ವಿಶ್ವಕಪ್‌ ಕಬಡ್ಡಿ; ಭಾರತ ಫೈನಲ್‌ಗೆ

Update: 2016-10-21 18:36 GMT


*ಥಾಯ್ಲೆಂಡ್ ವಿರುದ್ಧ 53 ಅಂತರದಲ್ಲಿ ಭರ್ಜರಿ ಜಯ
* ಸತತ 8ನೆ ಬಾರಿ ಫೈನಲ್ ಪ್ರವೇಶಿಸಿದ ಭಾರತಕ್ಕೆ ಇರಾನ್ ಎದುರಾಳಿ
* ಅ.22ರಂದು ಭಾರತ -ಇರಾನ್ ಫೈನಲ್ ಪಂದ್ಯ

ಅಹ್ಮದಾಬಾದ್, ಅ.21: ಹಾಲಿ ಚಾಂಪಿಯನ್ ಭಾರತ ಕಬಡ್ಡಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂದು ಥಾಯ್ಲೆಂಡ್ ವಿರುದ್ಧ 53 ಪಾಯಿಂಟ್‌ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಸತತ ಎಂಟನೆ ಬಾರಿ ಫೈನಲ್ ತಲುಪಿದೆ.
ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಇದೇ ಮೊದಲ ಬಾರಿ ಫೈನಲ್ ತಲುಪಿರುವ ಇರಾನ್‌ನ್ನು ಭಾರತ ಎದುರಿಸಲಿದೆ.
ಇರಾನ್ ಐದು ಪಂದ್ಯಗಳಲ್ಲಿ ಜಯಿಸಿ ಅಜೇಯವಾಗಿ ಸೆಮಿಫೈನಲ್ ತಲುಪಿದ್ದ ದಕ್ಷಿಣ ಕೊರಿಯಾವನ್ನು ಮಣಿಸಿ ಫೈನಲ್ ತಲುಪಿದೆ.
  ಇಂದು ನಡೆದ ಎರಡನೆ ಪಂದ್ಯದಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ನಿರೀಕ್ಷೆಯಂತೆ ಭಾರತ ಗೆಲುವು ಸಾಧಿಸಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿದೆ. ಭಾರತದ ಪರ ಪ್ರದೀಪ್ ನರ್ವಾಲ್ (14) ಪಾಯಿಂಟ್‌ಗಳನ್ನು ಕಲೆ ಹಾಕಿದರು. ಅಜಯ್ ಠಾಕೂರ್ 11, ನಿತಿನ್ ಥಾಮರ್ 7 , ನಾಯಕ ಅನೂಪ್ ಕುಮಾರ್ ಮತ್ತು ಸುರೇಂದರ್ ನಂದ ತಲಾ 5, ಮಂಜಿತ್ ಚಿಲ್ಲಾರ್ ಮತ್ತು ಕಿರನ್ ತಲಾ 2, ಸುಜಿತ್ 3, ಸಂದೀಪ್ ನರ್ವಾಲ್ , ಮೋಹಿತ್ ಚಿಲ್ಲಾರ್ ಮತ್ತು ಧರ್ಮ ರಾಜ್ ತಲಾ 2 ಪಾಯಿಂಟ್‌ಗಳ ಕೊಡುಗೆ ನೀಡಿದರು.
   ಥಾಯ್ಲೆಂಡ್‌ನ ಚನ್ವಿಟ್ ವಿಚೈನ್ 6 ಪಾಯಿಂಟ್, ಕೋಮ್ಸನ್ ಟೊಂಗ್‌ಕಮ್ ಮತ್ತು ಸಾಂಟಿ ಬಂಚುಟ್ ತಲಾ 3 ಪಾಯಿಂಟ್‌ಗಳನ್ನು ತಂಡದ ಖಾತೆಗೆ ಜಮೆ ಮಾಡಿದರು.
ಕೊರಿಯಾದ ಅಜೇಯ ಗೆಲುವಿನ ಓಟಕ್ಕೆ ತಡೆ
 ಇರಾನ್ ತಂಡ ಕಬಡ್ಡಿ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಇರಾನ್ ತಂಡ ದಕ್ಷಿಣ ಕೊರಿಯಾ ತಂಡವನ್ನು 28-22 ಪಾಯಿಂಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತು.
 ಈ ವಿಶ್ವಕಪ್‌ನ ಎಲ್ಲ 5 ಪಂದ್ಯಗಳನ್ನು ಜಯಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಡಾಂಗ್ ಜು ಹಾಂಗ್ ನಾಯಕತ್ವದ ಕೊರಿಯಾ ತಂಡ ಫೈನಲ್‌ಗೇರುವಲ್ಲಿ ಎಡವಿತು. ಹಾಲಿ ಚಾಂಪಿಯನ್ ಭಾರತವನ್ನು ಮಣಿಸಿ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿದ್ದ ಕೊರಿಯಾ ತಂಡ 6 ಪಾಯಿಂಟ್‌ಗಳ ಅಂತರದಲ್ಲಿ ಸೋತು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News