ಶುದ್ಧಿಯಾಗಬೇಕಾದವರು ಯಾರು?

Update: 2016-10-22 04:55 GMT

ಯಾವುದೇ ಒಂದು ಆಂದೋಲನ, ಚಳವಳಿಗಳು ಗುರಿ ಉದ್ದೇಶವೊಂದನ್ನು ಹೊಂದಿರುತ್ತವೆ. ದುರ್ಬಲ ಸಮುದಾಯಕ್ಕೆ ತಮ್ಮ ಮೇಲಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವುದಕ್ಕಾಗಿ ಪ್ರಜಾಸತ್ತಾತ್ಮಕವಾಗಿ ಇರುವ ಏಕೈಕ ದಾರಿಯೇ ಚಳವಳಿ, ಧರಣಿ, ರ್ಯಾಲಿ, ಆಂದೋಲನ ಇತ್ಯಾದಿ. ಸಂವಿಧಾನವೇ ಅವರಿಗೆ ಆ ಹಕ್ಕನ್ನು ಕೊಟ್ಟಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆ ದಾರಿಯನ್ನು ಮುಂದಿಟ್ಟುಕೊಂಡೇ ಅನ್ಯಾಯಕ್ಕೊಳಗಾಗಿರುವ ಸಮುದಾಯಗಳು ನ್ಯಾಯವನ್ನು ತನ್ನದಾಗಿಸುತ್ತಾ ಬಂದಿವೆ. ವ್ಯವಸ್ಥೆ, ಸರಕಾರ ನಿಷ್ಕ್ರಿಯವಾದಾಗ ಅದನ್ನು ಎಚ್ಚರಿಸಲು ನಮಗಿರುವ ದಾರಿ ಇದೊಂದೆ. ಈ ದಾರಿ ಮುಚ್ಚಿದಾಗ, ತನ್ನಷ್ಟಕ್ಕೇ ಸಂವಿಧಾನ ವಿರೋಧಿಯಾದ ಉಗ್ರವಾದಿ ಪ್ರತಿಭಟನೆಗಳು ಜನ್ಮ ತಾಳುತ್ತವೆ. ಈಶಾನ್ಯ ಭಾರತದಲ್ಲಿ ಆದಿವಾಸಿಗಳ ಮೇಲೆ ವ್ಯವಸ್ಥೆ ತೀವ್ರ ಆಕ್ರಮಣ ನಡೆಸತೊಡಗಿದಾಗ, ಅವರ ನೋವು ದುಮ್ಮಾನಗಳಿಗೆ ವ್ಯವಸ್ಥೆ ಸಂಪೂರ್ಣ ಕಿವುಡಾದಾಗ ಹುಟ್ಟಿಕೊಂಡವರು ನಕ್ಸಲ್ ಉಗ್ರರು. ಹಾಗೆಯೇ ಪ್ರಜಾಸತ್ತಾತ್ಮಕ ಹೋರಾಟವನ್ನು ವ್ಯವಸ್ಥೆ ಬಗ್ಗು ಬಡಿದಾಗಲೂ ಅದು ಉಗ್ರ ರೂಪ ತಾಳಿದ ಉದಾಹರಣೆಗಳಿವೆ. ಇತ್ತೀಚಿನ ದಿನಗಳಲ್ಲಿ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಬೇರೆ ಬೇರೆ ರೂಪಗಳಲ್ಲಿ ಬಗ್ಗು ಬಡಿಯುವ ಸಂಚುಗಳು ನಡೆಯುತ್ತಿವೆ. ಕೆಲವಡೆ ಅದರ ನೇತೃತ್ವವನ್ನು ಸರಕಾರವೇ ವಹಿಸಿಕೊಂಡರೆ, ಇನ್ನು ಕೆಲವೆಡೆ ಸರಕಾರ ತನ್ನ ಇತರ ಸರಕಾರೇತರ ಸಂಘಟನೆಗಳ ಮೂಲಕ ಬಗ್ಗು ಬಡಿಯಲು ಯತ್ನಿಸುತ್ತದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ‘ಚಲೋ ಉಡುಪಿ’ ಆಂದೋಲನವನ್ನು ಇದೇ ದಾರಿಯಲ್ಲಿ ಮುಗಿಸುವುದಕ್ಕೆ ಕೆಲವು ಶಕ್ತಿಗಳು ಹವಣಿಸುತ್ತಿರುವುದು ವಿಷಾದನೀಯವಾಗಿದೆ.
