಉಮ್ಮು ಸಲ್ಮಾ ಪ್ರವಾದಿಯವರು ಈ ಕಾಯಿಲೆ ಬಾಧಿತ ಸ್ಥಳಕ್ಕೆ ವರ್ಸ್ ಗಿಡದ ಲೇಪನವನ್ನು ಹಚ್ಚುವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳುತ್ತಿದ್ದರು ಎಂಬುದನ್ನು ಸೂಚಿಸಿರುವುದನ್ನು ಅಲ್-ಕಿರ್ಮಾನಿ ವಿವರಿಸುತ್ತಾರೆ. ಈ ವಿವರಣೆಗಳು ಅದನ್ನು ಬರೆದ ಲೇಖಕರ ನಿಖರತೆಯ ಬಗ್ಗೆ ಸ್ಪಷ್ಟತೆ ನೀಡುವ ಜೊತೆಗೆ ರೋಗಕ್ಕೆ ನಿರ್ದಿಷ್ಟವಾಗಿ ಯಾವ ರೀತಿ ಚಿಕಿತ್ಸೆ ನೀಡಬಹುದು ಎಂಬುದನ್ನು ತಿಳಿಸುತ್ತದೆ. ಒಂದು ಹೆಚ್ಚುವರಿ ಸಂಕೇತವು ಇಸ್ಲಾಂ ಪೂರ್ವಕ್ಕೆ ಸೇರಿದ್ದು ಗಮನಯೋಗ್ಯವಾಗಿದೆ: ಅದು ಕುರ್‌ಆನ್‌ನಲ್ಲಿ ಉಲ್ಲೇಖಿಸಲಾಗಿರುವ ಇಸ್ಲಾಂಪೂರ್ವದ ಸಂತ ಲುಕ್ಮಾನ್ ಹಕೀಂ ಅವರಿಗೆ ಸಂಬಂಧಪಟ್ಟುದ್ದಾಗಿದೆ. ಈತನ ಚಿಕಿತ್ಸಾ ಪದ್ಧತಿ (ಇಲಾಜ್-ಎ-ಲುಕ್ಮಾನ್ ಅಥವಾ ಲುಕ್ಮಾನ್ ಚಿಕಿತ್ಸೆ) ಇಂದಿಗೂ ಪೂರ್ವ ಭಾರತದಲ್ಲಿ ಮುಖ್ಯವಾಗಿ ಬಂಗಾಳದಲ್ಲಿ ಈಗಲೂ ಮೌಖಿಕವಾಗಿ ಪ್ರಸಾರವಾದ ಚಿಕಿತ್ಸಾ ಪದ್ಧತಿ ರೂಪದಲ್ಲಿ ಚಾಲ್ತಿಯಲ್ಲಿದೆ. ಪ್ರವಾದಿಯವರ ಹದೀಸ್‌ನಂತೆ ಲುಕ್ಮಾನ್‌ನ ಔಷಧ ಸಲಹೆಗಳು ಆ ಸಮಯದಲ್ಲಿ ಅರಬ್ ದೇಶದಲ್ಲಿ ಚಾಲ್ತಿಯಲ್ಲಿದ್ದ ಚಿಕಿತ್ಸಾ ಪದ್ಧತಿಯನ್ನು ನೆನಪಿಸುತ್ತದೆ. ಬರಹ ಆರಂಭಕ್ಕೂ ಮುನ್ನ ಇರುವ ಸಂಕೇತಗಳಲ್ಲಿ ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಗರ್ಗರಾ (ಬಾಯಿ ಮುಕ್ಕಳಿಸುವುದು) ಮತ್ತು ಜುಲಬ್ (ಹಣ್ಣು ಅಥವಾ ಹೂವಿನ ದಳದಿಂದ ಮಾಡಿದ ರಸ) ವನ್ನು ಔಷಧವಾಗಿ ಸೂಚಿಸಿದ್ದು ಅದನ್ನು ಪರ್ಶಿಯನ್ ಭಾಷೆಯಲ್ಲಿ ಬರೆಯಲಾಗಿದೆ.

