ಸಿಎಂ ಅಭ್ಯರ್ಥಿ ಘೋಷಿಸಿದ ಸಭೆಯಲ್ಲಿ ಅಭ್ಯರ್ಥಿಯೇ ಇಲ್ಲ!
ಲಕ್ನೋ, ಅ.22: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಯಾದವೀ ಕಲಹ ಮತ್ತಷ್ಟು ಉಲ್ಬಣಿಸಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಕರೆದಿದ್ದ ಪ್ರಮುಖ ಸಭೆಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೈರುಹಾಜರಾಗಿರುವುದು ಹೊಸ ಬೆಳವಣಿಗೆ.
ಈ ಸಭೆಯಲ್ಲಿ ಶಿವಪಾಲ್ ಯಾದವ್ ಅವರು, ಅಖಿಲೇಶ್ ಅವರನ್ನು ಅವರ ಅನುಪಸ್ಥಿತಿಯಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು. ಆ ಬಳಿಕ ಅಖಿಲೇಶ್ ಅವರು ಪಕ್ಷದ ನಿಯೋಗವನ್ನು ತಮ್ಮ ನಿವಾಸದಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿದರು. ಶಿವಪಾಲ್ ಯಾದವ್ ಅವರು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚರ್ಚೆಗಾಗಿ ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರು ಮತ್ತು ನಗರ ಘಟಕಗಳ ಅಧ್ಯಕ್ಷರ ಸಭೆಯನ್ನು ಪಕ್ಷದ ಕೇಂದ್ರ ಕಚೇರಿಯಲ್ಲಿ ಕರೆದಿದ್ದರು. ರಾಜಕೀಯ ತಂತ್ರಗಾರಿಕೆಯಾಗಿ ಯಾದವ್, "ಮತ್ತೆ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಅಖಿಲೇಶ್ ಯಾದವ್ ಅವರೇ ಮುಂದಿನ ಮುಖ್ಯಮಂತ್ರಿ" ಎಂದು ಘೋಷಿಸಿದರು.
ನೂತನ ಮುಖ್ಯಮಂತ್ರಿಯನ್ನು ಪಕ್ಷದ ಶಾಸಕರೇ ಆಯ್ಕೆ ಮಾಡುತ್ತಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಘೋಷಣೆ ಮಾಡಿದ ಮರುದಿನವೇ ಶಿವಪಾಲ್, ಹೊಸ ಘೋಷಣೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಸಭೆಗೆ ಆಹ್ವಾನಿಸಲು ಸಿಎಂ ಅವರನ್ನು ಶಿವಪಾಲ್ ವೈಯಕ್ತಿಕವಾಗಿ ಹಿಂದಿನ ದಿನ ರಾತ್ರಿ ಭೇಟಿ ಮಾಡಿದ್ದರೂ, ಅಖಿಲೇಶ್ ಸಭೆಯಿಂದ ಹೊರಗುಳಿದರು. ಈ ಸಭೆ ಮುಗಿಯುತ್ತಿದ್ದಂತೆ ಅಖಿಲೇಶ್ ತುರ್ತು ಸಂದೇಶ ರವಾನಿಸಿ, ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ತಕ್ಷಣ ಪ್ರತ್ಯೇಕವಾಗಿ ಭೇಟಿ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು. ಈ ತುರ್ತು ಸಭೆಯಲ್ಲಿ ಅಖಿಲೇಶ್ ಅವರು, ನವೆಂಬರ್ 3ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಥಯಾತ್ರೆ ಬಗ್ಗೆ ವಿವರಿಸಿದರು. ಪಕ್ಷದ ಗೆಲುವಿಗೆ ಕಠಿಣ ಶ್ರಮ ವಹಿಸುವಂತೆಯೂ ಅಖಿಲೇಶ್ ಮನವಿ ಮಾಡಿದರು.
ಜಿಲ್ಲಾಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಶಿವಪಾಲ್, "ತಮಗೆ ಅಧಿಕಾರದ ಲಾಲಸೆ ಇಲ್ಲ. ಪಕ್ಷ ಮರಳಿ ಅಧಿಕಾರಕ್ಕೆ ಬಂದ ಮರುದಿನವೇ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಬದ್ಧ" ಎಂದು ಸ್ಪಷ್ಟಪಡಿಸಿದರು.