ಕಬಡ್ಡಿ ವಿಶ್ವಕಪ್ : ಇರಾನ್ ಫೈನಲ್‌ಗೆ

Update: 2016-10-21 16:56 GMT

ಅಹ್ಮದಾಬಾದ್ , ಅ.21: ಇರಾನ್ ತಂಡ ಕಬಡ್ಡಿ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಇರಾನ್ ತಂಡ ದಕ್ಷಿಣ ಕೊರಿಯಾ ತಂಡವನ್ನು 28-22 ಪಾಯಿಂಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತು.
 ಈ ವಿಶ್ವಕಪ್‌ನ ಎಲ್ಲ 5 ಪಂದ್ಯಗಳನ್ನು ಜಯಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಡಾಂಗ್ ಜು ಹಾಂಗ್ ನಾಯಕತ್ವದ ಕೊರಿಯಾ ತಂಡ ಫೈನಲ್‌ಗೇರುವಲ್ಲಿ ಎಡವಿತು. ಹಾಲಿ ಚಾಂಪಿಯನ್ ಭಾರತವನ್ನು ಮಣಿಸಿ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿದ್ದ ಕೊರಿಯಾ ತಂಡ 6 ಪಾಯಿಂಟ್‌ಗಳ ಅಂತರದಲ್ಲಿ ಸೋತು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.
 ಟಾಸ್ ಸೋತು ಮೊದಲು ರೈಡ್ ಅವಕಾಶ ಪಡೆದ ಮೆರಾಝ್ ಶೇಖ್ ನಾಯಕತ್ವದ ಇರಾನ್ ತಂಡ ಕೊನೆಯ ತನಕವೂ ಒತ್ತಡದ ಪರಿಸ್ಥಿತಿ ಎದುರಿಸಿತ್ತು. ಮೊದಲಾರ್ಧದಲ್ಲಿ 13-11 ಪಾಯಿಂಟ್‌ಗಳಿಂದ ಮೇಲುಗೈ ಸಾಧಿಸಿತ್ತು. ಕೊರಿಯಾದ ತಾರಾ ದಾಳಿ ಕೋರ ಜಾಂಗ್ ಕುನ್ ಲೀ 4 ರೈಡ್ ಪಾಯಿಂಟ್‌ಗಳಿಂದ ಯಶಸ್ಸು ಗಳಿಸಿದ್ದರು.
 ಇರಾನ್ ತಂಡದ ನಾಯಕ ಮೆರಾಝ್ ಶೇಖ್ 7 ಪಾಯಿಂಟ್‌ಗಳನ್ನು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಬೊಝಾರ್ ಮಿಘಾನಿ ನಿರ್ಣಾಯಕ ಹಂತದಲ್ಲಿ ಇರಾನ್‌ನ ಖಾತೆಗೆ 4 ಅಂಕಗಳನ್ನು ಜಮೆ ಮಾಡಿದ್ದರು. ಕೊನೆಯ ನಾಲ್ಕು ನಿಮಿಷಗಳಲ್ಲಿ ಇರಾನ್‌ನ ಖಾತೆಗೆ ರೈಡ್‌ನಲ್ಲಿ ಪಾಯಿಂಟ್ ಬರಲಿಲ್ಲ. ಆದರೆ ಅದು 6 ಪಾಯಿಂಟ್‌ಗಳೊಂದಿಗೆ ಮೇಲುಗೈ ಸಾಧಿಸಿ ಅಕ್ಟೋಬರ್ 22ರಂದು ನಡೆಯುವ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News