ಅದರ ಕೆಳಗೆ ಅರಬ್ ಭಾಷೆಯಲ್ಲಿ ಈ ಚಿಕಿತ್ಸೆಯ ಮೂಲದ ಬಗ್ಗೆ ಬರೆಯುತ್ತಾ ಅದರಲ್ಲಿ ಲುಕ್ಮಾನ್ ಹಕೀಂ ಎಂದು ಬರೆಯಲಾಗಿದೆ. ಇಸ್ಲಾಂ ಪೂರ್ವ ಸಂತನ ಈ ಔಷಧ ಸಲಹೆಯ ಆಧಾರವು ಅಲ್ ಟಿಬ್ ಅಲ್ ನಬವಿಯ ಮೂಲಾಧಾರವಾಗಿರುವ ಅರೆಬಿಯನ್ ಔಷಧವನ್ನು ಬೆಳಕಿಗೆ ತರುತ್ತದೆ. ಈ ಹೋಲಿಕೆಗಳು ಹಸ್ತಪ್ರತಿಯ ಓದುಗನ ಯೋಚನೆಯನ್ನು ಅನಾವರಣ ಮಾಡುತ್ತದೆ ಮತ್ತು ಈ ಔಷಧ ಪದ್ಧತಿಗಳು ಯಾವುದಕ್ಕೆ ಸಂಬಂಧಿಸಿವೆ ಎಂಬ ಬಗ್ಗೆ ಪ್ರಶ್ನಿಸುವಂತೆ ವಿದ್ಯಾರ್ಥಿ ಅಥವಾ ಓದುಗನ ಮೇಲೆ ಒತ್ತಡ ಹೇರುತ್ತದೆ. ಪ್ರವಾದಿಯವರು ವಿವರಿಸಿದ ಅರಬ್ ಔಷಧ ಪದ್ಧತಿ ಮತ್ತದರ ಉಪಯೋಗ ಅವರಿಗಿಂತ ಮೊದಲು ಮತ್ತು ಅವರ ಜೀವನದ ನಂತರ ಸಕ್ರಿಯವಾಗಿತ್ತು ಮತ್ತು ಭಾರತದಲ್ಲಿ ಯುನಾನಿ ಔಷಧದ ಹಸ್ತಪ್ರತಿ ತಯಾರಿಕೆ ಮತ್ತು ಅಧ್ಯಯನ ಸಮಯದಲ್ಲಿ ಪ್ರಭಾವ ಬೀರಿತ್ತು ಎಂಬುದು ಸ್ಪಷ್ಟ. ಅಲ್-ಕಿರ್ಮಾನಿಯ ಶರಹ್‌ನಲ್ಲಿ ಸೂಚಿಸಲಾಗಿರುವ ಚಿಕಿತ್ಸೆಗಳು ಓದುಗನಿಗೆ ಪ್ರವಾದಿಯವರ ಸ್ವಂತ ಔಷಧೀಯ ಸಲಹೆಯನ್ನು ನೆನಪು ಮಾಡಿರಬಹುದು. ಈ ಯೋಚನೆಗಳನ್ನು ಅವರು ಭವಿಷ್ಯದ ಓದುಗರಿಗೆ ನೆನಪಿನಲ್ಲುಳಿಯಲು ಸಹಾಯವಾಗುವಂತೆ ಅಥವಾ ಈ ಪರಿಹಾರಗಳ ಉಪಯುಕ್ತತೆಯನ್ನು ತಿಳಿಸುವ ಸಲುವಾಗಿ ಬರೆದಿರಬಹುದು. ಈ ಸಂಕೇತಗಳ ಹಿಂದೆ ಕಾರಣಗಳು ಏನೇ ಇರಬಹುದು ಆದರೆ ಈ ಯುನಾನಿ ಹಸ್ತಪ್ರತಿಗಳ ಉಲ್ಲೇಖಗಳು ಯುನಾನಿ ಟಿಬ್‌ನ ಅಧ್ಯಯನದಲ್ಲಿ ಅಲ್-ಟಿಬ್ ಅಲ್-ನಬವಿಯ ಬಗ್ಗೆ ಜಾಗೃತಿ ಇರುವುದನ್ನು ಮತ್ತು ಈ ಎರಡು ಖಂಡಿತವಾಗಿಯೂ ಪ್ರತ್ಯೇಕವಲ್ಲ ಎಂಬುದನ್ನು ಸೂಚಿಸುತ್ತವೆ.

Writer - ಡೆಬೋರಾ ಶ್ಲೀನ್

contributor

Editor - ಡೆಬೋರಾ ಶ್ಲೀನ್

contributor

Similar News