 ‘ಚಲೋ ಉಡುಪಿ’ ಹೋರಾಟವನ್ನು ನಡೆಸಿದವರು ಬಹುತೇಕ ದಲಿತರು. ಅವರ ಜೊತೆಗೆ ಶೋಷಿತ ಸಮುದಾಯದ ಬಹುಸಂಖ್ಯೆಯ ಜನರು ಕೈ ಜೋಡಿಸಿದರು. ಅಸ್ಪಶ್ಯತೆ, ಭೂಮಿಯ ಹಕ್ಕು, ಆಹಾರದ ಹಕ್ಕು ಇವುಗಳು ಇವರ ಬೇಡಿಕೆಯ ಪ್ರಮುಖ ಅಂಶಗಳಾಗಿದ್ದವು. ಆಧುನಿಕ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಈ ಬೇಡಿಕೆ ನ್ಯಾಯ ಸಮ್ಮತವಲ್ಲ ಎಂದು ಹೇಳುವ ಮನುಷ್ಯ ಸಂವಿಧಾನ ವಿರೋಧಿ ಮಾತ್ರವಲ್ಲ, ಮನುಷ್ಯ ವಿರೋಧಿ ಕೂಡ. ಸ್ವತಃ ಪೇಜಾವರಶ್ರೀಗಳೂ ಬಹಿರಂಗವಾಗಿ ದಲಿತರ ಈ ಬೇಡಿಕೆಗಳನ್ನು ‘ತಪ್ಪು’ ಎನ್ನಲು ಸಾಧ್ಯವಿಲ್ಲ. ಇಂತಹ ಆಂದೋಲನ ಕೇವಲ ಕರ್ನಾಟಕದಲ್ಲಿ ಮಾತ್ರ ಹುಟ್ಟಿಕೊಂಡಿರುವುದಲ್ಲ. ಪ್ರಧಾನಿ ನರೇಂದ್ರ ಮೋದಿಯವರ ತವರೂರಿನಲ್ಲೇ ಭೂಮಿ ಮತ್ತು ಆಹಾರದ ಹಕ್ಕಿನ ಕೂಗೆದ್ದಿದೆ. ಯುವ ದಲಿತ ನಾಯಕರ ನೇತೃತ್ವದಲ್ಲಿ ಬೃಹತ್ ಆಂದೋಲನವೂ ನಡೆದಿದೆ. ಆ ಆಂದೋಲನವೇ ಕರ್ನಾಟಕದಲ್ಲಿ ನಡೆದ ಚಲೋ ಉಡುಪಿಗೆ ಸ್ಫೂರ್ತಿಯಾಯಿತು. ಇತ್ತೀಚೆಗೆ ಬಿಲ್ಲವ ತರುಣನೊಬ್ಬನ ಬರ್ಬರ ಕೊಲೆ ಈ ಚಳವಳಿಗೆ ನೆಪವಾಯಿತು. ರಾಜ್ಯಾದ್ಯಂತದ ದಲಿತರು, ಶೋಷಿತರು ಉಡುಪಿಯಲ್ಲಿ ನೆರೆದು ತಮ್ಮ ಹಕ್ಕುಗಳನ್ನು ಮುಂದಿಟ್ಟರು. ಅಸ್ಪಶ್ಯತೆಯನ್ನು ಖಂಡಿಸಿದರು. ಜಾತೀಯತೆ, ಪಂಕ್ತಿಭೇದ, ಎಂಜಲು ಸ್ನಾನ ಇವೆಲ್ಲದರ ವಿರುದ್ಧ ಅಲ್ಲಿ ಧ್ವನಿಯೆತ್ತಿದರು. ಇದೇ ಸಂದರ್ಭದಲ್ಲಿ ‘ಪಂಕ್ತಿ ಭೇದ ನಿಲ್ಲಬೇಕು, ಇಲ್ಲವಾದರೆ ಎರಡು ತಿಂಗಳೊಳಗೆ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂಬ ಎಚ್ಚರಿಕೆಯನ್ನೂ ‘ಚಲೋ ಉಡುಪಿ’ ನೀಡಿತು. ದಲಿತರೂ ಹಿಂದೂ ಧರ್ಮದ ಒಂದು ಭಾಗವೆಂದು ಪೇಜಾವರಶ್ರೀಗಳು ನಂಬಿದ್ದಾರೆ. ಆ ನಂಬಿಕೆಯಿಂದಲೇ ಅವರು ದಲಿತ ಕೇರಿಗೂ ಭೇಟಿ ನೀಡಿದ್ದಾರೆ. ಕೆಲವರಿಗೆ ವೈಷ್ಣವ ದೀಕ್ಷೆಯನ್ನೂ ನೀಡಿದ್ದಾರೆ. ದಲಿತರ ಬೇಡಿಕೆ ಹಿಂದೂ ಧರ್ಮೀಯರ ಬೇಡಿಕೆಯೂ ಹೌದು ಎನ್ನುವುದನ್ನು ಈ ಕಾರಣದಿಂದ ಪೇಜಾವರಶ್ರೀಗಳಿಗೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ದಲಿತರ ಆಹಾರ, ಭೂಮಿಯ ಹಕ್ಕು ಅವರಿಗೆ ದೊರಕಿದರೆ, ಅದು ಹಿಂದೂ ಧರ್ಮದ ಜನರಿಗೆ ಸಿಕ್ಕಿದ ನ್ಯಾಯ ಎಂದು ಭಾವಿಸಿ ಈ ಚಳವಳಿಗೆ ಪೇಜಾವರಶ್ರೀ ಕೈ ಜೋಡಿಸಬಹುದಿತ್ತು. ಇರಲಿ. ಸಂಪ್ರದಾಯದ ಕಾರಣ ಕೆಲವು ಭಿನ್ನಮತಗಳು ಪೇಜಾವರಶ್ರೀಗಳಿಗಿದೆ. ಆದುದರಿಂದ ವೌನವನ್ನಾದರೂ ತಾಳಬಹುದಿತ್ತು. ಆದರೆ ಅವರು ‘ಪಂಕ್ತಿ ಭೇದದ ವಿರುದ್ಧ ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ ಕೂರುವೆ’ ಎಂಬ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ನೀಡಿದರು. ‘ಉಪವಾಸ’ಎಂಬ ಸಂವಿಧಾನಾತ್ಮಕವಾದ ಪ್ರತಿಭಟನೆಯನ್ನು ಪೇಜಾವರಶ್ರೀ ಬಳಸುತ್ತಿರುವುದು ಇಂದು ನಿನ್ನೆಯಲ್ಲ. ಈ ಹಿಂದೆ ಪುತ್ತಿಗೆ ಮಠದ ಸ್ವಾಮೀಜಿಯನ್ನು ತನ್ನ ದಾರಿಗೆ ಎಳೆಯಲು ಉಪವಾಸ ಕೂತಿದ್ದರು. ದಲಿತರ ಮೇಲೆ ಕೆಲವೆಡೆ ದೌರ್ಜನ್ಯ, ಬಹಿಷ್ಕಾರಗಳು ನಡೆದಾಗ ಪತ್ರಕರ್ತರು ‘ನೀವೇಕೆ ವೌನವಾಗಿದ್ದೀರಿ?’ ಎಂದು ಪ್ರಶ್ನಿಸಿದಾಗ ‘‘ಇನ್ನು ಮುಂದೆ ದಲಿತರ ಮೇಲೆ ದೌರ್ಜನ್ಯ ನಡೆದರೆ ನಾನು ಉಪವಾಸ ಕೂರುತ್ತೇನೆ’’ ಎಂದೂ ಭರವಸೆ ನೀಡಿದ್ದರು. ಆದರೆ ಆ ಬಳಿಕ ರಾಜ್ಯದಲ್ಲಿ ಹತ್ತು ಹಲವು ದಲಿತ ದೌರ್ಜನ್ಯಗಳು ನಡೆದವು. ಆದರೆ ಪೇಜಾವರಶ್ರೀ ಉಪವಾಸ ಮಾತ್ರ ಕೂತಿರಲಿಲ್ಲ. ಉಡುಪಿಯಲ್ಲೇ ಒಬ್ಬ ಬಿಲ್ಲವ ತರುಣನನ್ನು ದನದ ಹೆಸರಿನಲ್ಲಿ ಕೊಂದು ಹಾಕಿದಾಗಲಾದರೂ ತಮ್ಮ ಸಮುದಾಯವನ್ನು ಜಾಗೃತಗೊಳಿಸಲು ಅವರು ಉಪವಾಸ ಕೂರಬಹುದಿತ್ತು. ಆದರೆ ಆಗಲೂ ಅವರ ಬಾಯಿಯಿಂದ ಉಪವಾಸದ ಮಾತು ಹೊರ ಬೀಳಲಿಲ್ಲ. ಆದರೆ, ಯಾವಾಗ ಪಂಕ್ತಿ ಭೇದದ ವಿರುದ್ಧ ದಲಿತರು ಮಾತನಾಡಿದರೋ ಆಗ ಅವರು ಬತ್ತಳಿಕೆಯಿಂದ ಉಪವಾಸದ ಬಾಣವನ್ನು ಹೊರತೆಗೆದರು.
   ಇದು ಇಷ್ಟೇ ಆದರೆ ಪರವಾಗಿರಲಿಲ್ಲ. ಇದೇ ಸಂದರ್ಭದಲ್ಲಿ, ಕೊಲೆಗಾರರೊಂದಿಗೆ ನಂಟುಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್‌ನಂತಹ ಜನರು ಉಡುಪಿಯನ್ನು ಶುದ್ಧೀಕರಣ ಮಾಡುವ ಚಳವಳಿಯೊಂದನ್ನು ಹಮ್ಮಿಕೊಂಡಿದ್ದಾರೆ. ಇದರ ಉದ್ದೇಶ ಏನು ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ. ವೈಯಕ್ತಿಕವಾಗಿ ಯಾವುದೇ ಬೇಡಿಕೆಗಳೂ ಇಲ್ಲದೆ ಒಂದು ಚಳವಳಿಯನ್ನು ವಿರೋಧಿಸುವುದಕ್ಕಾಗಿ ಇವರು ಇನ್ನೊಂದು ಚಳವಳಿಯನ್ನು ನಡೆಸಲು ಹೊರಟಿದ್ದಾರೆ. ಇದು ದಲಿತರ ಪ್ರಜಾಸತ್ತಾತ್ಮಕ ಹಕ್ಕುಗಳನ್ನೇ ಕಿತ್ತುಕೊಳ್ಳುವ ಉದ್ದೇಶವನ್ನು ಹೊಂದಿದೆ. ಮುಖ್ಯವಾಗಿ ಇವರು ‘ಉಡುಪಿಯನ್ನು ಶುದ್ಧೀಕರಣಗೊಳಿಸಲು ಹೊರಟಿದ್ದಾರೆ. ಹಾಗೆಂದು, ಉಡುಪಿಯ ಕಸ, ಮಾಲಿನ್ಯಗಳನ್ನು ಶುದ್ಧಿಗೊಳಿಸುವುದು ಇವರ ಉದ್ದೇಶವಲ್ಲ. ಅಥವಾ ಕೃಷ್ಣಮಠವನ್ನು