ಹರ್ಯಾಣದಲ್ಲಿ ಐಎಎಸ್ ಅಧಿಕಾರಿಯ ಪಾಡು

Update: 2016-10-22 03:22 GMT

ಚಂಡೀಗಢ, ಅ.22: ಹರ್ಯಾಣ ಸರಕಾರ ಶುಕ್ರವಾರ ಒಂಬತ್ತು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿರುವ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಕಾಸ್ನಿ ಸೇರಿದ್ದು, ಇವರ 32 ವರ್ಷಗಳ ಸೇವಾವಧಿಯಲ್ಲಿ ಇದು 67ನೇ ವರ್ಗಾವಣೆ ಆದೇಶವಾಗಿದೆ. ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಇವರನ್ನು 12 ಬಾರಿ ವರ್ಗಾವಣೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ವಿಭಾಗದ ಕಾರ್ಯದರ್ಶಿ ಹಾಗೂ ಮಹಾ ನಿರ್ದೇಶಕರಾಗಿ ಇವರನ್ನು ವರ್ಗಾಯಿಸಲಾಗಿತ್ತು. ಇದೀಗ ಅವರನ್ನು ಹರ್ಯಾಣ ಭೂ ಸಾರ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.

ನಿಯಮಾವಳಿಯ ಪ್ರಕಾರ ಐಎಎಸ್ ಅಧಿಕಾರಿಗಳಿಗೆ ನಿಯೋಜಿತ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಅವಕಾಶ ನೀಡಬೇಕು. ಆದರೆ ಕಾಸ್ನಿ ಅವರನ್ನು ಸೇವಾವಧಿಯುದ್ದಕ್ಕೂ ಪದೇ ಪದೇ ವರ್ಗಾಯಿಸಲಾಗಿದೆ. ಈ ವರ್ಗಾವಣೆ ಆದೇಶಕ್ಕೆ ಮುನ್ನ ಕೆಲ ಗಂಟೆಗಳ ಕಾಲ ಅವರನ್ನು ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿತ್ತು. ಇಂಥ ಪದೇ ಪದೇ ವರ್ಗಾವಣೆಯಿಂದ ಬೇಸರವಾಗಿದೆ ಎಂದು ಕಾಸ್ನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News