ಸುತ್ತಿಕೊಂಡಿರುವ ಎಂಜಲು ಸೇವೆ, ಪಂಕ್ತಿಭೇದ, ಅಜಲು ಪದ್ಧತಿ, ಅಸ್ಪಶ್ಯತೆ, ನಕಲಿ ಗೋರಕ್ಷಣೆ ಇಂತಹ ಮಾಲಿನ್ಯಗಳನ್ನು ಶುದ್ಧಿಗೊಳಿಸಲು ಹೋರಾಟವೇ ಎಂದರೆ ಅದೂ ಅಲ್ಲ. ರಾಜ್ಯಾದ್ಯಂತದ ದಲಿತರು ಆಗಮಿಸಿ ಪವಿತ್ರ ಉಡುಪಿಯನ್ನು ಮಲಿನ ಗೊಳಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರು ಶುದ್ಧಿಗೊಳಿಸುವುದಕ್ಕೆ ಒಂದು ಚಳವಳಿಯನ್ನು ಹಮ್ಮಿಕೊಂಡಿದ್ದಾರೆ. ಇದು ಸಂವಿಧಾನ ವಿರೋಧಿ ಮತ್ತು ಮನುಷ್ಯ ವಿರೋಧಿಯಾಗಿದೆ. ಇವರ ಮೇಲೆ ಪೊಲೀಸರೇ ಸ್ವಯಂ ಜಾತಿ ನಿಂದನೆ ಪ್ರಕರಣ ದಾಖಲಿಸಿ, ಬಂಧಿಸಬಹುದಾಗಿದೆ. ದುರದೃಷ್ಟವಶಾತ್ ಅಂತಹದೇನೂ ಆಗಿಲ್ಲ. ಪರಿಣಾಮವಾಗಿ ರಾಜ್ಯದ ದಲಿತರೂ ರೊಚ್ಚಿಗೆದ್ದಿದ್ದಾರೆ. ಸೂಲಿಬೆಲೆ, ಪ್ರಮೋದ್ ಮುತಾಲಿಕ್ ಮೊದಲಾದವರ ಶುದ್ಧೀಕರಣದ ವಿರುದ್ಧ ಅದೇ ದಿನ ‘ಸ್ವಾಭೀಮಾನಿ ನಡೆ’ಯೊಂದನ್ನು ಅವರು ಹಮ್ಮಿಕೊಂಡಿದ್ದಾರೆ. ಇದು ಉಡುಪಿ ಮಾತ್ರವಲ್ಲ, ರಾಜ್ಯಾದ್ಯಾಂತ ಸಂಘರ್ಷವನ್ನು ಬಿತ್ತುವ ಸಾಧ್ಯತೆಗಳಿವೆ. ಈ ‘ಶುದ್ಧೀಕರಣ’ದ ಹಿಂದೆ ನೇರವಾಗಿಯೋ, ಪರೋಕ್ಷವಾಗಿಯೋ ಪೇಜಾವರಶ್ರೀಗಳ ಹೆಸರು ಸಿಲುಕಿಕೊಂಡಿದೆ. ಸದ್ಯಕ್ಕೆ ಪೇಜಾವರ ಶ್ರೀ, ಈ ಶುದ್ಧೀಕರಣದ ಕೃತ್ಯದ ವಿರುದ್ಧ ಉಪವಾಸ ಕುಳಿತು, ಕಾರ್ಯಕ್ರಮ ಹಮ್ಮಿಕೊಂಡವರ ಮನಸ್ಸು, ಹೃದಯವನ್ನು ಶುದ್ಧಿಗೊಳಿಸುವ ಅಗತ್ಯವಿದೆ. ಇಲ್ಲವಾದರೆ ಅದು ಹಿಂದೂ ಧರ್ಮವನ್ನು ಮತ್ತು ನಾಡನ್ನು ಇನ್ನಷ್ಟು ಹೊಲಸುಗೆಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News